ಬೆಂಗಳೂರು:ವೇಗವಾಗಿ ಹೋಗುತ್ತಿದ್ದ ಕಾರು ಬ್ರಿಡ್ಜ್ ಗೆ ಡಿಕ್ಕಿ ಹೊಡೆದು ಪತಿ, ಪತ್ನಿ, ಮಗಳು ಸೇರಿ ಒಂದೇ ಕುಟುಂಬದ ಮೂವರು ಮೃತಪಟ್ಟು ಇಬ್ಬರು ಮಕ್ಕಳು ಪಾರಾಗಿರುವ ದುರ್ಘಟನೆ ನೆಲಮಂಗಲದ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ.
ಮಲ್ಲೇಶ್ವರಂನ ಗೋಪಾಲ(60), ಇವರ ಪತ್ನಿ ಶಶಿಕಲಾ(54) ಮತ್ತು ಇವರ ಮಗಳು ದೀಪಾ(25) ಮೃತಪಟ್ಟ ದುರ್ದೈವಿಗಳು. ಈ ಅಪಘಾತದಲ್ಲಿ ಆಶ್ಚರ್ಯವೆಂಬಂತೆ ಒಂದೂವರೆ ವರ್ಷ ಹಾಗೂ ಐದು ವರ್ಷದ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿವೆ.
ಗೋಪಾಲ ಅವರು ಬೆಳಗ್ಗೆ ಪತ್ನಿ, ಮಗಳು, ಹಾಗೂ ಇಬ್ಬರು ಮೊಮಕ್ಕಳ ಜೊತೆ ಮಲ್ಲೇಶ್ವರಂ ನಿಂದ ಹಿರಿಯೂರಿಗೆ ನಾಮಕರಣ ಕಾರ್ಯಕ್ರಮದ ನಿಮಿತ್ತ ಹೋಗುತ್ತಿದ್ದರು. ಇವರ ಕಾರು 10.30ರ ಸುಮಾರಿಗೆ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಬೆಂಗಳೂರು-ತುಮಕೂರು ರಸ್ತೆಯಲ್ಲಿ ಹೋಗುತ್ತಿದ್ದಾಗ ಅತಿ ವೇಗದಿಂದ ಅಂಚೆ ಮನೆ ಕ್ರಾಸ್ ಬಳಿ ನಿಯಂತ್ರಣ ತಪ್ಪಿ ಎಡ ಭಾಗದ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಶಶಿಕಲಾ ಅವರು ಸ್ಥಳದಲ್ಲೇ ಮೃಪಟ್ಟಿದ್ದಾರೆ.
ಗಂಭೀರ ಗಾಯಗೊಂಡಿದ್ದ ಗೋಪಾಲ ಹಾಗೂ ದೀಪಾ ಅವರನ್ನು ಸಾರ್ವಜನಿಕರ ನೆರವಿನೊಂದಿಗೆ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಸುದ್ದಿ ತಿಳಿದು ನೆಲಮಂಗಲ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡು ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.