ಬೆಂಗಳೂರು ನಗರದ ಎಲೆಕ್ಟ್ರಾನಿಕ್ ಸಿಟಿ, ಪೀಣ್ಯ ಹಾಗೂ ಎಚ್ಎಸ್ಆರ್ ಲೇಔಟ್ ನಲ್ಲಿ ಸಂಭವಿಸಿದ ಮೂರು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಮೂವರು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
\ಎಲೆಕ್ಟ್ರಾನಿಕ್ ಸಿಟಿಯ ಕೂಡ್ಲು ಗೇಟ್ ಬಳಿ ಟೆಂಪೋ ಟ್ರಾವೆಲರ್ ಆಟೋ ಗೆ ಡಿಕ್ಕಿ ಹೊಡೆದು ಆಟೋ ಚಾಲಕ ಗವಿರಾಜ್ (23) ಮೃತಪಟ್ಟಿದ್ದಾರೆ.\ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
ಪೀಣ್ಯ ಜಂಕ್ಷನ್ ಬಳಿ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ಪವನ್ ಕಲ್ಯಾಣ್ ಆಚಾರಿ (23) ಎನ್ನುವರು ಮೃತಪಟ್ಟಿರುತ್ತಾನೆ.ಈ ಸಂಬಂಧ ಪೀಣ್ಯ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
ಎಚ್ಎಸ್ಆರ್ ಲೇಔಟ್ ನ 19ನೇ ಮುಖ್ಯರಸ್ತೆ ಜಂಕ್ಷನ್ ಬಳಿ ಈಚರ್ ವಾಹನ ಬೈಕ್ ಗೆ ಡಿಕ್ಕಿ ಹೊಡೆದು ಸವಾರ ಆಂಧ್ರಪ್ರದೇಶ ಮೂಲದ ಹರೀಶ್(24) ಮೃತಪಟ್ಟಿದ್ದಾರೆ.ಎಚ್ಎಸ್ಆರ್ ಲೇಔಟ್ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಚಾಲಕ ದುಂಡಾವರ್ತನೆ:
ಸೈಡ್ ಕೊಡದಿದ್ದಕ್ಕೆ ಬೈಕ್‌ಗೆ ಕಾರು ಗುದ್ದಿಸಿ ಕ್ಯಾಬ್ ಚಾಲಕ ದುಂಡಾವರ್ತನೆ ತೋರಿದ ಘಟನೆ ಕೆ.ಆರ್ ಪುರದ ಬಳಿ ನಡೆದಿದೆ.
ಸೈಡ್ ಕೊಡುವ ವಿಚಾರಕ್ಕೆ ಕ್ಯಾಬ್ ಚಾಲಕ ಹಾಗೂ ಬೈಕ್ ಸವಾರನ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಸ್ವಲ್ಪ ಮುಂದೆ ಬಂದು ಬೈಕ್ ಸವಾರ ಪ್ರಶ್ನೆ ಮಾಡಿದ್ದಾನೆ. ಈ ವೇಳೆ ಕ್ಯಾಬ್ ಚಾಲಕ ಕಾರಿನಲ್ಲಿ ಬೈಕ್‌ಗೆ ಗುದ್ದಿಸಿ ಸವಾರನನ್ನು ಬೀಳಿಸಿದ್ದಾನೆ.
ಕ್ಯಾಬ್ ಚಾಲಕನ ದುಂಡಾವರ್ತನೆ ಮತ್ತೊಂದು ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾನದಲ್ಲಿ ಹರಿದಾಡುತ್ತಿದೆ.
ದುಂಡಾವರ್ತನೆ ತೋರಿದ ಕ್ಯಾಬ್ ಚಾಲಕನ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆತನ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ


