ಭದ್ರಾವತಿ ತಾಲೂಕಿನ ಉಕ್ಕುಂದದಲ್ಲಿ ಕರಡಿಯೊಂದು ದಾಳಿ ನಡೆಸಿ ವ್ಯಕ್ತಿಯೋರ್ವನಿಗೆ ತೀವ್ರ ಗಾಯಗೊಳಿಸಿದ ಬೆನ್ನಲ್ಲೇ ಭದ್ರಾವತಿ-ಚನ್ನಗಿರಿ ರಸ್ತೆಯ ಕೂಡ್ಲಿಗೆರೆ ರಸ್ತೆಯಿಂದ 250 ಮೀಟರ್ ಅಂತರದಲ್ಲಿ ಮನೆಯ ಗೇಟಿನ ಮುಂದೆ 3 ಕರಡಿಗಳು ಕಾಣಿಸಿಕೊಂಡಿವೆ. ಈ ಬೆಳವಣಿಗೆ ಸ್ಥಳೀಯರಲ್ಲಿ ಇನ್ನಷ್ಟು ಆತಂಕ ಸೃಷ್ಟಿಸಿದೆ.
ಕಳೆದ ರಾತ್ರಿ 10 ಗಂಟೆಯ ವೇಳೆಗೆ ಕೂಡ್ಲಿಗೆರೆ ಶರತ್ ಎಂಬುವರ ಮನೆ ಗೇಟ್ ಬಳಿ 3 ಕರಡಿಗಳು ಕಾಣಿಸಿಕೊಂಡಿವೆ. ಶರತ್ ಅವರ ಮನೆಯ ಸಾಕು ನಾಯಿಗಳು ಮಾಮೂಲಿಗಿಂತ ಜೋರಾಗಿ ಬೊಗಳುತ್ತಿದ್ದ ಕಾರಣ ಶರತ್ ಅವರು ಸಿಸಿ ಕ್ಯಾಮೆರಾ ಪರಿಶೀಲಿಸಿದ್ದಾರೆ. ಪರಿಶೀಲಿಸಿದಾಗ ಕರಡಿಗಳು ಮನೆಯ ಗೇಟ್ ಬಳಿ ಓಡಾಡಿದ್ದು ಗಮನಕ್ಕೆ ಬಂದಿದೆ. ಇದರಿಂದ ಕೂಡ್ಲಿಗೆರೆಯ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಅರಣ್ಯ ಇಲಾಖೆ ಕ್ರಮ ಜರುಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಇತ್ತೀಚೆಗೆ ಮಾನವ ಮತ್ತು ವನ್ಯಜೀವಿ ಸಂಘರ್ತ ತೀವ್ರಗೊಂಡಿದ್ದು, ಕಳೆದ ವರ್ಷ ರಾಜ್ಯದಲ್ಲಿ ಕರಡಿ ದಾಳಿಗೆ ಹಲವು ಮಂದಿ ಬಲಿಯಾಗಿದ್ದಾರೆ. ಅದೇ ರೀತಿ ಆನೆಗಳು, ಚಿರತೆ, ಹುಲಿಗಳು ಕಾಡಿನಿಂದ ನಾಡಿಗೆ ಬಂದು ಮನುಷ್ಯರ ಜೀವಹಾನಿ ಜೊತೆಗೆ ಬೆಳೆಗಳನ್ನು ಕೂಡ ನಾಶ ಮಾಡುತ್ತಿರುವುದು ಆಗಾಗ ವರದಿಯಾಗುತ್ತಿರುತ್ತದೆ.


