ಕಾನೂನು ಪದವಿ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಕೋಲಾರದ ಬಸವ ಶ್ರೀ ಕಾನೂನು ವಿಶ್ವವಿದ್ಯಾಲಯದ ಉಪಪ್ರಾಂಶುಪಾಲ ಡಾ. ನಾಗರಾಜ್, ವರುಣ್ ಮತ್ತು ಜಗದೀಶ್ ಎಂಬವರನ್ನು ಬಂಧಿಸಿದ್ದಾರೆ.
ಜನವರಿ 22ರಂದು ನಡೆಯಬೇಕಿದ್ದ ಕಾನೂನು ಪದವಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು. ಸೋರಿಕೆಯಾದ ಪ್ರಶ್ನೆಪತ್ರಿಕೆ ವಾಟ್ಸಾಪ್ ಮತ್ತು ಟೆಲಿಗ್ರಾಂನಲ್ಲಿ ಹರಿದಾಡಿತ್ತು. ಈ ಸಂಬಂಧ ಬೆಂಗಳೂರಿನ ಸಿಸಿಬಿ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದೂರು ದಾಖಲಿಸಿಕೊಂಡು ತನಿಖೆ ನಡೆಸಿದ ಸಿಸಿಬಿ ಪೊಲೀಸರು ಪ್ರಕರಣದಲ್ಲಿ ಆರೋಪಿಗಳ ಕೈವಾಡವನ್ನು ದೃಢಪಡಿಸಿದ್ದಾರೆ.
ಡಾ. ನಾಗರಾಜ್ ಮೂಲಕ ಮೊದಲಿಗೆ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ. ಡಾ. ನಾಗರಾಜ್ ಪ್ರಶ್ನೆಪತ್ರಿಕೆಯ ಸೀಲ್ಡ್ ಕವರ್ ತೆರೆದು ಪ್ರಶ್ನೆಪತ್ರಿಕೆ ಫೋಟೊ ತೆಗೆದು ಮೊಬೈಲ್ನಲ್ಲಿ ಇಟ್ಟುಕೊಂಡಿದ್ದರು. ಅದೇ ಕಾಲೇಜಿನ ಕಾನೂನು ವಿದ್ಯಾರ್ಥಿ ವರುಣ್, ಡಾ ನಾಗರಾಜ್ ಮೊಬೈಲ್ನಿಂದ ಪ್ರಶ್ನೆಪತ್ರಿಕೆಯನ್ನು ತನ್ನ ಮೊಬೈಲ್ಗೆ ಶೇರ್ ಮಾಡಿಕೊಂಡಿದ್ದಾನೆ. ಬಳಿಕ ವರುಣ್ ಪ್ರಶ್ನೆಪತ್ರಿಕೆಯನ್ನು ಜಗದೀಶ್ಗೆ ಕಳಿಸಿದ್ದಾನೆ.
ಇಬ್ಬರ ಕೈಗೆ ಪ್ರಶ್ನೆಪತ್ರಿಕೆ ಬಂದ ಬಳಿಕ ಹಲವರಿಗೆ 500 ರೂಪಾಯಿಂದ 10ಸಾವಿರ ರೂ. ತನಕ ಇಬ್ಬರೂ ಮಾರಾಟ ಮಾಡಿದ್ದಾರೆ ಎಂದು ಸಿಸಿಬಿ ತನಿಖೆಯಲ್ಲಿ ತಿಳಿದುಬಂದಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.