Menu

ಮುಸ್ಲಿಂ ಶಿಕ್ಷಕನ ಓಡಿಸಲು ಮಕ್ಕಳು ಕುಡಿಯುವ ನೀರಿಗೆ ವಿಷ: ಶ್ರೀರಾಮ ಸೇನೆ ಮುಖಂಡ ಸೇರಿ ಮೂವರ ಬಂಧನ

ಬೆಳಗಾವಿ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯ ಕುಡಿಯುವ ನೀರಿನ ಟ್ಯಾಂಕ್‌ಗೆ ವಿಷ ಬೆರೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಶ್ರೀರಾಮ ಸೇನೆಯ ಸವದತ್ತಿ ತಾಲೂಕು ಅಧ್ಯಕ್ಷ ಸಾಗರ್ ಪಾಟೀಲ್ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.

ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ್ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ್ದು, ಶಾಲೆಯ ಮುಖ್ಯ ಶಿಕ್ಷಕ ಸುಲೇಮಾನ್ ಗೋರಿನಾಯ್ಕ ಅವರು ಮುಸ್ಲಿಂ ಆಗಿರುವುದರಿಂದ ಅವರನ್ನು ವರ್ಗಾವಣೆಗೊಳಿಸುವ ಸಂಚು ರೂಪಿಸಿ ಕೆಟ್ಟ ಹೆಸರು ತರಲು ಯತ್ನಿಸಿ ಆರೋಪಿಗಳು ಇಂಥ ನೀಚ ಕೃತ್ಯ ಎಸಗಿರುವುದು ಬಹಿರಂಗಗೊಂಡಿದೆ. ಜುಲೈ 14ರಂದು ಹೂಲಿಕಟ್ಟಿ ಗ್ರಾಮದ ಸರ್ಕಾರಿ ಶಾಲೆಯ ನೀರಿನ ಟ್ಯಾಂಕ್‌ಗೆ ವಿಷಕಾರಕ ರಾಸಾಯನಿಕ ಬೆರೆಸಲಾಗಿತ್ತು. ಇದರಿಂದ 11 ವಿದ್ಯಾರ್ಥಿಗಳು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ತನಿಖೆಯಲ್ಲಿ ಶ್ರೀರಾಮ ಸೇನೆಯ ಸವದತ್ತಿ ತಾಲೂಕು ಅಧ್ಯಕ್ಷ ಸಾಗರ್ ಪಾಟೀಲ್, ಕೃಷ್ಣಾ ಮಾದರ್, ಮತ್ತು ನಾಗನಗೌಡ ಪಾಟೀಲ್ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ಮಕ್ಕಳು ವಿಷಯುಕ್ತ ನೀರು ಕುಡಿದು ಅಸ್ವಸ್ಥರಾದರೆ ಅಥವಾ ಮೃತಪಟ್ಟರೆ ಮುಖ್ಯ ಶಿಕ್ಷಕನ ವಿರುದ್ಧ ಆರೋಪ ಮಾಡಿ, ಆತನನ್ನು ಶಾಲೆಯಿಂದ ವರ್ಗಾವಣೆಗೊಳಿಸುವುದಾಗಿತ್ತು. ಈ ಸಂಚಿನ ಮಾಸ್ಟರ್‌ಮೈಂಡ್ ಆಗಿ ಸಾಗರ್ ಪಾಟೀಲ್ ಕಾರ್ಯನಿರ್ವಹಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸಾಗರ್ ಪಾಟೀಲ್, ಕೃಷ್ಣ ಮಾದರ್‌ನನ್ನು ಈ ಕೃತ್ಯಕ್ಕೆ ಬಳಸಿಕೊಂಡಿದ್ದಾನೆ. ಕೃಷ್ಣ ಮಾದರ್ ಅನ್ಯಜಾತಿ ಹುಡುಗಿಯನ್ನು ಪ್ರೀತಿಸುತ್ತಿದ್ದು, ಈ ಕೆಲಸ ಮಾಡದಿದ್ದರೆ ನಿನ್ನ ಪ್ರೀತಿ ವಿಷಯವನ್ನು ಬಹಿರಂಗಗೊಳಿಸುವುದಾಗಿ ಸಾಗರ್ ಬೆದರಿಕೆ ಹಾಕಿದ್ದಾನೆ. ಹೀಗಾಗಿ ಕೃಷ್ಣ ವಿಷ ಬೆರೆಸಲು ಒಪ್ಪಿಕೊಂಡಿದ್ದಾನೆ. ಒಬ್ಬ ಬಾಲಕನಿಗೆ ಚಾಕೊಲೇಟ್, ಕುರ್ಕುರೆ, ಮತ್ತು ₹500 ಆಮಿಷವೊಡ್ಡಿ ಶಾಲೆಯ ಟ್ಯಾಂಕ್‌ಗೆ ವಿಷ ಬೆರೆಸಲು ಪ್ರೇರೇಪಿಸಲಾಗಿತ್ತು. ಬಾಲಕ ವಿಷವನ್ನು ಟ್ಯಾಂಕ್‌ಗೆ ಬೆರೆಸಿ ಬಾಟಲಿಯನ್ನು ಅಲ್ಲಿಯೇ ಎಸೆದಿದ್ದಾನೆ.

ಈ ಕೃತ್ಯವನ್ನು ಭಯೋತ್ಪಾದಕ ಕೃತ್ಯಕ್ಕೆ ಹೋಲಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಮಕ್ಕಳ ಜೀವಕ್ಕೆ ಧಕ್ಕೆ ತಂದಿರುವ ಈ ಕೃತ್ಯಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದ್ದಾರೆ.

Related Posts

Leave a Reply

Your email address will not be published. Required fields are marked *