Saturday, January 17, 2026
Menu

ಸಿಎಂ ತವರಲ್ಲೂ ಮಹಿಳಾಧಿಕಾರಿಗೆ ಧಮ್ಕಿ: ತಡವಾಗಿ ಬೆಳಕಿಗೆ ಬಂದ ಪ್ರಕರಣ

mysore news

ಮೈಸೂರು: ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ನಗರಸಭೆ ಪೌರಾಯುಕ್ತೆಗೆ ಅವಾಚ್ಯ ಶಬ್ದಗಳಿಂದ ಮತ್ತು ಅಶ್ಲೀಲ ಪದಗಳನ್ನು ಬಳಸಿ ನಿಂದಿಸಿರುವ ಪ್ರಕರಣದ ಬೆನ್ನಲ್ಲೇ ಸಿಎಂ ತವರಿನಲ್ಲೂ ಇಂತದ್ದೇ ಘಟನೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಮೈಸೂರಿನ ಮಹಿಳಾ ಅಧಿಕಾರಿಗೆ ವ್ಯಕ್ತಿಯೋರ್ವ ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ವಿಡಿಯೋ ಹಾಗೂ ಈ ಬಗ್ಗೆ ಎಫ್ ಐಆರ್ ದಾಖಲಾಗಿರುವುದು ಕಂಡು ಬಂದಿದೆ.

ತಾಲ್ಲೂಕಿನ ವರುಣಾ ಹೋಬಳಿಯ ಗುಡೆಮಾದನಹಳ್ಳಿಯಲ್ಲಿ ಜಮೀನು ಪರಿಶೀಲನೆಗೆ ತೆರಳಿದ್ದ ಸರ್ಕಾರಿ ಮಹಿಳಾ ಅಧಿಕಾರಿ ಮತ್ತು ಗ್ರಾಮ ಸಹಾಯಕರನ್ನು ವ್ಯಕ್ತಿಯರ‍್ವ ಸರ‍್ವಜನಿಕವಾಗಿ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆಗೆ ಯತ್ನಿಸಿದ ಘಟನೆ ಜರುಗಿದ್ದು ಈ ಸಂಬಂಧ ಗ್ರಾಮಾಂತರ ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಗ್ರಾಮ ಆಡಳಿತಾಧಿಕಾರಿ ಬಂಡಿಪಾಳ್ಯ ವೃತ್ತದ ಜಿ ಭವ್ಯ ಹಾಗೂ ಗ್ರಾಮ ಸಹಾಯಕ ನವೀನ್ ಕುಮಾರ್ ಎಂಬುವರ ಮೇಲೆ ವರುಣಾ ಹೋಬಳಿ ಗುಡಮಾದನಹಳ್ಳಿ ಗ್ರಾಮದ ನಿವಾಸಿ ಜಿಎಂ ಪುಟ್ಟಸ್ವಾಮಿ ಎಂಬುವರು ಬೆದರಿಕೆ ಹಾಕಿದ್ದಾರೆ.ಧಂಕಿ ಹಾಕಿ ಕೊಲೆ ಬೆದರಿಕೆ ಹಾಕಿದ ದೃಶ್ಯಗಳನ್ನ ಮೊಬೈಲ್ ನಲ್ಲಿ ಚಿತ್ರೀಕರಿಸಲಾಗಿದೆ.ಈ ವೇಳೆ ಪುಟ್ಟಸ್ವಾಮಿ ಬಲವಂತವಾಗಿ ಮೊಬೈಲ್ ಕಿತ್ತುಕೊಂಡು ವಿಡಿಯೋಗಳನ್ನ ಡಿಲೀಟ್ ಮಾಡಿದ್ದಾರೆ.

ವರುಣಾ ಹೋಬಳಿಯ ಗುಡಮಾದನಹಳ್ಳಿಯಲ್ಲಿ ನಿಮ್ಹಾನ್ಸ್ ಮಾದರಿಯ ಆಸ್ಪತ್ರೆ ನಿರ್ಮಿಸಲು ಸರ್ವೆ ನಂ.8 ರಲ್ಲಿ 5 ಎಕ್ರೆ 05 ಗುಂಟೆ,ಸರ್ವೆ ನಂ.60 ರಲ್ಲಿ 6 ಎಕ್ರೆ 10 ಗುಂಟೆ ಹಾಗೂ ಸರ್ವೆ ನಂ.68 ರಲ್ಲಿ 8 ಎಕ್ರೆ 25 ಗುಂಟೆ ಒಟ್ಟು 20 ಎಕರೆ ಜಾಗ ಮೀಸಲಿಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯರವರ ಕನಸಿನ ಯೋಜನೆ ಇದಾಗಿದೆ. ತಮ್ಮ ಸ್ವಕ್ಷೇತ್ರದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಸಿದ್ದರಾಮಯ್ಯ ಆಸಕ್ತಿ ತೋರಿದ ಹಿನ್ನಲೆ ಜಾಗ ಗುರುತಿಸಿ ಸ್ವಾಧೀನ ಪ್ರಕ್ರಿಯೆ ಆರಂಭಿಸುವಂತೆ ಆದೇಶವಾಗಿದೆ.

ಈ ಹಿನ್ನಲೆ ಗುಡಮಾದನಹಳ್ಳಿಯಲ್ಲಿ ಗುರುತಿಸಲಾದ ಜಮೀನು ಪರಿಶೀಲನೆಗೆ ಮಹಿಳಾ ಅಧಿಕಾರಿ ಜಿ.ಭವ್ಯ ಹಾಗೂ ನವೀನ್ ಕುಮಾರ್ ತೆರಳಿದ್ದರು. ಈ ವೇಳೆ ಸದರಿ ಜಮೀನಿನಲ್ಲಿ ಅನಧಿಕೃತವಾಗಿ ಅಡಿಕೆ ತೋಟ ನಿರ್ಮಿಸಿಕೊಂಡಿದ್ದ ಪುಟ್ಟಸ್ವಾಮಿ ಧಿಢೀರ್ ಪ್ರತ್ಯಕ್ಷವಾಗಿ ಯಾರನ್ನ ಕೇಳಿ ನಿಮ್ಹಾನ್ಸ್ ಆಸ್ಪತ್ರೆಗೆ ಜಮೀನು ಮಂಜೂರು ಮಾಡಿದ್ದೀರಿ..? ಮೊದಲು ತಹಸೀಲ್ದಾರ್ ..ನಿನ್ನನ್ನ ಇಲ್ಲಿಯೇ ಕೊಂದು ಹಾಕುತ್ತೇನೆ ಎಂದು ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆಂದು ಹೇಳಲಾಗಿದೆ.

ಪುಟ್ಟಸ್ವಾಮಿಯ ದೌರ್ಜನ್ಯ ಮೊಬೈಲ್ ನಲ್ಲಿ ಚಿತ್ರೀಕರಿಸುತ್ತಿದ್ದ ಗ್ರಾಮ ಸಹಾಯಕ ನವೀನ್ ಕುಮಾರ್ ಗೂ ಕೊಲೆ ಬೆದರಿಕೆ ಹಾಕಿ ಮೊಬೈಲ್ ಕಿತ್ತುಕೊಂಡು ವಿಡಿಯೋ ಡಿಲೀಟ್ ಮಾಡಿಸಿದ್ದಾರೆನ್ನಲಾಗಿದೆ.

ಸರ್ಕಾರಿ ಕೆಲಸವನ್ನ ನಿರ್ಭಯವಾಗಿ ನಿರ್ವಹಿಸಲು ಮಹಿಳಾ ಸಿಬ್ಬಂದಿಯಾದ ನನಗೆ ಭಯದ ವಾತಾವರಣ ಉಂಟು ಮಾಡಿರುವ ಪುಟ್ಟಸ್ವಾಮಿ ವಿರುದ್ದ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಭವ್ಯ ರವರು ಪ್ರಕರಣ ದಾಖಲಿಸಿ ತಮಗೆ ರಕ್ಷಣೆ ನೀಡುವಂತೆ ಡಿ.31ರಂದೆ ಮನವಿ ಮಾಡಿದ್ದಾರೆ.

ಇತ್ತೀಚೆಗಷ್ಟೆ ಶಿಡ್ಲಘಟ್ಟದಲ್ಲಿ ಮಹಿಳಾ ಪೌರಾಯುಕ್ತೆ ಮೇಲೆ ಕಾಂಗ್ರೆಸ್ ಮುಖಂಡನೊಬ್ಬ ಧಂಕಿ ಹಾಕಿ ಬೆದರಿಸಿದ ಘಟನೆ ಬಳಿಕ ಸಿಎಂ ಕ್ಷೇತ್ರದಲ್ಲಿ ಮಹಿಳಾ ಅಧಿಕಾರಿ ವಿರುದ್ದ ಕೊಲೆ ಬೆದರಿಕೆ ಬಂದಿರುವ ವಿಚಾರವೂ ಬೆಳಕಿಗೆ ಬಂದಿದೆ.

Related Posts

Leave a Reply

Your email address will not be published. Required fields are marked *