ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಎನ್ನಲಾದ ಸುಹಾಸ್ ಶೆಟ್ಟಿ ಕೊಲೆಯ ಬಳಿಕ ಪ್ರತೀಕಾರದ ಹತ್ಯೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಗಳು ಹರಿದಾಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.
ಮಂಗಳೂರು ನಗರದಾದ್ಯಂತ ಪೊಲೀಸರು ಹೈ ಅಲರ್ಟ್ ಆಗಿದ್ದು, ಸೋಮವಾರ ರಾತ್ರಿ 9.30ರೊಳಗೆ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸ ಲಾಗಿದೆ. ಹೋಟೆಲ್, ಪಬ್, ಬಾರ್ಗಳು, ಫುಟ್ಪಾತ್ ವ್ಯಾಪಾರವನ್ನು ರಾತ್ರಿ 9.30 ರೊಳಗೆ ಬಂದ್ ಮಾಡಿಸಲಾಗುತ್ತಿದೆ. ಇನ್ನೂ ಕೆಲವು ದಿನ ಇದನ್ನೇ ಮುಂದುವರಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಸುಹಾಸ್ ಶೆಟ್ಟಿ ಹತ್ಯೆಯಾದ ದಿನ ರಾತ್ರಿ ರೌಡಿಶೀಟರ್ ಕೋಡಿಕೆರೆ ಲೋಕೇಶ್ ಹಾಗೂ ಗ್ಯಾಂಗ್ ಪ್ರತೀಕಾರಕ್ಕೆ ಯತ್ನಿಸಿತ್ತು. ಕುಂಟಿಕಾನ ಬಳಿ ಉಳ್ಳಾಲ ನಿವಾಸಿ ಲುಕ್ಮಾನ್ ಎಂಬ ಮೀನಿನ ವ್ಯಾಪಾರಿಯನ್ನು ಅಟ್ಟಾಡಿಸಿ ಕೊಲೆಗೆ ಯತ್ನಿಸಿತ್ತು. ಕಾವೂರು ಪೊಲೀಸರು ಲೋಕೇಶ್ನನ್ನು ಬಂಧಿಸಿದ್ದಾರೆ. ಮಂಗಳೂರಿನ ಮೂರು ಕಡೆ ಚಾಕು ಇರಿತ ಪ್ರಕರಣಗಳು ವರದಿಯಾಗಿದ್ದವು. ಒಟ್ಟು 7 ಮಂದಿಯನ್ನು ಬಂಧಿಸಲಾಗಿತ್ತು.
ಈ ಎಲ್ಲ ಬೆಳವಣಿಗೆ ನಡೆಯುತ್ತಿರುವಂತೆಯೇ ಮಂಗಳೂರಿನಲ್ಲಿ ಮತ್ತಿಬ್ಬರು ಹಿಂದೂ ಮುಖಂಡರಿಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಬೆದರಿಕೆ ಹಾಕಲಾ ಗಿತ್ತು. ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ವೆಲ್ ಮತ್ತು ಭರತ್ ಕುಮ್ಡೇಲ್ ಅವರನ್ನು ಹತ್ಯೆ ಮಾಡುವುದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ವೈರಲ್ ಆಗಿತ್ತು. ಮೇ 5 ರಂದು ರಾತ್ರಿ 9:30ಕ್ಕೆ ನಿನ್ನ ಸ್ಥಳದಲ್ಲೇ ಕೊಲ್ಲುತ್ತೇವೆ ಎಂದು ಭರತ್ ಕುಮ್ಡೇಲ್ ಹೆಸರು ಉಲ್ಲೇಖಿಸಿ ಸಾಮಾಜಿಕ ಮಾಧ್ಯಮ ಪೋಸ್ಟ್ ವೈರಲ್ ಆದ ಬಳಿಕ ಪೊಲೀಸರು ಅಲರ್ಟ್ ಆಗಿದ್ದರು.