ಗ್ರೀಸ್ ದೇಶದ ಏಜಿಯನ್ ಸಮುದ್ರದ ದ್ವೀಪದಲ್ಲಿ ಸುಮಾರು 300ಕ್ಕೂ ಹೆಚ್ಚು ಬಾರಿ ಭೂಕಂಪನ ಸಂಭವಿಸಿದ್ದರಿಂದ ಸಾವಿರಾರು ಜನರು ಮನೆ ತೊರೆದು ಸುರಕ್ಷಿತ ಪ್ರದೇಶಕ್ಕೆ ತೆರಳಿದ ಘಟನೆ ಮಂಗಳವಾರ ನಡೆದಿದೆ.
ಮಂಗಳವಾರ ಬೆಳಿಗ್ಗೆಯಿಂದ ದ್ವೀಪ ಸಮೀಪದ ಸಮುದ್ರದಲ್ಲಿ ಸುಮಾರು 300 ಬಾರಿ ಭೂಮಿ ಕಂಪಿಸಿದೆ. ಸತತವಾಗಿ ಭೂಮಿ ಕಂಪಿಸಿದ್ದರಿಂದ ಭಯ ಭೀತರಾದ ಸುಮಾರು 9000 ನಾಗರಿಕರು ಮನೆ ತೊರೆದಿದ್ದಾರೆ ಎಂದು ಹೇಳಲಾಗಿದೆ.
ಶಾಲೆಗಳಿಗೆ ರಜೆ ಘೋಷಿಸಲಾಗಿದ್ದು, ನಾಗರಿಕರು ಕಟ್ಟಡದೊಳಗೆ ಹೆಚ್ಚಿನ ಸಂಖ್ಯೆಯಲ್ಲಿ ಸೇರದಂತೆ ಸೂಚಿಸಲಾಗಿದೆ. ಪ್ರಧಾನಿ ಕೈರಿಯಾಕೊಸ್ ಮಿಟ್ಕೊಟಾಕಿಸ್ ಆತಂಕಗೊಳ್ಳದೇ ಎಲ್ಲರೂ ತಾಳ್ಮೆ ವಹಿಸುವಂತೆ ಕರೆ ನೀಡಿದ್ದಾರೆ.
ಇನ್ ಸ್ಟಾಗ್ರಾಂ ಐಲ್ಯಾಂಡ್ ಎಂದೇ ಖ್ಯಾತಿ ಪಡೆದ ಸಂತೋರಿನಿ ದ್ವೀಪ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ಇಲ್ಲಿ ಕೇವಲ 2000 ನಾಗರಿಕರು ಮಾತ್ರ ಕಾಯಂ ಆಗಿ ವಾಸಿಸುತ್ತಿದ್ದಾರೆ. ಬಹುತೇಕ ಮಂದಿ ಭೂಕಂಪನ ಭೀತಿಯಿಂದ ಮನೆ ತೊರೆದಿದ್ದು, ಮನೆ ತೊರೆಯಲು ಬಯಸದವರಿಗೆ ಸುರಕ್ಷಿತವಾದ ತಾಣದಲ್ಲಿ ಇರುವಂತೆ ಸೂಚಿಸಲಾಗಿದೆ.
ಕಳೆದ ಒಂದು ವಾರದಿಂದ ರಿಕ್ಟರ್ ಮಾಪಕದಲ್ಲಿ 3ರಷ್ಟು ತೀವ್ರತೆಯಲ್ಲಿ ನೂರಕ್ಕೂ ಹೆಚ್ಚು ಬಾರಿ ಭೂಮಿ ಕಂಪಿಸಿದೆ. ದೊಡ್ಡ ಮಟ್ಟದಲ್ಲಿ ಭೂಕಂಪನ ಸಂಭವಿಸದೇ ಇದ್ದರೂ ಪದೇಪದೆ ಭೂಮಿ ಕಂಪಿಸುತ್ತಿರುವುದರಿಂದ ಬಹುತೇಕ ನಿವಾಸಿಗಳು ಮನೆ ತೊರೆದಿದ್ದಾರೆ.