ಭಿಕ್ಷುಕ ಅಂದರೆ ಕಷ್ಟದಲ್ಲಿ ಇರುವವನು, ದುಡಿಯಲು ಆಗದೇ ಹೊಟ್ಟೆಪಾಡಿಗಾಗಿ ಈ ಕೆಲಸ ಮಾಡುವವನು, ಅತ್ಯಂತ ಬಡವ ಎಂಬ ಕಲ್ಪನೆ ಇದೆ. ಆದರೆ ಇತ್ತೀಚೆಗೆ ಫೋನ್ ಪೇ ಭಿಕ್ಷಕರನ್ನು ನೋಡಿದ್ದೇವೆ. ಸತ್ತ ಮೇಲೆ ಭಿಕ್ಷುಕನ ಬಳಿ ಲಕ್ಷಗಟ್ಟಲೆ ದುಡ್ಡನ್ನು ಕೇಳಿದ್ದೇವೆ.
ಆದರೆ ಇಲ್ಲೊಬ್ಬ ಭಿಕ್ಷುಕ ಭಿಕ್ಷಾಟನೆಯಿಂದಲೇ ಕೋಟ್ಯಾಂತರ ರೂಪಾಯಿ ಆಸ್ತಿ ಸಂಪಾದಿಸಿದ್ದೂ ಅಲ್ಲದೇ ಮೂರು ಸ್ವಂತ ಮನೆ, ಮೂರು ಆಟೋರಿಕ್ಷಾಗಳು ಹೊಂದಿದ್ದೂ ಅಲ್ಲದೇ ವ್ಯಾಪಾರಿಗಳಿಗೆ ಬಡ್ಡಿಗೆ ಸಾಲ ಕೊಡುವಷ್ಟು ಶ್ರೀಮಂತ ಎಂಬುದು ಬೆಳಕಿಗೆ ಬಂದಿದೆ.
ಹೌದು, ಮಧ್ಯಪ್ರದೇಶದ ಇಂದೋರ್ ನಲ್ಲಿ ಭಿಕ್ಷಾಟನೆ ಮುಕ್ತ ನಗರ ಮಾಡಲು ಪಣತೊಟ್ಟ ಭಿಕ್ಷುಕರ ನಿರ್ಮೂಲನಾ ಅಭಿಯಾನ ತಂಡ ಮಂಗಿಲಾಲ್ ಎಂಬ ಅಂಗವಿಕಲ ಭಿಕ್ಷುಕನ್ನು ಭಿಕ್ಷಾಟನೆಯಿಂದ ರಕ್ಷಿಸಲು ಹೋದಾಗ ಅನುಮಾನ ಬಂದು ಅಧಿಕಾರಿಗಳ ಗಮನಕ್ಕೆ ತಂದಿದ್ದು, ತನಿಖೆ ನಡೆಸಿದಾಗ ಈತನ ಆಸ್ತಿ ನೋಡಿ ಶಾಕ್ ಆಗಿದ್ದಾರೆ.
ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಈ ಭಿಕ್ಷುಕನ ಬಳಿ ಕಾರಿದ್ದು, ಚಾಲಕನನ್ನು ಸಹ ನೇಮಿಸಿಕೊಂಡಿದ್ದಾರೆ.
ಈ ಕುರಿತು ಮಾತನಾಡಿರುವ ರಕ್ಷಣಾ ತಂಡದ ನೋಡಲ್ ಅಧಿಕಾರಿ ದಿನೇಶ್ ಮಿಶ್ರಾ, “ಹಲವಾರು ದಿನಗಳಿಂದ, ವಿಕಲಚೇತನನಾಗಿದ್ದ ಮತ್ತು ಪ್ಯಾಲೆಟ್ ಕಾರ್ಟ್‌ನ ಪ್ರದೇಶದಲ್ಲಿ ಸುತ್ತುತ್ತಿದ್ದ ಭಿಕ್ಷುಕನ ಬಗ್ಗೆ ನಮಗೆ ಸರಾಫಾ ಅವರಿಂದ ಮಾಹಿತಿ ಬರುತ್ತಿತ್ತು. ಈತನನ್ನು ರಕ್ಷಿಸಲು ಮುಂದಾದಾಗ ಇಂದೋರ್‌ನಲ್ಲಿ ಮೂರು ಮನೆಗಳನ್ನು ಹೊಂದಿರುವುದು ಖಚಿತವಾಗಿದೆ. ಭಗತ್ ಸಿಂಗ್ ನಗರದಲ್ಲಿ 16 x 45 ಅಡಿ ವಿಸ್ತೀರ್ಣದ ಮೂರು ಅಂತಸ್ತಿನ ಮನೆ, ಶಿವನಗರದಲ್ಲಿ 600 ಚದರ್ ಅಡಿ ವಿಸ್ತೀರ್ಣದ ಮತ್ತೊಂದು ಮನೆ ಮತ್ತು ಆಳ್ವಾಸ್‌ನಲ್ಲಿರುವ 10 x 20 ಅಡಿ ವಿಸ್ತೀರ್ಣದ ಒಂದು ಬಿಹೆಚ್‌ಕೆ ಮನೆ ಸೇರಿವೆ. ಈತ ರೆಡ್ ಕ್ರಾಸ್ ಸೊಸೈಟಿಯ ಮೂಲಕ ಅಂಗವೈಕಲ್ಯ ಫಲಾನುಭವಿಯಾಗಿ ಸವಲತ್ತುಗಳನ್ನೂ ಪಡೆದಿದ್ದಾರೆ ಎಂದು ವಿವರಿಸಿದ್ದಾರೆ.
ವ್ಯಾಪಾರಿಗಳಿಗೆ ಬಡ್ಡಿಗೆ ಸಾಲ ಕೊಡುವಷ್ಟು ಶ್ರೀಮಂತ!
ಹೆಚ್ಚಿನ ವಿವರ ಪಡೆದಾಗ ಮಂಗಿಲಾಲ್ ಅವರು ಕೆಲವು ಸರಾಫಾ ವ್ಯಾಪಾರಿಗಳಿಗೆ ವಾರಕ್ಕೊಮ್ಮೆ ಮತ್ತು ಪ್ರತಿದಿನ ಬಡ್ಡಿ ಲೆಕ್ಕದ ಮೇಲೆ ಸಾಲ ಕೊಡುತ್ತಾರೆ ಅನ್ನೋದು ತಿಳಿದುಬಂದಿದೆ.
ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸಲು ಹೆಚ್ಚಿನ ಸಂಖ್ಯೆಯ ಜನರು ಸರಾಫಾಗೆ ಬರುತ್ತಾರೆ. ಆದರೆ ರಾತ್ರಿಯಲ್ಲಿ, ದೇಶದ ವಿವಿಧೆಡೆಯಿಂದ ಮತ್ತು ವಿದೇಶಗಳಿಂದ ಅನೇಕ ಜನರು ಚೌಪಟ್ಟಿಗೆ ಭೇಟಿ ನೀಡುತ್ತಾರೆ. ಮಂಗಿಲಾಲ್ ಈ ಜನರ ಬಳಿ ಹೋಗಿ ಕುಳಿತುಕೊಳ್ಳುತ್ತಿದ್ದ ಅಂಗವೈಕಲ್ಯವನ್ನು ನೋಡಿ, ಅನೇಕ ಜನರು ಹಣ ನೀಡುತ್ತಿದ್ದರು. ಈ ರೀತಿಯಾಗಿ ಹಲವು ವರ್ಷಗಳಿಂದ ಮಂಗಿಲಾಲ್ ಪ್ರತಿದಿನ 400 ರಿಂದ 500 ರೂಪಾಯಿ ಗಳಿಸುತ್ತಿದ್ದಎಂದು ಈ ಅಧಿಕಾರಿ ಮಿಶ್ರಾ ವಿವರಿಸಿದ್ದಾರೆ.
ಆಟೋರಿಕ್ಷಾಗಳನ್ನು ಬಾಡಿಗೆಗೆ ಬಿಟ್ಟಿದ್ದು, ಇಂದೋರ್‌ನ ಹೊರಗೆ ಪ್ರಯಾಣಿಸಲು ಡಿಸೈರ್ ಕಾರನ್ನು ಇಟ್ಟುಕೊಂಡಿದ್ದಾರೆ. ಅದನ್ನು ಓಡಿಸಲು ಅವರು ಚಾಲಕನನ್ನು ನೇಮಿಸಿಕೊಂಡಿದ್ದಾರೆ ಮತ್ತು ಆತನಿಗೆ ತಿಂಗಳಿಗೆ 10,000 ರಿಂದ 12,000 ರೂಪಾಯಿ ವೇತನ ಪಾವತಿಸುತ್ತಾರೆ ಎಂದು ಅವರು ವಿವರಿಸಿದ್ದಾರೆ.
10 ಲಕ್ಷ ರೂಪಾಯಿ ಬ್ಯಾಂಕ್ ಬ್ಯಾಲೆನ್ಸ್, ನಿರರ್ಗಳ ಇಂಗ್ಲಿಷ್ ಮಾತನಾಡುವ ಸುಶಿಕ್ಷಿತ ಮಂಗಿಲಾಲ್ ಹೇಗೆ ಭಿಕ್ಷುಕನಾದ ಎಂಬ ಪ್ರಶ್ನೆ ಕಾಡುತ್ತಿದ್ದು, ಈತನ ವಿಚಾರಣೆ ಮುಂದುವರಿಸಿದೆ.


