ವಿದ್ಯಾರ್ಥಿಗಳಿಗೆ ಹಿಂದಿ ಉತ್ತೀರ್ಣತೆ ಕಡ್ಡಾಯ ಮಾಡದಂತೆ ಕನ್ನಡಪರ ಸಂಘಟನೆಗಳಿಂದ ಒತ್ತಾಯ ಕೇಳಿಬಂದ ಹಿನ್ನೆಲೆ ರಾಜ್ಯದಲ್ಲಿ ದ್ವಿಭಾಷಾ ಸೂತ್ರ ಜಾರಿಗೆ ಚಿಂತನೆ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳನ್ನು ಮಾತ್ರ ಒಳಗೊಂಡ ‘ದ್ವಿಭಾಷಾ ನೀತಿ’ ಜಾರಿಗೆ ತರಲು ಈ ಹಿಂದೆ ಪ್ರೊ. ಸುಖದೇವ್ ಥೋರಟ್ ನೇತೃತ್ವದ ರಾಜ್ಯ ಶಿಕ್ಷಣ ನೀತಿ ಆಯೋಗ ಶಿಫಾರಸು ಮಾಡಿತ್ತು. ಈ ನೀತಿಯು ಮಾತೃಭಾಷೆ ಕನ್ನಡಕ್ಕೆ ಆದ್ಯತೆ ನೀಡುತ್ತಿದ್ದು, ಹಿಂದಿ ಭಾಷೆಯ ಕಡ್ಡಾಯ ಕಲಿಕೆಯನ್ನು ಕೈಬಿಡುವ ಗುರಿ ಹೊಂದಿತ್ತು.
ಕರವೇ ಶಿವರಾಮೇಗೌಡ, ಸಾರಾ ಗೋವಿಂದ್ ನೇತೃತ್ವದಲ್ಲಿ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿಯಾದ ಕನ್ನಡ ಪರ ಸಂಘಟನೆಗಳು ವಿದ್ಯಾರ್ಥಿಗಳಿಗೆ ಹಿಂದಿ ಪಾಸ್ ಕಡ್ಡಾಯ ಮಾಡದಂತೆ ಮನವಿ ಮಾಡಿವೆ. ಶಿಕ್ಷಣದಲ್ಲಿ ತ್ರಿಭಾಷ ಸೂತ್ರ ರದ್ದು ಮಾಡಿ, ದ್ವಿಭಾಷಾ ಸೂತ್ರ ಜಾರಿ ಮಾಡುವಂತೆ ಮನವಿ ಮಾಡಿವೆ.
ಕನ್ನಡ ಪರ ಸಂಘಟನೆಗಳ ಮನವಿ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಹಿಂದಿ ಅವಶ್ಯಕತೆ ಇಲ್ಲ ಅಂತ ಕನ್ನಡಪರ ಸಂಘಟನೆಗಳು ಹೇಳ್ತಿವೆ. ಸಿಎಂ ದ್ವಿಭಾಷಾ ಸೂತ್ರ ತಂದರೆ ಒಳ್ಳೆಯದು ಎಂಸದು ಹೇಳಿದ್ದಾರೆ. ದ್ವಿಭಾಷಾ ಸೂತ್ರ ಬಂದರೆ ಒಳ್ಳೆಯದು. ಈಗ ತ್ರಿಭಾಷಾ ಸೂತ್ರವಿದ್ದು, ಬದಲಾವಣೆ ಆಗಬೇಕಾದರೆ ಚರ್ಚೆ ಆಗಬೇಕು. ಶಿಕ್ಷಕರ ಜೊತೆಯೂ ಮಾತಾಡ್ತೀವಿ, ಸಿಎಂ ಜೊತೆ ನಾವು ಮಾತಾಡಬೇಕು. ಎಲ್ಲಾ ಆಯಾಮಗಳಲ್ಲಿ ಚರ್ಚಿಸಿದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ಹಾಗಾಗಿ ಯಾರೂ ಪರೀಕ್ಷಾ ಕೇಂದ್ರಗಳಿಗೆ ಮುತ್ತಿಗೆ ಹಾಕುವುದು ಬೇಡ, ಸಿಎಂ ಜೊತೆ ಮಾತಾಡಿ ಇಂದೇ ಈ ಬಗ್ಗೆ ನಿರ್ಧಾರ ಮಾಡುವುದಾಗಿ ಹೇಳಿದ್ದಾರೆ. ವಿದ್ಯಾರ್ಥಿಗಳಿಗೆ ಹಿಂದಿ ಉತ್ತೀರ್ಣ ಕಡ್ಡಾಯ ಮಾಡದಂತೆ ಕನ್ನಡಪರ ಸಂಘಟನೆಗಳಿಂದ ಒತ್ತಾಯ ಕೇಳಿಬಂದ ಬೆನ್ನಲ್ಲೇ ರಾಜ್ಯದಲ್ಲಿ ದ್ವಿಭಾಷಾ ಸೂತ್ರ ಜಾರಿಗೆ ಚಿಂತನೆ ನಡೆದಿದೆ.


