ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಹಾವೇರಿ, ದಾವಣಗೆರೆ ಜಿಲ್ಲೆಗಳ ಪೊಲೀಸರು ಹುಡುಕಾಡುತ್ತಿದ್ದ ಕುಖ್ಯಾತ ಕಳ್ಳನನ್ನು ಬೆಂಗಳೂರಿನ ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ. ಸೈಯ್ಯದ್ ಅಸ್ಲಾಂ ಪಾಷಾ ಬಂಧಿತ ಆರೋಪಿಯಾಗಿದ್ದು, ಆತ 150 ಕಳ್ಳತನ ಕೇಸ್‌ಗಳಲ್ಲಿ ಪೊಲೀಸರಿಗೆ ಬೇಕಾಗಿದ್ದವ.
ಆರೋಪಿ ಹಗಲೆಲ್ಲ ಐಷಾರಾಮಿ ಮನೆಗಳನ್ನ ಗುರುತಿಸುತ್ತಿದ್ದ. ರಾತ್ರಿಯಾಗುತ್ತಿದ್ದಂತೆ ಕಿಟಕಿ ತೆರೆದು ಮಹಿಳೆಯರು ನಿದ್ರೆಗೆ ಜಾರಿದ್ದರೆ ಕುತ್ತಿಗೆಯಲ್ಲಿರುವ ಸರಗಳನ್ನು ಎಗರಿಸಿ ಪರಾರಿಯಾಗುತ್ತಿದ್ದ, ಕಿಟಕಿ ಪಕ್ಕದಲ್ಲಿ ಮೇನ್ ಡೋರ್ ಇದ್ದರೆ ಕಿಟಕಿ ಗ್ಲಾಸ್ ಒಡೆದು ಡೋರ್ ಓಪನ್ ಮಾಡುತ್ತಿದ್ದ.
ಹಾಲು, ಪೇಪರ್ ಮನೆ ಬಳಿ ಹಾಗೆ ಬಿದ್ದಿದ್ದು, ಮೇನ್ ಡೋರ್ ಲಾಕ್ ಆಗಿ ಮನೆಯಲ್ಲಿನ ಎಲ್ಲ ಲೈಟ್‌ಗಳು ಆಫ್ ಆಗಿ, ಮನೆಯ ಗೇಟ್ ಹೊರಗಿನಿಂದ ಲಾಕ್ ಆಗಿರುವುದು ಖಚಿತವಾದರೆ ಕಳ್ಳತನಕ್ಕೆ ಸೂಕ್ತ ಸ್ಥಳ ಎಂದು ಗುರುತಿಸಿ ಕಳ್ಳತನಕ್ಕೆ ಸಂಚು ರೂಪಿಸಿ ಯಶಸ್ವಿಯಾಗುತ್ತಿದ್ದ.
ಒಂದು ವರ್ಷ ಕಳ್ಳತನದಿಂದ ಬಂದ ಹಣದಲ್ಲಿ ಮೋಜುಮಸ್ತಿ ಮಾಡಿ ಹಣವನ್ನು ಖಾಲಿ ಮಾಡುತ್ತಿದ್ದ ಅಸ್ಲಾಂ ಪಾಷಾ, ಒಂದು ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದರೆ ಆ ಕೇಸ್‌ಗೆ ಕನಿಷ್ಟ ಒಂದು ವರ್ಷ ಆಗುವವರೆಗೆ ಮತ್ತೆ ಅತ್ತ ತಲೆ ಹಾಕುತ್ತಿರಲಿಲ್ಲ. ಐದು ಜಿಲ್ಲೆಗಳಲ್ಲಿ ಅವನ ಕಳ್ಳತನಗಳು ನಿರಂತರವಾಗಿದ್ದವು. ವಿದ್ಯಾರಣ್ಯಪುರ ಪೊಲೀಸರು ವಿಚಾರಣೆ ಮುಂದುವರಿಸಿದ್ದು, ಇನ್ನಷ್ಟು ಕಳ್ಳತನ ಪ್ರಕರಣಗಳು ಬಯಲಿಗೆ ಬರುವ ಸಾಧ್ಯತೆ ಇವೆ.


