ಬೆಂಗಳೂರು: ಕಲಬುರಗಿ ಲೋಕಸಭಾ ಚುನಾವಣೆಯಲ್ಲಿ ನನ್ನ ವಿರುದ್ಧ ಬೋಗಸ್ ಮತ ಹಾಕಿಸಿ ಬಿಜೆಪಿ ಸೋಲಿಸಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ.
ಫ್ರೀಡಂ ಪಾರ್ಕ್ ನಲ್ಲಿ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಶುಕ್ರವಾರ ನಡೆದ ಮತಗಳ್ಳತನ ವಿರುದ್ಧ ಪ್ರತಿಭಟನಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಲಬುರಗಿಯಲ್ಲಿ ಎಂದೂ ಸೋಲದ ನನ್ನನ್ನು 2019ರ ಚುನಾವಣೆಯಲ್ಲಿ ಬೋಗಸ್ ಮತ ಹಾಕಿಸಿ ಸೋಲಿಸಿದರು ಎಂದರು.
ಕಲಬುರಗಿ ಲೋಕಸಭಾ ಚುನಾವಣೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ ಬೋಗಸ್ ಮತ ಹಾಕಿಸಲಾಗಿದೆ. ಈ ರೀತಿ ಕಳ್ಳತನದಿಂದ ಗೆದ್ದು ಅಧಿಕಾರದಲ್ಲಿ ಇರುವವರನ್ನು ಓಡಿಸಬೇಕಾದ ಕಾಲ ಬಂದಿದೆ ಎಂದು ಅವರು ಹೇಳಿದರು.
ರಾಹುಲ್ ಗಾಂಧಿ ಅತ್ಯಂತ ದಿಟ್ಟತನದಿಂದ ಮತಗಳ್ಳತನ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಅವರಿಗೆ ಸಾಕಷ್ಟು ಕಿರುಕುಳ ನೀಡಲಾಗುತ್ತಿದ್ದರೂ ಹೋರಾಟ ನಡೆಸುತ್ತಿರುವ ರಾಹುಲ್ ಗಾಂಧಿ ಅವರಿಗೆ ನೈತಿಕ ಬೆಂಬಲ ನೀಡಬೇಕಾಗಿದೆ ಎಂದು ಅವರು ಹೇಳಿದರು.
ಕಳ್ಳತನದಿಂದ ಅಧಿಕಾರಕ್ಕೆ ಬಂದವರನ್ನು ಓಡಿಸಬೇಕಾದ ಕಾಲ ಬಂದಿದೆ. ಇದಕ್ಕೆ ಜನರು ರಾಹುಲ್ ಗಾಂಧಿ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಅವರು ಕರೆ ನೀಡಿದರು.