ಮೈಸೂರು: ಅಂಬೇಡ್ಕರ್ ಅವರು ಸಂವಿಧಾನ ಕೊಡದಿದ್ದರೆ, ಇನ್ನೂ ಮನುಷ್ಯ ವಿರೋಧಿ ಮನುಸ್ಮೃತಿ ಆಡಳಿತವೇ ಇಲ್ಲಿ ಇರುತ್ತಿತ್ತು. ಅದಕ್ಕೇ ಅಂಬೇಡ್ಕರ್ ಅವರು ಮನುಸ್ಮೃತಿ ಸುಟ್ಟು ದೇಶಕ್ಕೆ ಸಂವಿಧಾನ ಕೊಟ್ಟರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.
ಆದಿ ಕರ್ನಾಟಕ, ಛಲವಾದಿ ಮಹಾಸಂಸ್ಥಾನ ಗುರುಪೀಠದ ಡಾ. ಬಿ.ಆರ್.ಅಂಬೇಡ್ಕರ್ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಬಸವಣ್ಣ ಮತ್ತು ಅಂಬೇಡ್ಕರ್ ಅವರ ವಿಚಾರ ಮತ್ತು ಮೌಲ್ಯಗಳು ಒಂದೇ ಆಗಿವೆ. ವಿಚಾರಗಳಲ್ಲಿ ಸ್ವಲ್ಪ ವ್ಯತ್ಯಾಸಗಳಿದ್ದರೂ ಮೌಲ್ಯಗಳು ಮತ್ತು ಆಶಯಗಳೆಲ್ಲಾ ಒಂದೇ ಆಗಿವೆ ಎಂದರು.
ಅಂಬೇಡ್ಕರ್ ಅವರು ಓದಿದ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಮಾದರಿಯಲ್ಲಿ ರಾಜ್ಯದಲ್ಲಿ ನಾವು ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಮಿಕ್ಸ್ ಆರಂಭಿಸಿದ್ದೇವೆ.
ಅಂಬೇಡ್ಕರ್ ಅವರು ಒಂದು ಮಾತು ಹೇಳಿದ್ದರು. ನಾವು ಎಳೆದ ಸಾಮಾಜಿಕ ನ್ಯಾಯದ ರಥವನ್ನು ಮತ್ತಷ್ಟು ಮುಂದಕ್ಕೆ ಎಳೆದುಕೊಂಡು ಹೋಗಿ, ಸಾಧ್ಯವಾಗದಿದ್ದರೆ ಹಿಂದಕ್ಕೆ ಮಾತ್ರ ತಳ್ಳಬೇಡಿ. ಅಲ್ಲೇ ಬಿಟ್ಟುಬಿಡಿ ಆದರೆ ಹಿಂದಕ್ಕೆ ತಳ್ಳಬೇಡಿ ಎಂದಿದ್ದರು. ಹೀಗಾಗಿ ಮೌಡ್ಯ, ಕಂದಾಚಾರಗಳಲ್ಲಿ ಮುಳುಗಿ ಅಂಬೇಡ್ಕರ್ , ಬಸವಣ್ಣ ವಿಚಾರಗಳಿಗೆ ದ್ರೋಹ ಎಸಗಬಾರದು ಎಂದರು.
ವ್ಯಾಸ ಮಹಾಭಾರತ ಬರೆದರು. ವಾಲ್ಮೀಕಿ ರಾಮಾಯಣ ಬರೆದರು. ಅವಕಾಶಗಳು ಮುಖ್ಯ. ಜ್ಞಾನ ಪ್ರತಿಯೊಬ್ಬರ ಸ್ವತ್ತು. ಅವಕಾಶಗಳು ಸಿಕ್ಕಾಗ ಜ್ಞಾನ ಹೊರಗೆ ಬರುತ್ತದೆ. ಆದ್ದರಿಂದ ನಮ್ಮ ಅವಕಾಶಗಳನ್ನು ಕಿತ್ತುಕೊಳ್ಳುವ ಉದ್ದೇಶದಿಂದಲೇ ಪಟ್ಟಭದ್ರ ಹಿತಾಸಕ್ತಿಗಳು ಸಂವಿಧಾನವನ್ನೇ ಬದಲಾಯಿಸಲು ಹೊರಟಿದ್ದಾರೆ ಎಂದು ವಿವರಿಸಿದರು.
ಪ್ರೊಫೆಸರ್ ಹುದ್ದೆ ತೊರೆದು ದೀಕ್ಷೆ ಪಡೆದಿರುವ ಆದಿ ಕರ್ನಾಟಕ ಮಹಾಸಂಸ್ಥಾನ ಗುರುಪೀಠದ ಪ್ರೊ.ಜ್ಞಾನ ಸ್ವರೂಪಾನಂದ ಸ್ವಾಮೀಜಿ ಅವರು ಸಮಾಜಕ್ಕೆ ನಿಜವಾದ ಗುರುವಾಗಲಿ. ಸಮಾಜವನ್ನು ಮಾನವೀಯತೆಯ ಹಾದಿಯಲ್ಲಿ ಮುನ್ನಡೆಸಲಿ ಎಂದು ಹಾರೈಸಿದರು.
ಸಂವಿಧಾನದ ಮೌಲ್ಯಗಳ ಬಗ್ಗೆ ಗೌರವ ಇಲ್ಲದವರ ಕೈಯಲ್ಲಿ, ದುಷ್ಟರ ಕೈಲಿ ಸಂವಿಧಾನ ಉಳಿಯುವುದಿಲ್ಲ. ಆದ್ದರಿಂದ ನಾವು ದುಷ್ಟರ ಹುನ್ನಾರಗಳಿಂದ ಸಂವಿಧಾನ ಉಳಿವಿಗೆ ಬಹಳ ಬದ್ಧತೆಯಿಂದ ಎದ್ದು ನಿಲ್ಲಬೇಕು ಎಂದು ಕರೆ ನೀಡಿದರು.
ನಾನು ಸಿಎಂ ಆಗಲು, ಮಹದೇವಪ್ಪ ಮಂತ್ರಿ ಆಗಲು ಈ ಸಂವಿಧಾನವೇ ಕಾರಣ. ಈಗಲೂ ಮನುಸ್ಮೃತಿ ಪರವಾಗಿರುವ ಮನಸ್ಸುಗಳು ಸಂಚು ನಡೆಸುತ್ತಲೇ ಇವೆ. ಈ ಸಂಚನ್ನು ಸೋಲಿಸೋಣ ಎಂದು ಕರೆ ನೀಡಿ, ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದಿಸಿದರು.