Menu

ಅವರವರ ಸಮಾಜ ರಕ್ಷಣೆ ಮಾಡಿಕೊಳ್ಳಲು ಹೊರಟಿದ್ದಾರೆ: ಡಿ.ಕೆ.ಶಿವಕುಮಾರ್

“ವೀರಶೈವ ಮಹಾಸಭಾದವರು ಅವರ ಸಮಾಜ ರಕ್ಷಣೆ ಮಾಡಿಕೊಳ್ಳಲು ಹೊರಟಿದ್ದು, ಅವರನ್ನು ನಾವು ಏಕೆ ಟೀಕೆ ಮಾಡಬೇಕು. ಪ್ರಜಾಪ್ರಭುತ್ವ, ಸಂವಿಧಾನದ ಪ್ರಕಾರವಾಗಿ ಅವರುಗಳು ತಮ್ಮ ನಿಲುವುಗಳನ್ನು ಪ್ರತಿಪಾದನೆ ಮಾಡಲಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಾತಿಗಣತಿ ಬಗ್ಗೆ ಶಾಮನೂರು ಶಿವಶಂಕರಪ್ಪ ಅವರ ಟೀಕೆ ಹಾಗೂ ವರದಿಯ ಅಧ್ಯಯನಕ್ಕೆ ವೀರಶೈವ ಮಹಾಸಭಾ ತಜ್ಞರ ಸಮಿತಿ ನೇಮಕ ಮಾಡಿರುವ ಬಗ್ಗೆ ಕೇಳಿದಾಗ, “ಮುಖ್ಯಮಂತ್ರಿಗಳು ಜಾತಿಗಣತಿ ವರದಿಯ ಬಗ್ಗೆ ಚರ್ಚೆ ನಡೆಸಲು ಜನಪ್ರತಿನಿಧಿ ಗಳಿಗೂ ವಿಧಾನಸಭೆಯಲ್ಲಿ ಚರ್ಚೆ ನಡೆಸಲು ಅವಕಾಶ ನೀಡಲಾಗುವುದು ಎಂದು ತಿಳಿಸಿದ್ದಾರೆ. ಇದಕ್ಕಿಂತ ಮುಕ್ತವಾಗಿ ಇನ್ನೇನು ‌ಮಾಡಲು ಸಾಧ್ಯ” ಎಂದರು.

ಚುನಾವಣೆ ಪೂರ್ವದಲ್ಲಿ ಒಕ್ಕಲಿಗ ಸಮುದಾಯ ಬೆನ್ನಿಗೆ ನಿಲ್ಲಬೇಕು ಎಂದು ಈ ಹಿಂದೆ ನೀಡಿದ್ದ ಹೇಳಿಕೆ ಬಗ್ಗೆ ಕೇಳಿದಾಗ, “ಅದು ಬೇರೆ ವಿಚಾರ. ಈಗ ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿದ್ದೇನೆ. ಎಲ್ಲರಿಗೂ ನ್ಯಾಯ ಕೊಡಿಸುವುದು ನಮ್ಮ ಕರ್ತವ್ಯ, ಧ್ವನಿ, ಧ್ಯೇಯ, ಉದ್ದೇಶ, ಸಂಕಲ್ಪ ಎಲ್ಲವೂ ಸಹ” ಎಂದರು.

ಒಕ್ಕಲಿಗರ ಸಂಖ್ಯೆ 61 ಲಕ್ಷ ತೋರಿಸಲಾಗುತ್ತಿದೆ ಎಂದು ಕೇಳಿದಾಗ, “ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಅಷ್ಟೇ” ಎಂದು ಹೇಳಿದರು.

ಧರ್ಮದ ಹೆಸರಲ್ಲಿ ರಾಜಕಾರಣ ನೀಚತನ: “ಬೆಂಗಳೂರು ಭಾವೈಕ್ಯತೆಯ ದೊಡ್ಡ ಸಂಕೇತ. ಕರಗ ಆಚರಣೆ ವೇಳೆ ದರ್ಗಾಕ್ಕೂ ಭೇಟಿ ನೀಡಲಾಗುತ್ತದೆ. ಧರ್ಮ, ದೇವಾಸ್ಥಾನದ ಹೆಸರಿನಲ್ಲಿ ರಾಜಕಾರಣ ಮಾಡುವುದು ನೀಚತನ. ಇದನ್ನು ಯಾರೂ ಸಹ ಮಾಡಬಾರದು” ಎಂದರು.

“ಕರಗ ಆಚರಣೆಗೆ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡುವುದಕ್ಕೆ ನಿಯಮಾವಳಿ ಇದೆ. ಯಾರದೋ ಕೈಗೆ ಹಣ ನೀಡಲು ಆಗುವುದಿಲ್ಲ. ಜಿಲ್ಲಾಧಿಕಾರಿಗಳಿಗೆ ಜವಾಬ್ದಾರಿ ವಹಿಸಿದ್ದೇವೆ. ಅವರು ಯಾರಿಗೆ ಹಣ ನೀಡಬೇಕೋ ಅವರಿಗೆ ಹಣ ನೀಡುತ್ತಾರೆ. ಬಜೆಟ್ ಅಲ್ಲಿಯೇ ಹಣ ಮೀಲಿಟ್ಟಿದ್ದೇವೆ. ಕರಗ ಉತ್ಸವ ಚೆನ್ನಾಗಿ ನಡೆಯಲು ಜಿಲ್ಲಾಧಿಕಾರಿಗಳು, ಪೊಲೀಸರು ಶ್ರಮವಹಿಸಿದ್ದಾರೆ” ಎಂದು ತಿಳಿಸಿದರು.

Related Posts

Leave a Reply

Your email address will not be published. Required fields are marked *