ಭೂಮಿಯಲ್ಲಿ ಶೇ. ೭೦ ಭಾಗ ನೀರೇ ತುಂಬಿದ್ದರೂ ನೀರಿನ ಹಾಹಾಕಾರಕ್ಕೆ ತುತ್ತಾಗುತ್ತಿರುವುದು ಶೋಚನೀಯ. ಘನ, ಅನಿಲ ಮತ್ತು ದ್ರವ ರೂಪದಲ್ಲಿ ಗೋಚರಿಸುವ ನೀರು ಮನುಷ್ಯನ ದೇಹದಲ್ಲೂ ಶೇ. ೫೫ ರಿಂದ ೭೮ ರವರೆಗೆ ತುಂಬಿರುತ್ತದೆ. ಗ್ರಹದಲ್ಲಿ ಎಂದಿಗೂ ನೀರಿನ ಕೊರತೆ ಆಗದು ಮೊದಲು ಇದ್ದಷ್ಟೇ ಪ್ರಮಾಣದ ನೀರು ಇಂದಿಗೂ ಭೂಮಂಡಲದಲ್ಲಿ ಇದೆ.
ನೀರು ನಿರ್ವಹಣೆಯಲ್ಲಿ ನಾವು ಗೆದ್ದರೆ ನೀರಿನ ಕೊರತೆ ಆಗುವುದೇ ಇಲ್ಲ, ಉತ್ತಮ ನೀರು ನಿರ್ವಹಣೆಯ ಒಂದು ಉದಾಹರಣೆ ಬೇಕೆಂದರೆ ಇಸ್ರೇಲ್ ನಮ್ಮ ಕಣ್ಣ ಮುಂದೆ ಬರುವುದು. ಅತ್ಯಂತ ಕನಿಷ್ಟ ನೀರಿನಲ್ಲಿ ಅತೀ ಹೆಚ್ಚು ಉಪಯೋಗ ಪಡೆದುಕೊಳ್ಳುತ್ತಿದ್ದಾರೆ ಇಸ್ರೇಲಿಗರು, ನಾವು ಅವರಿಗಿಂತ ಕಡಿಮೆ ಇಲ್ಲ ಮುಖ್ಯವಾಗಿ ಬೇಕಿರುವುದು ಮನಸ್ಥಿತಿ ಹಾಗೂ ಇಚ್ಛಾಶಕ್ತಿ.
ಮೈಸೂರಿನಿಂದ ಬೆಂಗಳೂರಿನವರೆಗೆ ಶರವೇಗದ ಹೆದ್ದಾರಿ ನಿರ್ಮಾಣವಾಗಿದೆ, ನಗರಗಳ ನಡುವಿನ ಅಂತರದಲ್ಲಿ ವ್ಯತ್ಯಾಸ ಇಲ್ಲದಿದ್ದರೂ ಪ್ರಯಾಣದ ಸಮಯ ಉಳಿತಾಯವಾಗಿದೆ. ನಾವು ದೊಡ್ಡದೊಡ್ಡ ರಸ್ತೆಗಳನ್ನು, ರೈಲು ಮಾರ್ಗಗಳನ್ನು ಹಾಗೂ ವಾಯುಮಾರ್ಗಗಳನ್ನು ಅಭಿವೃದ್ದಿಪಡಿಸುವಲ್ಲಿ ಮುಂದೆ ಇವೆ, ಅದೇ ರೀತಿಯಾಗಿ ಕಾಮಗಾರಿಗಳು ನಡೆಯುತ್ತಿವೆ. ಸಂಪರ್ಕ ಮಾರ್ಗಗಳು ಅಭಿವೃದ್ದಿ ಆದಂತೆ ನಗರಗಳು ಸಹ ಬೆಳೆಯುತ್ತಿವೆ. ನಗರಗಳು ಬೆಳೆಯುತ್ತಿದ್ದಂತೆ ನಾನಾ ಉzಶಗಳಿಂದ ಪರ ಊರಿನಿಂದ ನಗರಗಳಿಗೆ ಬಂದು ನೆಲೆಸುವುದರಿಂದ ಜನಸಂಖ್ಯೆಯು ಏರುತ್ತಿದೆ. ಜನವಸತಿಗಳು ಹಾಗೂ ಕಾರ್ಖಾನೆಗಳು ಹೆಚ್ಚುತ್ತಿದ್ದಂತೆ ನೀರಿನ ಬೇಡಿಕೆಯೂ ಜಾಸ್ತಿ ಆಗುತ್ತಿದೆ. ಬೆಂಗಳೂರಿನ ಪ್ರಸ್ತುತ ಜನಸಂಖ್ಯೆ ೧,೪೩,೯೫,೦೦೦, ಜಲಮಂಡಳಿಯವರ ಪ್ರಕಾರ ದಿನಕ್ಕೆ ೨೧೦೦ ಎಂಎಲ್‌ಡಿ ಇವರಿಗೆ ಕುಡಿಯುವ ನೀರಿನ ಅವಶ್ಯಕತೆ ಇರುವುದು, ಅಂದಾಜಿಸಿರುವಂತೆ ೨೭ ಟಿಎಂಸಿ ಪ್ರಮಾಣದ ನೀರು ಬೇಕಾಗಿದೆ. ಇದರ ಜೊತೆಗೆ ಕಾರ್ಖಾನೆಗಳು, ಉದ್ಯಾನವನಗಳು, ಹೋಟೆಲ್‌ಗಳು, ಮದುವೆ ಮಂಟಪಗಳು ಮುಂತಾದವುಗಳಿಗೆ ಪ್ರತ್ಯೇಕ, ಬೇಡಿಕೆಯು ವರ್ಷದಿಂದ ವರ್ಷಕ್ಕೆ ಏರಿಕೆಯು ಹೀಗೇ ಆಗುತ್ತಿದ್ದರೆ ಕೆಲವೇ ವರ್ಷಗಳಲ್ಲಿ ಕಾವೇರಿ ಜಲಾಶಯಗಳಲ್ಲಿನ ಪೂರ್ಣ ನೀರು ಬೆಂಗಳೂರು ನಗರ ಒಂದಕ್ಕೇ ಬೇಕಾಗಬಹುದು. ಯೋಜಿತ ರೂಪರೇಷೆಗಳಿಲ್ಲದಿದ್ದರೆ ಭವಿಷ್ಯ ದಲ್ಲಿ ಮೈಸೂರು, ಮಂಡ್ಯ, ಬೆಂಗಳೂರಿನ ಜನರ ನಡುವೆಯೇ ನೀರಿಗಾಗಿ ದೊಡ್ಡಮಟ್ಟದ ಹೋರಾಟಗಳು ಆಂತರಿಕವಾಗಿ ನಡೆಯುವುದು ನಿಶ್ಚಿತವಾದಂತೆ ಕಾಣುತ್ತಿದೆ.
ಕೃಷ್ಣರಾಜಸಾಗರ ಅಣೆಕಟ್ಟೆಯ ಶೇಖರಣಾ ಸಾಮರ್ಥ್ಯ ೪೯.೪೫೨ ಟಿಎಂಸಿ ಹಾಗೂ ಸರಾಸರಿ ವಾರ್ಷಿಕ ಇಳುವರಿ ೮೫೦.೫೯ ಟಿಎಂಸಿ ಕಬಿನಿ ಅಣೆಕಟ್ಟೆಯ ಶೇಖರಣಾ ಸಾಮರ್ಥ್ಯ ೧೯.೫೨ ಟಿಎಂಸಿ ಹಾಗೂ ಸರಾಸರಿ ವಾರ್ಷಿಕ ಇಳುವರಿ ೯೭.೭೦ ಟಿಎಂಸಿ. ಇಳುವರಿಯು ಎಲ್ಲಾ ವರ್ಷಗಳಲ್ಲೂ ಒಂದೇ ಇರುವುದಿಲ್ಲ, ಅತೀವೃಷ್ಟಿ ಆದಾಗ ಹೆಚ್ಚು ಇಳುವರಿ ಕ್ಷಾಮ ಬಂದಾಗ ಇಳುವರಿಯು ತೀರಾ ಕಡಿಮೆಯಾಗಿ ಕುಡಿಯುವ ನೀರಿಗೂ ಹಾಹಾಕಾರ ಉದ್ಬವಿಸುವುದು.
ಅಂಕಿಅಂಶಗಳಲ್ಲಿ ಇಲ್ಲಿವರೆಗೂ ಜಲಾಶಯಗಳಲ್ಲಿ ತುಂಬಿರುವ ಹೂಳಿನ ಪ್ರಮಾಣವನ್ನು ಪರಿಗಣಿಸಿಲ್ಲ, ಏನಿಲ್ಲವೆಂದರೂ ಶೇ.೧೦ರಷ್ಟು ಹೂಳು ಜಲಾಶಯಗಳಲ್ಲಿ ತುಂಬಿರುತ್ತದೆ, ಜಲಾನಯನ ಪ್ರದೇಶದ ಭೂಸವಕಳಿಯಿಂದಾಗಿ ಜಲಾಶಯಗಳ ಶೇಖರಣಾ ಸಾಮರ್ಥ್ಯವೂ ವರ್ಷದಿಂದ ವರ್ಷಕ್ಕೆ ಸ್ವಾಭಾವಿಕವಾಗಿ ಕಡಿಮೆಯಾ ಗುತ್ತಾ ಬರುವುದು, ಇತ್ತ ಸಂಗ್ರಹಣೆಯಲ್ಲಿ ಇಳಿಕೆ ಆಗುತ್ತಿದ್ದರೆ ಅತ್ತ ಅಭಿವೃದ್ದಿಯ ಕಾರಣ ನೀರಿನ ಬೇಡಿಕೆ ಏರುತ್ತಿರುತ್ತದೆ.
ಬೆಂಗಳೂರು ನೀರು ಸರಬರಾಜು ಮಂಡಳಿಯ ಯೋಜನೆಯ ಪ್ರಕಾರ ಕಾವೇರಿ ೬ನೇ ಹಂತವು ಪೂರ್ಣಪ್ರಮಾಣದಲ್ಲಿ ಅನುಷ್ಟಾನ ಆದ ನಂತರ ವಾರ್ಷಿಕ ೩೫ ಟಿಎಂಸಿ ನೀರನ್ನು ಬಳಸಬಹುದಾಗಿರುತ್ತದೆ. ಪ್ರಸ್ತುತ ೧೪೫೦ ಎಂಎಲ್‌ಡಿ ನೀರನ್ನು ಬೆಂಗಳೂರಿಗೆ ಕಳುಹಿಸಲಾಗುತ್ತಿದೆ, ವಾರ್ಷಿಕ ೩೫ ಟಿಎಂಸಿ ನೀರನ್ನು ಬೆಂಗಳೂರು ನಗರಕ್ಕೆ ಕಳುಹಿಸಲು ಪ್ರತೀ ದಿನ ಸುಮಾರು ೩೦೦೦ ಎಂಎಲ್‌ಡಿ(೦.೦೯೬ ಟಿಎಂಸಿ) ನೀರನ್ನು ನಿತ್ಯವೂ ಪಂಪ್ ಮಾಡಬೇಕಾಗುತ್ತದೆ.
ಎಲ್ಲಾ ವರ್ಷಗಳಲ್ಲೂ ಮಳೆ ಚೆನ್ನಾಗಿ ಬಿದ್ದು ಕಾವೇರಿ ಕಣಿವೆಯ ಅಣೆಕಟ್ಟೆಗಳು ತುಂಬಿದರೆ ಬೆಂಗಳೂರು ಹಾಗೂ ಇತರೆ ನಗರಗಳಿಗೆ ನೀರನ್ನು ಕೊಡಲು ಸಮಸ್ಯೆ ಆಗದು, ತುಂಬಿದರಷ್ಟೆ ಸಾಲದು ಮೇಲೆ ತಿಳಿಸಿದಂತೆ ವಾರ್ಷಿಕ ಇಳುವರಿಯಾದರೆ ಮಾತ್ರ ಅಡ್ಡಿ ಇಲ್ಲ ಹಾಗೂ ಅಗತ್ಯವಾದ ನೀರು ಎಲ್ಲಾ ದಿನಗಳಲ್ಲೂ ವಿಶೇಷ ವಾಗಿ ಬೇಸಿಗೆಯಂದು ಅಣೆಕಟ್ಟೆಗಳಲ್ಲಿ ಲಭ್ಯ ಇರಬೇಕಾಗುತ್ತದೆ. ಇಲ್ಲವಾದಲ್ಲಿ ಬೆಳೆಗಳಿಗೆ ನೀರು ಕೊಡುವುದಕ್ಕೆ ಹಾಗೂ ಇಲಾಖೆಯ ಇಂಜಿನಿಯರ್‌ಗಳಿಗೆ ನಾಲೆ ಗಳಲ್ಲಿ ನೀರು ನಿರ್ವಹಣೆಯು ಕಷ್ಟವಾಗುವುದು.
ಬೆಂಗಳೂರಿಗೆ ಕಾವೇರಿ ನೀರು ಸರಬರಾಜು ಹಂತ ೬ಕ್ಕೆ ಮುಕ್ತಾಯವಾಗುತ್ತಾ?, ಮುಂದಿನ ದಿನಗಳಲ್ಲಿ ಹಂತ-೭, ಹಂತ -೮, ಹಂತ-೯…., ಹೀಗೆ ಮುಂದುವರಿ ಯುತ್ತಿದ್ದರೆ ಜಲಾಶಯಗಳು ಕುಡಿಯುವ ನೀರಿಗೆ ಮಾತ್ರ ಸೀಮಿತಗೊಳ್ಳುತ್ತವೆ. ಬೆಂಗಳೂರಿಗೆ ಕುಡಿಯುವ ನೀರನ್ನು ಸರಬರಾಜು ಮಾಡಿದರೆ ಸಾಕೆ?, ಮಂಡ್ಯ, ಮದ್ದೂರು, ಚನ್ನಪಟ್ಟಣ, ರಾಮನಗರ, ಕನಕಪುರ ಮುಂತಾದ ಬೆಂಗಳೂರು ಕೇಂದ್ರೀಕೃತ ಪಟ್ಟಣಗಳು ಇವೆಯಲ್ಲ ಅವುಗಳಿಗೂ ಕಾವೇರಿ ಕಣಿವೆಯ ನೀರು ಬೇಕಿದೆ, ಬೆಂಗಳೂರಿನಂತೆ ಬೆಳೆಯುತ್ತಿರುವ ಮೈಸೂರು ನಗರವು ಕೂಡ ಪಕ್ಕದಲ್ಲೇ ಇರುವ ಕೆಆರ್‌ಎಸ್ ಮತ್ತು ಕಬಿನಿ ಜಲಾಶಯಗಳನ್ನೇ ಆಶ್ರಯಿಸಿರುವುದು ಹಾಗೂ ವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ, ಎಲ್ಲಕ್ಕಿಂತ ಮುಖ್ಯವಾಗಿ ಕೃಷಿಗೆ ನೀರನ್ನು ಬಿಡಲೇಬೇಕು.
ಎರಡು ದಶಕಗಳ ಕಾಲ ಬೆಂಗಳೂರು ನಗರಕ್ಕೆ ೧೮೮೦ರಲ್ಲಿ ಕಟ್ಟಿಸಿದ ಕೆ.ಆರ್.ಪುರಂನ ಅವಲಹಳ್ಳಿಯಲ್ಲಿನ ಎಲೆಮಲ್ಲಪ್ಪಶೆಟ್ಟರ ಕೆರೆಯಿಂದಲೇ ನೀರು ಸರಬ ರಾಜು ಮಾಡಲಾಗುತ್ತಿತ್ತು. ಆದರೆ ಈಗ ಆ ಕೆರೆಯ ನೀರು ಬಕಾಸುರನ ಹೊಟ್ಟೆಗೆ ಲೋಟ ನೀರಿನಷ್ಟು ಆಗಿದೆ. ಜಲಮೂಲಗಳನ್ನು ಸಂರಕ್ಷಿಸಿಕೊಳ್ಳದಿದ್ದರೆ ಭವಿಷ್ಯ ವನ್ನು ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಸರ್ಕಾರ, ಸಂಘಸಂಸ್ಥೆಗಳು ಹಾಗೂ ನಗರವಾಸಿಗಳು ಜಲಮೂಲಗಳ ಸಂರಕ್ಷಣೆ, ನೀರಿನ ಶೇಖರಣೆ ಹಾಗೂ ನಿರ್ವಹಣೆಯಲ್ಲಿ ಜಾಗೃತರಾಗಬೇಕಾಗುತ್ತದೆ. ಬೆಂಗಳೂರು ನಗರದಲ್ಲಿ ಬೀಳುವ ಮಳೆಯನ್ನು ಮಳೆಕೊಯ್ಲು ಮೂಲಕ ಸಂಗ್ರಹ ಮಾಡಿದರೆ ಸರಬರಾಜಿನ ಶೇ.೭೦ರಷ್ಟು ಪ್ರಮಾಣದ ನೀರನ್ನು ಜಲಾಶಯಗಳಲ್ಲಿ ಉಳಿಸಿಕೊಳ್ಳಬಹುದಾಗಿದೆ.
ನೀರಿನ ಮೂಲಗಳನ್ನು ನಾವು ಈಗಲೇ ಹುಡುಕಿ ಸಂರಕ್ಷಿಸಿಕೊಳ್ಳಬೇಕಾಗಿದೆ, ಪರಿಸರವನ್ನು ಪರಿಗಣಿಸಿ, ಸಾಧಕಬಾಧಕಗಳನ್ನು ಗಣನೆಗೆ ತೆಗೆದುಕೊಂಡು ರಾಜಕೀಯ ಮಾಡದೆ ಸ್ವಾಭಿಮಾನವನ್ನು ಕಾವೇರಿ ನದಿಯ ಪಶ್ಚಿಮವಾಹಿನಿಯಲ್ಲಿ ಬಿಟ್ಟು ಕೇಂದ್ರ ಸರ್ಕಾರ ಹಾಗೂ ತಮಿಳುನಾಡು ಸರ್ಕಾರದೊಟ್ಟಿಗೆ ಸಮನ್ವಯ ಸಾಧಿಸಿ ಸೂಕ್ತವಾದಲ್ಲಿ ಮಾತ್ರ ಮೇಕೆದಾಟು ಯೋಜನೆಯನ್ನು ಅನುಷ್ಟಾನಗೊಳಿಸಿದರೆ ಮಾತ್ರ ಬೆಂಗಳೂರು ಬೆಂಗಳೂರಾಗಿಯೇ ಉಳಿಯುವುದು ಇಲ್ಲವಾದಲ್ಲಿ ಭವಿಷ್ಯ ಘನಘೋರ, ನಾವು ಕೊಡುವುದಿಲ್ಲ ನೀರು, ರಕ್ತ ಕೊಟ್ಟೇವು ನೀರು ಕೊಡುವುದಿಲ್ಲವೆಂದು ಮಂಡ್ಯದ ರೈತರು ಚಳುವಳಿಗೆ ಕುಳಿತುಕೊಳ್ಳುವುದರಲ್ಲಿ ಸಂಶಯವೇ ಇಲ್ಲ, ದುರಾದೃಷ್ಟ ಎನ್ನುವಂತೆ ಮಂಡ್ಯದವರಿಗೆ ಚಳುವಳಿ ಎನ್ನುವುದು ಕನ್ನಂಬಾಡಿ ಅಣೆಕಟ್ಟೆ ಹುಟ್ಟಿದಾಗಿನಿಂದಲೇ ಬಳುವಳಿಯಾಗಿ ಬಂದುಬಿಟ್ಟಿದೆ, ಮತ್ತೆ ಮತ್ತೇ ಮಂಡ್ಯದವರ ಹೊಟ್ಟೆಗೆ ಹೊಡೆಯುವುದು ಬೇಡ!.
ಭೂಮಿಯಲ್ಲಿ ಶೇ. ೭೦ ಭಾಗ ನೀರೇ ತುಂಬಿದ್ದರೂ ನೀರಿನ ಹಾಹಾಕಾರಕ್ಕೆ ತುತ್ತಾಗುತ್ತಿರುವುದು ಶೋಚನೀಯ. ಘನ, ಅನಿಲ ಮತ್ತು ದ್ರವ ರೂಪದಲ್ಲಿ ಗೋಚರಿ ಸುವ ನೀರು ಮನುಷ್ಯನ ದೇಹದಲ್ಲೂ ಶೇ. ೫೫ ರಿಂದ ೭೮ ರವರೆಗೆ ತುಂಬಿರುತ್ತದೆ. ಗ್ರಹದಲ್ಲಿ ಎಂದಿಗೂ ನೀರಿನ ಕೊರತೆ ಆಗದು ಮೊದಲು ಇದ್ದಷ್ಟೇ ಪ್ರಮಾಣದ ನೀರು ಇಂದಿಗೂ ಭೂಮಂಡಲದಲ್ಲಿ ಇದೆ. ವಾತಾವರಣದ ವೈಪರೀತ್ಯದಿಂದಾಗಿ ನೀರಿನ ಚಕ್ರದಲ್ಲಿ ಏರಿಳಿತಗಳಾಗಿ ಅನಾವೃಷ್ಟಿ ಹಾಗೂ ಅತಿವೃಷ್ಟಿಯಿಂದ ಬಳಲು ತ್ತೇವೆ ಹೊರತು ನೀರಿನ ಪ್ರಮಾಣದಲ್ಲಿ ವ್ಯತ್ಯಾಸವಾಗದು. ನೀರು ನಿರ್ವಹಣೆಯಲ್ಲಿ ನಾವು ಗೆದ್ದರೆ ನೀರಿನ ಕೊರತೆ ಆಗುವುದೇ ಇಲ್ಲ, ಉತ್ತಮ ನೀರು ನಿರ್ವಹಣೆ ಯ ಒಂದು ಉದಾಹರಣೆ ಬೇಕೆಂದರೆ ಇಸ್ರೇಲ್ ನಮ್ಮ ಕಣ್ಣ ಮುಂದೆ ಬರುವುದು. ಅತ್ಯಂತ ಕನಿಷ್ಟ ನೀರಿನಲ್ಲಿ ಅತೀ ಹೆಚ್ಚು ಉಪಯೋಗ ಪಡೆದುಕೊಳ್ಳುತ್ತಿದ್ದಾರೆ ಇಸ್ರೇಲಿಗರು, ನಾವು ಅವರಿಗಿಂತ ಕಡಿಮೆ ಇಲ್ಲ ಮುಖ್ಯವಾಗಿ ಬೇಕಿರುವುದು ಮನಸ್ಥಿತಿ ಹಾಗೂ ಇಚ್ಛಾಶಕ್ತಿ.
-ಮಿರ್ಲೆ ಚಂದ್ರಶೇಖರ
ಲೇಖಕರು,
ಮೊ: 99161297654