Menu

ರಾಜಕೀಯದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕಾರಣ ಇರಬಾರದು: ಡಿಕೆ ಶಿವಕುಮಾರ್‌

ರಾಜಕೀಯದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕಾರಣ ಇರಬಾರದು. ಯಾವುದೇ ಧರ್ಮ ಬೇರೆಯವರಿಗೆ ತೊಂದರೆ ಮಾಡು ಎಂದು ಹೇಳುವುದಿಲ್ಲ. ಶುಭಂ ಕರೋತಿ ಕಲ್ಯಾಣಂ ಆರೋಗ್ಯಂ ಧನ ಸಂಪದ, ಜ್ಞಾನ ಶಕ್ತಿ ಸ್ವರೂಪಸ್ಯ ದೀಪ ಜ್ಯೋತಿ ಪ್ರಕಾಶಿತ. ಎಲ್ಲರಿಗೂ ಮಂಗಳವಾಗಲಿ, ಶುಭವಾಗಲಿ, ಆರೋಗ್ಯವಾಗಿರಲಿ ಎಂದು ಶ್ರೀಗಳು ಹಚ್ಚಿದ ಜ್ಯೋತಿ ಬೆಳಗುತ್ತಿದೆ. ನಾನು ಮಠದ ಅಭಿಮಾನಿಯಾಗಿ, ಸರ್ಕಾರದ ಪ್ರತಿನಿಧಿಯಾಗಿ ಬಂದಿದ್ದೇನೆ. ಗುರುಗಳು ನೀಡುವ ಮಾರ್ಗದರ್ಶನವನ್ನು ನಾವು ಯಾವ ರೀತಿ ಪಡೆದುಕೊಳ್ಳುತ್ತೇವೆ ಎಂಬುದು ಬಹಳ ಮುಖ್ಯ ಎಂದು  ಡಿಕೆ ಶಿವಕುಮಾರ್‌ ಹೇಳಿದ್ದಾರೆ.

ಭದ್ರಾವತಿಯಲ್ಲಿ  ನಡೆದ ತರಳಬಾಳು ಹುಣ್ಣಿಮೆ ಕಾರ್ಯಕ್ರಮದಲ್ಲಿ ಶಿವಕುಮಾರ್  ಮಾತನಾಡಿದರು. ಮನುಷ್ಯತ್ವ ಮೋಕ್ಷಕ್ಕೆ ಮೂಲ, ಹೀಗಾಗಿ ಮಾನವೀಯತೆಯನ್ನು ನಾವು ಎಂದಿಗೂ ಮರೆಯಬಾರದು. ಹುಣ್ಣಿಮೆ ಎಂದರೆ ಬೆಳಕು, ಭರವಸೆ, ಬದಲಾವಣೆ, ತರಳಬಾಳು ಹುಣ್ಣಿಮೆ ಮಹೋತ್ಸವದಿಂದ ಎಲ್ಲಾ ಸಮಾಜಕ್ಕೂ ಬೆಳಕು ಸಿಗಬೇಕು ಎಂದು ಶ್ರೀಗಳು ಪ್ರತಿವರ್ಷ ಈ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿದ್ದಾರೆ ಎಂದು ಹೇಳಿದರು.

ನನಗೆ ಪೂರ್ವನಿಯೋಜಿತ ಕಾರ್ಯಕ್ರಮಗಳು ಇದ್ದರೂ ಭಾಗವಹಿಸಿದ್ದೇನೆ. ಏಕೆಂದರೆ ಇದೊಂದು ಐತಿಹಾಸಿಕ ಕಾರ್ಯಕ್ರಮ. ಎರಡು ಮೂರು ಬಾರಿ ಶ್ರೀಗಳು ಈ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದರು. ನಾನು ಬರಲು ಆಗಿರಲಿಲ್ಲ. ಈಗ ಬಹಳ ಅಭಿಮಾನ ಪೂರ್ವಕವಾಗಿ ಬಂದಿದ್ದೇನೆ ಎಂದರು.

ಈ ಭವ್ಯವಾದ ಸರ್ವಧರ್ಮ ಸಭೆಯನ್ನು ನೋಡಿದರೆ ಈ ಪವಿತ್ರವಾದ ಸಭೆಯಲ್ಲಿ ಪಾಲ್ಗೊಂಡಿದ್ದು ನನ್ನ ಭಾಗ್ಯ. ಧರ್ಮ ಯಾವುದಾದರೂ ತತ್ವವೊಂದೆ, ನಾಮ ನೂರಾದರೂ ದೈವವೊಂದೆ, ಪೂಜೆ ಯಾವುದಾದರೂ ಭಕ್ತಿಯೊಂದೆ, ಕರ್ಮ ಹಲವಾದರೂ ನಿಷ್ಠೆಯೊಂದೆ, ದೇವನೊಬ್ಬ ನಾಮ ಹಲವು. ಇದರ ಮೇಲೆ ನಂಬಿಕೆ ಇಟ್ಟು ಇಂತಹ ಭವ್ಯವಾದ ಸಭೆಯಲ್ಲಿ ನಾವು ಸೇರಿದ್ದೇವೆ ಎಂದು ಹೇಳಿದರು.

ನಾನು ಶ್ರೀ ಗಂಗಾಧರ ಅಜ್ಜಯ್ಯ ಅವರ ಶಿಷ್ಯ. ಅವರು ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಸಿಗಲಿ ಎಂಬ ಸಂದೇಶ ಕೊಟ್ಟಿದ್ದಾರೆ. ನಾವು ಅದನ್ನು ಪಾಲನೆ ಮಾಡಿಕೊಂಡು ಬರುತ್ತಿದ್ದೇನೆ. ಅಮ್ಮನ ನೆನಪು ಪ್ರೀತಿಯ ಮೂಲ, ದೇವರ ನೆನಪು ಭಕ್ತಿಯ ಮೂಲ, ಗುರುವಿನ ನೆನಪು ಜ್ಞಾನದ ಮೂಲ. ಈ ಮೂರರ ನೆನಪು ಮನುಷ್ಯತ್ವದ ಮೂಲ, ಮನುಷ್ಯತ್ವ ಮೋಕ್ಷಕ್ಕೆ ಮೂಲ. ಮೋಕ್ಷ ಪಡೆಯಲು ಇಷ್ಟು ಲಕ್ಷಾಂತರ ಜನ ಬಂದು ಶ್ರೀಗಳ ಮಾತು ಕೇಳಲು ಬಂದಿದ್ದೀರಿ ಎಂದು ಹೇಳಿದರು.

ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ, ಜನನ ಉಚಿತ, ಮರಣ ಖಚಿತ. ಈ ಹುಟ್ಟು ಸಾವಿನ ನಡುವೆ ನಾವು ಏನು ಮಾಡುತ್ತೇವೆ ಎಂಬುದು ಬಹಳ ಮುಖ್ಯ. ಇಲ್ಲಿ ಸ್ವಾಮೀಜಿಗಳು ನ್ಯಾಯದಾನ ಮಾಡುತ್ತಿದ್ದಾರೆ. ಈಗಿನ ಕಾಲದಲ್ಲಿ ಧರ್ಮ ಪೀಠದಿಂದ ನ್ಯಾಯ ಸಿಗುತ್ತಿದೆ ಎಂದರೆ ಅದು ಸುಲಭದ ಮಾತಲ್ಲ. ಮರಕ್ಕೆ ಬೇರು ಎಷ್ಟು ಮುಖ್ಯವೋ ಮನುಷ್ಯನಿಗೆ ನಂಬಿಕೆ ಅಷ್ಟೇ ಮುಖ್ಯ. ಶ್ರೀಗಳ ಮಾರ್ಗದರ್ಶನದಲ್ಲಿ ನಾವು ಈ ಕಾರ್ಯಕ್ರಮ ಮುಂದುವರಿಸಿಕೊಂಡು ಹೋಗಬೇಕು ಎಂದು ಕರೆ ನೀಡಿದರು.

ಉಳಿ ಪೆಟ್ಟು ಬೀಳದೆ ಕಲ್ಲು ಶಿಲೆಯಾಗುವುದಿಲ್ಲ, ನೇಗಿಲಿನಿಂದ ಉಳುಮೆ ಮಾಡದೇ ಯಾವುದೇ ಭೂಮಿ ಮಟ್ಟ ಮಾಡಲು ಆಗುವುದಿಲ್ಲ. ನಿಮ್ಮ ಬದುಕಿನಲ್ಲಿ ನೀವು ಶ್ರಮ ಪಟ್ಟರೆ ಮಾತ್ರ ಫಲ ಅನು ಭವಿಸಲು ಸಾಧ್ಯ. ದೇವರು ನಮಗೆ ವರ, ಶಾಪ ನೀಡುವುದಿಲ್ಲ. ಕೇವಲ ಅವಕಾಶ ಮಾತ್ರ ನೀಡುತ್ತಾನೆ. ನಮಗೆ ಸಿಕ್ಕ ಅವಕಾಶದಲ್ಲಿ ನಾವು ಏನು ಮಾಡುತ್ತೇವೆ ಎಂಬುದು ಮುಖ್ಯ. ನಮಗೆ ಅವ ಕಾಶ ಸಿಕ್ಕಾಗ ಸಾಕ್ಷಿಗುಡ್ಡೆ ಬಿಟ್ಟು ಹೋಗಬೇಕು ಎಂಬ ಚಿಂತನೆ ಮಠಕ್ಕೆ ಇದೆ. ಹೀಗಾಗಿ ಶ್ರೀಗಳು, ಮಠಕ್ಕೆ, ಪೀಠಗಳಿಗೆ ಸರ್ಕಾರದ ಪರವಾಗಿ ಸಾಷ್ಟಾಂಗ ನಮನ ಅರ್ಪಿಸುತ್ತೇನೆ ಎಂದರು.

ಅಲೆಗ್ಸಾಂಡರ್ ಭಾರತಕ್ಕೆ ಬರುವಾಗ ಅವರ ಗುರು ಭಾರತದಿಂದ ಐದು ವಸ್ತು ತೆಗೆದುಕೊಂಡು ಬಾ ಆಗ ನೀನು ಇಡೀ ಭಾರತ ಗೆದ್ದಂತೆ ಎಂದು ಹೇಳುತ್ತಾನೆ. ಆ ಐದು ವಸ್ತುಗಳೆಂದರೆ, ರಾಮಾಯಣ, ಮಹಾಭಾರತ ಗ್ರಂಥ, ಗಂಗಾ ಜಲ, ಕೃಷ್ಣನ ಕೊಳಲು, ತತ್ವಜ್ಞಾನಿ ತಂದರೆ ಇಡೀ ಭಾರತವನ್ನೇ ತಂದಂತೆ ಎಂದರು. ನಮ್ಮ ಸಂಸ್ಕೃತಿ ಈ ದೇಶದ ಆಸ್ತಿ. ಈ ಕಾರ್ಯಕ್ರಮದ ಮೂಲಕ ಆಚಾರ ವಿಚಾರ ಪ್ರಚಾರ ಮಾಡಿ ನಮಗೆ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ಬಣ್ಣಿಸಿದರು.

Related Posts

Leave a Reply

Your email address will not be published. Required fields are marked *