Menu

ಮುಖಂಡರಂತೆ ಪಕ್ಷಗಳ ಕಾರ್ಯಕರ್ತರಲ್ಲೂ ಗೆಳೆತನವಿರಲಿ

ರಾಜಕೀಯ ನೇತಾರರು ಚುನಾವಣೆಯ ನಂತರದಲ್ಲಿ ಗಳಸ್ಯ ಕಂಠಸ್ಯ ಸ್ನೇಹಿತರಾಗುವಾಗ ಕಾರ್ಯಕರ್ತರಲ್ಲಿ ಮಾತ್ರ ದ್ವೇಷವೇಕೆ? ಆದ್ದರಿಂದ ಪ್ರತಿಯೊಬ್ಬರು ನಾಗರಿಕ ಸಮಾಜದ ಅಭಿವೃದ್ಧಿಗಾಗಿ ಪಕ್ಷಭೇದ ಮರೆತು ಒಂದಾಗುವುದು ಅವಶ್ಯವಿದೆ. ರಾಜಕೀಯ ಏನೇ ಇರಲಿ ವೈಯಕ್ತಿಕ ಸಂಬಂಧಗಳು ಗಟ್ಟಿಯಾಗಿರಬೇಕು. ವೈಯಕ್ತಿಕ ದ್ವೇಷಗಳಿಗೆ ಸಂಬಂಧಗಳನ್ನು ಬಲಿ ಕೊಡಬಾರದು.

ಏಪ್ರಿಲ್ ಎರಡರಂದು ಬಾಗಲಕೋಟೆಯ ಜಮಖಂಡಿಯಲ್ಲಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ನ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮವು ಜರುಗಿತು. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಪ್ರಮುಖ ನಾಯಕರು ಉಪಸ್ಥಿತರಿದ್ದರು. ಅವರಲ್ಲಿ ರಾಜ್ಯದ ಉಪಮುಖ್ಯಮಂತ್ರಿ ಕೆ.ಪಿ.ಸಿ.ಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್, ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ, ಸಕ್ಕರೆ ಸಚಿವ ಶಿವಾನಂದ ಪಾಟೀಲ, ಮಾಜಿ ಉಪಮುಖ್ಯಮಂತ್ರಿ ಶಾಸಕ ಲಕ್ಷ್ಮಣ ಸವದಿ, ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಶಾಸಕ ಜೆ.ಟಿ.ಪಾಟೀಲ, ಬಿಜೆಪಿಯ ಶಾಸಕ ಜಗದೀಶ ಗುಡಗುಂಟಿ, ಕಾಂಗ್ರೆಸ್‌ನ ಮಾಜಿ ಸಚಿವ ಎಸ್.ಆರ್.ಪಾಟೀಲ, ಕಾಂಗ್ರೆಸ್‌ನ ಮಾಜಿ ಸಂಸದ ಅಜಯಕುಮಾರ ಸರನಾಯಕ, ಭಾಜಪ ರಾಜ್ಯ ಉಪಾಧ್ಯಕ್ಷ ಮಾಜಿ ಸಚಿವ ಮುರುಗೇಶ ನಿರಾಣಿ, ಮಾಜಿ ಶಾಸಕರಾದ ಬಿಜೆಪಿಯ ಶ್ರೀಕಾಂತ ಕುಲಕರ್ಣಿ, ಕಾಂಗ್ರೆಸ್‌ನ ಆನಂದ ನ್ಯಾಮಗೌಡ ಮತ್ತು ಬಿಜೆಪಿಯ ಜಿ.ಎಸ್.ನ್ಯಾಮಗೌಡ ಪ್ರಮುಖರಾಗಿದ್ದರು.

ಅದರಂತೆ ಏಪ್ರಿಲ್ ಆರರಂದು ನಡೆದ ಮಾಜಿ ಶಾಸಕ ಎಸ್.ಕರಿಯಪ್ಪನವರ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದ ಡಾ.ಸಿ.ಎನ್.ಮಂಜುನಾಥ ಮತ್ತು ಡಿ.ಕೆ.ಶಿವಕುಮಾರ ಉಪಸ್ಥಿತರಿದ್ದರು. ಈ ಕಾರ್ಯಕ್ರಮಗಳ ವಿಶೇಷತೆ ಏನೆಂದರೆ, ಉಪಸ್ಥಿತರಿರುವ ಬಹುತೇಕ ನಾಯಕರು ರಾಜಕೀಯ ಎದುರಾಳಿಗಳಾ ಗಿದ್ದವರು. ಆದರೆ ಇವರೆಲ್ಲರು ಕಾರ್ಯಕ್ರಮದಲ್ಲಿ ಅಕ್ಕ-ಪಕ್ಕದಲ್ಲಿಯೆ ಉಪಸ್ಥಿತರಾಗಿ ಒಬ್ಬರಿಗೊಬ್ಬರು ಪಕ್ಷಭೇದ ಮತ್ತು ವಯಸ್ಸಿನ ಅಂತರವನ್ನು ಮರೆತು ಸಲುಗೆ ಯಿಂದ ವರ್ತಿಸುತ್ತಿದ್ದರು. ಇವರಲ್ಲಿ ಯಾವುದೆ ಒಳ ಒಪ್ಪಂದ ಅಥವಾ ಒಳ ಹೊಂದಾಣಿಕೆಗಳು ಕಾಣಿಸುತ್ತಿರಲಿಲ್ಲ. ಕೇವಲ ಅವರೆಲ್ಲಿರುವ ವೈಯಕ್ತಿಕ ವೈರತ್ವ ಗಳಿಲ್ಲದ ಆತ್ಮೀಯತೆಯು ಎದ್ದು ಕಾಣುತ್ತಿತ್ತು. ಆದರೆ ಇದು ಸಭಿಕರಾಗಿ ಕುಳಿತಿದ್ದ ಎಲ್ಲ ಪಕ್ಷಗಳ ಕಾರ್ಯಕರ್ತರಿಗೆ ಬಹಳ ಸೋಜಿಗವನ್ನುಂಟು ಮಾಡುತ್ತಿತ್ತು ಎಂದರೆ ತಪ್ಪಾಗಲಿಕ್ಕಿಲ್ಲ. ಕಾರಣ ಚುನಾವಣೆಗಳಲ್ಲಿ ನಾಯಕರಿಗಾಗಿ ಕಾರ್ಯಕರ್ತರು ಜಿದ್ದಿಗೆ ಬಿದ್ದವರಂತೆ ಪಣ ತೊಟ್ಟು ಕೆಲಸ ಮಾಡಿರುತ್ತಾರೆ ಹಾಗೂ ಕಾರ್ಯ ಕರ್ತರಲ್ಲಿ ಅವರನ್ನು ಕಂಡರೆ ಇವರಿಗೆ ಆಗುವುದಿಲ್ಲ ಮತ್ತು ಅವರಿಗೂ ಇವರಿಗೂ ಗುಪ್ತವಾಗಿ ಒಳ ಒಪ್ಪಂದವಿದೆ ಎಂಬಿತ್ಯಾದಿ ಕಾಲ್ಪನಿಕ ಕಥೆಗಳಿರುತ್ತವೆ.

ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಬಿಜೆಪಿ ಉಪಾಧ್ಯಕ್ಷ ಮುರುಗೇಶ ನಿರಾಣಿಯವರು ಅಕ್ಕ-ಪಕ್ಕದಲ್ಲಿಯೇ ಕುಳಿತು ಸ್ನೇಹದಿಂದ ಮಾತನಾಡುತ್ತಿದ್ದ ರೀತಿಯು ಬಹಳ ಆತ್ಮೀಯತೆಯ ಪರಮಾವಧಿಯಾಗಿತ್ತು. ಅದರಂತೆ ಜಮಖಂಡಿ ಕ್ಷೇತ್ರದಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎದುರಾಳಿಗಳಾಗಿದ್ದ ಜಗದೀಶ ಗುಡಗುಂಟಿ ಮತ್ತು ಆನಂದ ನ್ಯಾಮಗೌಡರು ಪರಸ್ಪರ ಕೈಕುಲುಕುತ್ತ ಮಾತನಾಡುತ್ತಿದ್ದರು. ಮುರುಗೇಶ ನಿರಾಣಿಯವರು ತಮ್ಮ ಎದುರಾಳಿಗಳಾದ ಜೆ.ಟಿ. ಪಾಟೀಲ ಮತ್ತು ಅಜಯಕುಮಾರ ಸರನಾಯಕ ಇವರಿಬ್ಬರ ಮಧ್ಯದಲ್ಲಿಯೆ ಕುಳಿತು ಕುಶಲೋಪರಿಯೊಂದಿಗೆ ಉತ್ತಮ ಸ್ನೇಹಿತರಂತೆ ಚರ್ಚಿಸುತ್ತಿದ್ದರು.

ಬಿಜೆಪಿ ಸಂಸದ ಡಾ.ಸಿ.ಎನ್.ಮಂಜುನಾಥ ಮತ್ತು ಡಿ.ಕೆ.ಶಿವಕುಮಾರವರಲ್ಲಿದ್ದ ಆತ್ಮೀಯತೆ ನೋಡುಗರಿಗೆ ದಿಗ್ಭ್ರಮೆಯನ್ನುಂಟು ಮಾಡಿತ್ತು. ಈ ನಾಯಕರೆಲ್ಲರ ನಗು ಹಾಗೂ ಕೈ-ಸನ್ನೆಗಳು ಅವರವರ ಅನುಯಾಯಿಗಳನ್ನು, ಹಿಂಬಾಲಕರನ್ನು ಮತ್ತು ಪಕ್ಷದ ಕಾರ್ಯಕರ್ತರನ್ನು ಮೂಕ ವಿಸ್ಮಯಗೊಳಿಸಿದವು. ನಾಯಕರು ಒಬ್ಬರಿಗೊಬ್ಬರು ಕೊಡುವ ಗೌರವ, ಸೇವೆ ಮತ್ತು ಮರ್ಯಾದೆಗಳು ಕಾರ್ಯಕರ್ತರಿಗೆ ಪಾಠವಾದವು.

ಹಿಂದೆ ರಾಷ್ಟ್ರಮಟ್ಟದಲ್ಲಿಯು ಸಹ ರಾಜೀವ್ ಗಾಂಧಿ ಮತ್ತು ಅಟಲ್ ಬಿಹಾರಿ ವಾಜಪೇಯಿಯವರು ಮಾನವೀಯತೆಯ ಮುಂದಿನ ಅತ್ಯುತ್ತಮ ಸ್ನೇಹಿತರಾಗಿದ್ದರು. ಅದರಂತೆ ಇಂದಿಗೂ ಪ್ರಧಾನಿ ನರೇಂದ್ರ ಮೋದಿಯವರು ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡರನ್ನು ಕಂಡರಂತೂ ಉತ್ತಮ ಗೌರವವನ್ನು ಕೊಡುತ್ತಾರೆ. ಎಸ್.ಎಮ್.ಕೃಷ್ಣಾ ಮತ್ತು ಚಂದ್ರಬಾಬು ನಾಯ್ಡು ಸಹ ಉತ್ತಮ ಸ್ನೇಹಿತರೆನಿಸಿದ್ದರು. ಹೀಗೆ ವಿವಿಧ ಪಕ್ಷಗಳ ಹಲವು ನೇತಾರರು ರಾಜಕೀಯ, ಸ್ನೇಹವಲ್ಲದೆ ಮುಂದುವರೆದು ನೆಂಟಸ್ಥನ ಬೆಳೆಸುವಷ್ಟರ ಮಟ್ಟಿಗೆ ಗಾಢವಾಗಿದ್ದರು ಎಂಬುದು ಇತಿಹಾಸ.

ಚುನಾವಣೆಗಳಲ್ಲಿ ಒಬ್ಬರಿಗೊಬ್ಬರು ಆರೋಪ, ಪ್ರತ್ಯಾರೋಪ, ವಾಗ್ದಾಳಿ, ಸವಾಲುಗಳು ನಿಯಮ ಮೀರಿರುತ್ತವೆ. ಇದರಿಂದ ಆಯಾ ಪಕ್ಷಗಳ ಕಾರ್ಯಕರ್ತ ರಂತೂ ತಮ್ಮ ನಾಯಕರಿಗಾಗಿ ಇತರೆ ಪಕ್ಷದವರನ್ನು ಜೀವನಪೂರ್ತಿ ವೈರಿಗಳಂತೆ ಕಾಣುತ್ತಾರೆ. ಇದು ಎಷ್ಟರಮಟ್ಟಿಗೆ ಎಂದರೆ ಇಂದಿಗೂ ಕೆಲವು ಹಳ್ಳಿಗಳಲ್ಲಿ ಒಂದು ಪಕ್ಷದ ಕಾರ್ಯಕರ್ತರು ಮತ್ತೊಂದು ಪಕ್ಷದ ಕಾರ್ಯಕರ್ತರ ಯಾವುದೇ ಸಭೆ, ಸಮಾರಂಭ ಸೇರಿದಂತೆ ಅಂತ್ಯಸಂಸ್ಕಾರಗಳಿಗೂ ಹೋಗುವುದಿಲ್ಲ. ಕೆಲವೊಮ್ಮೆ ರಾಜಕೀಯ ದ್ವೇಷಗಳು ಕೊಲೆ, ಸುಲಿಗೆಗಳವರೆಗೆ ತಲುಪಿದ ಉದಾಹರಣೆಗಳಿವೆ. ಒಂದಂತೂ ಸತ್ಯ ನಾಯಕರ ಯಶಸ್ಸಿಗಾಗಿ ದುಡಿಯುತ್ತಿರುವ ವಿವಿಧ ಪಕ್ಷಗಳ ಕಾರ್ಯಕರ್ತರು ತಮ್ಮತಮ್ಮಲ್ಲಿ ದ್ವೇಷಿಸಿಕೊಳ್ಳುವ ಪ್ರವೃತ್ತಿ ಇರಬೇಕೆಂದು ಯಾವುದೇ ಪಕ್ಷದ ನಾಯಕರು ಬಯಸುವುದಿಲ್ಲ.

ನಾಯಕರೆಲ್ಲರು ಚುನಾವಣೆಗಳ ನಂತರ ಒಂದಾಗಿರುತ್ತಾರೆ ಎಂಬ ಮಹತ್ವದ ಸಂದೇಶವು ಈ ಕಾರ್ಯಕ್ರಮಗಳಿಂದ ಬಿತ್ತರವಾಯಿತು. ಕಾರ್ಯಕರ್ತರನ್ನು ದ್ವೇಷ ಸಾಧಿಸುವಂತೆ ಪ್ರಚೋದಿಸುವವನು ನಾಯಕನೆ ಅಲ್ಲ. ಆದ್ದರಿಂದ ಚುನಾವಣೆ ನಂತರ ಕಾರ್ಯಕರ್ತರು ವೈಯಕ್ತಿಕ ದ್ವೇಷವನ್ನು ಮುಂದುವರೆಸುವುದು ಸರಿ ಯಾದ ಪದ್ಧತಿಯಲ್ಲ. ರಾಜಕೀಯ ನೇತಾರರು ಚುನಾವಣೆಯ ನಂತರದಲ್ಲಿ ಗಳಸ್ಯ ಜೀವಸ್ಯ ಕಂಠಸ್ಯ ಸ್ನೇಹಿತರಾಗುವಾಗ ಕಾರ್ಯಕರ್ತರಲ್ಲಿ ಮಾತ್ರ ದ್ವೇಷ ವೇಕೆ? ಆದ್ದರಿಂದ ಪ್ರತಿಯೊಬ್ಬರು ನಾಗರಿಕ ಸಮಾಜದ ಅಭಿವೃದ್ಧಿಗಾಗಿ ಪಕ್ಷಭೇದ ಮರೆತು ಒಂದಾಗುವುದು ಅವಶ್ಯವಿದೆ. ರಾಜಕೀಯ ಏನೇ ಇರಲಿ ವೈಯಕ್ತಿಕ ಸಂಬಂಧಗಳು ಗಟ್ಟಿಯಾಗಿರಬೇಕು. ವೈಯಕ್ತಿಕ ದ್ವೇಷಗಳಿಗೆ ಸಂಬಂಧಗಳನ್ನು ಬಲಿ ಕೊಡಬಾರದು. ನಾಯಕರಾದವರು ಸಹ ಚುನಾವಣೆಗಳಲ್ಲಿ ಮೌಲ್ಯಾಧಾರಿತ ಮತ್ತು ನೈತಿಕತೆಯ ರಾಜಕಾರಣ ಮಾಡಬೇಕು, ಸ್ವಾರ್ಥ ಸಾಧನೆಗಾಗಿ ಎದುರಾಳಿಗಳ ವೈಯಕ್ತಿಕ ಹಾಗೂ ಖಾಸಗಿ ವಿಚಾರಗಳ ಕುರಿತು ಮಾತನಾಡಬಾರದು. ಇವುಗಳಿಂದ ಅತಿಯಾಗಿ ನಂಬಿದ ಕಾರ್ಯಕರ್ತರ ಮನಸ್ಸಿನ ಮೇಲೆ ತೀವ್ರತರನಾದ ಪರಿಣಾಮವುಂಟಾಗಿ ದ್ವೇಷ ಭಾವನೆ ನೆಲೆಯೂರುತ್ತದೆ ಎಂಬ ಎಚ್ಚರ ನಾಯಕರಲ್ಲಿರಲಿ.

-ಬಸವರಾಜ ಶಿವಪ್ಪ ಗಿರಗಾಂವಿ
ಲೇಖಕರು, ೯೯೮೦೫೨೪೪೧೦

Related Posts

Leave a Reply

Your email address will not be published. Required fields are marked *