Menu

ಚುನಾವಣೆ ಬಂದಾಗ ಎಚ್ಚೆತ್ತುಕೊಂಡರೆ ಉಪಯೋಗವಿಲ್ಲ,ಸಂಘಟನೆ ಚುರುಕುಗೊಳಿಸಿ : ಹೆಚ್‌ಡಿಕೆ

ಲೋಕಸಭೆ, ವಿಧಾನಸಭೆ ಅಥವಾ ಇನ್ನಾವುದೇ ಚುನಾವಣೆ ಬಂದಾಗ ಎಚ್ಚೆತ್ತರೆ ಉಪಯೋಗ ಇಲ್ಲ. ಹಲವು ವರ್ಷಗಳಿಂದಲೇ ನಾವು ಸಂಘಟನೆಗೆ ಶಕ್ತಿ ತುಂಬಿ ಜನರ ಜತೆ ಇದ್ದರೆ ಚುನಾವಣೆಯಲ್ಲಿ ಪ್ರಬಲ ಪೈಪೋಟಿ ನೀಡಬಹುದು. ಇಲ್ಲವಾದರೆ ನಮ್ಮ ಶ್ರಮ ವ್ಯರ್ಥವಾಗುತ್ತದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದರು.

ನಾಯಕನಾಗುವ ಕನಸು ಕಟ್ಟಿಕೊಂಡರೆ ಸಾಲದು. ಅದಕ್ಕೆ ಮೂಲ ಬಂಡವಾಳ ಎಂದರೆ ಪಕ್ಷ ಸಂಘಟನೆ. ನಿಮ್ಮ ಕ್ಷೇತ್ರ, ಮತಗಟ್ಟೆ, ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ಸಂಘಟನೆಯನ್ನು ಬಲವಾಗಿ ಕಟ್ಟಿ. ಸದಸ್ಯತ್ವ ಅಭಿಯಾನವನ್ನು ವೇಗವಾಗಿ ನಡೆಸಬೇಕು. ಯುವಜನರು, ರೈತರು, ಕೃಷಿ ಕಾರ್ಮಿಕರು ಹೆಚ್ಚು ಸಂಖ್ಯೆಯಲ್ಲಿ ಪಕ್ಷ ಸೇರ್ಪಡೆ ಆಗಬೇಕು ಎಂದು ಸಚಿವರು ಹೇಳಿದರು.

ಜೆಡಿಎಸ್‌ ಪಕ್ಷದ ದ್ವೈವಾರ್ಷಿಕ ಚುನಾವಣೆ, ಸದಸ್ಯತ್ವ ಅಭಿಯಾನ ತಾಲೂಕು-ಜಿಲ್ಲಾ ಪಂಚಾಯಿತಿ ಚುನಾವಣೆ ತಯಾರಿ, ವಿಧಾನಮಂಡಲ ಅಧಿವೇಶನ ತಂತ್ರಗಾರಿಕೆ ಬಗ್ಗೆ ನಡೆದ ಚರ್ಚೆಯಲ್ಲಿ ಮಾತನಾಡಿದರು.

ರಾಜ್ಯದ ಉದ್ದಗಲಕ್ಕೂ ಪಕ್ಷದ ವತಿಯಿಂದ ಸದಸ್ಯತ್ವ ಅಭಿಯಾನ ಚಾಲ್ತಿಯಲ್ಲಿದ್ದು, ಅದನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗುವ ಬಗ್ಗೆ ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ಮುಖಂಡರ ಜತೆ ತಮ್ಮದೇ ಆದ ಪರಿಕಲ್ಪನೆಗಳನ್ನು ಹಂಚಿಕೊಂಡರು.

ಅಭಿಯಾನಕ್ಕೆ ಮತ್ತಷ್ಟು ವೇಗ ನೀಡಬೇಕು. ಶಾಸಕರು, ಮಾಜಿ ಶಾಸಕರು, ಹಿರಿಯ ಮುಖಂಡರು, ಎರಡನೇ ಹಂತದ ನಾಯಕರು ಹಾಗೂ ಕಾರ್ಯಕರ್ತರು ದೊಡ್ಡ ಪ್ರಮಾಣದಲ್ಲಿ ಸದಸ್ಯತ್ವ ನೋಂದಣಿ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು. ಇದಕ್ಕೆ ಸ್ಪಂದಿಸಿದ ಮಾಜಿ ಪ್ರಧಾನಿಗಳಾದ ದೇವೇಗೌಡರು ಹಾಗೂ ಕೇಂದ್ರ ಸಚಿವರಾದ ಕುಮಾರಸ್ವಾಮಿ , ಸದಸ್ಯತ್ವ ನೋಂದಣಿಯನ್ನು ಎಲ್ಲಾ ಮುಖಂಡರು ಗಂಭೀರವಾಗಿ ಪರಿಗಣಿಸಬೇಕು. ಸಂಘಟನೆಯ ಬಗ್ಗೆ ಅಸಡ್ಡೆ ಬೇಡ ಎಂದರು.

ಹಿಂದೆ ಇಪ್ಪತ್ತಮೂರು ಜಿಲ್ಲೆಗಳು ಇದ್ದವು. ನಾನು ಪ್ರತಿ ಜಿಲ್ಲೆ, ತಾಲ್ಲೂಕಿನಲ್ಲಿ ಪ್ರವಾಸ ಮಾಡಿದ್ದೇನೆ. ಕಷ್ಟಪಟ್ಟು ಪಕ್ಷ ಕಟ್ಟಿದ್ದೇನೆ. ಈಗಲೂ ಓಡಾಟ ಮಾಡುತ್ತಿದ್ದೇನೆ. ಪಕ್ಷ ಕಟ್ಟೋದು ಸುಲಭದ ಕೆಲಸವಲ್ಲ. ಹೀಗಾಗಿ ಯಾರೊಬ್ಬರೂ ಸಂಘಟನೆಯನ್ನು ಲಘುವಾಗಿ ತೆಗೆದುಕೊಳ್ಳುವುದು ಬೇಡ ಎಂದು ಮಾಜಿ ಪ್ರಧಾನಿ ಮುಖಂಡರಿಗೆ ತಾಕೀತು ಮಾಡಿದರು.

ಯಾರೂ ಎದೆಗುಂದಬೇಕಿಲ್ಲ. ಜಿಲ್ಲೆ, ತಾಲ್ಲೂಕು ಮಟ್ಟದಲ್ಲಿ ಸಮಾವೇಶಗಳನ್ನು ಮಾಡೋಣ. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಗೆಲ್ಲುವ ಸಮರ್ಥ ಅಭ್ಯರ್ಥಿಗಳನ್ನು ಹುಡುಕಿ ಪಟ್ಟಿ ಮಾಡಿ. ಯಾರೂ ನನ್ನನ್ನು ರಾಷ್ಟ್ರೀಯ ಅಧ್ಯಕ್ಷ ಎಂದು ಕರೆಯಬೇಡಿ. ಒಬ್ಬ ಕಾರ್ಯಕರ್ತ ಎಂದು ಕರೆಯಿರಿ ಸಾಕು. ಎಲ್ಲಿಗೆ ಬೇಕಾದರೂ ಕರೆಯಿರಿ, ಬರುತ್ತೇನೆ. ನಿಮ್ಮ ಜತೆಯಲ್ಲಿ ಹೋರಾಟ ಮಾಡುತ್ತೇನೆ ಎಂದು  ಹೇಳಿದರು.

Related Posts

Leave a Reply

Your email address will not be published. Required fields are marked *