Menu

ಬಂಡೀಪುರ ರಾತ್ರಿ ಸಂಚಾರ ನಿಷೇಧ ಬದಲಿಸುವ ಪ್ರಶ್ನೆಯೇ ಇಲ್ಲ

ಕೇರಳದಲ್ಲಿ ಚುನಾವಣೆ ಪ್ರಚಾರಕ್ಕೆ ಬಂದಿದ್ದ ಪ್ರಿಯಾಂಕ ಗಾಂಧಿ ಅವರು ಬಂಡೀಪುರ ಅರಣ್ಯದಲ್ಲಿ ಸಾರ್ವಜನಿಕ ವಾಹನಗಳಿಗೆ ರಾತ್ರಿ ೯ರ ನಂತರ ಇರುವ ನಿಷೇಧದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಇದು ಸುಪ್ರೀಂ ಕೋರ್ಟ್ ಒಪ್ಪಿಗೆ ಮೇಲೆ ಜಾರಿಗೆ ಬಂದಿರುವುದು. ಅದರಿಂದ ಇದನ್ನು ಬದಲಿಸಲು ರಾಜಕೀಯ ಪ್ರಭಾವ ಸಾಲುವುದಿಲ್ಲ. ಅಲ್ಲದೆ ಪರಿಸರವಾದಿಗಳು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುವುದು ಸಹಜ. ಕರ್ನಾಟಕದ ಕಾಂಗ್ರೆಸ್ ನಾಯಕರೇ ಇದಕ್ಕೆ ಒಪ್ಪುವುದಿಲ್ಲ. ಅವರು ಮೇಲುನೋಟಕ್ಕೆ ವಿರೋಧ ವ್ಯಕ್ತಪಡಿಸುವುದಿಲ್ಲ. ಆದರೆ ನಿಷೇಧ ಹಿಂದಕ್ಕೆ ಪಡೆಯಲು ಕೈಗೊಳ್ಳಬೇಕಾದ ಕ್ರಮಗಳಿಗೆ ಆಸಕ್ತಿ ತೋರುವುದಿಲ್ಲ. ಇದು ವಾಸ್ತವ.

ಹಿಂದೆ ಕೇರಳ ಮುಖ್ಯಮಂತ್ರಿ ಹಲವು ಬಾರಿ ಬೆಂಗಳೂರಿಗೆ ಬಂದು ಎಲ್ಲ ರೀತಿಯ ಪ್ರಭಾವ ಬೀರಿ ನೋಡಿದರು. ಸಾಧ್ಯವಾಗಲಿಲ್ಲ. ಕೇರಳ ಇದಕ್ಕೆ ಪಟ್ಟು ಹಿಡಿಯುವುದರಲ್ಲಿ ಅರ್ಥವಿಲ್ಲ. ಇದಕ್ಕೆ ಪರ್ಯಾಯ ಮಾರ್ಗ ಹುಣಸೂರು ಮೂಲಕ ಇದೆ. ೩೫ ಕಿಮೀ ಹೆಚ್ಚಿಗೆ ಪ್ರಯಾಣ ಅಷ್ಟೇ. ಇದು ಗೊತ್ತಿದ್ದೂ ಬಂಡೀಪುರದ ಮಾರ್ಗ ಕೇಳಲು ಕಾರಣವೇನು ಎಂಬ ಅನುಮಾನ ಮೂಡುವುದು ಸಹಜ. ವೈನಾಡು ದನಗಳ ಮಾಂಸ ಮಾರುಕಟ್ಟೆಗೆ ಪ್ರಮುಖ ಸ್ಥಾನ. ಅಲ್ಲಿಂದ ಗೋಮಾಂಸ ವಿದೇಶಗಳಿಗೆ ಸರಬರಾಜಾಗುತ್ತದೆ. ಬಂಡೀಪುರದ ಬಳಿ ತೆರಕಣಾಂಬಿ ಸಂತೆ ನಡೆಯುತ್ತದೆ. ಅಲ್ಲಿ ದನಗಳ ಮಾರಾಟ ಬೃಹತ್ ಪ್ರಮಾಣದಲ್ಲಿ ನಡೆಯುತ್ತದೆ. ಇಲ್ಲಿಂದ ವೈನಾಡಿಗೆ ದನಗಳ ಸಾಗಾಟ ರಾತ್ರಿ ಹೊತ್ತು ನಡೆಯುತ್ತದೆ. ರಾತ್ರಿ ಸಂಚಾರ ನಿಂತಿರುವುದು ಈ ವ್ಯಾಪಾರಕ್ಕೆ ಅಡ್ಡಿ. ಇದು ಬಹುತೇಕ ಅಕ್ರಮ ದಂಧೆ. ಮತ್ತೊಂದು ಕಾರಣ ಕಳ್ಳಸಾಗಣೆಗೆ ಉತ್ತಮ ದಾರಿ. ಇವುಗಳಿಗೆ ಈ ನಿಷೇಧ ದೊಡ್ಡ ಅಡ್ಡಿ. ವೈನಾಡಿಗೆ ಇದು ಅತಿ ಸಮೀಪದ ದಾರಿ. ಆದರೆ ಬಂಡೀಪುರ ಅಭಯಾರಣ್ಯ ವಿಶ್ವ ವಿಖ್ಯಾತ. ಇದಕ್ಕೆಕೈಹಾಕಿದರೆ ಅದು ಅಂತಾರಾಷ್ಟ್ರೀಯ ವಿಷಯವಾಗುವುದರಲ್ಲಿ ಸಂದೇಹವಿಲ್ಲ. ಪರಿಸರವಾದಿಗಳು ಮತ್ತೆ ಸುಪ್ರೀಂ ಕೋರ್ಟ್ ಬಾಗಿಲು ತಟ್ಟುವುದಂತೂ ಖಂಡಿತ.

ಬಂಡೀಪುರದ ಸುತ್ತ ೧೦೦ಕ್ಕೂ ಹೆಚ್ಚು ರೆಸಾರ್ಟ್‌ಗಳಿಗೆ ವ್ಯಾಪಾರ ನಡೆಯುತ್ತಿರುವುದೇ ವನ್ಯಜೀವಿಗಳಿಂದ. ನಿಷೇಧ ವರದಾನ. ಹೀಗಾಗಿ ವೈನಾಡಿಗೆ ರಾತ್ರಿ ಸಂಚಾರದ ಕನಸು ನನಸಾಗುವುದು ಕಷ್ಟ. ಇದನ್ನು ಅರಿತು ನಡೆಯುವುದು ಸೂಕ್ತ. ಈ ನಿಷೇಧ ತೆರವಿಗೆ ಸ್ಥಳೀಯರ ಬೇಡಿಕೆ ಪ್ರಬಲವಾಗಿಲ್ಲ. ಅಲ್ಲದೆ ರಾತ್ರಿ ವೇಳೆ ವಾಹನದಲ್ಲಿ ಹೋಗುವವರು ಬಹಳ ಕಡಿಮೆ. ಕಾಡುಪ್ರಾಣಿಗಳ ಕಾಟದಲ್ಲಿ ಅವರು ಯಾರೂ ಬರುವುದೇ ಇಲ್ಲ. ಇದು ರಾಜಕಾರಣಿಗಳ ಒತ್ತಾಯ ಅಷ್ಟೆ. ಕರ್ನಾಟಕದ ಜನರು ಕೂಡ ವೈನಾಡಿನೊಂದಿಗೆ ವ್ಯಾಪಾರ-ವ್ಯವಹಾರವನ್ನು ಬೆಳಗ್ಗೆ ಮುಗಿಸಿಕೊಳ್ಳುವುದರಿಂದ ರಾತ್ರಿ ಸಂಚಾರ ಅನಗತ್ಯ. ಕಾಡು ಇರುವುದು ವನ್ಯಜೀವಿಗಳಿಗೆ. ಅಲ್ಲಿ ರಸ್ತೆ ನಿರ್ಮಿಸುವುದೇ ಮೊದಲ ತಪ್ಪು. ರಾತ್ರಿ ವೇಳೆ ವಾಹನ ಸಂಚಾರಕ್ಕೆ ಅವಕಾಶ ಕೊಡುವುದು ಮತ್ತೊಂದು ತಪ್ಪು. ಇದರಿಂದ ವನ್ಯಜೀವಿಗಳು ವಾಹನಕ್ಕೆ ಸಿಲುಕಿ ಸಾಯುವುದು ಹೆಚ್ಚು ಎಂದು ನ್ಯಾಯಾಲಯವೇ ಹೇಳಿದೆ.

ಈಗಿನ ನಿಯಮವನ್ನು ಬದಲಿಸುವುದು ಪರಿಸರವಿರೋಧಿ ಕ್ರಮ ಎಂಬುದು ಬಹುತೇಕ ಜನರ ಅಭಿಪ್ರಾಯ. ಇದು ಪ್ರಿಯಾಂಕ ಗಾಂಧಿ ತಿಳಿಯದ ವಿಷಯವೇನಲ್ಲ. ಕರ್ನಾಟಕದ ನಾಯಕರಿಗೆ ಇದನ್ನು ಪ್ರಿಯಾಂಕ ಅವರ ಗಮನಕ್ಕೆ ತರುವ ಧೈರ್ಯ ಇಲ್ಲ.ಸ್ಥಳೀಯರು ಮನವಿಸಲ್ಲಿಸಿದರೆ ಅದಕ್ಕೆ ನಿಜಾಂಶ ತಿಳಿಸುವುದು ನಾಯಕರ ಕರ್ತವ್ಯ. ನಿಜಾಂಶ ತಿಳಿಸದೇ ಇದ್ದಾಗ ಕೇರಳ-ಕರ್ನಾಟಕದ ನಡುವೆ ಅನಗತ್ಯ ವೈಮನಸ್ಯ ಬೆಳೆಯಲು ಕಾರಣವಾಗುತ್ತದೆ. ಇದು ಚುನಾವಣೆ ವಿಷಯವಂತೂ ಅಲ್ಲ. ಆದರೂ ಈ ಸಮಸ್ಯೆಯನ್ನು ಜೀವಂತವಾಗಿಡುತ್ತ ಬಂದವರು ರಾಜಕಾರಣಿಗಳೇ.

Related Posts

Leave a Reply

Your email address will not be published. Required fields are marked *