ವಿಧಾನಪರಿಷತ್ತು: ರಾಜ್ಯದಲ್ಲಿ ವಾಣಿಜ್ಯ ಪರವಾನಗಿ ರದ್ಧುಪಡಿಸುವ ಪ್ರಶ್ನೆಯೇ ಇಲ್ಲ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್.ಸುರೇಶ್ ಸ್ಪಷ್ಟಪಡಿಸಿದ್ದಾರೆ.
ವಿಧಾನಪರಿಷತ್ತಿನಲ್ಲಿ ಮಂಗಳವಾರ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಡಿ.ಎಸ್.ಅರುಣ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಗರ ಪ್ರದೇಶಗಳಲ್ಲಿ ಸಂಪೂರ್ಣವಾಗಿ ಪಾರದರ್ಶಕವಾಗಿ ನಿಗದಿತ ಶುಲ್ಕ ಪಡೆದು ವ್ಯಾಪಾರ ಪರವಾನಗಿಯನ್ನು ನೀಡಲಾಗುತ್ತಿದೆ. ಇದರಿಂದ ನಗರಾಭಿವೃದ್ಧಿ ಪ್ರಾಧಿಕಾರಗಳಿಗೆ ಸ್ವಲ್ಪ ಮಟ್ಟಿನ ಆದಾಯ ಬರುತ್ತಿದೆ. ಒಂದು ವೇಳೆ ರದ್ದು ಮಾಡಿದರೆ ಪ್ರಾಧಿಕಾರಗಳ ಮೇಲೆ ಆರ್ಥಿಕ ಹೊರೆ ಬೀಳಲಿದೆ ಎಂದರು.
ಟ್ರೇಡ್ ಲೈಸೆನ್ಸ್ ನಿಂದ ಕಳೆದ ಐದಾರು ತಿಂಗಳಲ್ಲಿ 22 ಕೋಟಿ ರೂಪಾಯಿ ಸಂಗ್ರಹವಾಗಿದೆ. ಪ್ರಸಕ್ತ ಹಣಕಾಸು ಸಾಲಿನಲ್ಲಿ 50 ರಿಂದ 60 ಕೋಟಿ ಸಂಗ್ರಹವಾಗುವ ನಿರೀಕ್ಷೆ ಇದೆ. ಇದರಿಂದ ನಗರಾಭಿವೃದ್ಧಿ ಪ್ರಾಧಿಕಾರಗಳೇ ಬಳಕೆ ಮಾಡಿಕೊಳ್ಳಲಿವೆ ಎಂದು ಹೇಳಿದರು.
ಮಹಾನಗರ ಪಾಲಿಕೆಗಳು ಮತ್ತು ನಗರಾಭಿವೃದ್ಧಿ ಪ್ರಾಧಿಕಾರಗಳ ವ್ಯಾಪ್ತಿಗೆ ಅನುಗುಣವಾಗಿ ಕನಿಷ್ಠ ಮತ್ತು ಗರಿಷ್ಠ ಶುಲ್ಕಗಳನ್ನು ನಿಗದಿಪಡಿಸುವ ನೀತಿಯನ್ನು ತರಲಾಗುತ್ತಿದೆ. ಈ ಬಗ್ಗೆ ಸದ್ಯದಲ್ಲೇ ತಿದ್ದುಪಡಿ ಮಸೂದೆಯನ್ನು ಅಧಿವೇಶನದಲ್ಲಿ ಮಂಡಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.
ಬಡವರಿಗಾಗಿ ಇ-ಖಾತೆ
ಸದಸ್ಯ ಕೆ.ಎಸ್.ನವೀನ್ ಅವರ ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್.ಸುರೇಶ್ ಅವರು, ಕಂದಾಯ ನಿವೇಶನಗಳನ್ನು ಖರೀದಿಸಿದ್ದ ಲಕ್ಷಾಂತರ ಬಡ ಜನರಿಗೆ ಖಾತೆ ಸೇರಿದಂತೆ ತಮ್ಮ ಆಸ್ತಿಗೆ ಯಾವುದೇ ಕಾನೂನುಬದ್ಧ ದಾಖಲೆಗಳಿರಲಿಲ್ಲ. ಇದನ್ನು ಮನಗಂಡ ನಗರಸಭೆಗಳು ಮತ್ತು ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಡವ ಆಸ್ತಿಗಳಿಗೆ ಇ-ಖಾತೆಗಳನ್ನು ನೀಡುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದರು.
ಭೂ ಪರಿವರ್ತನೆ ಅಧಿಕಾರ ಸರ್ಕಾರಕ್ಕೆ
ಕಳೆದ ಎರಡು ವರ್ಷಗಳಲ್ಲಿ ರಾಜ್ಯಾದ್ಯಂತ 2747.5 ಎಕರೆ ಪ್ರದೇಶವನ್ನು ಕೃಷಿಯೇತರ ಚಟುವಟಿಕೆಗಳಿಗೆ ಭೂ ಪರಿವರ್ತನೆ ಮಾಡಲಾಗಿದೆ. ಭೂ ಉಪಯೋಗ ಬದಲಾವಣೆ ಅಧಿಕಾರ ನಗರಾಭಿವೃದ್ಧಿ ಕಾರ್ಯದರ್ಶಿಯವರಿಗೆ ಇಲ್ಲ. ಸರ್ಕಾರ ಮತ್ತು ಸಂಬಂಧಿಸಿದ ಸಚಿವರಿಗೆ ಮಾತ್ರ ಇರುತ್ತದೆ. ಈ ನಾಗರಿಕರ ಆರ್ಥಿಕ ನಿರ್ದಿಷ್ಟವಾಗಿ ಇಂತಹದ್ದೇ ಬಳಕೆ ಮಾಡುವಂತೆ ನಿರ್ದೇಶನ ನೀಡುವ ಅಧಿಕಾರ ಸರ್ಕಾರಕ್ಕಿಲ್ಲ. ಈ ನಿಯಮ ಹಿಂದಿನ ಸರ್ಕಾರಗಳ ಅವಧಿಯಲ್ಲೇ ಜಾರಿಯಲ್ಲಿತ್ತು ಎಂದು ಸ್ಪಷ್ಟಪಡಿಸಿದರು.