ಟನಲ್ ರಸ್ತೆ ಯೋಜನೆ ಬಗ್ಗೆ ಬಿಜೆಪಿಯವರು ರಾಜಕೀಯ ಉದ್ದೇಶದಿಂದ ವಿರೋಧಿಸುತ್ತಿದ್ದಾರೆ, ಯೋಜನೆಗೆ ಸಾರ್ವಜನಿಕರ ವಿರೋಧವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅವರು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಟನಲ್ ರಸ್ತೆವಿರೋಧಿಸಿ ಬಿಜೆಪಿ ಪ್ರತಿಭಟನೆ ಕೈಗೊಂಡಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಈ ಬಗ್ಗೆ ಉಪಮುಖ್ಯಮಂತ್ರಿಗಳು ಈಗಾಗಲೇ ಉತ್ತರ ನೀಡಿದ್ದಾರೆ. ಯೋಜನೆಯ ಬಗ್ಗೆ ವಿರೋಧಪಕ್ಷದ ಕಳವಳಗಳನ್ನು ಪರಿಶೀಲಿಸಿ ಒಮ್ಮತಕ್ಕೆ ಬರಲು ವಿರೋಧಪಕ್ಷದ ನಾಯಕರಾದ ಆರ್.ಅಶೋಕ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗುವುದು ಎಂದರು.
ಯೋಜನೆ ಬಗ್ಗೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸುತ್ತಿಲ್ಲ. ಆದರೆ ಬಿಜೆಪಿಯವರು ರಾಜಕೀಯ ಉದ್ದೇಶದಿಂದ ವಿರೋಧಿಸುತ್ತಿದ್ದಾರೆ. ಟ್ರಾಫಿಕ್ ಸಮಸ್ಯೆಯನ್ನು ಹೋಗಲಾಡಿಸುವ ಈ ಯೋಜನೆಗೆ ವಿರೋಧ ಏಕೆ ವ್ಯಕ್ತವಾಗಬೇಕು? ಇದೇ ರೀತಿಯ ಟನಲ್ ಯೋಜನೆಗಳನ್ನು ಅನೇಕ ದೇಶದಲ್ಲಿಯೂ ಕೈಗೊಳ್ಳಲಾಗಿದೆ. ಅಲ್ಲಿನ ಜನರು ಇದನ್ನು ವಿರೋಧಿಸಿಲ್ಲ ಎಂದು ಹೇಳಿದರು.
ಟನಲ್ ಯೋಜನೆಯನ್ನು ಶ್ರೀಮಂತರನ್ನು ಗಮನದಲ್ಲಿರಿಸಿಕೊಂಡು ಮಾಡಲಾಗಿದೆ ಎಂದು ದೂರು ಕೇಳುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಟನಲ್ ಯೋಜನೆಯನ್ನು ಕಾರು, ಬಸ್ ,ದ್ವಿಚಕ್ರ ವಾಹನ, ಕಾಲ್ನಡಿಗೆಯವರಿಗೂ ಅನುಕೂಲವಾಗಲೆಂದು ಕೈಗೊಳ್ಳಲಾಗುತ್ತಿದೆ ಎಂದರು.


