ದೇಶದಲ್ಲಿ ಕೆಲಸದ ಅವಧಿಯನ್ನು ವಾರಕ್ಕೆ 70 ಹಾಗೂ 90 ಗಂಟೆಗೆ ಹೆಚ್ಚಿಸುವ ಬಗ್ಗೆ ಯಾವ ಪ್ರಸ್ತಾವನೆಗಳೂ ನಮ್ಮ ಮುಂದೆ ಇಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.
ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ, ಕೆಲಸದ ಅವಧಿಯನ್ನು ವಾರದಲ್ಲಿ 70 ಅಥವಾ 90 ಗಂಟೆಗೆ ಏರಿಕೆ ಮಾಡುವ ಯಾವ ಪ್ರಸ್ತಾವನೆಯೂ ಸರ್ಕಾರದ ಮುಂದೆ ಇಲ್ಲ. ನೌಕರರು ಸಮವರ್ತಿ ಪಟ್ಟಿಯ ಅಡಿ ಬರುವುದರಿಂದ ಕಾರ್ಮಿಕ ಕಾನೂನುಗಳಿಗೆ ಸಂಬಂಧಿಸಿದ ನಿರ್ಧಾರಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ತಮ್ಮ ವ್ಯಾಪ್ತಿಯಲ್ಲಿ ತೆಗೆದುಕೊಳ್ಳುತ್ತವೆ ಎಂದು ತಿಳಿಸಿದ್ದಾರೆ.
ವಾರದಲ್ಲಿ 60 ಗಂಟೆ ಕೆಲಸ ಮಾಡುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. 12 ಗಂಟೆಗಿಂತಲೂ ಅಧಿಕ ಕುಳಿತು ಕೆಲಸ ಮಾಡುವವರು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಾರೆ. ಇದರಿಂದ ಆರ್ಥಿಕವಾಗಿಯೂ ನಷ್ಟವಾಗುತ್ತದೆ ಎಂದು ತಿಳಿಸಲಾಗಿದೆ.
ವಾರಕ್ಕೆ 60ರಿಂದ 90 ಗಂಟೆ ಕೆಲಸ ಮಾಡುವ ಅಗತ್ಯದ ಬಗ್ಗೆ ಇನ್ಫೋಸಿಸ್‌ನ ಸಂಸ್ಥಾಪಕ ಅಧ್ಯಕ್ಷ ನಾರಾಯಣ ಮೂರ್ತಿ ಮತ್ತು ಎಲ್ ಆ್ಯಂಡ್ ಟಿ ಅಧ್ಯಕ್ಷ ಸುಬ್ರಹ್ಮಣ್ಯಂ ಅವರ ಸಲಹೆ ಕುರಿತು ದೇಶವ್ಯಾಪಿ ಚರ್ಚೆ ನಡೆದ ಬೆನ್ನಲ್ಲೇ, ವಾರಕ್ಕೆ 60 ಗಂಟೆಗಿಂತ ಹೆಚ್ಚಿನ ದುಡಿಮೆಯು ಸಿಬ್ಬಂದಿ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಕೇಂದ್ರ ಸರ್ಕಾರದ ಆರ್ಥಿಕ ಸಮೀಕ್ಷೆ ಹೇಳಿದೆ.