Thursday, January 30, 2025
Menu

 ಪವರ್ ಪಾಲಿಟಿಕ್ಸ್, ಪವರ್ ಶೇರಿಂಗ್, ಪವರ್ ಕೇರಿಂಗ್ ಯಾವುದೂ ಇಲ್ಲ: ಬೈರತಿ ಸುರೇಶ್

ಕೋಲಾರ: ರಾಜ್ಯದಲ್ಲಿ ಯಾವುದೇ ರೀತಿಯ ಪವರ್ ಪಾಲಿಟಿಕ್ಸ್ ನಡೆಯುತ್ತಿಲ್ಲ, ಪವರ್ ಶೇರಿಂಗ್, ಪವರ್ ಕೇರಿಂಗ್ ಯಾವುದೂ ಇಲ್ಲ. ಕೇವಲ ರಾಜ್ಯದ ಅಭಿವೃದ್ದಿಗೆ ಮಾತ್ರ ಸೀಮಿತವಾಗಿ ಎಲ್ಲರೂ ಕೆಲಸ ಮಾಡುತ್ತಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಸ್ಪಷ್ಟಪಡಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಗಮನ ಪಾಲಿಟಿಕ್ಸ್ ಕಡೆ ಅಲ್ಲ ರಾಜ್ಯದ ಅಭಿವೃದ್ದಿ ಕಡೆಯಷ್ಟೆ ಹೀಗಿರುವಾಗ ಪವರ್ ಶೇರಿಂಗ್ ಪ್ರಶ್ನೆಯಿಲ್ಲ ಎಂದರು.
ಸಿಎA ಹಾಗೂ ಡಿಸಿಎಂ ಇಬ್ಬರೂ ಸೇರಿ ರಾಜ್ಯವನ್ನು ಪ್ರಗತಿಯತ್ತ ಕೊಂಡೋಯ್ಯುತ್ತಿದ್ದಾರೆ, ಊಟಕ್ಕೆ ಸೇರುವುದು ಡಿನ್ನರ್ ಪಾಲಿಟಿಕ್ಸಾ ಎಂದು ಪ್ರಶ್ನಿಸಿದ ಅವರು, ಡಿನ್ನರ್ ಮಾಡುವುದಕ್ಕೆ ನಮ್ಮಲ್ಲಿ ಯಾವುದೆ ನಿರ್ಬಂಧ ಇಲ್ಲ ಆದರೆ ಪ್ರತ್ಯೇಕ ಸಭೆಗಳನ್ನು ಮಾಡದಂತೆ ಎಐಸಿಸಿ ಸೂಚನೆ ನೀಡಿದೆ ಎಂದು ತಿಳಿಸಿದರು.

ನಾವು ಹೈ ಕಮಾಂಡ್ ಸೂಚನೆಯಂತೆ ನಡೆದುಕೊಳ್ಳುತ್ತಿದ್ದೇವೆ. ಪಕ್ಷದ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿದ್ದಾರೆ, ಇದರಲ್ಲಿ ಅನುಮಾನವಿಲ್ಲ ಎಂದ ಅವರು, ಡಿಸಿಎಂ ಒಂಟಿಯಾಗಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಮುಖ್ಯಮಂತ್ರಿಗಳು ಎಷ್ಟು ಮುಖ್ಯಾನೋ ಡಿಸಿಎಂ ಸಹ ಅಷ್ಟೆ ಮುಖ್ಯವಾಗಿದ್ದಾರೆ, ನಮ್ಮಲ್ಲಿ ಅಂತಹ ಬೇಧ ಯಾವತ್ತೂ ನಡೆದಿಲ್ಲ ಎಂದರು.

ಅಧಿಕಾರ ಹಂಚಿಕೆ ಕುರಿತು ನನಗೆ ಗೊತ್ತಿಲ್ಲ, ಈ ಕುರಿತು ಹೈ ಕಮಾಂಡ್ ನಿರ್ಧಾರ ಮಾಡಲಿದೆ. ಯಾರಿಗೆ ಯಾವ ಸ್ಥಾನ, ಅಧಿಕಾರ ಕೊಡಬೇಕು ಅನ್ನೋದು ಹೈ ಕಮಾಂಡ್‌ಗೆ ಗೊತ್ತು. ಹೈ ಕಮಾಂಡ್ ನಿರ್ಧಾರಕ್ಕೆ ಎಲ್ಲರೂ ಬದ್ದರಾಗಿರುತ್ತೇವೆ ಎಂದು ತಿಳಿಸಿದರು.

ಸಚಿವ ಸಂಪುಟ ವಿಸ್ತರಣೆ ಇಲ್ಲ, ಸಚಿವ ಸ್ಥಾನದ ಆಕಾಂಕ್ಷಿಗಳು ಕೋಲಾರಲ್ಲೂ ಇದ್ದಾರೆ. ಕೋಲಾರದಲ್ಲಿ ನಾಲ್ಕು ಜನ ಶಾಸಕರು ಹಾಗೂ ಇಬ್ಬರು ಪರಿಷತ್ ಸದಸ್ಯರಿದ್ದಾರೆ. ಕೊಡೋದು ಬಿಡೋದು ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದು ತಿಳಿಸಿದ ಸಚಿವರು, ಒಬ್ಬರಿಗೆ ಒಂದೇ ಹುದ್ದೆ ಎಂಬುದರ ಕುರಿತು ಪ್ರತಿಕ್ರಿಯೆ ನೀಡದೇ ನುಣುಚಿಕೊಂಡರು.

ಗಾಂಧೀಜಿ ಹತ್ಯೆ ಹಿಂದೆ ನೆಹರು ಕೈವಾಡ ಅನ್ನೋ ಶಾಸಕ ಯತ್ನಾಳ್ ಹೇಳಿಕೆ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ವ್ಯಂಗ್ಯವಾಡಿದರು. ಗಾಂಧೀಜಿ ಹತ್ಯೆ ಮಾಡಿದ್ದೂ ನಾತುರಾಮ್ ಗೂಡ್ಸೆ ಎಂಬುದು ಎಲ್ಲರಿಗೂ ಗೊತ್ತಿದೆ, ಈ ನಡುವೆ ನಾತುರಾಮ್ ಗೂಡ್ಸೆನ ಬಿಜೆಪಿ ಹಾಗೂ ಆರ್‌ಎಸ್‌ಎಸ್ ನವರು ಪೂಜೆ ಮಾಡುತ್ತಾರೆ. ಹೀಗಿರುವಾಗ ಗಾಂಧಿ ಹತ್ಯೆ ಹಿಂದೆ ನೆಹರು ಕೈವಾಡ ಎನ್ನುವ ಹೇಳಿಕೆ ಕಪೋಲಕಲ್ಪಿತ ಎಂದು ಟೀಕಿಸಿದರು.

ಯತ್ನಾಳ್‌ರನ್ನು ನಾನು ದೊಡ್ಡ ರಾಜಕಾರಿಣಿ ಅಂತ ತಿಳಿದುಕೊಂಡಿದ್ದೆ. ಬಿ.ವೈ.ವಿಜಯೇಂದ್ರ ಅವರನ್ನು ಬಚ್ಚಾ ಅಂತ ಹೇಳುವ ಬಗ್ಗೆ ಯತ್ನಾಳ್ ಬಗ್ಗೆ ನಾನೇನು ಹೇಳಲಿ ಎಂದು ಕಿಡಿಕಾರಿ, ಮನಬಂದಂತೆ ಮಾತನಾಡುವುದು ಅವರಿಗೆ ಅಭ್ಯಾಸವಾಗಿಬಿಟ್ಟಿದೆ ಎಂದರು.

ಮುಳಬಾಗಲು ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ್ ಅವರಿಗೆ ಕಾಂಗ್ರೆಸ್‌ಗೆ ಸೇರಲು ಆಫರ್ ನೀಡಲಾಗಿದೆ ಎಂಬ ವಿಷಯದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್‌ಗೆ ಯಾರೇ ಬಂದರು ಸ್ವಾಗತ ಮಾಡುತ್ತೇವೆ, ಅಭಿವೃದ್ದಿ ವಿಚಾರಕ್ಕೆ ಬೆಂಬಲ ಕೊಟ್ಟು ಬರುವವರಿಗೆ ನಮ್ಮ ಬಾಗಿಲು ತೆರೆದಿರುತ್ತದೆ ಎಂದರು.

ಬಿಜೆಪಿ,ಜೆಡಿಎಸ್ ಶಾಸಕರನ್ನು ಆಪರೇಷನ್ ಮಾಡಿ ಕಾಂಗ್ರೆಸ್‌ಗೆ ಕರೆಸಿಕೊಳ್ಳುವ ಪರಿಸ್ಥಿತಿ ನಮಗಿಲ್ಲ, ಕಾಂಗ್ರೆಸ್ಸಿನಿಂದಲೇ ೧೪೦ ಶಾಸಕರು ಇರುವಾಗ ಆಪರೇಷನ್ ಮಾತು ಅಪ್ರಸ್ತುತ ಎಂದು ತಿಳಿಸಿದರು.

Related Posts

Leave a Reply

Your email address will not be published. Required fields are marked *