Saturday, December 13, 2025
Menu

ಯಾರಿಗೂ ಹೆದರುವ, ಜಗ್ಗುವ ಮಾತೇ ಇಲ್ಲ: ಡಿಸಿಎಂ ಡಿಕೆ ಶಿವಕುಮಾರ್ ಗರಂ

dk shivakumar

ದೇಶದ ಪ್ರಧಾನಮಂತ್ರಿ, ಗೃಹ ಸಚಿವರಿಗೆ ಹೆದರದೇ ಜೈಲಿಗೆ ಹೋಗಿ ಬಂದಿರುವವನು ನಾನು. ಅವನ್ಯಾರೋ ಹೆಬ್ಬಾರ್ ಎಂಬುವವನಿಗೆ ಹೆದರುತ್ತೇನೆಯೇ? ಯಾರಿಗೂ ಹೆದರುವ, ಜಗ್ಗುವ ಮಾತೇ ಇಲ್ಲ. ಯಾರೇ ಆಗಲಿ ಯಾರ ಜೊತೆ ಮಾತನಾಡುತ್ತಿದ್ದೇವೆ ಎಂಬುದರ ಬಗ್ಗೆ ಕನಿಷ್ಠ ಪರಿಜ್ಞಾನ ಇಟ್ಟುಕೊಳ್ಳಬೇಕು ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ.

ಕರ್ನಾಟಕ ಅಪಾರ್ಟ್ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ವಿಧೇಯಕ 2025 ಕುರಿತು ಅಪಾರ್ಟ್ಮೆಂಟ್ ಅಸೋಸಿಯೇಷನ್ ಗಳ ಪ್ರತಿನಿಧಿಗಳೊಂದಿಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಶನಿವಾರ ನಡೆದ ಸಂವಾದದಲ್ಲಿ ಅವರು ಮಾತನಾಡಿದರು.

ಕಿರಣ್ ಹೆಬ್ಬಾರ್ ಎಂಬಾತ ತಾನು ಅಂಪಾರ್ಟ್ ಮೆಂಟ್ ಮಾಲೀಕ ಎಂದು ಪತ್ರ ಬರೆದಿದ್ದು, ನಮಗೆ ಬೆದರಿಕೆ ಹಾಕಲು ಮುಂದಾಗಿದ್ದಾನೆ. ನಮ್ಮಲ್ಲಿ ಬಹುದೊಡ್ಡ ಮತದಾರರ ಸಮೂಹವಿದ್ದು, ಬೆಂಗಳೂರಿನ 1.30 ಕೋಟಿ ಮತದಾರರ ಮೇಲೆ ಪರಿಣಾಮ ಬೀರಬಲ್ಲೆವು. ಸರ್ಕಾರಗಳು ನಮ್ಮನ್ನು ನಿರ್ಲಕ್ಷಿಸಿದ್ದು, ಆಡಳಿತ ಪಕ್ಷ ನಮ್ಮ ಮನವಿ ನಿರ್ಲಕ್ಷಿಸಿದರೆ ಸದ್ಯದಲ್ಲೇ ಜಿಬಿಎ ಚುನಾವಣೆ ಬರುತ್ತಿದೆ ಎಂದು ಪತ್ರದಲ್ಲಿ ಎಚ್ಚರಿಕೆ ನೀಡಿದ್ದಾನೆ ಎಂದು ಅವರು ಹೇಳಿದರು.

ನಾನು ಇರುವುದು ನಿಮಗಾಗಿ. ನಾನು ನಿಮ್ಮನ್ನು ಕರೆದು ಅಭಿಪ್ರಾಯ ಪಡೆಯುವ ಅಗತ್ಯವಿರಲಿಲ್ಲ. ನಾವು ನಿಮ್ಮ ಮೇಲೆ ಪ್ರೀತಿ ವಿಶ್ವಾಸವಿಟ್ಟು ಕರೆದಿದ್ದೇವೆ. ಗಾಂಧೀಜಿ ಒಂದು ಮಾತು ಹೇಳಿದ್ದಾರೆ. ನಿಮ್ಮನ್ನು ನೀವು ನಿಯಂತ್ರಿಸಬೇಕಾದರೆ ನಿಮ್ಮ ಮೆದುಳನ್ನು ಪ್ರಯೋಗಿಸಿ, ಬೇರೆಯವರನ್ನು ನಿಯಂತ್ರಿಸಬೇಕಾದರೆ ನಿಮ್ಮ ಹೃದಯವನ್ನು ಪ್ರಯೋಗಿಸಿ ಎಂದು. ನಾನು ನನ್ನ ಹೃದಯದಿಂದ ಜನರ ಮನಸ್ಸು ಗೆದ್ದಿದ್ದೇನೆ. ನಾನು ಸತತವಾಗಿ 8 ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದೇನೆ. ಕಳೆದ ಚುನಾವಣೆಯಲ್ಲಿ ನಾನು ಪ್ರಚಾರಕ್ಕೆ ಹೋಗಲಿಲ್ಲ. ವಿರೋಧ ಪಕ್ಷದ ನಾಯಕ ಅಶೋಕ್ ನನ್ನ ವಿರುದ್ಧ ಸ್ಪರ್ಧಿಸಿದ್ದರೂ ಜನ ನನಗೆ 1.23 ಲಕ್ಷ ಮತಗಳ ಅಂತರದಲ್ಲಿ ಗೆಲ್ಲಿಸಿದ್ದಾರೆ. ಇದು ರಾಜ್ಯದ ಇತಿಹಾಸದಲ್ಲೇ ಅತಿ ದೊಡ್ಡ ಅಂತರದ ಗೆಲುವು ಎಂದು ತಿಳಿಸಿದರು.

ನಿಮ್ಮ ಸೇವೆ ಮಾಡಿದರೆ ನಮಗೆ ಮತ ಹಾಕುತ್ತೀರಿ ಎಂಬುದಷ್ಟೇ ನಮ್ಮ ಆಸೆ. ಅದನ್ನು ಬಿಟ್ಟು ನಿಮ್ಮನ್ನು ಬೇರೆ ಏನು ಕೇಳುತ್ತೇವೆ? ನಾವು ಕೊಟ್ಟ ಮಾತಿನಂತೆ ಪಂಚ ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ. ಅಪಾರ್ಟ್ ಮೆಂಟ್ ನಿವಾಸಿಗಳಿಗೆ 200 ಯೂನಿಟ್ ವರೆಗೂ ಉಚಿತ ವಿದ್ಯುತ್ ನೀಡಿದ್ದೇವೆ. ಈ ಯೋಜನೆ ಜಾರಿ ಅಸಾಧ್ಯ ಎಂದು ಪ್ರಧಾನಮಂತ್ರಿಗಳು ಹೇಳಿದರು. ಆದರೆ ಇಂದು ಬೇರೆ ರಾಜ್ಯಗಳಲ್ಲಿ ನಮ್ಮ ಯೋಜನೆಗಳೇ ಅವರನ್ನು ಕಾಪಾಡುತ್ತಿದೆ. ಕಾವೇರಿ 5ನೇ ಹಂತದ ಕುಡಿಯುವ ನೀರಿನ ಯೋಜನೆ ಜಾರಿ ಮಾಡಿ, ಮೊದಲು ನೀರಿನ ಸಂಪರ್ಕ ಪಡೆಯಿರಿ, ಒಂದು ವರ್ಷ ತಡವಾಗಿ ಬೇಕಾದರೆ ಹಣ ಪಾವತಿಸಿ ಎಂದು ಕಾಲಾವಕಾಶವನ್ನು ನೀಡಿದ್ದೇವೆ. ಆರನೇ ಹಂತದ ಯೋಜನೆಗೆ ಯೋಜನೆ ರೂಪಿಸಿದ್ದೇವೆ. ಇದನ್ನು ನೀವುಗಳು ಅರಿಯಬೇಕು. ಎಲ್ಲರನ್ನು ಆಟವಾಡಿಸಿದಂತೆ ನಮ್ಮನ್ನು ಆಟವಾಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ನಾನು ಸಾವಿರಾರು ಅಪಾರ್ಟ್ ಮೆಂಟ್ ಕಟ್ಟಿದ್ದೇನೆ. ಅಪಾರ್ಟ್ ಮೆಂಟ್ ಗಳಿಗೆ ಜಾಗ ಕೊಟ್ಟಿದ್ದೇನೆ. ನಾವು ಇರುವುದೇ ನಿಮ್ಮ ಸೇವೆ ಮಾಡಲು. ಚುನಾವಣೆಗಳನ್ನು ಹೇಗೆ ನಡೆಸಬೇಕು ಎಂದು ನನಗೆ ಗೊತ್ತಿದೆ. ಪ್ರತಿ ಅಪಾರ್ಟ್ ಮೆಂಟ್ ನಲ್ಲಿ ಯಾರಿಗೆ ಎಷ್ಟು ಮತ ಬೀಳುತ್ತದೆ ಎಂದೂ ನನಗೆ ಗೊತ್ತಿದೆ. ಆದರೂ ನಾವು ನಿಮ್ಮ ಸೇವೆ ಮಾಡಿ ನಿಮ್ಮ ವಿಶ್ವಾಸ ಗೆಲ್ಲಲು ಬಯಸುತ್ತೇನೆ. ನೀವು ಬಲಿಷ್ಠವಾಗಿದ್ದರೆ, ನಾವು ಬಲಿಷ್ಠ, ನೀವು ದುರ್ಬಲರಾದರೆ, ನಾವು ದುರ್ಬಲ ಎಂದು ಭಾವಿಸಿದ್ದೇನೆ. ನಾನು ನೇರವಾಗಿ, ಕಟುವಾಗಿ ಹಾಗೂ ದಿಟ್ಟವಾಗಿ ಮಾತನಾಡಿದ್ದೇನೆ. ಇದಕ್ಕೆ ಯಾರೂ ಬೇಸರ ಮಾಡಿಕೊಳ್ಳಬೇಡಿ. ಬೆದರಿಸಿದರೆ ನಡೆಯುತ್ತದೆ ಎಂಬ ಭ್ರಮೆ ಬೇಡ ಎಂದರು.

ಸಹಾಯ ಮಾಡಿದರೂ ಬೆಂಬಲ ನೀಡಲಿಲ್ಲ

ಚುನಾವಣೆ ಸಮಯದಲ್ಲಿ 100 ಅಪಾರ್ಟ್ಮೆಂಟ್ ಗಳಿಗೆ ಭೇಟಿ ನೀಡಿ ನಮಗೆ ಬೆಂಬಲ ನೀಡಿ ಎಂದು ಕೇಳಿಕೊಂಡಿದ್ದೆ. ಆಗ ಬೆಂಗಳೂರಿನಲ್ಲಿ ಸುಮಾರು 6 ಸಾವಿರ ಕೊಳವೆ ಬಾವಿ ಬತ್ತಿದ್ದಾಗ ನಾನು ಎಷ್ಟೇ ಕಷ್ಟ ಆದರೂ ನಿಮಗೆ ತೊಂದರೆ ಆಗಬಾರದು ಎಂದು ಸಹಾಯ ಮಾಡಿದ್ದೆ. ಆದರೆ ಚುನಾವಣೆ ಫಲಿತಾಂಶ ಬಂದಾಗ ನೀವು ನಮಗೆ ಬೆಂಬಲ ನೀಡಲಿಲ್ಲ. ನನ್ನ ತಮ್ಮನನ್ನು ಒಂದೇ ಕ್ಷೇತ್ರದಲ್ಲಿ 1 ಲಕ್ಷ ಮತಗಳಿಂದ ಸೋಲಿಸಿದಿರಿ. ನೀವು ನಮಗೆ ಯಾವುದೇ ರೀತಿಯ ಬೆಂಬಲ ನೀಡಲಿಲ್ಲ. ನಾವು ಕಷ್ಟಪಟ್ಟು ಸಹಾಯ ಮಾಡಿದರೂ ನೀವು ನಮಗೆ ಕರುಣೆ ತೋರಲಿಲ್ಲ. ಆಗ ನಾವು ಯಾಕೆ ಸಹಾಯ ಮಾಡಬೇಕು ಎಂದು ಅನಿಸಿದ್ದು ನಿಜ ಎಂದು ಬೇಸರ ವ್ಯಕ್ತಪಡಿಸಿದರು.

ವಿಧೇಯಕದ ವಿಚಾರವಾಗಿ ನಿಮ್ಮ ಅಭಿಪ್ರಾಯ, ಸಲಹೆ ಪಡೆಯಲು ನಿಮ್ಮನ್ನು ಆಹ್ವಾನಿಸಿದ್ದೇನೆ. ಈ ವಿಧೇಯಕ ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ಇರಬೇಕು. ನಿಮ್ಮ ಧ್ವನಿ, ಶಾಸಕರ ಧ್ವನಿ ಸರ್ಕಾರದ ಧ್ವನಿ ಆಗಬೇಕು. ಇಲ್ಲಿ ಬರುವ ಮುನ್ನ ಅಧಿಕಾರಿಗಳ ಜೊತೆ ಚರ್ಚೆ ಮಾಡಿದೆ. ಆತುರದಲ್ಲಿ ಈ ವಿಧೇಯಕ ರೂಪಿಸುವ ಮುನ್ನ ನಿಮ್ಮೆಲ್ಲರ ಅಭಿಪ್ರಾಯ ತಿಳಿಯಲು ಬಂದಿದ್ದೇನೆ. ನಿಮ್ಮ ಅಭಿಪ್ರಾಯ ಪಡೆದ ಬಳಿಕ ಸದನದಲ್ಲಿ ಶಾಸಕರ ಜೊತೆ ಚರ್ಚೆ ಮಾಡಲಾಗುವುದು. ಬೆಂಗಳೂರಿನಲ್ಲಿ ಐದು ಪಾಲಿಕೆ ರಚಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಪಾಲಿಕೆಗಳನ್ನು ವಿಸ್ತರಣೆ ಮಾಡಲಾಗುವುದು. ಬೆಂಗಳೂರಿನ ಹೊರ ವಲಯ ಸೇರಿದಂತೆ ಈ ವಿಧೇಯಕ ಇಡೀ ರಾಜ್ಯಕ್ಕೆ ಅನ್ವಯವಾಗಲಿದೆ ಎಂದು ತಿಳಿಸಿದರು.

Related Posts

Leave a Reply

Your email address will not be published. Required fields are marked *