ಬೆಂಗಳೂರು: ಅಧಿಕಾರಕ್ಕಾಗಿ ನಮ್ಮ ಮನೆ ಬಾಗಿಲಿಗೆ ಬಂದಿದ್ದು ಇದೇ ಕಾಂಗ್ರೆಸ್ಸಿಗರು, ಅದಕ್ಕೂ ಮೊದಲು ನಾನು ಬಿಜೆಪಿ ಜತೆ ಸೇರಿ ಸರ್ಕಾರ ರಚನೆ ಮಾಡಿದ್ದಿದ್ದು ಅವರಿಗೆ ಗೊತ್ತಿರಲಿಲ್ಲವೇ? ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಕಿಡಿಕಾರಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಕೇಂದ್ರ ಸಚಿವರು; ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡುತ್ತಿರುವ ಸಚಿವ ಪ್ರಿಯಾಂಕ ಖರ್ಗೆ ಅವರನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ಈ ಕ್ಷುಲ್ಲಕ ರಾಜಕೀಯ ಬಿಟ್ಟು ಕಲಬುರಗಿ ಜಿಲ್ಲೆಯಲ್ಲಿ ಆಗಿರುವ ನೆರೆ ಅನಾಹುತವನ್ನು ಸರಿ ಮಾಡಿ ಎಂದು ಕಿವಿಮಾತು ಹೇಳಿದರು.
ಅಧಿಕಾರಕ್ಕಾಗಿ ಜೆಡಿಎಸ್ ಕೇಸರಿಕರಣವಾಗಿದೆ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ತಿರುಗೇಟು ಕೊಟ್ಟ ಸಚಿವರು; ಅಧಿಕಾರಕ್ಕಾಗಿ 2018ರಲ್ಲಿ ನಮ್ಮ ಮನೆ ಬಾಗಿಲಿಗೆ ಬಂದಿದ್ದು ಇದೇ ಕಾಂಗ್ರೆಸ್. ಅವತ್ತು ಏನೇನು ನಡೆಯಿತು ಎನ್ನುವುದನ್ನು ಅವರು ತಮ್ಮ ತಂದೆಯನ್ನು ಕೇಳಿ ತಿಳಿದುಕೊಳ್ಳಲಿ. ಬೆಂಗಳೂರಿನಲ್ಲಿ ರಾಜಕೀಯ ಮಾಡುವ ಬದಲು ತಮ್ಮ ಜಿಲ್ಲೆಯಲ್ಲಿ ಏನಾಗಿದೆ ಎಂಬ ಬಗ್ಗೆ ಗಮನ ಹರಿಸಲಿ ಎಂದು ಸಲಹೆ ಮಾಡಿದರು.
ಕಾಂಗ್ರೆಸ್ ನವರು ಮಾತೆತ್ತಿದರೆ ತಾಜ್ ಹೋಟೆಲ್ ನಲ್ಲಿ ಇದ್ದೆ ಅಂತಾರೆ. ನಾನು ತಾಜ್ ಹೊಟೇಲಿನಲ್ಲಿ ಮಲಗಿದ್ದರೆ ರೈತರ 25 ಸಾವಿರ ಕೋಟಿ ಸಾಲಮನ್ನಾ ಮಾಡೋಕೆ ಆಗುತ್ತಿತ್ತಾ? ಎಂದು ಸಚಿವರು ಖಾರವಾಗಿ ಪ್ರಶ್ನಿಸಿದರು.
ಕಾಂಗ್ರೆಸ್ ಶಾಸಕರಿಗೆ ನಾನು ಸಿಎಂ ಅಗಿದ್ದಾಗ ಅಭಿವೃದ್ದಿಗಾಗಿ 19 ಸಾವಿರ ಕೋಟಿ ಅನುದಾನವನ್ನು ಒಂದೇ ವರ್ಷದಲ್ಲಿ ಕೊಟ್ಟಿದ್ದೆ. ಇವತ್ತು ಸಿದ್ದರಾಮಯ್ಯ ಅವರು ಕುಮಾರಸ್ವಾಮಿ ಇದ್ದಾಗ ಏನ್ ಕೊಟ್ರು ಅಂತ ಚರ್ಚೆ ಮಾಡ್ತಾರೆ. ದಾಖಲೆ, ಅಂಕಿ ಅಂಶಗಳು ಅವರ ಬಳಿಯೇ ಇವೆ. ಮೊದಲು ನೋಡಲಿ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.
ಆರ್ ಎಸ್ ಎಸ್ ಬ್ಯಾನ್ ವಿಚಾರ
ಹಿಂದೆ ನಾನು ಆರ್ ಎಸ್ ಎಸ್ ಅನ್ನು ಟೀಕೆ ಮಾಡಿದ್ದೇನೆ. ಇಲ್ಲ ಅಂತ ಹೇಳಲ್ಲ. ಕಾಂಗ್ರೆಸ್ ನವರು ನೀವೇನು ಮಾಡಿದ್ದೀರಾ? ರಾಜ್ಯದಲ್ಲಿ 136 ಸೀಟು ಕೊಟ್ಟಿದ್ದಾರೆ. ಜನರ ಸಮಸ್ಯೆ ಕೇಳ್ತಿಲ್ಲ. ಕಲಬುರ್ಗಿಯಲ್ಲಿ ಜನ ಬೀದಿಯಲ್ಲಿ ಇದ್ದಾರೆ. ರೈತರು ಸಂಕಷ್ಟದಲ್ಲಿ ಇದ್ದಾರೆ ಏನು ಮಾಡಿದ್ದೀರಪ್ಪ? ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದರು.
ಪ್ರಿಯಾಂಕ್ ಖರ್ಗೆ ಅವರೇ, ನಿಮ್ಮ ಅಪ್ಪ ಏನು ಹೇಳಿದ್ದರು? ನಮ್ಮ ಹೊಲದಲ್ಲಿ 40 ಎಕರೆ ಬೆಳೆ ನಷ್ಟ ಆಗಿದೆ ಅಂತ ರೈತರು ಹೋಗಿ ಕೇಳಿದರೆ ನಾನು ಎಲ್ಲಿ ಹೋಗಲಿ ಅಂತ ಹೇಳಿದ್ದರು. ನಿಮ್ಮಿಂದ ನಾನು ಯಾವ ರೀತಿ ರಾಜಕೀಯದಲ್ಲಿ ತೊಡಗಿಸಿಕೊಳ್ಳಬೇಕು ಅಂತ ಕಲಿಯಬೇಕಾ? ಪ್ರಿಯಾಂಕ್ ಖರ್ಗೆ ಮಾತಾಡಬೇಕಾದ್ರೆ ಹದ್ದುಬಸ್ತಿನಲ್ಲಿ ಮಾತಾಡಿ. ನನ್ನ ಬಗ್ಗೆ ನಮ್ಮ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ಉಳಿಸಿಕೊಂಡಿಲ್ಲ ನೀವು ಎಂದು ಪ್ರಿಯಾಂಕ ಖರ್ಗೆಗೆ ಸಚಿವರು ಎಚ್ಚರಿಕೆ ನೀಡಿದರು.
ಅಧಿಕಾರಕೋಸ್ಕರ ನಾವು ಯಾರ ಬಳಿಗೂ ಹೋಗೊಲ್ಲ. ಕಾಂಗ್ರೆಸ್ ಅವರು ಅಧಿಕಾರ ಹಿಡಿಯಲು ಬೇಕಾದಾಗ ನಮ್ಮ ಹತ್ತಿರ ಬರುತ್ತಾರೆ. ಯಾರ ಯಾರ ಬೆನ್ನಿಗೆ ಕಾಂಗ್ರೆಸ್ ಚೂರಿ ಹಾಕಿದೆ ಎಂಬುದು ಗೊತ್ತಿದೆ. ಯಾರು ಯಾರನ್ನ ಅಧಿಕಾರದಿಂದ ತೆಗೆದರು, ಎಷ್ಟು ಜನರ ರಾಜಕೀಯ ಜೀವನ ಹಾಳು ಮಾಡಿದರು ಎನ್ನುವುದು ನಿಮಗೆ ತಿಳಿದಿಲ್ಲವೇ ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದರು.
ಚರಣ್ ಸಿಂಗ್ ಅವರಿಗೆ ಸಂಸತ್ ಕಲಾಪದಲ್ಲಿ ಭಾಗವಹಿಸಲು ಬಿಡಲಿಲ್ಲ. ಚಂದ್ರಶೇಖರ್ ಸೇರಿ ಎಷ್ಟು ಜನರನ್ನ ಬಲಿ ತೆಗೆದುಕೊಂಡರು. ಅವರ ರಾಜಕೀಯ ಭವಿಷ್ಯ ನಿರ್ನಾಮ ಮಾಡಿಬಿಟ್ಟರು. ಹಾಗೆಯೇ ದೇವೇಗೌಡರ ರಾಜಕೀಯ ಭವಿಷ್ಯ ನಿರ್ನಾಮ ಮಾಡಿದ್ದೇ ಇದೇ ಕಾಂಗ್ರೆಸ್. ಇವರಿಂದ ನಾನು ಕಲಿಬೇಕಾ? ಎಂದು ಕುಮಾರಸ್ವಾಮಿ ಅವರು ತೀವ್ರ ವಾಗ್ದಾಳಿ ನಡೆಸಿದರು.
ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ ಚರ್ಚೆ ಸದ್ಯಕ್ಕಿಲ್ಲ
ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸದ್ಯಕ್ಕೆ ಪಕ್ಷದಲ್ಲಿ ರಾಜ್ಯಾಧ್ಯಕ್ಷ ಬದಲಾವಣೆ ಚರ್ಚೆ ಇಲ್ಲ. ಈ ಬಗ್ಗೆ ವಿಷಯ ಚರ್ಚೆಗೆ ಬಂದಿಲ್ಲ. ಸದ್ಯ ನಾನೇ ಅಧ್ಯಕ್ಷನಾಗಿದ್ದೇನೆ. ಇನ್ನೊಂದು ಕಡೆ ನಿಖಿಲ್ ಕುಮಾರಸ್ವಾಮಿಗೆ ಅವರಿಗೆ ಜವಾಬ್ದಾರಿ ಕೊಡಬೇಕು ಅಂತ ಇದೆ. ಆದರೆ ಇದ್ಯಾವುದರ ಬಗ್ಗೆ ಚರ್ಚೆ ಆಗಿಲ್ಲ, ಸದ್ಯಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ ಇಲ್ಲ ಎಂದು ಅವರು ತಿಳಿಸಿದರು
ಇದೇ ವೇಳೆ ಸತೀಶ್ ಜಾರಕಿಹೊಳಿ ಸಿಎಂ ಆಗಲಿ ಎಂಬ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಅವರ ಪಕ್ಷದ ಬೆಳವಣಿಗೆಗಳು ಏನಿದೆ ಎಂಬ ಬಗ್ಗೆ ನಾವು ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ಅವರ ಪಕ್ಷದಲ್ಲಿ ಏನೇನು ಬೇಕು ಅವರು ತೀರ್ಮಾನ ಮಾಡಿಕೊಳ್ಳಲಿ ಎಂದರು ಕೇಂದ್ರ ಸಚಿವರು.
ಸಮನ್ವಯ ಸಮಿತಿ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಶೀಘ್ರವೇ ಜೆಡಿಎಸ್-ಬಿಜೆಪಿ ನಡುವೆ ಸಮನ್ವಯ ಸಮಿತಿ ರಚನೆ ಆಗಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು, ಬಿಜೆಪಿ ನಾಯಕರು ಬಂದು ಚರ್ಚೆ ಮಾಡಿದ್ದಾರೆ. ಬೆಂಗಳೂರಿಗೆ ಒಂದು, ರಾಜ್ಯಕ್ಕೆ ಒಂದು ಸಮನ್ವಯ ಸಮಿತಿ ರಚನೆ ಬಗ್ಗೆ ತೀರ್ಮಾನ ಆಗಿದೆ. ಒಂದು ವಾರ ಅಥವಾ 10 ದಿನಗಳಲ್ಲಿ ಅದರ ಬಗ್ಗೆ ಅಂತಿಮ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.
ಕೋರ್ ಕಮಿಟಿ ಪುನಾ ರಚನೆ ವಿಚಾರ ಸಂಬಂಧ ಮಾತನಾಡಿ, ಕೋರ್ ಕಮಿಟಿ ಪುನಾ ರಚನೆ ಬಗ್ಗೆ ನಮ್ಮ ಪಕ್ಷದಲ್ಲಿ ಒಂದು ಸಭೆ ಆಗಿದೆ. ಕೋರ್ ಕಮಿಟಿ ಮತ್ತು ಕಾರ್ಪೋರೇಷನ್ ಚುನಾವಣೆ ಸಂಬಂಧ ಪಕ್ಷ ಸಂಘಟನೆಗೆ ಸಮಿತಿ ಮಾಡುವ ನಿರ್ಧಾರ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಆ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.
ಅನುದಾನ; ಸಿಎಂಗೆ ತರಾಟೆ
ಕೇಂದ್ರದಿಂದ ರಾಜ್ಯಕ್ಕೆ ಸೂಕ್ತ ಅನುದಾನ ಸಿಗುತ್ತಿಲ್ಲ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ದೇಶದಲ್ಲಿ 50 ವರ್ಷಗಳ ಕಾಂಗ್ರೆಸ್ ಪಕ್ಷ ಒಂದೇ ಆಡಳಿತ ನಡೆಸಿದೆ. ಸ್ವಾತಂತ್ರ್ಯ ಬಂದ ನಂತರ ಎಲ್ಲಾ28 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸಂಸದರನ್ನೇ ಜನ ಗೆಲ್ಲಿಸುತ್ತಿದ್ದರು. ಆಗ ಕೇಂದ್ರದಲ್ಲೂ, ರಾಜ್ಯದಲ್ಲೂ ಕಾಂಗ್ರೆಸ್ ಸರ್ಕಾರ ಇತ್ತು. ಅವತ್ತಿನ ಅ ಸಂಸತ್ ಸದಸ್ಯರು ಏನೇನು ತಂದಿದ್ದರು? ಎಂದು ಸಚಿವರು ವಾಗ್ದಾಳಿ ನಡೆಸಿದರು.
ಆಗ ದೆಹಲಿಯಿಂದ ಅವರದ್ದೇ ಪಕ್ಷದ ಸರ್ಕಾರದಿಂದ ಏನು ತಂದರು? ಅಂದು ಕರ್ನಾಟಕಕ್ಕೆ ಎಷ್ಟು ಹಣ ತಂದರು? ಯಾವ ನೀರಾವರಿ ಸಮಸ್ಯೆ ಬಗೆಹರಿಸಿದರು. ಯಾವ ಅಭಿವೃದ್ಧಿಗೆ ಹಣ ತಂದ್ರು? ನಮ್ಮ ಬಗ್ಗೆ ಚರ್ಚೆ ಮಾಡೋ ಬದಲು ಅವರೇ ಕುಳಿತು ಚರ್ಚೆ ಮಾಡಿಕೊಳ್ಳಲಿ ಎಂದು ಸಿಎಂ ಸಿದ್ದರಾಮಯ್ಯಗೆ ಸಚಿವರು ತಿರುಗೇಟು ನೀಡಿದರು.