Menu

ಸೈಬರ್ ವಂಚನೆಗೆ ಕಡಿವಾಣ ಯಾವಾಗ?

ಜಗತ್ತು ತಂತ್ರಜ್ಞಾನದಲ್ಲಿ ವೇಗವಾಗಿ ಮುಂದುವರೆದಂತೆ ಸೈಬರ್ ಕಳ್ಳರು ಸಹ ಅಷ್ಟೇ ವೇಗವಾಗಿ ಮುಂದುವರೆಯು ತ್ತಿದ್ದಾರೆ. ಜನರಿಗೆ ಮಂಕುಬೂದಿ ಎರಚಿ ಅವರು ಕಷ್ಟಪಟ್ಟು ದುಡಿದ ಹಣವನ್ನು ಕ್ಷಣ ಮಾತ್ರದಲ್ಲಿ ಲಪಟಾಯಿಸುತ್ತಿದ್ದಾರೆ. ನಾಗರಿಕ ಸಮಾಜದಲ್ಲಿ ಇಂತಹ ಸೈಬರ್ ಕೃತ್ಯಗಳ ಬಗ್ಗೆ ಜಾಗೃತಿ ಮೂಡಿಸಲು ಕೇಂದ್ರ ಸರ್ಕಾರ ಮೊಬೈಲ್ನ ಹಲೋ ಟ್ಯೂನ್ನಲ್ಲಿ ಸೈಬರ್ ಕೃತ್ಯದ ಕುರಿತು ಜಾಗೃತಿ ಮೂಡಿಸುತ್ತಿದೆ.

ಒಂದು ಕಾಲದಲ್ಲಿ ಕಳ್ಳತನ ಎಂದರೆ ಕಳ್ಳರು ಮನೆಗಳಿಗೆ ಮತ್ತು ಬ್ಯಾಂಕುಗಳಿಗೆ ಕನ್ನ ಹಾಕಿ ಹಣ ಮತ್ತು ಚಿನ್ನಾಭರಣ ದೋಚುತ್ತಿದ್ದರು. ನಂತರದ ದಿನಗಳಲ್ಲಿ ಕಾಲ ಬದಲಾದಂತೆ ತಂತ್ರeನ ಸಹ ಬದಲಾಯಿತು. ಜನರು ಹಣವನ್ನು ಮನೆ ಯಲ್ಲಿ ಇಡುವ ಬದಲು ಬ್ಯಾಂಕುಗಳಲ್ಲಿ ಇಡಲು ಆರಂಭಿಸಿದರು. ಜೊತೆಗೆ ಎಟಿಎಂ ಕಾರ್ಡ್ ಬಳಸಲು ಆರಂಭಿಸಿ ದರು. ಈಗ ಕಳ್ಳರು ಸಹ ತಮ್ಮ ಕಳ್ಳತನದ ಮಾದರಿ ಬದಲಾಯಿಸಿ, ಬ್ಯಾಂಕುಗಳನ್ನು ದೋಚುವ ಬದಲು ಎಟಿಎಂಗಳನ್ನು ಕೊಳ್ಳೆ ಹೊಡೆಯಲು ಆರಂಭಿಸಿದರು. ಪ್ರಸ್ತುತ ೪ಜಿ ಮತ್ತು ೫ಜಿ ಯುಗವಾಗಿದ್ದು, ನಮ್ಮ ದಿನನಿತ್ಯದ ವಹಿವಾಟುಗಳೆಲ್ಲ ಮೊಬೈಲ್ಗಳಲ್ಲಿನ ವಿವಿಧ ಅಪ್ಲಿಕೇಶನ್ಗಳ ಮೂಲಕವೇ ನಡೆಯುತ್ತವೆ. ಹೀಗಾಗಿ, ಈಗ ಕಳ್ಳರೂ ಸ್ಮಾರ್ಟ್ ಆಗಿ ಕಳ್ಳತನ ಮಾಡುತ್ತಿದ್ದಾರೆ. ಆ ಕಳ್ಳತನದ ಹೆಸರೇ ಸೈಬರ್ ಕ್ರೈಂ ಅಥವಾ ಸೈಬರ್ ಅಟ್ಯಾಕ್.

೪ಜಿ ಯುಗ ಆರಂಭವಾದಾಗಿನಿಂದ ಪ್ರತಿದಿನವೂ ಸೈಬರ್ ಕ್ರೈಂ ಅಥವಾ ಸೈಬರ್ ಅಟ್ಯಾಕ್ಗಳು ಹೆಚ್ಚಾಗಿ ಸಂಭವಿ ಸುತ್ತಿವೆ. ಕಳೆದ ವಾರಗಳ ಹಿಂದೆ ಚಿಕ್ಕಬಳ್ಳಾಪುರ ಜಿಯ ಶಿಡ್ಲಘಟ್ಟದಲ್ಲಿ ಯುವತಿಯೊಬ್ಬಳು ಸೈಬರ್ ಕ್ರೈಂ ವಂಚನೆಗೆ ಒಳಗಾಗಿ ೮೨,೦೦೦ ಹಣ ಕಳೆದುಕೊಂಡಿದ್ದಳು. ಇದೇ ಫೆಬ್ರವರಿ ತಿಂಗಳಲ್ಲಿ ಬೆಂಗಳೂರಿನಲ್ಲಿ ಗೃಹಿಣಿಯೊಬ್ಬರು ಸೈಬರ್ ಕಳ್ಳರ ಕರೆಗೆ ಹೆದರಿ ೩೯ ಲಕ್ಷ  ಹಣ ಕಳೆದುಕೊಂಡಿದ್ದರು. ಕಳೆದ ಎರಡು ವರ್ಷಗಳ ಹಿಂದೆ ದೆಹಲಿಯ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲರ ಮಗಳು ಸಹ ಸೈಬರ್ ಕಳ್ಳರ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡಿದ್ದರು. ವಿವಿಐಪಿ ಮಕ್ಕಳ ಕಥೆಯೇ ಹೀಗಾದರೆ ಸಾಮಾನ್ಯ ಜನರ ಪರಿಸ್ಥಿತಿ ಹೇಗಿರುತ್ತದೆ?

ಸೈಬರ್ ಕಳ್ಳರು ಈಗ ತುಂಬಾ ಜಾಣ ರೀತಿಯಲ್ಲಿ ಕಳ್ಳತನ ಮಾಡುತ್ತಿದ್ದು, ನಕಲಿ ಸಿಮ್ ಕಾರ್ಡ್ಗಳನ್ನು ಬಳಸಿ ಜನರಿಗೆ ಕರೆ ಮಾಡಿ ಹಣ ಲಪಟಾಯಿಸುತ್ತಿದ್ದಾರೆ. ೨೦೨೨ರ ಮಾಹಿತಿ ಪ್ರಕಾರ ಕರ್ನಾಟಕದಲ್ಲಿ ಪ್ರತಿನಿತ್ಯ ಸರಾಸರಿ ಒಂದು ಕೋಟಿ ರೂಪಾಯಿ ಹಣ ಸೈಬರ್ ವಂಚಕರ ಪಾಲಾಗುತ್ತಿದೆ. ಒಟ್ಟಾರೆ, ೨೦೨೨ರಲ್ಲಿ ಕರ್ನಾಟಕದಲ್ಲಿ ೩೬೩ ಕೋಟಿ ರೂಪಾಯಿ ಸೈಬರ್ ವಂಚಕರ ಪಾಲಾಗಿದೆ. ಒಟ್ಟಾರೆ, ಭಾರತದಲ್ಲಿ ೨೦೨೪ರಲ್ಲಿ ೧.೭ ಬಿಲಿಯನ್ ರೂಪಾಯಿಗಳಷ್ಟು ( ೨೨,೮೧೨ ಕೋಟಿ ರೂಪಾಯಿ ) ಹಣ ಸೈಬರ್ ವಂಚಕರಿಂದ ಜನರು ಕಳೆದುಕೊಂಡಿದ್ದಾರೆ. ಕಳೆದ ನಾಲ್ಕು ವರ್ಷ ಗಳಿಂದ ೩೩,೧೬೫ ಕೋಟಿ ರೂಪಾಯಿಗಳಷ್ಟು ಕಳ್ಳರ ಕೈ ಸೇರಿದೆ. ಸರ್ಕಾರಿ ಮಾಹಿತಿ ಪ್ರಕಾರ ಟಯರ್ -೨, ಟಯರ್ -೩ ನಗರಗಳಲ್ಲಿಯೇ ಸೈಬರ್ ಕಳ್ಳರ ಹಾವಳಿ ಹೆಚ್ಚಾಗಿದೆ.

ಕೇಂದ್ರ ಗೃಹ ಸಚಿವಾಲಯದ ಪ್ರಕಾರ ೨೦೨೩ರಲ್ಲಿ ೧೧,೩೭,೨೩೪ ಸೈಬರ್ ದೂರು ದಾಖಲಾಗಿದ್ದರೆ, ೨೦೨೪ರಲ್ಲಿ ಈ ದೂರುಗಳ ಪ್ರಮಾಣ ೧೭,೧೦,೫೦೫ಕ್ಕೆ ಏರಿಕೆಯಾಗಿದೆ. ಭಾರತದಲ್ಲಿ ಈ ಸೈಬರ್ ಕೃತ್ಯಗಳ ಹಾಟ್ ಸ್ಪಾಟ್ಗ ಳೆಂದರೆ ಜಾರ್ಖಂಡ್ನ ಡಿಯೊಘರ್, ಜಾಮ್ತಾರಾ, ರಾಜಸ್ಥಾನದ ಡೀಗ್, ಆಳ್ವಾರ, ಜೈಪುರ ಮತ್ತು ಜೋದ್ಪುರ, ಹರಿಯಾಣದ ನೂಹ್, ಉತ್ತರಪ್ರದೇಶದ ಗೌತಮ ಬುದ್ಧ ನಗರ, ಮಥುರಾ, ಪಶ್ಚಿಮಬಂಗಾಳದ ಕೋಲ್ಕತ್ತಾ, ಗುಜರಾತ್ನ ಸೂರತ್, ಬಿಹಾರದ ನಳಂದಾ ಮತ್ತು ನವಾಡ, ಕೇರಳದ ಕೊಹಿಕೊಡ್ ಮತ್ತು ಕರ್ನಾಟಕದಲ್ಲಿ ಬೆಂಗಳೂರು ಆಗಿವೆ.

೨೦೨೪ರ ಮಾಹಿತಿ ಪ್ರಕಾರ ಬೆಂಗಳೂರು ನಗರ ಒಂದರ ಪ್ರತಿದಿನ ಸರಾಸರಿ ೪೮ ಸೈಬರ್ ಪ್ರಕರಣ ದಾಖಲಾಗಿದ್ದು, ಒಟ್ಟಾರೆ ೧೭,೫೬೦ ಪ್ರಕರಣಗಳು ದಾಖಲಾಗಿವೆ. ಒಟ್ಟಾರೆ, ೨೦೨೪ರಲ್ಲಿ ಬೆಂಗಳೂರಿನ ಜನ ಸೈಬರ್ ವಂಚನೆ ಯಿಂದ ೧,೯೮೮.೪ ಕೋಟಿ ಹಣ ಕಳೆದುಕೊಂಡಿದ್ದಾರೆ. ಬೆಂಗಳೂರು ನಗರದಲ್ಲಿ ಸೈಬರ್ ವಂಚನೆಗೆ ಒಳಗಾಗಿದ್ದ ಮೊತ್ತದಲ್ಲಿ ೨೦೨೩ರಲ್ಲಿ ೬೩೨ ಕೋಟಿ ರೂಪಾಯಿ ಹಣವನ್ನು ಪೊಲೀಸರು ನಾಗರಿಕರಿಗೆ ಪುನಃ ತಲುಪಿಸಿದ್ದರೆ, ೨೦೨೪ರಲ್ಲಿ ಮಾತ್ರ ಈ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದ್ದು, ೧೩೯ ಕೋಟಿ ರೂಪಾಯಿಗಳನ್ನು ಮಾತ್ರ ಪೊಲೀಸರು ಪತ್ತೆಹಚ್ಚಿ ವಾರಸುದಾರರಿಗೆ ತಲುಪಿಸಿದ್ದಾರೆ.

ಸೈಬರ್ ಅಪರಾಧಗಳು ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಪ್ರಪಂಚಾದ್ಯಂತ ಸೈಬರ್ ಅಪರಾಧಗಳು ೨೦೨೩ಕ್ಕೆ ಹೋಲಿಸಿದರೆ ೨೦೨೪ರಲ್ಲಿ ಶೇಕಡಾ ೭೫ ಹೆಚ್ಚಾಗಿವೆ. ೨೦೨೪ರಲ್ಲಿ ಪ್ರಪಂಚಾದ್ಯಂತ ೪.೮೮ ಮಿಲಿಯನ್ ಹಣವನ್ನು ಈ ಸೈಬರ್ ಕೃತ್ಯಗಳಲ್ಲಿ ಜನ ಕಳೆದುಕೊಂಡಿದ್ದಾರೆ. ಪ್ರತಿದಿನ ಸರಾಸರಿ ೧೯೪ ಸೈಬರ್ ಅಪರಾಧದ ಪ್ರಕರಣಗಳು ದಾಖಲಾಗಿವೆ. ಶೇಕಡಾ ೮೮ರಷ್ಟು ಸೈಬರ್ ಪ್ರಕರಣಗಳು ಸ್ವಯಂಕೃತ ಅಪರಾಧದಿಂದಲೇ ಸಂಭವಿಸಿದವುಗಳಾಗಿವೆ.

೨೦೨೪ರ ನ್ಯಾಷನಲ್ ಸೈಬರ್ ಸೆಕ್ಯೂರಿಟಿ ಇಂಡೆಕ್ಸ್ ಪ್ರಕಾರ ಅತಿ ಹೆಚ್ಚು ಸೈಬರ್ ಅಪರಾಧಗಳಿಗೆ ಒಳಗಾದ ರಾಷ್ಟ್ರಗಳೆಂದರೆ ಬೊಲಿವಿಯಾ, ಹೊಂಡುರಸ್, ವೆನಿಜುವೆಲಾ, ಆಲ್ಜೀರಿಯಾ, ಈಕ್ವೆಡಾರ್, ಕಜಕಿಸ್ತಾನ, ಶ್ರೀಲಂಕಾ, ಪನಾಮ, ಆರ್ಮೇನಿಯ, ಪಾಕಿಸ್ತಾನಗಳಾಗಿವೆ. ಕಡಿಮೆ ಸೈಬರ್ ಅಪರಾಧಗಳಿಗೆ ಒಳಪಟ್ಟಂತಹ ರಾಷ್ಟ್ರಗಳೆಂದರೆ ಫಿನ್ಲ್ಯಾಂಡ, ನಾರ್ವೆ, ಡೆನ್ಮಾರ್ಕ್, ಆಸ್ಟ್ರೇಲಿಯಾ, ಇಂಗ್ಲೆಂಡ್, ಸ್ಪೀಡನ್, ಆಸ್ಟ್ರೀಯಾ, ಜಪಾನ್, ಅಮೇರಿಕಾ, ಕೆನಡಾ.
ಭಾರತ ಈ ಸೈಬರ್ ಅಪರಾಧಗಳು ಮತ್ತು ಸೈಬರ್ ದಾಳಿಗಳನ್ನು ತಡೆಗಟ್ಟಲು ಕ್ರಮ ಹಾಗೂ ವಿವಿಧ ದೇಶ ಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಕಳೆದ ಡಿಸೆಂಬರ್ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೈಬರ್ ಕ್ರೈಂಗಳ ಕುರಿತು ಸಚಿವಾಲಯದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸೈಬರ್ ಪ್ರಕರಣಗಳ ಕುರಿತು ದೂರು ದಾಖಲಾದರೆ ಇ- ಎಫ್ ಐಆರ್ ವ್ಯವಸ್ಥೆ ಜಾರಿಗೊಳಿಸಬೇಕೆಂದು ತಿಳಿಸಿದ್ದಾರೆ. ಅಲ್ಲದೆ, ನಾಗರಿಕರು ಎನ್ಸಿಆರ್ಪಿಯಲ್ಲಿ ತಮ್ಮ ದೂರುಗಳನ್ನು ದಾಖಲಿಸ ಬೇಕೆಂದು ತಿಳಿಸಿದ್ದಾರೆ. ಅಲ್ಲದೆ, ಕಳೆದ ನವೆಂಬರ್ ೧೮ರಿಂದ ೨೯ರವರೆಗೆ ಭಾರತ್ ಸೈಬರ್ ಸೆಕ್ಯೂರಿಟಿ ಎಕ್ಸಸೈಜ್ ೨೦೨೪ ಸಭೆ ಆಯೋಜಿಸಿ ಸೈಬರ್ ಅಪರಾಧಗಳನ್ನು ತಡೆಯಲು ತಾಂತ್ರಿಕ ಸಲಹೆಗಳನ್ನು ಗೃಹ ಇಲಾಖೆಯ ಅಧಿಕಾರಿಗಳಿಗೆ ನೀಡಲಾಗಿದೆ.

ಅಲ್ಲದೆ, ೨೦೨೦ರ ಅಕ್ಟೋಬರ್ನಲ್ಲಿ ಜಪಾನ್ನೊಂದಿಗೆ, ೨೦೨೦ರ ಜುಲೈನಲ್ಲಿ ಇಸ್ರೇಲ್ನೊಂದಿಗೆ, ೨೦೨೪ರ ಅಕ್ಟೋಬರ್ನಲ್ಲಿ ಇಟಲಿಯೊಂದಿಗೆ ದ್ವಿಪಕ್ಷೀಯ ಸೈಬರ್ ಒಪ್ಪಂದ, ೨೦೧೬ರ ಅಕ್ಟೋಬರ್ನಲ್ಲಿ ರಷ್ಯಾದೊಂದಿಗೆ, ೨೦೧೧ರ ಜುಲೈನಲ್ಲಿ ಅಮೇರಿಕಾದೊಂದಿಗೆ, ೨೦೨೫ರ ಜನವರಿಯಲ್ಲಿ ಇಂಡೋನೇಷ್ಯಾದೊಂದಿಗೆ ಸೈಬರ್ ಅಪರಾಧಗಳನ್ನು ತಡೆಯಲು ಭಾರತ ಒಪ್ಪಂದ ಮಾಡಿಕೊಂಡಿದೆ. ಜಾಗತಿಕ ಮಟ್ಟದಲ್ಲಿ ಜುಲೈ ೨೦೨೩ರಲ್ಲಿ ಮಲೇಷ್ಯಾ, ಸಿಂಗಾಪುರ ಮತ್ತು ಜಪಾನ್ ರಾಷ್ಟ್ರಗಳು ಜಂಟಿಯಾಗಿ ರಚಿಸಿಕೊಂಡಿವೆ.

ಶಶಿಕುಮಾರ್ ಕೆ.
ಲೇಖಕ
ಮೊ:  7829676989   

Related Posts

Leave a Reply

Your email address will not be published. Required fields are marked *