“ವಿಪಕ್ಷಗಳು ನಮ್ಮನ್ನು, ನಾವು ವಿಪಕ್ಷಗಳನ್ನು ಟೀಕೆ ಮಾಡುವುದು ಸ್ವೀಕಾರರ್ಹ. ಆದರೆ ಎಲ್ಲದಕ್ಕೂ ಒಂದು ಮಿತಿ ಎಂಬುದು ಇರುತ್ತದೆ. ವಿಪಕ್ಷಗಳು ಈ ದೇಶದ ಕಾನೂನನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ” ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ವಿಧಾನಸೌಧದ ಬಳಿ ಮಾಧ್ಯಮಗಳಿಗೆ ಶುಕ್ರವಾರ ಪ್ರತಿಕ್ರಿಯೆ ನೀಡಿದರು. ಆಧಾರರಹಿತ ಪೋಸ್ಟ್ ಮಾಡಿರುವ ಬಿಜೆಪಿ ವಿರುದ್ದ ಕೆಪಿಸಿಸಿಯಿಂದ ದೂರು ನೀಡಿರುವ ಬಗ್ಗೆ ಕೇಳಿದಾಗ, “ನಾವು ಸಹ ನಮ್ಮ ಪಕ್ಷದವರಿಗೆ ಕಾನೂನಿಗೆ ವಿರುದ್ಧವಾಗಿ ಯಾವುದೇ ಟೀಕೆ ಮಾಡಬೇಡಿ ಎಂದು ಸಂದೇಶ ನೀಡಿದ್ದೇನೆ. ಯಾವುದೇ ಪಕ್ಷ ಅಥವಾ ವ್ಯಕ್ತಿ ತನಗೆ ಇರುವ ಸ್ವಾತಂತ್ರ್ಯವನ್ನು ಹೀಗೆ ದುರುಪಯೋಗ ಮಾಡಿಕೊಳ್ಳಬಾರದು. ಅದಕ್ಕೆ ಕಾನೂನು ಕ್ರಮದ ಮೊರೆ ಹೋಗಬೇಕಾಯಿತು. ಕಾನೂನು ತನ್ನ ಕ್ರಮ ಕೈಗೊಳ್ಳಲಿದೆ” ಎಂದರು.
ಕೆಪಿಸಿಸಿ ಸಾಮಾಜಿಕ ಜಾಲತಾಣದಲ್ಲಿ ನಿಮ್ಮನ್ನು ಬ್ರಾಂಡ್ ಎಂದು ಟ್ವೀಟ್ ಮಾಡಿದ್ದು, ಅಧಿಕಾರ ಹಂಚಿಕೆ ಗುದ್ದಾಟಕ್ಕೆ ಈ ರೀತಿ ಬಿಂಬಿಸಲಾಗಿದೆ ಎಂಬ ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ, “ಅವರು ಏನು ಟೀಕೆ ಮಾಡುತ್ತಾರೋ ಮಾಡಲಿ” ಎಂದರು.
ಬಿಜೆಪಿ ತನ್ನ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ಸಿಎಂ, ಡಿಸಿಎಂ ಹಾಗೂ ಸಚಿವರ ಫೋಟೋಗಳನ್ನು ಬಳಸಿ ‘ಸ್ಕ್ಯಾಮ್ ಲಾರ್ಡ್ ಎಂಬ ವಿವಾದಾತ್ಮಕ ಶೀರ್ಷಿಕೆಯಡಿ ಪೋಸ್ಟ್ ಬಿಡುಗಡೆ ಮಾಡಿತ್ತು. ‘ಕರ್ನಾಟಕವನ್ನು ಹಗಲಿರುಳು ಲೂಟಿ ಹೊಡೆಯು ತ್ತಿರುವ ಸ್ಕ್ಯಾಮ್ ಸಾಮ್ರಾಜ್ಯದ ಅಸಲಿ ಕಥೆ’ ಎಂದು ಬರೆದು ನಮ್ಮ ನಾಯಕರ ಫೋಟೋಗಳನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ನಾಯಕರು ಕಿಡಿಕಾರಿದ್ದಾರೆ.
ಇದು ಕೇವಲ ರಾಜಕೀಯ ಟೀಕೆಯಲ್ಲ, ಬದಲಾಗಿ ಸಂವಿಧಾನಾತ್ಮಕ ಹುದ್ದೆಯಲ್ಲಿರುವವರ ವ್ಯಕ್ತಿತ್ವ ಹರಣ ಮಾಡುವ ವ್ಯವಸ್ಥಿತ ಸಂಚು ಎಂದು ಕೆಪಿಸಿಸಿ ವಕೀಲರ ತಂಡ ಆರೋಪಿಸಿದೆ. ಸೈಬರ್ ಕ್ರೈಂ ಪೊಲೀಸರು ಕಾಂಗ್ರೆಸ್ ವಕೀಲರ ತಂಡ ನೀಡಿದ ದೂರನ್ನು ಅಧಿಕೃತವಾಗಿ ಸ್ವೀಕರಿಸಿದೆ. ಪೋಸ್ಟ್‌ನ ಮೂಲ ಮತ್ತು ಹಿಂದಿರುವ ಉದ್ದೇಶದ ಬಗ್ಗೆ ತಾಂತ್ರಿಕ ತನಿಖೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.


