Wednesday, February 11, 2026
Menu

ಕಾರಿನ ಇಎಂಐಗಾಗಿ ದೊಡ್ಡಮ್ಮ ಕೆಲಸಕ್ಕಿದ್ದ ಬೆಂಗಳೂರಿನ ಮನೆಯಲ್ಲೆ ಕಳವುಗೈದು ಅರೆಸ್ಟ್‌ ಆದ ಯುವಕ

ಕಾರಿನ ಇಎಂಐ ಕಟ್ಟಲು ಹಣಕ್ಕಾಗಿ ಯುವಕನೊಬ್ಬ ದೊಡ್ಡಮ್ಮ ಕೆಲಸ ಮಾಡುತ್ತಿದ್ದ ಬೆಂಗಳೂರಿನ ಬಸವನಗುಡಿಯಲ್ಲಿರುವ ಮನೆಯಲ್ಲೇ ಕಳ್ಳತನ ಮಾಡಿ ಈಗ ಅರೆಸ್ಟ್‌ ಆಗಿದ್ದಾನೆ. ಉತ್ತರಹಳ್ಳಿ ನಿವಾಸಿ ಶರತ್ ಕುಮಾರ್ (31) ಬಂಧಿತ ಆರೋಪಿ.

ಬಸವನಗುಡಿಯ ತ್ಯಾಗರಾಜನಗರದ ಮನೆಯೊಂದರಲ್ಲಿ ಆರೋಪಿಯ ದೊಡ್ಡಮ್ಮ 25 ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಆಕೆಗೆ ಮನೆ ಮಾಲೀಕರು ಅದೇ ಮನೆಯಲ್ಲಿ ಉಳಿಯಲು ಅವಕಾಶ ಕೊಟ್ಟಿದ್ದರು. ಕಳೆದ ವರ್ಷ ಅಕ್ಟೋಬರ್ 22ರಂದು ಮನೆ ಮಾಲೀಕರು ಹೊರಗೆ ತೆರಳಿದ್ದ ವೇಳೆ ದೊಡ್ಡಮ್ಮನ ಗಮನಕ್ಕೆ ಬಾರದಂತೆ ಆರೋಪಿ ಮನೆಗಳ್ಳತನ ಮಾಡಿದ್ದ.

ಮನೆ ಮಾಲಕಿ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದು, ಮನೆಕೆಲಸದಾಕೆ ಇದೇ ಮನೆಯಲ್ಲಿ ಇಪ್ಪತ್ತೈದು ವರ್ಷಗಳಿಂದ ಕೆಲಸ ಮಾಡುತ್ತಿರುವ ನಂಬಿಕೆಯಿಂದ ಮನೆಯ ಮತ್ತೊಂದು ಬೀಗದ ಕೀಯನ್ನು ನೀಡಿದ್ದರು. ಆರೋಪಿ ಶರತ್ ದೊಡ್ಡಮ್ಮನಿಗೆ ಊಟ ನೀಡಲು ಆಗಾಗ ಮಾಲೀಕರ ಮನೆಗೆ ಬರುತ್ತಿದ್ದ. ಮನೆ ಮಾಲೀಕರು ಇಲ್ಲದಿರುವುದನ್ನ ಗಮನಿಸಿ ದೊಡ್ಡಮ್ಮನಿಗೆ ತಿಳಿಯದಂತೆ ಬೀಗದ ಕೀ ಪಡೆದು ಕಳವು ಮಾಡಿದ್ದ.

ಚಿನ್ನಾಭರಣ ಕಳವಾಗಿರುವುದು ತಿಳಿದ ಮನೆ ಮಾಲೀಕರು ಬಸವನಗುಡಿ ಠಾಣೆಗೆ ದೂರು ನೀಡಿದ್ದರು. ಮನೆಗೆಲಸದಾಕೆಯ ವಿಚಾರಣೆ ನಡೆಸಿದಾಗ ಕೃತ್ಯದ ಬಗ್ಗೆ ಗೊತ್ತಿಲ್ಲ ಎಂದಿದ್ದರು. ಆಕೆಯ ಮನೆಯಲ್ಲಿದ್ದ ಆರೋಪಿಯನ್ನು ವಿಚಾರಣೆ ನಡೆಸಿದಾಗ ಕಾರಿನ ಇಎಂಐ ಕಟ್ಟಲಿಕ್ಕೆ ದುಡ್ಡಿರಲಿಲ್ಲ, ಹೀಗಾಗಿ ಕೃತ್ಯವೆಸಗಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ಆರೋಪಿ ಅರೆಸ್ಟ್ ಆದ ನಂತರವೇ ಆತನ ದೊಡ್ಡಮ್ಮನಿಗೂ ವಿಷಯ ಗೊತ್ತಾಗಿರುವುದು, ಪ್ರಕರಣದಲ್ಲಿ ಆಕೆಯ ಪಾತ್ರವಿಲ್ಲ ಎಂಬುದು ತನಿಖೆಯಲ್ಲಿ ದೃಢಪಟ್ಟಿದೆ. ಆರೋಪಿ ಶರತ್‌ನನ್ನು ಬಸವನಗುಡಿ ಪೊಲೀಸರು ಬಂಧಿಸಿದ್ದಾರೆ. 36 ಲಕ್ಷ ರೂ. ಮೌಲ್ಯದ 241 ಗ್ರಾಂ ಚಿನ್ನ, 2.8 ಕೆ.ಜಿ ಬೆಳ್ಳಿ ಹಾಗೂ 1.30 ಲಕ್ಷ ನಗದು ವಶಕ್ಕೆ ಪಡೆದಿದ್ದಾರೆ.

Related Posts

Leave a Reply

Your email address will not be published. Required fields are marked *