Menu

ಆನ್‌ಲೈನ್‌ ಬೆಟ್ಟಿಂಗ್‌ ಗೆ ಸಾಲ ತೀರಿಸಲು ಕೆಲಸ ಮಾಡುತ್ತಿದ್ದ ಕಂಪನಿಯಲ್ಲೇ ಕಳವು; ಖದೀಮನ ಸೆರೆ

Cyber fraud

ಬೆಂಗಳೂರು:ಆನ್‌ಲೈನ್‌ ಬೆಟ್ಟಿಂಗ್‌ನಿಂದ ಹಣ ಕಳೆದುಕೊಂಡು ಮಾಡಿದ್ದ ಸಾಲ ತೀರಿಸಲು ಕೆಲಸ ಮಾಡುತ್ತಿದ್ದ ಕಂಪನಿಯಲ್ಲೇ ಕಳ್ಳತನ ಮಾಡಿದ್ದ ಉದ್ಯೋಗಿಯನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿ ಮೌಲ್ಯ 19 ಲಕ್ಷ ಮೌಲ್ಯದ 30 ಹೆಚ್‌.ಪಿ ಕಂಪನಿಯ ಲ್ಯಾಪ್‌ಟಾಪ್‌ಗಳು ಹಾಗೂ 5 ಐ-ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಮೂರು ವರ್ಷಗಳಿಂದ ಎಲೆಕ್ಟ್ರಾನಿಕ್‌ ಸಿಟಿಯ 2ನೇ ಹಂತದಲ್ಲಿರುವ ಕಂಪನಿಯಲ್ಲಿ ಸ್ಟೋರ್‌ ರೂಂ ಇನ್‌ಚಾರ್ಜ್‌ ಆಗಿ ಕೆಲಸ ಮಾಡಿಕೊಂಡಿದ್ದ ಉದ್ಯೋಗಿಯು 56 ಲ್ಯಾಪ್‌ಟಾಪ್‌ಗಳು ಹಾಗೂ 16 ಐ-ಫೋನ್‌ಗಳನ್ನು ಕಳವು ಮಾಡಿದ್ದಾರೆಂದು ಕಂಪನಿಯ ಸೀನಿಯರ್‌ ಡೈರೆಕ್ಟರ್‌ ದೂರು ನೀಡಿದ್ದರು.

ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಪೊಲೀಸರು ಎಲೆಕ್ಟ್ರಾನಿಕ್‌ಸಿಟಿ ಪಿ.ಜಿಯೊಂದರ ಬಳಿ ಸ್ಟೋರ್‌ ರೂಂ ಇನ್‌ಚಾರ್ಜ್‌ ಆಗಿ ಕೆಲಸ ಮಾಡಿಕೊಂಡಿದ್ದ ಆರೋಪಿಯನ್ನು ನಾಲ್ಕು ಲ್ಯಾಪ್‌ಟಾಪ್‌ಗಳು ಹಾಗೂ ಒಂದು ಐ-ಫೋನ್‌ ಸಮೇತ ಬಂಧಿಸಿದ್ದಾರೆ. ನಂತರ ಆರೋಪಿಯನ್ನು ವಿಚಾರಣೆಗೊಳಪಡಿಸಿದಾಗ ಈ ಹಿಂದೆ ಒಂದೂವರೆ ವರ್ಷದಿಂದ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಲ್ಯಾಪ್‌ಟಾಪ್‌ಗಳು ಹಾಗೂ ಮೊಬೈಲ್‌ ಫೋನ್‌ಗಳನ್ನು ಹಂತ ಹಂತವಾಗಿ ಕಳುವು ಮಾಡಿರುವುದಾಗಿ ಹೇಳಿದ್ದಾನೆ.

ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಿದಾಗ, ಆನ್‌ಲೈನ್‌ ಬೆಟ್ಟಿಂಗ್‌ ಆಟವಾಡಿ ಹಣವನ್ನು ಕಳೆದುಕೊಂಡು ಸಾಲ ಮಾಡಿಕೊಂಡಿದ್ದು, ಸಾಲ ತೀರಿಸುವ ಸಲುವಾಗಿ ಸ್ಟೋರ್‌ರೂಂನಿಂದ ಲ್ಯಾಪ್‌ಟಾಪ್‌ಗಳು ಹಾಗೂ ಮೊಬೈಲ್‌ ಫೋನ್‌ಗಳನ್ನು ಕಳವು ಮಾಡಿದ್ದಾಗಿ ಹೇಳಿದ್ದಾನೆ.

ಕಳವು ಮಾಡಿದ್ದ ಕೆಲವು ಲ್ಯಾಪ್‌ಟಾಪ್‌ ಮತ್ತು ಮೊಬೈಲ್‌ ಫೋನ್‌ಗಳನ್ನು ಪರಿಚಯವಿರುವವರಿಗೆ ಮಾರಾಟ ಮಾಡಿ, ಉಳಿದ ಲ್ಯಾಪ್‌ಟಾಪ್‌ ಮತ್ತು ಮೊಬೈಲ್‌ ಫೋನ್‌ಗಳನ್ನು ಪಿಜಿಯಲ್ಲಿಟ್ಟಿರುವುದಾಗಿ ತಿಳಿಸಿದ್ದಾನೆ. ಆರೋಪಿಯಿಂದ ಒಟ್ಟಾರೆ 30 ಹೆಚ್‌.ಪಿ ಕಂಪನಿಯ ಲ್ಯಾಪ್‌ಟಾಪ್‌ಗಳು ಹಾಗೂ 5 ಐ-ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇವುಗಳ ಒಟ್ಟು ಮೌಲ್ಯ 19 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ. ಕಾರ್ಯಾಚರಣೆಯನ್ನು ಇನ್‌್ಸಪೆಕ್ಟರ್‌ ಸತೀಶ್‌ ಹಾಗೂ ಇತರೆ ಸಿಬ್ಬಂದಿ ತಂಡ ಕೈಗೊಂಡಿತ್ತು.

Related Posts

Leave a Reply

Your email address will not be published. Required fields are marked *