Thursday, January 08, 2026
Menu

ರಾಷ್ಟ್ರೀಯ ನಾಟಕೋತ್ಸವ ಭಿತ್ತಿಪತ್ರ ಬಿಡುಗಡೆಗೊಳಿಸಿದ ರಂಗಾಯಣ ನಿರ್ದೇಶಕ ಸತೀಶ್ ತಿಪಟೂರ್

rangayana

ಮೈಸೂರು: ಮೈಸೂರು ರಂಗಾಯಣದ ಪ್ರತಿಷ್ಠಿತ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಬಹುರೂಪಿ ಬಾಬಾ ಸಾಹೇಬ್- ಸಮತೆಡೆಗೆ ನಡಿಗೆ ಆಶಯದಲ್ಲಿ ಜ. 11ರಿಂದ 18ರವರೆಗೆ ನಡೆಸಲಾಗುವುದು. ನಾಟಕ, ಸಂಗೀತ, ಜಾನಪದ, ಕಲೆ, ಚಲನಚಿತ್ರಗಳಲ್ಲಿ ಅಂಬೇಡ್ಕರರ ಸಮಗ್ರ ವ್ಯಕ್ತಿತ್ವ ಪ್ರದರ್ಶಿಸಲಾಗುತ್ತಿದೆ ಎಂದು ರಂಗಾಯಣ ನಿರ್ದೇಶಕ ಸತೀಶ್ ತಿಪಟೂರ್ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಮೈಸೂರು ರಂಗಾಯಣ 2001ರಿಂದ ಆರಂಭವಾದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಬೆಳ್ಳಿ ಮಹೋತ್ಸವ ಆಚರಿಸುತ್ತಿದೆ. ಅರ್ಥಪೂರ್ಣ ಶೀರ್ಷಿಕೆಯೊಂದಿಗೆ ಆಚರಿಸುವುದು ಸಂಪ್ರದಾಯ. ಈ ವರ್ಷದ ಆಶಯ ಬಾಬಾ ಸಾಹೇಬರಿಗೆ ಗೌರವ ಸಲ್ಲಿಸುವುದಾಗಿದೆ ಎಂದರು.

ಅಸ್ಸಾಂ ಹಿರಿಯ ನಟಿಗೆ ರಂಗಗೌರವ: ಬಹುರೂಪಿ ಬೆಳ್ಳಿಹಬ್ಬದ ಅಂಗವಾಗಿ ಬೆಳ್ಳಿ ಬಹುರೂಪಿ ರಂಗಗೌರವವನ್ನು ಭಾರತ ರಂಗಭೂಮಿಯ ಹೆಸರಾಂತ ಹಿರಿಯ ನಟಿ ಪದ್ಮಶ್ರೀ ಹೈಸ್ನಾಂ ಸಾಬಿತ್ರಿ ಅವರಿಗೆ ನೀಡಿ ಸನ್ಮಾನಿಸಲಾಗುತ್ತಿದೆ. ಸಾಬಿತ್ರಿ ಅವರ ಅಭಿನಯ ರಂಗಭೂಮಿ ಒಂದು ಅನನ್ಯ ಅಭಿವ್ಯಕ್ತಿಯ ಮಾಧ್ಯಮವಾಗಿದೆ. ಪ್ರಸ್ತುತ ಅವರು ಕಲಾಕ್ಷೇತ್ರ ಮಣಿಪುರ ತಂಡದ ಮಾತೃ ಗುರು ಆಗಿದ್ದಾರೆ ಎಂದರು.

ಸೆ. 9ರಂದು ಬೆಳಗ್ಗೆ 10.30ಕ್ಕೆ ಭೂಮಿಗೀತದಲ್ಲಿ ನಗರಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್ ಬೀದಿನಾಟಕಕ್ಕೆ ಚಾಲನೆ ನೀಡಲಿದ್ದಾರೆ. ನ. 11ರಂದು ಬೆಳಗ್ಗೆ 10.30ಕ್ಕೆ ಬಹುರೂಪಿ ಚಲನಚಿತ್ರೋತ್ಸವಕ್ಕೆ ಸಾಹಿತಿ ಬರಗೂರು ರಾಮಚಂದ್ರಪ್ಪ ಚಾಲನೆ ನೀಡಲಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಡಾ.ಕೆ.ವಿ.ನಾಗರಾಜಮೂರ್ತಿ, ರಂಗ ಸಮಾಜದ ಸದಸ್ಯ ಎಂ.ಎಸ್.ಜಹಾಂಗೀರ್ ಭಾಗವಹಿಸಲಿದ್ದಾರೆ. ಸೆ. 11ರಂದು ಸಂಜೆ 6 ಗಂಟೆಗೆ ಕಿಂದರಿಜೋಗಿ ಆವರಣದಲ್ಲಿ ಜನಪದ ಉತ್ಸವಕ್ಕೆ ಕರ್ನಾಕ ಬಯಲಾಟ ಅಕಾಡೆಮಿ ಅಧ್ಯಕ್ಷ ಡಾ.ದುರ್ಗಾದಾಸ್ ಚಾಲನೆ ನೀಡುವರು.

೧೨ರಂದು ನಾಟಕೋತ್ಸವ ಉದ್ಘಾಟನೆ: ಜ. 12ರಂದು ಸಂಜೆ 5.30೦ಕ್ಕೆ ಬಹುರೂಪಿ ಬಾಬಾ ಸಾಹೇಬ ನಾಟಕೋತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ರಂಗೋತ್ಸವಕ್ಕೆ ಹೈಸ್ನಾಂ ಸಾವಿತ್ರಿ ದೇವಿ ಚಾಲನೆ ನೀಡುವರು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಪುಸ್ತಕ, ಕರಕುಶಲ ಮೇಳ ಉದ್ಘಾಟಿಸುವರು. ಶಿವರಾಜ್ ಎಸ್.ತಂಗಡಗಿ ರಂಗಸಂಚಿಕೆ ಬಿಡುಗಡೆ ಮಾಡುವರು. ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬಾಬಾ ಸಾಹೇಬ್ ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸುವರು. ಸಂಸದ ಸುನಿಲ್ ಬೋಸ್ ಚಿತ್ರಕಲಾ ಪ್ರದರ್ಶನ ಅನಾವರಣ ಮಾಡುವರು. ಶಾಸಕ ಕೆ.ಹರೀಶ್‌ಗೌಡ ಅಧ್ಯಕ್ಷತೆ ವಹಿಸುವರು ಎಂದು ಮಾಹಿತಿ ನೀಡಿದರು.

ಜ. 12ರಂದು ಬೆಳಗ್ಗೆ 10.30ಕ್ಕೆ ಮಕ್ಕಳ ಬಹುರೂಪಿಗೆ ಹಿರಿಯ ರಂಗಕರ್ಮಿ ರಾಮೇಶ್ವರಿ ವರ್ಮ ಚಾಲನೆ ನೀಡಲಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿ ಸದಸ್ಯೆ ಡಾ.ಜಾಹೀದಾ, ರಂಗ ಸಮಾಜದ ಸದಸ್ಯರಾದ ಡಾ.ಕೆ.ರಾಮಕೃಷ್ಣಯ್ಯ, ಮಹಾಂತೇಶ್ ಗಜೇಂದ್ರಗಡ ಭಾಗವಹಿಸಲಿದ್ದಾರೆ ಎಂದರು.

ಸಂಗೀತ ಸ್ಮತಿ: ಬಾಬಾ ಸಾಹೇಬ್ ಸಂಗೀತ ಸ್ಮತಿ ಅಂಬೇಡ್ಕರ್ ಗೀತೆಗಳ ವಿಶೇಷ ಕಾರ್ಯಕ್ರಮ ರೂಪಿಸಿದ್ದೇವೆ. ಜ. ೧೨ರಂದು ವನರಂಗದಲ್ಲಿ ಎಚ್.ಜನಾರ್ಧನ್(ಜನ್ನಿ), ಗೊಲ್ಲಹಳ್ಳಿ ಶಿವಪ್ರಸಾದ್, ದವಾನಂದ ವರಪ್ರಸಾದ್ ಮತ್ತು ತಂಡದವರು. ೧೭ರಂದು ಸಂಜೆ ೬ಕ್ಕೆ ಕಿರುರಂಗಮಂದಿರದಲ್ಲಿ ಅನಿರುದ್ಧ ವಂಕರ್ ಮತ್ತು ತಂಡ, 18ರಂದು ಸಂಜೆಗೆ ಪಿಚ್ಚಳ್ಳಿ ಶ್ರೀನಿವಾಸ್ ಮತ್ತು ಸಂಗಡಿಗರು. ಸಂಜೆ 7 ಗಂಟೆಗೆ ಕಲಾಮಂದಿರದಲ್ಲಿ ಹೆಸರಾಂತ ಗಾಯಕಿ ಗಿನ್ನಿ ಮಾಹಿ ಮತ್ತು ತಂಡದವರ ಗಾಯನ ಏರ್ಪಡಿಸಲಾಗಿದೆ ಎಂದು ಹೇಳಿದರು.

ಬಣ್ಣಗಳಲ್ಲಿ ಭೀಮಾಯಾನ: ರಂಗಾಯಣದ ಆವರಣದಲ್ಲಿ ಬಣ್ಣಗಳಲ್ಲಿ ಭೀಮಯಾನ ಶೀರ್ಷಿಕೆಯಡಿ ಕಲಾವಿದರಾದ ಸ್ಮದುಲ್, ಶ್ರೀದರ್ಶನ್, ಮಿನಲ್, ಪೃಥ್ವಿ ಡಿ, ರಂಗನಾಥ್ ಅವರು ಕೃತಿಗಳನ್ನು ರಚಿಸಲಿದ್ದಾರೆ.

ಸಮಾಜ ಕಲ್ಯಾಣ ಇಲಾಖೆ ಡಾ.ಬಿ.ಆರ್.ಅಂಬೇಡ್ಕರ್ ತರಬೇತಿ ಸಂಶೋಧನೆ ಹಾಗೂ ವಿಸ್ತರಣಾ ಕೇಂದ್ರದ ಗೌರವ ಸಲಹೆಗಾರ ಬಸವರಾಜ ದೇವನೂರು, ಹಿರಿಯ ಪ್ರಾಧ್ಯಾಪಕ ಡಾ.ಜೆ.ಸೋಮಶೇಖರ್, ಡಾ.ಎಸ್.ನರೇಂದ್ರಕುಮಾರ್, ಕನ್ನಡ ಮತ್ತುಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್, ರಂಗ ಸಮಾಜದ ಸದಸ್ಯ ಸುರೇಶ್ ಬಾಬು, ಚಲನಚಿತ್ರೋತ್ಸವ ಸಮಿತಿ ಸಂಚಾಲಕ ಕೆ. ಮನು, ಕಲಾವಿದರ ಶಶಿಕಲಾ ಬಿ.ಎನ್, ಕೆ.ಆರ್. ನಂದಿನಿ, ಗೀತಾ ಮೋಂಟಡ ಮುಂತಾದವರಿದ್ದರು.

Related Posts

Leave a Reply

Your email address will not be published. Required fields are marked *