ಕರಸಮಾಧಾನ ಮತ್ತು ತೆರಿಗೆ ಇಳಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಕೇವಲ ದೇಶದ ಬೃಹತ್ ಉದ್ಯಮಿಗಳ ಮೇಲಿನ ಕರಭಾರವನ್ನು ಇಳಿಸುವ ಕಾಳಜಿಯೊಂದೇ ಸಾಲದು. ಇಂದಿನ ಜಾಗತಿಕ ಸಂಕಷ್ಟದ ಸಮಯದಲ್ಲಿ ಸಾಮಾನ್ಯ ಗ್ರಾಹಕನ ಮತ್ತು ತೆರಿಗೆದಾರನ ಮೈ ಸುಡದಂತೆ ಸೂಕ್ತ ತೆರಿಗೆ ಪರಿಹಾರಗಳನ್ನು ಘೋಷಿಸುವ ಸಾಮಾಜಿಕ ಸಂಕ್ಷೇಮ ಆಲೋಚನೆಯೂ ಅತ್ಯವಶ್ಯಕ.
ಪ್ರಪಂಚದಲ್ಲಿಯೇ ಅತಿ ದೊಡ್ಡ ಮೂರನೆ ದೇಶವಾದ ಭಾರತಕ್ಕೆ ಇದು ಪರ್ವಕಾಲ. ಸಂಕಷ್ಟದ ಸಮಯವೂ ಹೌದು. ಒಂದು ಕಡೆ ಯುದ್ಧ. ಮತ್ತೊಂದು ಕಡೆ ಸುಧಾರಿತ ತೆರಿಗೆ ಪದ್ದತಿ ಮತ್ತು ನೂತನ ಶಾಸನಗಳ ಜಾರಿ. ಇವೆರೆಡೂ ಇಂದು ಭಾರತಕ್ಕೆ ಸಂಕ್ರಮಿಸಿದೆ.
ದೇಶೀಯ ಉತ್ನನ್ನಗಳ ಮೇಲೆ ಅಮೆರಿಕ ದುಬಾರಿ ಸುಂಕ ವಿಧಿಸಿದ ಬೆನ್ನಹಿಂದೆಯೇ ಇರಾನ್ – ಇಸ್ರೇಲ್ ನಡುವಣ ಯುದ್ಧ ಶುರುವಾಯಿತು ಇದು ನೇರವಾಗಿ ಭಾರತದ ಆರ್ಥಿಕತೆಯ ಮೇಲೆ ಬಹುದೊಡ್ಡ ಹೊಡೆತ ನೀಡಿತು. ಈ ವಿಚಾರದಲ್ಲಿ ಭಾರತ ಹಾಗೂ ಅಮೆರಿಕ ನಡುವೆ ದ್ವಿಪಕ್ಷೀಯ ಮಾತುಕತೆ ನಡೆದು ಇನ್ನೇನು ಇದು ಕಾರ್ಯರೂಪಕ್ಕೆ ಬರಬೇಕೆನ್ನುವಷ್ಟರಲ್ಲಿ ಮಧ್ಯ ಪ್ರಾಚ್ಯದಲ್ಲಿ ಕದನ ಎದುರಾಯಿತು. ಅಧಿಕ ಮಾಸದಲ್ಲಿ ದುರ್ಬಿಕ್ಷೆ ಎಂದರೆ ಇದೇ !
ಜಿಎಸ್‌ಟಿ ತೆರಿಗೆ ಪದ್ಧತಿ ಜಾರಿಯಾಗಿ ಹತ್ತು ವರ್ಷಗಳಾದರೂ, ಇದರ ನಿಜವಾದ ಅನುಷ್ಠಾನ ಆಗಿದ್ದು ಕಳೆದ ವರ್ಷ. ನೂತನ ಪದ್ಧತಿಯ ಎರಡನೆ ಪರಿಷ್ಕರಣೆಯಿಂದ ದೇಶದ ಸಾಮಾನ್ಯ ಪ್ರಜೆಯ ಪಾಲಿಗೆ ಹೊರೆಯಾಯಿತೆ ಅಥವಾ ವರವಾಯತೇ ಎಂಬುದು ಇನ್ನೂ ತರ್ಕದ ತಕ್ಕಡಿಗೆ ನಿಲುಕದ ಸಂಗತಿ. ದೇಶದ ಪ್ರತಿಯೋರ್ವ ಪ್ರಜೆಯ ಮೇಲೆ ಈಗ ಬಿದ್ದಿರುವ ಪರೋಕ್ಷ ತೆರಿಗೆಗಳನ್ನು ಒಟ್ಟಾಗಿ ಅಂದಾಜು ಮಾಡಿ ನಿಖರವಾಗಿ ಲೆಕ್ಕ ಮಾಡುವುದೆಂದರೆ ಅದು ಮರಳುಗಾಡಿನಲ್ಲಿ ಮರಳನ್ನು ಹಿಂಡಿ ನೀರಿನ ಬುಗ್ಗೆ ಚಿಮ್ಮಿಸಿದಂತೆ !
ವೇತನ ಪಡೆಯುವ ವರ್ಗ, ಮಧ್ಯಮ ವರ್ಗ ಮತ್ತು ಮಧ್ಯಮ ವರ್ಗದ ಮೇಲ್ವರ್ಗದ ಜನತೆಯೇ ಇಂದು ದೇಶದಲ್ಲಿ ಎಲ್ಲ ಬಗೆಯ ತೆರಿಗೆಗಳನ್ನು ಪಾವತಿಸುವ ವರ್ಗ. ಒಂದರ್ಥದಲ್ಲಿ ದೇಶದ ಖಜಾನೆ ಇವರೇ ಅತಿ ದೊಡ್ಡ ಭರವಸೆ ಉಳಿದಂತೆ ಚರ, ಸ್ಥಿರಾಸ್ತಿ, ಹೂಡಿಕೆ ಮತ್ತು ಬೃಹತ್ ಉದ್ದಿಮೆದಾರರು ಮತ್ತು ಶ್ರೀಮಂತ ವರ್ಗದಿಂದ ಖಜಾನೆಗೆ ಸರಿಯಾದ ಪ್ರ ಮಾಣದಲ್ಲಿ ತೆರಿಗೆ ಸಂದಾಯವಾಗುವುದು ಅನುಮಾನ.
ಇನ್ನು ಜಿಎಸ್‌ಟಿ ತೆರಿಗೆ ಪದ್ದತಿಯಿಂದ ಇತ್ತ ಕೊಳ್ಳುವವ ಮತ್ತು ಅತ್ತ ಮಾರಾಟಮಾಡುವ, ಇಬ್ಬರಿಂದಲೂ ಬರಪೂರ ತೆರಿಗೆ ಸಂಗ್ರಹಿಸುವ ಸರ್ಕಾರದ ನೂತನ ತೆರಿಗೆ ಪದ್ದತಿ ಒಂದರ್ಥದಲ್ಲಿ ಆರ್ಥಿಕ ಸುಧಾರಣೆಯ ಪರಿಣಾಮಕಾರಿ ಕ್ರಮ. ಆದರೆ ಈಗಿನ ಜಾಗತಿಕ ತಲ್ಲಣಗಳ ಸನ್ನಿವೇಶದಿಂದ ಮಧ್ಯಮ ವರ್ಗ ಮತ್ತು ವೇತನದಾರರ ಮೇಲೆ ಪ್ರತ್ಯಕ್ಷ – ಪರೋಕ್ಷವಾಗಿ ಹಲವು ಹತ್ತು ತೆರಿಗೆಗಳ ಭಾರ ಒಮ್ಮೆಲೆಗೆ ಬಿದ್ದಂತಾಗಿದೆ. ಖಜಾನೆಯನ್ನು ಭದ್ರಪಡಿಸುವ ರಕ್ಚಣಾತ್ಮಕ ಕಾರ್ಯವನ್ನು ದೇಶದ ಹಣಕಾಸು ಮಂತ್ರಿ ಅತಿ ಜಾಣ್ಮೆಯಿಂದ ಈಗ ಆರಂಭಿಸಿದ್ದಾರೆ. ಆದರೆ ಒಮ್ಮೆಲೆಗೆ ದಿಢೀರ್ ಆಗಿ ಹೆಚ್ಚಿದ ತೆರಿಗೆಗಳಿಂದ ಮೈ ಸುಟ್ಟುಕೊಳ್ಳುವಂತಹ ಪರಿಸ್ಥಿತಿಯನ್ನು ತಲುಪಿರುವ ದೇಶದ ತೆರಿಗೆದಾರನ ಯೋಗಕ್ಷೇಮದ ಬಗ್ಗೆ ವಿತ್ತ ಸಚಿವೆ ತಲೆಕೆಡಿಸಿಕೊಂಡಿಲ್ಲ !
ಕರಸಮಾಧಾನ ಮತ್ತು ತೆರಿಗೆ ಇಳಿಕೆ ವಿಚಾರದಲ್ಲಿ ಸರ್ಕಾರಗಳಿಗೆ ಕೇವಲ ದೇಶದ ಬೃಹತ್ ಉದ್ಯಮಿಗಳ ಮೇಲಿನ ಕರಭಾರವನ್ನು ಇಳಿಸುವ ಕಾಳಜಿ ಇದ್ದರೆ ಸಾಲದು. ಇಂದಿನ ಜಾಗತಿಕ ಸಂಕಷ್ಟದ ಸಮಯದಲ್ಲಿ ಸಾಮಾನ್ಯ ಗ್ರಾಹಕನ ಮತ್ತು ತೆರಿಗೆದಾರನ ಮೈ ಸುಡದಂತೆ ತೆರಿಗೆ ಪರಿಹಾರಗಳನ್ನು ಘೋಷಿಸುವ ಸಾಮಾಜಿಕ ಸಂಕ್ಷೇಮ ಆಲೋಚನೆಯೂ ಅತ್ಯವಶ್ಯಕ.


