Menu

ಉಪರಾಷ್ಟ್ರಪತಿ ಚುನಾವಣೆಯೂ ಕುದುರೆ ವ್ಯಾಪಾರ ಆಯ್ತು…

ತಮಿಳುನಾಡಿನ ಓರ್ವ ಅಪ್ಪಟ ಬಲಪಂಥೀಯ ಹಾಗೂ ಕಟ್ಟಾ ಹಿಂದುತ್ವವಾದಿಯನ್ನು ಉಪರಾಷ್ಟ್ರಪತಿ ಹುದ್ದೆಗೆ ಎನ್‌ಡಿಎ ಈಗ ಆಯ್ಕೆ ಮಾಡಿದೆ. ಆದರೆ ಈ ವಿಚಾರದಲ್ಲಿ ಚಂದ್ರಬಾಬು ನಾಯಡು ಮನದಾಳ ಹಾಗೂ ರಾಜಕೀಯ ಲೆಕ್ಕಾಚಾರವೇ ಬೇರೆ ಇತ್ತು !

ಉಪರಾಷ್ತ್ರಪತಿ ಚುನಾವಣೆಗೆ ಈಗ ವೇದಿಕೆ ಸಜ್ಜಾಗಿದೆ. ಈ ಹುದ್ದೆಯಲ್ಲಿದ್ದ ಧನಕರ್ ರಾಜೀನಾಮೆ ಯಾಕೆ ನೀಡಿದರೋ.. ! ಈ ನಿಗೂಢತೆ ದೇಶದ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಮಂತ್ರಿ ಅಮಿತ್‌ಶಾ ಅವರಿಗೆ ಮಾತ್ರ ಗೊತ್ತು. ಒಟ್ಟಿನಲ್ಲಿ ದೇಶದ ಉಪರಾಷ್ಟ್ರಪತಿ ಹುದ್ದೆಗೆ ವಿಭಿನ್ನ ರೀತಿಯಲ್ಲಿ ಚುನಾವಣೆ ನಡೆಯುತ್ತಿರುವುದು ಗಮನಾರ್ಹ, ತಮಿಳುನಾಡಿನ ಓರ್ವ ಅಪ್ಪಟ ಬಲಪಂಥೀಯ ಮತ್ತು ಕಟ್ಟಾ ಹಿಂದುತ್ವವಾದಿಯನ್ನು ಈ ಹುದ್ದೆಗೆ ಆಡಳಿತಾರೂಢ ಎನ್‌ಡಿಎ ಆಯ್ಕೆ ಮಾಡಿದೆ. ಆದರೆ ಈ ವಿಚಾರದಲ್ಲಿ ಚಂದ್ರಬಾಬು ನಾಯಡು ಅವರ ಮನದಾಳ ಮತ್ತು ಇಂಗಿತವೇ ಬೇರೆ ಇತ್ತು ! ಅಲ್ಲದೆ ನಿತೀಶ್‌ಕುಮಾರ್ ಅವರಿಗೂ ಈ ಆಯ್ಕೆ ಅಷ್ಟು ಸಮಾಧಾನ ತಂದಂತಿಲ್ಲ. ಆದರೂ ಈ ದಿಶೆಯಲ್ಲಿ ಎರಡೂ ಅಂಗಪಕ್ಷಗಳಿಗೆ ಸರ್ಕಾರದ ಪ್ರಧಾನ ಸಹಭಾಗಿಯಾದ ಬಿಜೆಪಿ ಪ್ರಮುಖ ನಾಯಕರು ಕೈಗೊಂಡ ನಿರ್ಣಯವನ್ನು ಒಪ್ಪದೆ ವಿಧಿಯಿಲ್ಲ.

ಉಪರಾಷ್ಟ್ರಪತಿ ಹುದ್ದೆ ರಾಜ್ಯಸಭೆಯ ಅಧ್ಯಕ್ಷರ ಗುರುತರ ಹುದ್ದೆಯೂ ಹೌದು. ಇಲ್ಲಿ ಮೋದಿ ಸರ್ಕಾರದ ಸರ್ವಹಿತವನ್ನು ಕಾಪಾಡುವ ಬಿಜೆಪಿ ಪರಮನಿಷ್ಠರ ಅಗತ್ಯವಿದೆ. ಅದಕ್ಕೆ ಈಗ ರಾಧಾಕೃಷ್ಣನ್ ಅವರನ್ನು ಮುಂಚೂಣಿಯಲ್ಲಿಡಲು ತೀರ್ಮಾನಿಸಲಾಗಿದೆ. ಈ ಹಿಂದೆ ಇಂದಿರಾಗಾಂಧಿ ಮಾಡಿದ್ದೂ ಇದೇ. ಆಧ್ಯಾತ್ಮಲೋಕದಲ್ಲಿ ಅತಿದೊಡ್ಡ ಹೆಸರುಮಾಡಿದ್ದ ತತ್ವಜ್ಞಾನಿ ಡಾ. ಎಸ್ ರಾಧಾಕೃಷ್ಣನ್ ಅವರನ್ನು ಈ ಹುದ್ದೆಯಲ್ಲಿ ಅಲಂಕರಿಸಲು ಕಸರತ್ತು ಮಾಡಿದ್ದು ಗಮನಾರ್ಹ. ಆದರೆ ಅವರು ಓರ್ವ ತತ್ವಜ್ಞಾನಿ. ಚಿಂತಕ ಮತ್ತು ಆದರ್ಶ ಶಿಕ್ಷಕ. ಅವರ ನಿಷ್ಠೆ, ಬದ್ಧತೆ ಸತ್ಯ ಧರ್ಮ ಹಾಗೂ ನ್ಯಾಯದತ್ತ ಮತ್ತು ಸರ್ವಜನಾಂಗದ ಒಳಿತಿನತ್ತ. ಆದರೆ ಬಿಜೆಪಿ ಈಗ ಆಯ್ಕೆ ಮಾಡಿರುವ ಸಿಪಿಆರ್ ನಿಷ್ಠೆ .. ?? ಹೇಳುವ ಅಗತ್ಯವಿಲ್ಲ. ಧನಕರ್ ರಾಜೀನಾಮೆ ನೀಡಲು ಕಾರಣವೇನು ಎಂಬುದನ್ನು ಒಮ್ಮೆ ಇಲ್ಲಿ ನೆನಪಿಸಿಕೊಳ್ಳಬೇಕಿದೆ. ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಮಹಾಭಿಯೋಗಕ್ಕೆ (ಇಂಪೀಚ್‌ಮೆಂಟ್) ವಿಪಕ್ಷಗಳು ಸಲ್ಲಿಸಿದ ಮನವಿಯನ್ನು ರಾಜ್ಯಸಭೆಯ ಚರ್ಚೆಗೆ ಉಪರಾಷ್ಟ್ರಪತಿ ಅಂಗೀಕರಿಸಿದ್ದೇ ಇವರ ಪಾಲಿಗೆ ದೊಡ್ಡ ಮುಳುವಾಯಿತು ! ಕೊನೆಗೆ ಇವರಿಗೆ ಬೀಳ್ಕೊಡುಗೆಯೂ ಇಲ್ಲದೆ ರಾಜ್ಯಸಭೆಯಿಂದ ನಿರ್ಗಮಿಸಿದ ಉಪರಾಷ್ಟ್ರಪತಿ ಎಂದರೆ ಅವರು ಧನಕರ್. ಎನ್‌ಡಿಎ ಅಭ್ಯರ್ಥಿ ಗೆಲುವು ಬಹುತೇಕ ನಿಶ್ಚಿತವಾಗಿದೆ .

ಆದರೆ ನ್ಯಾಯಮೂರ್ತಿ ಸುದರ್ಶನ್‌ರೆಡ್ಡಿ ಅವರನ್ನು ಐಎನ್‌ಡಿಐಎ ಒಕ್ಕೂಟವೀಗ ಅಖಾಡಕ್ಕೆ ಇಳಿಸುವ ಮೂಲಕ ಎನ್‌ಡಿಎ ವ್ಯೂಹಕರ್ತರಿಗೆ ನೇರ ಸವಾಲೊಡ್ಡಿದೆ. ಮೂಲತಃ ಆಂಧ್ರದವರಾದ ಸುದರ್ಶನ್‌ರೆಡ್ಡಿ ಈಗ ರಾಧಾಕೃಷ್ಣನ್ ಜೊತೆ ಸರಿಸಮಾನವಾಗಿ ಸೆಣಸಾಡಬಲ್ಲ ಅಭ್ಯರ್ಥಿ. ಈ ದಿಶೆಯಲ್ಲಿ ಲೋಕಸಭೆ ಸದಸ್ಯರ ಬಹುಮತಕ್ಕೆ ಎನ್ ಡಿಎ ವ್ಯೂಹಕರ್ತರು ತುಸು ತಿಣುಕಾಡ ಬೇಕಾದೀತು. ಜೆಡಿ ಎಸ್ ಹಾಗಿರಲಿ. ಆದರೆ ಶಿವಸೇನೆ (ಉದ್ಬವ್ ಬಣ) ಅಲ್ಲದೆ ವೈಎಸ್ ಆರ್ ಸಿಪಿ ಮತ್ತ ಚಿರಾಗ್ ಪಾಸ್ವಾನ್ ಮತ್ತು ಜೆಡಿಯು ಸಂಸದರ ಮೀನಿನ ಹೆಜ್ಜೆಯನ್ನು ಪತ್ತೆ ಹಚ್ಚ ಲಾಗದು. ಕುದುರೆ ವ್ಯಾಪಾರ ಮುಕ್ತ ಚುನಾವಣೆ ಈಗ ಯಾವುದೂ ಇಲ್ಲ. ಈ ಚುನಾವಣೆಯೂ ಅದಕ್ಕೆ ಹೊರತಲ್ಲ ಎಂದರೆ ಅತಿಶಯವಲ್ಲ.

 

 

Related Posts

Leave a Reply

Your email address will not be published. Required fields are marked *