Thursday, December 11, 2025
Menu

ರಾಜ್ಯದಲ್ಲಿ ಜಲಮೂಲ ಸಮೃದ್ಧಿ, ವರುಣನ ಕೃಪೆಗೆ ಸರ್ಕಾರ ಪಾತ್ರ: ಡಿಕೆ ಶಿವಕುಮಾರ್‌

ಬೀದರ್ ನಿಂದ ಚಾಮರಾಜನಗರದವರೆಗೆ, ಬಳ್ಳಾರಿಯಿಂದ ಕೋಲಾರದವರೆಗೆ ರಾಜ್ಯಾದ್ಯಂತ ಉತ್ತಮ ಮಳೆಯಾಗಿದೆ. ಜಲಾಶಯಗಳು, ಕೆರೆಕಟ್ಟೆಗಳು ಭರ್ತಿಯಾಗಿರುವುದರಿಂದ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಕೃಷಿಗೆ ಯಾವುದೇ ತೊಂದರೆ ಇಲ್ಲ. ನಮ್ಮ ಸರ್ಕಾರ ವರುಣನ ಕೃಪೆಗೆ ಪಾತ್ರವಾಗಿದೆ ಎಂದು  ಡಿಸಿಎಂ ಹಾಗೂ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

2024ರಲ್ಲಿ ಕಾಡಿದ ಬರ 2025ರಲ್ಲಿ ಕಣ್ಮರೆಯಾಗಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದೆ.  93 ವರ್ಷದ ಬಳಿಕ ಕೆಆರ್ ಎಸ್ ಜೂನ್ ನಲ್ಲೇ ಭರ್ತಿಯಾಗಿ ಇತಿಹಾಸ ಸೃಷ್ಟಿಸಿತು. ಅಕ್ಟೋಬರ್ ಎರಡನೇ ವಾರದಲ್ಲಿ ಜಲಾಶಯ ಎರಡನೇ ಬಾರಿ ಭರ್ತಿಯಾಗಿತ್ತು. ಅ.18-23ರವರೆಗೆ ಅಣೆಕಟ್ಟೆಯ ಗರಿಷ್ಠ ಸಾಮರ್ಥ್ಯ 124.80 ಅಡಿಗಳಷ್ಟು ನೀರು ಸಂಗ್ರಹ ಕಾಯ್ದು ಕೊಳ್ಳುವ ಮೂಲಕ ವರ್ಷದಲ್ಲಿ ಮೂರನೇ ಬಾರಿ ಜಲಾಶಯ ಭರ್ತಿಯಾಗಿ ದಾಖಲೆ ನಿರ್ಮಿಸಿದೆ.

ಕಾವೇರಿ ಈಗ ಸಂತೃಪ್ತಿಯಾಗಿ ಮೈದುಂಬಿ ಹರಿಯುತ್ತಿದ್ದಾಳೆ. ಒಂದೇ ವರ್ಷದಲ್ಲಿ ಮೂರನೇ ಬಾರಿ ಕೃಷ್ಣರಾಜ ಸಾಗರ ಜಲಾಶಯ ಭರ್ತಿಯಾಗಿ ಇತಿಹಾಸ ನಿರ್ಮಾಣವಾಗಿರುವುದು ಮಾತ್ರವ ಲ್ಲದೆ ಬೆಂಗಳೂರಿಗೆ ಬೇಸಿಗೆಯ ನೀರಿನ ಕೊರತೆ ಕೂಡ ಕಣ್ಮರೆಯಾಗುತ್ತದೆ. ಜೊತೆಗೆ ತಮಿಳುನಾಡಿಗೆ ಈ ವರ್ಷ ಕರ್ನಾಟಕದಿಂದ ಹರಿಸಬೇಕಿದ್ದ ನೀರಿನ ಹಂಚಿಕೆಯ ಸಮಸ್ಯೆ ಕೂಡ ಬಗೆಹರಿ ದಂತಾಗಿದೆ.

ಸರ್ವೋಚ್ಚ ನ್ಯಾಯಾಲಯದ ಆದೇಶದ ಪ್ರಕಾರ (16/6/2018ರಂತೆ) ತಮಿಳುನಾಡಿಗೆ ವರ್ಷಕ್ಕೆ 177.25 ನೀರನ್ನು ಹರಿಸಬೇಕಿತ್ತು.‌ ಜೂನ್‌ ನಿಂದ ಜೂನ್ ವರೆಗಿನ ಜಲವರ್ಷ ಪ್ರಕಾರ ಜೂನ್ 2025ರಿಂದ ಇಲ್ಲಿಯವರೆಗೆ 138.014 ಟಿಎಂಸಿ ನೀರು ಬಿಳಿಗೊಂಡ್ಲು ಜಲ ಮಾಪನ ಕೇಂದ್ರದಿಂದ ತಮಿಳುನಾಡಿಗೆ ಬಿಡಬೇಕಿತ್ತು. ಈ ವರ್ಷ ಉತ್ತಮ ಮಳೆ ಹಿನ್ನೆಲೆಯಲ್ಲಿ 273.426 ಟಿಎಂಸಿ ನೀರು ಹರಿದು ಹೋಗಿದ್ದು, ಹೆಚ್ಚುವರಿಯಾಗಿ, 135.412 ಟಿಎಂಸಿ ನೀರು ಹರಿದುಹೋಗುತ್ತಿದೆ. ಹೀಗಾಗಿ ಈ ವರ್ಷ ತಮಿಳುನಾಡು ಹಾಗೂ ಕರ್ನಾಟಕದ ಕಾವೇರಿ ನದಿ ನೀರು ಹಂಚಿಕೆ ವಿಚಾರದ ಸಮಸ್ಯೆ ಪ್ರಕೃತಿದತ್ತವಾಗಿ ಬಗೆಹರಿದಿದೆ.

ಇನ್ನೂ ಈ ವರ್ಷ ಬೆಂಗಳೂರಿನ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಇಲ್ಲ. ಕಾವೇರಿ ಜಲಾನಯನ ಪ್ರದೇಶದ ಹಾರಂಗಿ, ಕೆಆರ್ ಎಸ್, ಕಬಿನಿ, ಹೇಮಾವತಿ ಜಲಾಶಯಗಳು ಅಕ್ಟೋಬರ್ ನಲ್ಲಿ ಮತ್ತೆ ಭರ್ತಿಯಾಗಿ, 115 ಟಿಎಂಸಿ ನೀರು ಸಂಗ್ರಹವಿದೆ. ಇದರ ಜೊತೆಗೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಕಾವೇರಿ ನೀರಾವರಿ ನಿಗಮದ 6576 ಕೆರೆಗಳು ಸಂಪೂರ್ಣವಾಗಿ ಭರ್ತಿಯಾ ಗಿವೆ. ಇದರ ಜೊತೆಗೆ ಸಣ್ಣ ನೀರಾವರಿ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ ವ್ಯಾಪ್ತಿಯ ಕೆರೆಗಳು ಸಂಪೂರ್ಣ ಭರ್ತಿಯಾಗಿದೆ. ಹೀಗಾಗಿ ಬೆಂಗಳೂರಿಗೆ ನೀರಿನ ಸಮಸ್ಯೆ ತಲೆದೋರುವುದಿಲ್ಲ.

ಬೆಂಗಳೂರಿಗೆ ವರ್ಷಕ್ಕೆ 31 ಟಿಎಂಸಿ ನೀರು ಕುಡಿಯುವ ನೀರಿಗೆ ಬೇಕಿದೆ. ಅಂದರೆ ಪ್ರತಿ ತಿಂಗಳು ಬೆಂಗಳೂರಿಗರಿಗೆ 2.60 ಟಿಎಂಸಿ ನೀರಿನ ಅವಶ್ಯಕತೆ ಇದೆ. ಕೆಆರ್ ಎಸ್ ಜೊತೆಗೆ ಕಾವೇರಿ ಜಲಾನಯನ ಪ್ರದೇಶದ ಅಣೆಕಟ್ಟುಗಳು, ಕೆರೆಗಳು ಭರ್ತಿಯಾಗಿದ್ದು ಬೆಂಗಳೂರಿಗೆ ಈ ಬೇಸಿಗೆಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರುವುದಿಲ್ಲ.

ಕೆಆರ್ ಎಸ್ ಭರ್ತಿ ಹಿನ್ನೆಲೆ ತಮಿಳುನಾಡಿಗೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚುವರಿ ನೀರು ಹರಿದುಹೋಗುತ್ತಿದೆ. ಬಿಳಿಗೊಂಡ್ಲು ಮಾಪನ ಕೇಂದ್ರದಿಂದ ಜೂನ್‌ ನಲ್ಲಿ 9.19 ಟಿಎಂಸಿಗೆ ಬದಲಿಗೆ 42.256 ಟಿಎಂಸಿ, ಜುಲೈನಲ್ಲಿ 31.24 ಟಿಎಂಸಿ ಬದಲಿಗೆ 103.514 ಟಿಎಂಸಿ, ಆಗಸ್ಟ್ ನಲ್ಲಿ 45.95 ಟಿಎಂಸಿ ಬದಲಿಗೆ 51.943 ಟಿಎಂಸಿ, ಸೆಪ್ಟೆಂಬರ್ ನಲ್ಲಿ 36.76 ಟಿಎಂಸಿ ಬದಲಿಗೆ 40.790 ಟಿಎಂಸಿ, ಅಕ್ಟೋಬರ್ ನಲ್ಲಿ 14.35 ಟಿಎಂಸಿ ಬದಲಿಗೆ 31.344 ಟಿಎಂಸಿಯಂತೆ ಈ ವರ್ಷ ತಮಿನಾಡಿಗೆ ಇದುವರೆಗೆ 138.014 ಟಿಎಂಸಿ ನೀರಿನ ಬದಲಿಗೆ 273.426 ಟಿಎಂಸಿ ನೀರು ಹರಿದುಹೋಗಿದೆ.

ವಿಶೇಷ ಎಂದರೆ ಸುಪ್ರೀಂ ಕೋರ್ಟ್ ಆದೇಶದಂತೆ ಜೂನ್ 2025ರಿಂದ ಮೇ 2026ರವರೆಗೆ ಬಿಳಿಗೊಂಡ್ಲು ಜಲಾಶಯ ಮಾಪನ ಕೇಂದ್ರದಿಂದ 177.25 ಟಿಎಂಸಿ ನೀರನ್ನು ತಮಿಳುನಾಡಿಗೆ ಬೀಡಬೇಕಿತ್ತು. ಆದರೆ ಕೇವಲ ಐದೇ ತಿಂಗಳಲ್ಲಿ 273.426 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿದುಹೋಗುವ ಮೂಲಕ ವರ್ಷದ ನಿಗದಿತ ಪ್ರಮಾಣಕ್ಕಿಂತ 135.412 ಟಿಎಂಸಿ ನೀರನ್ನು ಈಗಾಗಲೇ ಹೆಚ್ಚುವರಿಯಾಗಿ ಹರಿದುಹೋಗಿದೆ.

ಅಕ್ಟೋಬರ್ ಮೂರನೇ ವಾರ ಕೆಆರ್ ಎಸ್ ನಲ್ಲಿ ಗರಿಷ್ಠ ಪ್ರಮಾಣದ ನೀರು ಸಂಗ್ರಹವಾಗಿದ್ದು ಹೊರಹರಿವಿನ ಪ್ರಮಾಣವನ್ನು ಕೂಡ ಹೆಚ್ಚಿಸಲಾಗಿದೆ. ಕೆಆರ್ ಎಸ್ ನಿಂದ ಹೊರಹರಿವು 20,540 ಕ್ಯೂಸೆಕ್ಸ್ ಇದೆ. ಬಿಳಿಗೊಂಡ್ಲು ಮಾಪನ ಕೇಂದ್ರದಲ್ಲಿ ಹೊರಹರಿವು 41,424 ಕ್ಯೂಸೆಕ್ಸ್ ನಷ್ಟಿದೆ.

Related Posts

Leave a Reply

Your email address will not be published. Required fields are marked *