Menu

ಕೃಷ್ಣಾ -ಕಾವೇರಿ ಜಲಹಂಚಿಕೆಯಲ್ಲಿ ರಾಜ್ಯವೆಂದೂ ನೀರುಗಂಟಿಯೇ…!

ಕರ್ನಾಟಕದ ಜನತೆಯ ಪಾಲಿಗೆ ಆಲಮಟ್ಟಿ, ತುಂಗಭದ್ರಾ, ಕೆಆರ್‌ಎಸ್ ಅಣೆಕಟ್ಟುಗಳು ಕಾಮಧೇನುವಲ್ಲ, ಕಲ್ಪ ವೃಕ್ಷವೂ ಆಗಿಲ್ಲ. ಏಕೆಂದರೆ ನದಿದಂಡೆ ಮೇಲಿನ ಭಾಗದಲ್ಲಿರುವ ರಾಜ್ಯಕ್ಕೆ ಇದುವರೆಗೆ ಸಿಕ್ಕಿದ್ದು ಬೊಗಸೆ ನೀರು. ಆದರೆ ಆಂಧ್ರ ಮತ್ತು ತಮಿಳುನಾಡಿಗೆ ದೊರೆತಿದ್ದು ಹಂಡೆಯಷ್ಟು..

ಕೃಷ್ಣಾ – ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ , ಕಳೆದ ಎಪ್ಪತ್ತು ವರ್ಷಗಳಿಂದಲೂ ಕರ್ನಾಟಕ ರಾಜ್ಯವು ಮಾಡಿದ್ದು ನೀರುಗಂಟಿ ಕೆಲಸವನ್ನೇ.. !! ಆದರೆ ಈ ಕೆಲಸ ಮಾಡಲು ಮಾನಸಿಕ ಮತ್ತು ಭೌತಿಕವಾಗಿ ಹೇಗೆ ಕನ್ನಡಿಗರು ತಮ್ಮ ಮೈಯನ್ನು ಗೋವಾ, ತಮಿಳುನಾಡು, ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಿಗೆ ಒಡ್ಡಿದ್ದರು ಎಂಬುದನ್ನು ಯಾರೂ ಗಂಭೀರವಾಗಿ ಆಲೋಚಿಸಿಲ್ಲ. ಹೇಳಬೇಕೆಂದರೆ ನೀರಾವರಿ ಸಂರಕ್ಷಣೆ ಮತ್ತು ನಿರ್ವಹಣೆಯ ಸಾಮರ್ಥ್ಯದ ವಿಚಾರದಲ್ಲಿ ತಮಿಳುನಾಡು, ಆಂಧ್ರ, ಮಹಾರಾಷ್ಟ್ರಗಳಿಗೆ ಕರ್ನಾಟಕವನ್ನು ಹೋಲಿಸಿದರೆ ಅದು ಅತಿಕಳಪೆ ಪೇಲವ ಮತ್ತು ದುರ್ಬಲ! ಹೀಗೆನ್ನಲು ಕಾರಣಗಳಿವೆ.

ಮಹದಾಯಿ ನದಿ ನೀರು ಕೊನೆಗೂ ನಮಗೆ ಸಿಗೋ ಖಾತರಿಯಿಲ್ಲ. ಕೃಷ್ಣಾ ನದಿ ನೀರು ಹಂಚಿಕೆ ಮತ್ತು ಆಲಮಟ್ಟಿ ಅಣೆಕಟ್ಟು ಎತ್ತರದ ವಿಚಾರದಲ್ಲಿ ತೆಲಂಗಾಣ ಮತ್ತು ಆಂಧ್ರದ ಕ್ಯಾತೆಗಳು ಇನ್ನು ಶತಮಾನ ಕಳೆದರೂ ಅದು ಕೊನೆಗಾಣವು! ಇನ್ನು ಕಾವೇರಿ ನದಿ ನೀರು ಮತ್ತು ಕನ್ನಡಿಗರ ನೆಮ್ಮದಿ ಎಂಬುದು ಒಂದು ಮರೀಚಿಕೆ ಎಂದರೆ ಅತಿಶಯವಲ್ಲ ಮತ್ತು ಅತಿರೇಕ ಅಥವಾ ಅತಿರಂಜನೆಯ ಉಪಮೇಯವೂ ಆಗಿಲ್ಲ.

ಕೇಂದ್ರ ಸರ್ಕಾರವೀಗ ಗೋವಾ ಮತ್ತು ಕರ್ನಾಟಕದ ಗಡಿ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಯೋಜನೆಯೊಂದಕ್ಕೆ ಕೈ ಹಾಕಿದೆ. ಇದಕ್ಕೆ ನೂರಾರು ಎಕರೆ ಅರಣ್ಯ ಭೂಮಿಯೂ ಬೇಕಿದೆ. ಆದರೆ ಯೋಜನೆಯ ನೀಲನಕ್ಷೆ ಪ್ರಕಾರ ಕರ್ನಾಟಕದ ವ್ಯಾಪ್ತಿಯ ಕಾಡಿನ ಜಮೀನು ಹೆಚ್ಚಿನ ಪಾತ್ರ ವಹಿಸುತ್ತೆ. ಯೋಜನೆಗೆ ಜಮೀನು ಬಿಟ್ಟುಕೊಡಲು ಕೋರಿ ಕೇಂದ್ರ ಸರ್ಕಾರವು ರಾಜ್ಯಕ್ಕೆ ಪತ್ರ ಬರೆದಿದೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮರುಪತ್ರ ಬರೆದು ಉತ್ತರ ನೀಡಿದ್ದಾ ಯಿತು. ನೀವು (ಕೇಂದ್ರ) ಮೊದಲು ಮಹದಾಯಿ ಯೋಜನೆಗೆ ಒಪ್ಪಿಗೆ ಕೊಡಿ. ಆಮೇಲೆ ನಾವು ಈ ಯೋಜನೆಗೆ ಬೇಕಿರುವ ಕಾಡಿನ ಜಮೀನು ಬಿಟ್ಟುಕೊಡುವ ಬಗ್ಗೆ ಆಲೋಚಿಸುತ್ತೇವೆ .. ಈ ಉತ್ತರದಲ್ಲಿ ಸಿದ್ದರಾಮಯ್ಯ ಅವರು ತಾಳಿದ ನಿಲುವಿನಲ್ಲಿ ರಾಜಕೀಯ ಹುಡುಕುವಂತಹದೇನಿಲ್ಲ.

ಹುಬ್ಬಳ್ಳಿ -ಧಾರವಾಡ ಅವಳಿ ನಗರಗಳಿಗೆ ಕುಡಿಯುವ ನೀರು ಒದಗಿಸಬೇಕಾದರೆ ಕಳಸಾ – ಬಂಡೂರಿ ನಾಲೆಯ ಕಾಮಗಾರಿಗಳು ಪೂರ್ಣಗೊಳ್ಳಬೇಕಲ್ಲವೇ? ಆದರೆ ಈ ಯೋಜನೆಯನ್ನು ಕರ್ನಾಟಕವು ಪೂರ್ಣಗೊಳಿಸಲು ಗೋವಾ ಮತ್ತು ಕೇಂದ್ರ ಸರ್ಕಾರ ಮುಕ್ತ ಅವಕಾಶ ನೀಡಿದೆಯೇ? ಬಸವರಾಜ ಬೊಮ್ಮಾಯಿ ಅವರು ಈ ಹಿಂದೆ (ಸಂಸದರಾಗು ವುದಕ್ಕೂ ಮುನ್ನ) ಕಳಸಾ ಬಂಡೂರಿ ನಾಲೆ ಯೋಜನೆ ಸಂಪೂರ್ಣ ಅನುಷ್ಠಾನಕ್ಕೆ ಆಗ್ರಹಿಸಿ ಈ ಸ್ಥಳದಲ್ಲಿ ಧರಣಿ ಮಾಡಿದ್ದರು. ಅವರೀಗ ಲೋಕಸಭೆಯಲ್ಲಿ ಯೋಜನೆ ಪರವಾಗಿ ಗಟ್ಟಿಯಾದ ದನಿ ಮೂಡಿಸುವ ಅನಿವಾರ್ಯ ಇದೆ. ಕೇಂದ್ರದಿಂದ ಅಗತ್ಯವಿರುವ ಅನುಮತಿ ಕೋರಿ ಅವರು ಸದನದಲ್ಲಿ ಧರಣಿ ನಡೆಸಿದರೂ ಅಡ್ಡಿಯಿಲ್ಲ. ಲೋಕಸಭೆಗೆ ಉತ್ತರ ಕರ್ನಾಟಕದಿಂದ ಬಹುಸಂಖ್ಯೆಯಲ್ಲಿ ಆರಿಸಿ ಬಂದಿರುವ ಬಿಜೆಪಿ ಸಂಸದರು ಮಹದಾಯಿ ಯೋಜನೆ ಕಾರ್ಯಾ ನುಷ್ಠಾನಕ್ಕಾಗಿ ಪಟ್ಟು ಹಿಡಿದು ಗಂಭೀರ ಚರ್ಚೆ ಅಥವಾ ಧರಣಿ ನಡೆಸುವುದಿಲ್ಲವೇಕೆ? ರಾಜಕೀಯ ಸೋಗಲಾಡಿತನ ಎಂದರೆ ಇದೇ! ಈ ಪೈಕಿ ಮಾಜಿ ಪ್ರಧಾನಿ ದೇವೇಗೌಡರೊಬ್ಬರೇ, ಈ ಇಳಿ ವಯಸಿನಲ್ಲಿ ರಾಜ್ಯದ ನೀರಾವರಿ ವಿಚಾರ ದಲ್ಲಿ ಸಂಸತ್ತಿನಲ್ಲಿ ಒಂಟಿ ಸಲಗದಂತೆ ಹೋರಾಡುತ್ತಿರುವುದು. ಜೆಡಿಎಸ್ ಈಗ ಬಿಜೆಪಿ ಮೈತ್ರಿ ಕೂಟದಲ್ಲಿಯೇ ಇರ ಬಹುದು. ಆದರೆ ದೇವೇಗೌಡರ ಈ ಬದ್ಧತೆ ಮಾತ್ರ ಈ ವಿಚಾರದಲ್ಲಿ ಈ ಹಿಂದೆ ಯುಪಿಎ ಜೊತೆ ಇದ್ದಾಗ ಏನು ವ್ಯಕ್ತವಾಗಿತ್ತೋ ಅದೀಗಲೂ ಮುಂದುವರಿದಿದೆ ಎಂಬುದು ಗಮನಾರ್ಹ.

ಫೆಡರಲ್ ಡೆಮಾಕ್ರೆಟಿಕ್ ವ್ಯವಸ್ಥೆಯಲ್ಲಿ ಎರಡು ರಾಜ್ಯಗಳ ನಡುವೆ ತಲೆದೋರುವ ನೆಲ ಮತ್ತು ಜಲ ಹಂಚಿಕೆಯ ವಿಚಾರಗಳಲ್ಲಿ ಕೇಂದ್ರದ ಪಾತ್ರ ಅತಿ ಮುಖ್ಯ. ಆದರೆ ತಮ್ಮ ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳಲು ಸದಾ ಪ್ರಯತ್ನಿಸುವ ಆಡಳಿತಾರೂಢ ಕೇಂದ್ರ ಸರ್ಕಾರವು ಇಂತಹ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಸೂತ್ರಧಾರ ಅಥವಾ ಮನೆಯ ಹಿರಿಯಣ್ಣನಂತೆ ವರ್ತಿಸಬೇಕೇ ವಿನಹ ಪಾರ್ಟಿ ಪಾಲಿಟಿಕ್ಸ್ ಮಾಡುವುದು ಉಚಿತವಲ್ಲ. ಇದು ಒಕ್ಕೂಟ ವ್ಯವಸ್ಥೆಗೆ ಶೋಭಿತವೂ ಅಲ್ಲ. ಓಟ್‌ಬ್ಯಾಂಕ್ ರಾಜಕೀಯ ಮತ್ತು ಜನತೆಯನ್ನು ಚುನಾವಣೆಗಳ ಸಮಯದಲ್ಲಿ ಮರಳು ಮಾಡುವ ಬಿಜೆಪಿ ನಾಯಕರು ಮಹದಾಯಿ ಅಂತಹ ಜ್ವಲಂತ ಮತ್ತು ಜರೂರು ವಿಷಯಗಳ ಬಗ್ಗೆ ಲೋಕಸಭೆ ಯಲ್ಲಿ ಗಪ್‌ಚುಪ್ ಆಗುವುದು ಯಾಕೆ? ಇವರಿಗೆ ಎದೆಗಾರಿಕೆಯಿಂದ ಇಲ್ಲಿನ ಜನತೆಯ ಸಮಸ್ಯೆಗಳ ಬಗ್ಗೆ ಚರ್ಚಿಸಲು ಅಂಜಿಕೆಯೇ?

ಇನ್ನು ಕೃಷ್ಣಾ ನದಿ ವ್ಯಾಜ್ಯಗಳತ್ತ ಗಮನಹರಿಸೋಣ. ಆಲಮಟ್ಟಿ ಅಣೆಕಟ್ಟು ಎತ್ತರೀಕರಣಕ್ಕೆ ಸುಪ್ರೀಂಕೋರ್ಟ್ ಹಸಿರು ನಿಶಾನೆ ತೋರಿ ಆಗಲೇ ದಶಕಗಳು ಕಳೆಯಿತು. ನ್ಯಾಯಮೂರ್ತಿ ಬ್ರಿಜೇಶ್‌ಕುಮಾರ್ ನ್ಯಾಯಾಧಿಕರಣದ ಐ ತೀರ್ಪಿನ ಬಳಿಕವೂ ಉಂಟಾದ ಕಾನೂನಿನ ಎಲ್ಲ ಸಮಸ್ಯೆಗಳಿಗೆ ಉತ್ತರಿಸಿದ್ದರೂ ಇದು ಕರ್ನಾಟಕದ ಪಾಲಿಗೆ ಈ ಕ್ಷಣಕ್ಕೂ ವರ ದಾನವಾಗದಿರುವುದು ಒಂದು ಶಾಪ! ರಾಜ್ಯವೇನೋ ಅಣೆಕಟ್ಟು ಎತ್ತರದಿಂದ ತಲೆದೋರುವ ವಸತಿ ಮತ್ತು ಕೃಷಿ ಭೂಮಿ ಮುಳುಗಡೆ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಂಡಿದ್ದರೂ ಆಂಧ್ರ ಮತ್ತು ತೆಲಂಗಾಣ ಈ ವಿಷಯದಲ್ಲಿ ಒಂದಂಗುಲವೂ ಬಗ್ಗಲು ತಯಾರಿಲ್ಲ. ನಮ್ಮ ಕರ್ನಾಟಕದ ಪಾಲಿಗೆ ಈ ಅಣೆಕಟ್ಟು ಕಲ್ಪವೃಕ್ಷವೂ ಅಲ್ಲ. ಕಾಮಧೇನುವೂ ಅಲ್ಲ. ಅಣೆಕಟ್ಟೆನ ಎರಡೂ ಬದಿಯ ನಾಲೆಗಳಿಂದ (ನಾರಾಯಣಪುರ ಎಡ ಮತ್ತು ಬಲ ದಂಡೆ ಕಾಲುವೆ) ಹರಿಯುವ ನೀರಿನ ಸಿಂಹಪಾಲು ಆಂಧ್ರ ಮತ್ತು ತೆಲಂಗಾಣಕ್ಕೆ ಎಂಬುದು ಗಮನಾರ್ಹ.

ಅಸಲಿಗೆ ಈ ಯೋಜನೆ ೧೯೫೦ ರಲ್ಲಿ ಇಲ್ಲಿ ಆಯೋಜನೆ ಆಗಿz ಆಂಧ್ರದ ರೈತರ ಹಿತಾಸಕ್ತಿ ಕಾಪಾಡಲು. ಇನ್ನು ತುಂಗಭದ್ರಾ ಅಣೆಕಟ್ಟುವಿನ ಯೋಜನೆ ಕೂಡಾ ತೆಲುಗುಬಿಡ್ಡಲ ಹಿತಾಸಕ್ತಿ ಕಾಪಾಡಲೆಂದೇ ಹೊಸಪೇಟೆಯಲ್ಲಿ ಇದೇ ಸಮಯದಲ್ಲಿ ತಲೆ ಎತ್ತಿದ ಇನ್ನೊಂದು ಯೋಜನೆ. ಮುಂದುವರಿದು ಕಾವೇರಿ ಕಣಿವೆಗೆ ಬಂದರೆ ಇದರ ಕಣ್ಣೀರ ಬವಣೆಗೆ ಕೊನೆಯೇ ಇಲ್ಲ. ಅಂದು ಮೈಸೂರು ಮಹಾರಾಜರು ಕೃಷ್ಣರಾಜ ಸಾಗರ ಅಣೆಕಟ್ಟು ನಿರ್ಮಿಸಿದ್ದು ಸರಿ. ಇಲ್ಲಿ ಸಂಗ್ರಹ ವಾಗುವ ನದಿಯ ನೀರಾದರೂ ಎಲ್ಲಿಂದ ಹರಿದು ಬರುವುದು ಹೇಳಿ. ಹೇಮಾವತಿ ಮತ್ತು ಹಾರಂಗಿ ಕಾವೇರಿ ಉಪನದಿ ಗಳಿಂದ ಹರಿದು ಬರುವುದಲ್ಲವೇ? ಇಲ್ಲಿ ಅಣೆಕಟ್ಟು ನಿರ್ಮಿಸಲು ಇಲ್ಲಿನ ಸಾವಿರಾರು ರೈತರ ಕುಟುಂಬಗಳು ಚಿನ್ನದಂತಹ ತಮ್ಮ ಕೃಷಿ ಭೂಮಿಯನ್ನು ಅಂದು ಧಾರೆ ಎರೆಯಲಿಲ್ಲವೇ? ಆಲಮಟ್ಟಿ ಅಣೆಕಟ್ಟು ಕಟ್ಟಲು ನಮ್ಮ ರೈತರು ನೂರಾರು ಎಕರೆ ಜಮೀನು ಕಳೆದುಕೊಂಡರು. ತುಂಗಭದ್ರಾ ಅಣೆಕಟ್ಟಿಗಾಗಿ ನೂರಾರು ಗ್ರಾಮಗಳು ಮತ್ತು ಮನೆ, ಮಠ, ಮಂದಿರ ಗಳು ಮುಳುಗಿದವು. ಕೆಆರ್‌ಎಸ್ ಡ್ಯಾಂ ಕಟ್ಟಲೂ ಮಂಡ್ಯ, ಮೈಸೂರು, ರಾಮನಗರ ಮತ್ತು ಚಾಮರಾಜ ನಗರ ಜಿಲ್ಲೆಯ ಸಾವಿರಾರು ಮಂದಿ ರೈತರು ತಮ್ಮ ಸಂಪತ್‌ಭರಿತ ಜಮೀನುಗಳನ್ನು ಸಾರ್ವಜನಿಕ ಯೋಜನೆಗೆ ಬೆಳ್ಳಿ ತಟ್ಟೆಯಲ್ಲಿಟ್ಟು ಅಂದಿನ ಸರ್ಕಾರಗಳಿಗೆ ಕೊಟ್ಟು ಬಿಟ್ಟರು. ಆದರೆ ಇದಕ್ಕೆ ಅವರಿಗೆ ಸಿಕ್ಕಿರುವ ಪ್ರತಿಫಲ ಅತಿ ಕಡಿಮೆಯೇ. ಕೃಷ್ಣಾ , ಕಾವೇರಿ ನದಿ ನೀರಿನ ಪಾಲನ್ನು ತಮ್ಮ ಕಾನೂನಾತ್ಮಕ ಹಕ್ಕು ಎಂದು ವಾದಿಸುವ ತಮಿಳುನಾಡು ಮತ್ತು ಆಂಧ್ರ ಈ ದಿಶೆಯಲ್ಲಿ ಶತಮಾನದ ಹಿಂದೆ ಕರ್ನಾಟಕದ ಜನತೆಯು ಮಾಡಿದ ಮಹಾತ್ಯಾಗವನ್ನು ನೆನೆಯುವ ಗೋಜಿಗೇ ಹೋಗದಿರುವುದು ಕನ್ನಡಿಗರ ದುರ್ದೈವ. ಸಾಮಾಜಿಕ ನ್ಯಾಯದಡಿ ಈಗಲೂ ನಮ್ಮ ನೆಲ ಮತ್ತು ಜಲದ ವಿಚಾರದಲ್ಲಿ ಮತ್ತು ಅಣೆಕಟ್ಟು ನಿರ್ಮಾಣಗಳ ವಿಚಾರದಲ್ಲಿ ಆಗಿರುವ ಪರಮಘೋರ ಅನ್ಯಾಯವನ್ನು ಪ್ರಶ್ನಿಸಲು ಕನ್ನಡಿಗರಿಗೆ ಅವಕಾಶವೇ ಇಲ್ಲವೇ?

ಹೌದು, ತಮಿಳುನಾಡು ಮತ್ತು ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳ ಪಾಲಿಗೆ ಕರ್ನಾಟಕ ಕೆಳದಂಡೆ ರಾಜ್ಯ. ಕೃಷ್ಣಾ ಮತ್ತು ಕಾವೇರಿ ನದಿಗಳ ಕೆಳದಂಡೆ ರಾಜ್ಯವಾಗಿ ಕರ್ನಾಟಕವು ಭೌಗೋಳಿಕವಾಗಿ ರೂಪುಗೊಂಡಿರುವುದೇ ಕನ್ನಡಿಗರ ದೌರ್ಭಾಗ್ಯ. ಈ ರಾಜ್ಯಗಳ ಪಾಲಿಗೆ ಕರ್ನಾಟಕವು ನೀರುಗಂಟಿಯೇ . ತಮಿಳರು ಮತ್ತು ತೆಲುಗರು ಕೂಗೆಬ್ಬಿಸಿದ ಕೂಡಲೇ ಅವರಿಗೆ ಇಲ್ಲಿಂದ ನೀರು ಬಿಟ್ಟು ಬಿಡಬೇಕು. ಇನ್ನು ದಿಲ್ಲಿಯಲ್ಲಿ ಕುಳಿತವರ ದರಬಾರು ಮತ್ತು ಹುಕುಂ ಕೂಡಾ ಸದಾ ತಮಿಳರು ಮತ್ತು ತೆಲುಗರ ಕಡೆಯೇ ಇರುತ್ತೆ. ಕೃಷ್ಣಾ ಮತ್ತು ಕಾವೇರಿ ಕಣಿವೆಯಲ್ಲಿ ಹೆಚ್ಚು ಮಳೆ ಬಂದರೂ ಅದರಿಂದ ಹೆಚ್ಚು ನಷ್ಟ ನಮಗೆ. ಹೆಚ್ಚು ಲಾಭ ತಮಿಳಿಗರಿಗೆ! ಕೃಷ್ಣಾ ನದಿ ಉಕ್ಕೇರಿದರೆ ಅದರಿಂದ ಬೆಳೆ, ವಸತಿ ನಷ್ಟ ನಮಗೆ. ಅಧಿಕ ನೀರು ಸಂಗ್ರಹದ ಲಾಭ ತೆಲುಗುಬಿಡ್ಡರಿಗೆ. ಕರ್ನಾಟಕದ ಈ ನೀರುಗಂಟಿ ಕಥೆಯ ವ್ಯಥೆಗೆ ಎಲ್ಲಿದೆಯೋ ಕೊನೆ?

-ಪಿ. ರಾಜೇಂದ್ರ, ಲೇಖಕರು

Related Posts

Leave a Reply

Your email address will not be published. Required fields are marked *