Menu

ಸ್ಪೀಕರ್ ಯಾವ ರಾಜಕೀಯ ಪಕ್ಷದ ಕೈ ಗೊಂಬೆಯೂ ಅಲ್ಲ

ಇಡೀ ಸಂಸತ್ತಿನ ಮೇಲೆ ಸಂಪೂರ್ಣ ಹತೋಟಿ ಮತ್ತು ನಿಯಂತ್ರಣದ ಪರಮಾಧಿಕಾರ ಹೊಂದಿರುವ ಲೋಕಸಭೆ ಸ್ಪೀಕರ್ ಅಸಹಾಯಕರಾಗಿರುವುದು ದುರದೃಷ್ಟಕರ. ಸೋಮನಾಥ ಚಟರ್ಜಿ, ಮನೋಹರ ಜೋಶಿ, ಬಲರಾಂ ಜಾಖಡ್  ಈ ಹಿಂದೆ ಸಂಸತ್ ಅನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ಬಿಗಿಕಲಾಪ ನಡೆಸಿದ ಹಲವಾರು ಸಂದರ್ಭಗಳಿವೆ. ಸ್ಪೀಕರ್ ಯಾವ ರಾಜಕೀಯ ಪಕ್ಷದ ಕೈ ಗೊಂಬೆಯೂ ಅಲ್ಲ.

ಆಡಳಿತಾರೂಢ ಪಕ್ಷ ಮತ್ತು ಪ್ರತಿಪಕ್ಷ- ಇವೆರೆಡೂ ಪ್ರಜಾರಾಜ್ಯದ ಎರಡು ಕಣ್ಣುಗಳು. ಇದು ಪ್ರಜಾತಂತ್ರದ ನಾಡಿನಲ್ಲಿ ಮತದಾರರು ಪ್ರಜಾಪ್ರತಿನಿಧಿಗಳಿಗೆ ರಾಜ್ಯಾಡಳಿತ ಅಥವಾ ಸರ್ಕಾರ ನಡೆಸಲು ನೀಡಿರುವ ಅಧಿಕಾರ ಎಂಬುದು ಮುಖ್ಯ. ಸರ್ಕಾರ ನಡೆಸಿದ ಮಾತ್ರಕ್ಕೆ ಆಡಳಿತಾರೂಢ ಪಕ್ಷವು ಸರ್ವಾಧಿಕಾರ ಧೋರಣೆ ಅನುಸರಿಸಬೇಕೆಂಬುದಲ್ಲ . ಅಥವಾ ಸದನದಲ್ಲಿ ತನಗೆ ಮೆಜಾರಿಟಿ ಇದೆ. ತಾನು ಏನು ಬೇಕಾದರೂ ತೀರ್ಮಾನ ತೆಗೆದುಕೊಳ್ಳಬೇಕೆಂಬ ಹುಂಬುತನದ ಧೋರಣೆ ಸರ್ವದಾ ಸರಿಯಲ್ಲ ಮತ್ತು ಪ್ರಜಾತಂತ್ರದ ಆರೋಗ್ಯದಾಯಕ ಬೆಳವಣಿಗೆಗೆ ಇದು ಭದ್ರ ಆಗಲಾರದು. ದೇಶದ ಸಂಸತ್ ಕಲಾಪಗಳ ಹಿಂದಿನ ಪುಟಗಳನ್ನು ನಾವೊಮ್ಮೆ ತಿರುವಿಹಾಕಬೇಕಿದೆ. ಹಳೆಯದನ್ನು ನೋಡಿ ನಮ್ಮ ಸಂಸದೀಯ ಕಲಾಪಗಳನ್ನು ತಿದ್ದುಕೊಳ್ಲುವ ಮತ್ತು ಚರ್ಚೆಯನ್ನು ಮೆರಗುಗೊಳಿಸುವ ಅವಶ್ಯಕತೆ ಕೂಡಾ ಇದೆ.

ಅಧಿವೇಶನದ ಕಲಾಪಗಳು ಶುರುವಾಗುವ ಮುನ್ನವೇ ಸಂಸತ್ತಿನ ಎರಡೂ ಸದನಗಳ ಪೀಠಾಸೀನ ಅಧಿಕಾರಿಗಳ ಸಮಕ್ಷಮದಲ್ಲಿ ಸದನದ ಸಭಾನಾಯಕ ಮತ್ತು ವಿಪಕ್ಷ ನಾಯಕರ ಹಾಜರಿಯಲ್ಲಿ ಸದನ ಸಲಹಾ ಸಮಿತಿ ಸಭೆ ನಡೆಯುವುದುಂಟು. ಆದರೆ ಈ ಸಭೆಯ ತೀರ್ಮಾನದಂತೆ ಕಲಾಪಗಳು ಇಂದು ನಡೆಯುತ್ತಿಲ್ಲ ! ಹಾಗಾದರೆ ದೇಶದ ಪ್ರಮುಖ ಸಮಸ್ಯೆಗಳು ಮತ್ತು ಪ್ರಜೆಗಳ ಕುಂದುಕೊರರೆಗಳ ಬಗ್ಗೆ ಚರ್ಚೆ ಎಲ್ಲಿ ನಡೆಯಬೇಕು ಮತ್ತು ಸಮಸ್ಯೆಗಳಿಗೆ ಪ್ರಜಾತಂತ್ರ ಅಡಿ ಪರಿಹಾರವನ್ನು ಸಂಸತ್ ಹೇಗೆ ಕಂಡು ಹಿಡಿಯಬೇಕು ? ಇಲ್ಲಿ ಬಹಳ ಮುಖ್ಯವಾದ ಸಂಗತಿ ಎಂದರೆ ಅಧಿಕಾರದ ಚುಕ್ಕಾಣಿ ಹಿಡಿದ ಪಕ್ಷಕ್ಕೆ ತಾಳ್ಮೆ , ಸಂಯಮ ಮತ್ತು ಕೇಳಿಸಿಕೊಳ್ಳುವ ಗುಣ ಇರಲೇಬೇಕು. ಮಿಗಿಲಾಗಿ ವಿರೋಧ ಪಕ್ಷಗಳಿಗೆ ಮಾತನಾಡಲು ಮೊದಲು ಮತ್ತು ಹೆಚ್ಚಿನ ಅವಕಾಶ ನೀಡಬೇಕು. ಏಕೆಂದರೆ ಸರ್ಕಾರದ ಕಹಿಯನ್ನು ಮೊದಲು ಗ್ರಹಿಸುವುದು ವಿರೋಧ ಪಕ್ಷವೇ ವಿನಹ ಆಡಳಿತ ಪಕ್ಷವಲ್ಲ.

ನೆಹರೂ, ಇಂದಿರಾ , ರಾಜೀವ್, ವಾಜಪೇಯಿ , ನರಸಿಂಹರಾವ್ ಅವರ ಕಾಲದಲ್ಲಿ ವಿಪಕ್ಷಗಳ ನಾಯಕರ ಮಾತು ಮತ್ತು ಅಭಿಪ್ರಾಯಗಳಿಗೆ ಹೆಚ್ಚಿನ ಮನ್ನಣೆ ಇತ್ತು. ರಾಜಕೀಯವಾಗಿ ಸರ್ಕಾರ ನಡೆಸುವವರ ಮತ್ತು ವಿರೋಧ ಪಕ್ಷಗಳ ನಾಯಕರ ನಡುವೆ ಸೈದ್ದಾಂತಿಕ ಭಿನ್ನತೆ ಇದ್ದರೂ ದೇಶಕ್ಕೆ ಸಂಬಂಧಿಸಿದ ವಿಚಾgಗಳಲ್ಲಿ ಸಂಸತ್ತಿನಲ್ಲಿ ಚರ್ಚಿಸಬೇಕಾದ ತುರ್ತು ವಿಚಾರಗಳಲ್ಲಿ ಸಹಮತ ಏರ್ಪಡುತ್ತಿತ್ತು. ಈ ದಿಶೆಯಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ಪೀಠಾಧ್ಯಕ್ಷರ ಪಾತ್ರ ಅಮೂಲ್ಯ ಮತ್ತು ಮಹತ್ತರ.

ಸಂಸತ್ತಿನ ಪೀಠಾಧ್ಯಕ್ಷರು ಯಾವ ಪಕ್ಷಕ್ಕೂ ಸೇರಿದವರಾಗಿರುವುದಿಲ್ಲ. ಅವರು ಎರಡೂ ಪಕ್ಷಗಳ ನಡುವಣ ಕೊಂಡಿ. ಸದನದ ಕಲಾಪಪಟ್ಟಿಯನ್ನು ಕೈಯಲ್ಲಿ ಹಿಡಿದು ಅಧಿವೇಶನ ನಡೆಸುವ ಹೊಣೆಗಾರಿಕೆ ಒಂದೇ ಅಲ್ಲ. ಇಡೀ ಸಂಸತ್ತಿನ ಮೇಲೆ ಹತೋಟಿ ಮತ್ತು ನಿಯಂತ್ರಣದ ಪರಮಾಧಿಕಾರವನ್ನು ಹೊಂದಿರುವ ಸ್ಪೀಕರ್ ಅಸಹಾಯಕರಾಗುವುದು ದುರದೃಷ್ಟಕರ. ಈ ಹಿಂದೆ ಸೋಮನಾಥ ಚಟರ್ಜಿ ಅವರಾಗಲೀ, ಮನೋಹರ ಜೋಶಿ ಅವರಾಗಲೀ, ಬಲರಾಂ ಜಾಖಡ್ ಅವರಾಗಲೀ ಅಧಿಕಾರಪೂರ್ಣವಾಗಿ ಸಂಸತ್ತನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ಹೇಗೆ ಕಲಾಪಗಳನ್ನು ನಡೆಸಿದರೆಂಬುದು ಗಮನಾರ್ಹ. ವಿಪಕ್ಷಗಳ ಬೇಡಿಕೆಗೆ ಸರ್ಕಾರ ಮಣಿದು ಚರ್ಚೆಗೆ ಮುಂದಾದರೆ ಸರ್ಕಾರಗಳ ಘನತೆ ಮತ್ತು ಪ್ರತಿಷ್ಟೆಗೆ ಭಂಗವೇನೂ ಉಂಟಾಗುವುದಿಲ್ಲ. ಈ ದಿಶೆಯಲ್ಲಿ ಕೇಂದ್ರ ಸರ್ಕಾರದ ಹಠಮಾರಿ ಮತ್ತು ಮೊಂಡುಪಟ್ಟು ಖಂಡಿತವಾಗಿಯೂ ಪ್ರಜಾತಂತ್ರ ಸಂಸದೀಯ ವ್ಯವಸ್ಥೆ ಶ್ರೇಯಸ್‌ಕರವಲ್ಲ.

Related Posts

Leave a Reply

Your email address will not be published. Required fields are marked *