ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದವರನ್ನು ನಾಮನಿರ್ದೇಶನ ಮಾಡಿದರೆ ಸಹಕಾರ ಸಂಘ ಮುಚ್ಚುತ್ತವೆ ಎಂಬುದು ಸರಿಯಲ್ಲ ಎಂಬ ಶಾಸಕ ಜಿ ಟಿ ದೇವೇಗೌಡ ಅವರ ಹೇಳಿಕೆಗೆ ಸಚಿವ ಶಿವರಾಜ್ ತಂಗಡಗಿ ಆಕ್ರೋಶ ವ್ಯಕ್ತಪಡಿಸಿದರು.
ವಿಧೇಯಕದ ಮೇಲಿನ ಚರ್ಚೆ ವೇಳೆ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಅವರು, ಸಹಕಾರ ಸಂಘಗಳಿಗೆ ಎಸ್ಸಿ/ಎಸ್ಟಿ, ಮಹಿಳೆ ಮೀಸಲು ಅಡಿಯಲ್ಲಿ ನಿದೇಶಕರನ್ನು ನಾಮನಿರ್ದೇಶನ ಮಾಡುವುದು ಸರಿಯಲ್ಲ. ಅದರಲ್ಲಿ ಹಿಂದುಳಿದವರನ್ನೂ ಸೇರಿಸಬೇಕು. ಈ ಕ್ರಮಗಳಿಂದಾಗಿ ಸಹಕಾರ ಸಂಘಗಳನ್ನು ಮುಚ್ಚುವ ಹಂತಕ್ಕೆ ಬರಲಿದೆ ಎಂದು ಹೇಳಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಚಿವ ಶಿವರಾಜ್ ತಂಗಡಗಿ ಅವರು, ಜಿ.ಟಿ. ದೇವೇಗೌಡ ಅವರ ಮಾತುಗಳು ಸರಿಯಲ್ಲ. ಎಸ್ಸಿ/ಎಸ್ಟಿ ಸಮುದಾಯಕ್ಕೆ ಸೇರಿದವರನ್ನು ನಾಮನಿರ್ದೇಶನ ಮಾಡಿದರೆ ಸಹಕಾರ ಸಂಘ ಮುಚ್ಚುತ್ತವೆ ಎಂದು ಮಾತನಾಡಿದರೆ ಏನು ಅರ್ಥ ಆಕ್ರೋಶ ವ್ಯಕ್ತಪಡಿಸಿದರು.
ಹಾಗಾದರೆ, ದಲಿತರಿಗೆ ಅವಕಾಶ ಸಿಗುವುದೇ ಬೇಡವೇ. ಸಹಕಾರ ಕ್ಷೇತ್ರದಲ್ಲಿ ಎಸ್ಸಿ/ಎಸ್ಟಿ ಸಮುದಾಯದವರು ಏಳಿಗೆ ಹೊಂದುವುದಕ್ಕೆ ಅವಕಾಶ ಸಿಗಬಾರದೆ. ವಿಧೇಯಕದಲ್ಲಿನ ತಪ್ಪುಗಳ ಬಗ್ಗೆ ತಿಳಿಸಿ. ಅದರ ಬದಲು ಎಸ್ಸಿ/ಎಸ್ಟಿ ಸಮುದಾಯದವರನ್ನು ಸೇರಿಸಿದರೆ ಸಂಘ ಹಾಳಾಗುತ್ತದೆ ಎಂಬರ್ಥದಲ್ಲಿ ಮಾತನಾಡಬೇಡಿ. ನಮ್ಮ ಸರ್ಕಾರ, ಮುಖ್ಯಮಂತ್ರಿಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಬದ್ಧತೆಯಿಂದ ಕೆಲಸ ಮಾಡುತ್ತಿದ್ದಾರೆ. ಆದರೆ ನೀವು ಈ ರೀತಿ ಮಾತಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.