ಉತ್ತರ ಪ್ರದೇಶದ ಬರೇಲಿಯಲ್ಲಿ ಏಕಾಏಕಿ ಮುಟ್ಟಾದ ವಿದ್ಯಾರ್ಥಿನಿ ಪ್ರಾಂಶುಪಾಲರ ಬಳಿ ಸ್ಯಾನಿಟರಿ ಪ್ಯಾಡ್ ಕೇಳಿದ್ದಕ್ಕೆ ಆಕೆಯನ್ನು ಪರೀಕ್ಷಾ ಕೊಠಡಿಯಿಂದ ಹೊರಗೆ ನಿಲ್ಲಿಸಿರುವ ಘಟನೆ ನಡೆದಿದೆ.
ಪ್ರಥಮ ವರ್ಷದ ಪಿಯು ವಿದ್ಯಾರ್ಥಿನಿ ಪರೀಕ್ಷಾ ಕೊಠಡಿಯಲ್ಲಿದ್ದಾಗ ಮುಟ್ಟು ಕಾಣಿಸಿಕೊಂಡಿತ್ತು, ಆಕೆ ಶಿಕ್ಷಕರ ಬಳಿ ಸ್ಯಾನಿಟರ್ ಪ್ಯಾಡ್ ತಂದುಕೊಡುವಂತೆ ಕೇಳಿಕೊಂಡಿದ್ದಳು, ಅದಕ್ಕೆ ಕೋಪಗೊಂಡ ಪ್ರಾಂಶುಪಾಲರು ಆಕೆಯನ್ನು ತರಗತಿಯಿಂದ ಹೊರಗಿಟ್ಟಿದ್ದಾರೆ. ಈ ಸಂಬಂಧ ತಂದೆ ಜಿಲ್ಲಾಧಿಕಾರಿ, ಜಿಲ್ಲಾ ಶಾಲಾ ನಿರೀಕ್ಷಕ (ಡಿಐಒಎಸ್), ರಾಜ್ಯ ಮಹಿಳಾ ಆಯೋಗ ಹಾಗೂ ಮಹಿಳಾ ಕಲ್ಯಾಣ ಇಲಾಖೆಗೆ ಲಿಖಿತ ದೂರು ನೀಡಿದ್ದಾರೆ.
ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ, ಬಳಿಕ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಶಾಲಾ ಇನ್ಸ್‌ಪೆಕ್ಟರ್ ದೇವಕಿ ನಂದನ್ ತಿಳಿಸಿದ್ದಾರೆ.
ಈ ಘಟನೆಯನ್ನು ಹಲವು ಸಾಮಾಜಿಕ ಕಾರ್ಯಕರ್ತರು ಹಾಗೂ ಸಂಘಟನೆಗಳು ಖಂಡಿಸಿದ್ದು, ಶಾಲಾ ಆಡಳಿತ ಮಂಡಳಿ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ. ಮಹಿಳಾ ಕಲ್ಯಾಣ ಇಲಾಖೆ ಹಾಗೂ ರಾಜ್ಯ ಮಹಿಳಾ ಆಯೋಗ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ.
ಕಳೆದ ವರ್ಷ ಬೋರ್ಡ್ ಪರೀಕ್ಷೆಗಳಿಗೆ ಮುಂಚಿತವಾಗಿ ಕೇಂದ್ರ ಶಿಕ್ಷಣ ಸಚಿವಾಲಯವು ಸಲಹೆಯನ್ನು ನೀಡಿ, 10 ಮತ್ತು 12 ನೇ ತರಗತಿಗಳ ಬೋರ್ಡ್ ಪರೀಕ್ಷೆಗಳ ಸಮಯದಲ್ಲಿ ವಿದ್ಯಾರ್ಥಿನಿಯರಿಗೆ ಅಗತ್ಯ ವಿಶ್ರಾಂತಿ ಕೊಠಡಿಗಳ ಅವಕಾಶ ನೀಡಬೇಕು ಮತ್ತು ಪರೀಕ್ಷಾ ಕೇಂದ್ರಗಳಲ್ಲಿ ಉಚಿತ ಸ್ಯಾನಿಟರಿ ಪ್ಯಾಡ್‌ಗಳನ್ನು ಒದಗಿಸಬೇಕು ಎಂದು ತಿಳಿಸಿತ್ತು. ಈ ಸಲಹೆಯು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಎಲ್ಲಾ ಶಾಲೆಗಳು, ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್, ಕೇಂದ್ರೀಯ ವಿದ್ಯಾಲಯ ಸಂಘಟನೆ, ಮತ್ತು ನವೋದಯ ವಿದ್ಯಾಲಯ ಸಮಿತಿಗೆ ಅನ್ವಯಿಸುತ್ತದೆ.
ಉಚಿತ ಸ್ಯಾನಿಟರಿ ಪ್ಯಾಡ್‌ಗಳು ಎಲ್ಲಾ 10 ಮತ್ತು 12 ಬೋರ್ಡ್ ಪರೀಕ್ಷಾ ಕೇಂದ್ರಗಳಲ್ಲಿ ಲಭ್ಯವಿರುತ್ತವೆ, ಅಗತ್ಯವಿದ್ದಲ್ಲಿ ಪರೀಕ್ಷೆಯ ಸಮಯದಲ್ಲಿ ಹೆಣ್ಣುಮಕ್ಕಳಿಗೆ ನೀಡಬೇಕಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.