ಬೆಳಗಾವಿಯಲ್ಲಿ ಕೆಎಸ್ಸಾರ್ಟಿಸಿ ಕಂಡಕ್ಟರ್ ಕನ್ನಡದಲ್ಲಿ ಹೇಳಿ ಎಂದ ಕಾರಣ ಮುಂದಿಟ್ಟುಕೊಂಡು ಹಲ್ಲೆ ನಡೆಸಿ ಬಳಿಕ ಪೋಕ್ಸೋ ಕೇಸ್ ದಾಖಲಿಸಿದ್ದ ದೂರುದಾರೆ ಕೇಸ್ ವಾಪಸ್ ಪಡೆದಿದ್ದಾರೆ.
ಪೋಕ್ಸೋ ಕೇಸ್ ದಾಖಲು ಮಾಡಿದ್ದ ಸಂತ್ರಸ್ತೆಯ ತಾಯಿ ಈ ಕುರಿತು ವೀಡಿಯೊ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ನಾವೂ ಸಹ ಕನ್ನಡಿಗರೇ ಆಗಿದ್ದೇವೆ. ಈ ಜಗಳವನ್ನು ಕನ್ನಡ, ಮರಾಠಿ ಜಗಳ ಮಾಡಲಾಗುತ್ತಿದೆ. ನಾವೂ ಸಹ ಕನ್ನಡಿಗರು. ಇದನ್ನು ಬೆಳೆಸಬೇಡಿ ಎಂದು ಮನವಿ ಮಾಡಿದ್ದಾರೆ.
ಕರ್ನಾಟಕದ ಬಸ್ ಚಾಲಕರು, ನಿರ್ವಾಹಕರ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಗೂಂಡಾ ಕಾಯ್ದೆ ಹಾಕ್ಬೇಕು ಎಂದು ಸಚಿವ ರಾಮಲಿಂಗಾ ರೆಡ್ಡಿ ಅಧಿಕಾರಿಗಳಿಗೆ ಸೋಮವಾರ ತಾಕೀತು ಮಾಡಿದ್ದರು. ನಿರ್ವಾಹಕ ಮಹದೇವಪ್ಪ ಪರವಾಗಿ ನಮ್ಮ ಇಲಾಖೆ ಇದೆ. ಸಾರ್ವಜನಿಕರೂ ಇದ್ದಾರೆ ಎಂದು ಧೈರ್ಯ ತುಂಬಿದ್ದರು.
ಮೂರು ದಿನಗಳ ಹಿಂದೆ ಬಸ್‌ನಲ್ಲಿ ಟಿಕೆಟ್ ಕೊಡುವಾಗ ಮರಾಠಿ ಬರಲ್ಲ, ಕನ್ನಡದಲ್ಲಿ ಮಾತನಾಡಿ ಎಂದಿದ್ದಕ್ಕೆ ಬಸ್ ಕಂಡಕ್ಟರ್ ಮೇಲೆ ಯುವಕರ ಗುಂಪೊಂದು ಬೆಳಗಾವಿ ತಾಲೂಕಿನ ಸುಳೇಬಾವಿ ಬಾಳೇಕುಂದ್ರಿ ಗ್ರಾಮದ ಬಳಿ ಹಲ್ಲೆ ನಡೆಸಿದೆ. ಬಸ್‌ನಲ್ಲಿದ್ದ ಯುವತಿ, ಕಂಡಕ್ಟರ್ ಮಹದೇವಗೆ ಟಿಕೆಟ್ ಕೊಡುವಂತೆ ಮರಾಠಿಯಲ್ಲಿ ಹೇಳಿದ್ದಾಳೆ. ಯುವತಿಯೊಂದಿಗೆ ಯುವಕನೊಬ್ಬ ಪ್ರಯಾಣ ಮಾಡುತ್ತಿದ್ದರಿಂದ ಎರಡು ಟಿಕೆಟ್ ಕೇಳಿದ್ದಾಳೆ. ಮರಾಠಿ ಬರುವುದಿಲ್ಲ ನನಗೆ ಕನ್ನಡದಲ್ಲಿ ಹೇಳುವಂತೆ ಕಂಡಕ್ಟರ್ ಹೇಳಿದ್ದಾನೆ. ಅದಕ್ಕಾಗಿ ಜನರನ್ನು ಕರೆಸಿ ಚಲಿಸುತ್ತಿರುವ ಬಸ್ ನಿಲ್ಲಿಸಿ ಹಲ್ಲೆ ಮಾಡಿಸಿದ್ದರು. ಬಳಿಕ ಕಂಡಕ್ಟರ್ ವಿರುದ್ಧ ಪೋಕ್ಸೋ ಕೇಸ್ ದಾಖಲಿಸಿದ್ದರು.
ಈ ಬೆಳವಣಿಗೆ ಬಳಿಕ ಪ್ರಕರಣ ಕಾವೇರಿದ್ದು, ಶಿವಸೇನೆಯವರು ಕರ್ನಾಟಕದ ಬಸ್‌ಗೆ ಮಸಿ ಬಳಿದಿದ್ದರು. ಕರ್ನಾಟಕದಲ್ಲೂ ಮಹಾರಾಷ್ಟ್ರದ ಬಸ್‌ಗೆ ಮಸಿ ಬಳಿಯಲಾಗಿದೆ. ರಾಜ್ಯದ ಕನ್ನಡ ಪರ ಸಂಘಟನೆಗಳು ಕೂಡ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.