ಭಾರತೀಯ ಜನತಾ ಪಕ್ಷದಲ್ಲಿ ಹುದ್ದೆಗಳಿಗೆ ನೇಮಕ ಮಾಡುವಾಗ ಚುನಾವಣೆಗಿಂತ ನೇರ ನೇಮಕಾತಿ ಹೆಚ್ಚು ಚಾಲ್ತಿಯಲ್ಲಿದ್ದು, ನೇರ ನೇಮಕಾತಿ ನಿಟ್ಟಿನಲ್ಲಿ ಚಟವಟಿಕೆಗಳು ನಡೆಯುತ್ತಿವೆ ಎನ್ನಲಾಗುತ್ತಿದೆ. ಈ ಪರಂಪರೆ ಮುಂದುವರಿದು ವಿಜಯೇಂದ್ರ ಅವರನ್ನು ಇನ್ನೊಂದು ಅವಧಿಗೆ ನೇಮಕ ಮಾಡಬಹುದು ಎನ್ನುವ ಊಹಾಪೋಹಗಳು ಕೇಳುತ್ತಿರುವಾಗ ಯತ್ನಾಳ್ ಗುಂಪು ದೆಹಲಿಗೆ ಹೊರಟಿದೆ ಮತ್ತು ಇನ್ನೆರಡು ದಿನಗಳಲ್ಲಿ ತನ್ನ ಅಭ್ಯರ್ಥಿ ಹೆಸರನ್ನು ಹೊರಹಾಕಲಿದೆ ಎನ್ನುವ ಮಾಹಿತಿ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಭಾಜಪದಲ್ಲಿನ ಭಿನ್ನಮತ ವರ್ಷಗಳಿಂದ ಸದ್ದು ಮಾಡುತ್ತಿದೆ. ಇತ್ತೀಚಿನವರೆಗೆ ಒಳಗೊಳಗೆ ಹೊಗೆಯಾಡುತ್ತಿದ್ದು, ಈಗ ದೊಡ್ಡ ಪ್ರಮಾಣದಲ್ಲಿ ಭುಗಿಲೆದ್ದಿದೆ. ಪಕ್ಷದ ಅಸ್ತಿತ್ವವನ್ನೇ ಅಲುಗಾಡಿಸುವಷ್ಟು ತೀವ್ರ ಸ್ವರೂಪ ಪಡೆದಿದ್ದು, ಮಾಧ್ಯಮದಲ್ಲಿ ಲೀಡ್ ಸ್ಟೋರಿಯಾಗುತ್ತಿದೆ. ತಮ್ಮಲ್ಲಿ ಗುಂಪುಗಾರಿಕೆ ಮತ್ತು ಬಣಗಳು ಇಲ್ಲ. ಎಲ್ಲರೂ ಮೋದೀಜಿಯವರ ನಾಯಕತ್ವದ ಅಡಿಯಲ್ಲಿ ಒಗ್ಗಟಿನಲ್ಲಿ ಇವೆ ಎನ್ನುವ ಹೇಳಿಕೆಗಳು ಬರುತ್ತಿದ್ದರೂ, ಯತ್ನಾಳ್, ವಿಜಯೇಂದ್ರ ಮತ್ತು ತಟಸ್ಥ ಎನ್ನುವ ಮೂರು ಗುಂಪುಗಳು ಕಾಣುತ್ತಿವೆ.
ಜನಾರ್ದನ ರೆಡ್ಡಿ- ಶ್ರೀರಾಮುಲು ತಿಕ್ಕಾಟ ಪಕ್ಷದಲ್ಲಿನ ಭಿನ್ನಮತಕ್ಕೆ ಹೊಸ ಅಯಾಮ ನೀಡಿದರೆ, ಡಾ.ಸುಧಾಕರ್ ಪಕ್ಷದಲ್ಲಿನ ಜ್ವಾಲೆಗೆ ಪೆಟ್ರೋಲ್ ಸುರಿದರೆ. ಸಂಸದ ಡಾ. ಸುಧಾಕರ್ ಅವರು ವಿಜಯೇಂದ್ರ ಮತ್ತು ಬಿಎಸ್‌ವೈ ವಿರುದ್ಧ ನೇರವಾಗಿ ಅರೋಪ ಮಾಡುವ ಧಾಟಿ ನೋಡಿದರೆ ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಹೊಂದಾಣಿಕೆ ಅಸಾಧ್ಯ ಎನಿಸುತ್ತಿದೆ.
ಪಕ್ಷದ ಕಾರ್ಯದರ್ಶಿ ಸುನೀಲ್ ಕುಮಾರ್ ರಾಜೀನಾಮೆ ಇಂಗಿತ ವ್ಯಕ್ತ ಪಡಿಸಿದ್ದು, ಈ ರಾಜೀನಾಮೆ ಪಕ್ಷಕ್ಕೋ ಅಥವಾ ತಮ್ಮ ಹುದ್ದೆಗೋ ಎನ್ನುವುದು ತಿಳಿದಿಲ್ಲ. ಮಾಜಿ ಮುಖ್ಯಮಂತ್ರಿ ಸದಾನಂದ ಗೌಡರು ರಾಜ್ಯ ಘಟಕದಲ್ಲಿನ ಸಮಸ್ಯೆಗೆ ಕೋರ್ ಕಮಿಟಿ ಮತ್ತು ವರಿಷ್ಠರನ್ನೇ ನೇರವಾಗಿ ಹೊಣೆ ಮಾಡಿದ್ದಾರೆ. ಅವರು ಯಾವುದೇ ಗುಂಪಿನ ಪರವಾಗಿ ಒಲವು ತೋರಿಸದಿದ್ದರೂ ವಿಜಯೇಂದ್ರರ ಪರವಾಗಿ ಇದ್ದಂತೆ ಕಾಣುವುದಿಲ್ಲ. ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ವಂಚಿತರಾದ ಅವರಿಗೆ ಹುದ್ದೆಯ ಆಮಿಷ ತೋರಿಸಲಾಗಿದ್ದು, ಈವರೆಗೂ ಈಡೇರದಿರುವುದರಿಂದ ಅವರು ಧ್ವನಿ ಏರಿಸಿ ಮಾತನಾಡುತ್ತಿದ್ದಾರೆಂದು ಎಂಬ ಮಾತು ಕೇಳಿಬರುತ್ತಿದೆ. ಪ್ರಹ್ಲಾದ ಜೋಷಿಗೆ ರೆಡ್ಡಿ ಮತ್ತು ಶ್ರೀರಾಮುಲು ಮಧ್ಯದ ಭಿನ್ನಾಭಿಪ್ರಾಯ ಬಗೆಹರಿಸಲು ವರಿಷ್ಠರು ಸೂಚಿಸಿದ್ದಾರೆ ಎನ್ನಲಾಗುತ್ತಿದ್ದು, ಅವರು ಈ ನಿಟ್ಟಿನಲ್ಲಿ ಇನ್ನೂ ಕಾರ್ಯಪೃವೃತ್ತರಾದಂತೆ ಕಾಣುವುದಿಲ್ಲ.
ಭಾರತೀಯ ಜನತಾ ಪಕ್ಷದಲ್ಲಿ ಹುದ್ದೆಗಳಿಗೆ ನೇಮಕ ಮಾಡುವಾಗ ಚುನಾವಣೆಗಿಂತ ನೇರ ನೇಮಕಾತಿ ಹೆಚ್ಚು ಚಾಲ್ತಿಯಲ್ಲಿದ್ದು, ನೇರ ನೇಮಕಾತಿ ನಿಟ್ಟಿನಲ್ಲಿ ಚಟುವಟಿಕೆಗಳು ನಡೆಯುತ್ತಿವೆ ಎನ್ನಲಾಗುತ್ತಿದೆ. ಈ ಪರಂಪರೆ ಮುಂದುವರಿದು ವಿಜಯೇಂದ್ರ ಅವರನ್ನು ಇನ್ನೊಂದು ಅವಧಿಗೆ ನೇಮಕ ಮಾಡಬಹುದು ಎನ್ನುವ ಊಹಾಪೋಹಗಳು ಕೇಳುತ್ತಿರುವಾಗ ಯತ್ನಾಳ್ ಗುಂಪು ದೆಹಲಿಗೆ ಹೊರಟಿದೆ ಮತ್ತು ಇನ್ನೆರಡು ದಿನಗಳಲ್ಲಿ ತನ್ನ ಅಭ್ಯರ್ಥಿ ಹೆಸರನ್ನು ಹೊರಹಾಕಲಿದೆ ಎನ್ನುವ ಮಾಹಿತಿ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಕೆಲವು ಅಸಕ್ತರು ವಿಜಯೇಂದ್ರರೇ ಮುಂದಿನ ಅಧ್ಯಕ್ಷ ಎಂದು ಹೇಳುತ್ತಿದ್ದರೂ ಆ ವಿಶ್ವಾಸದಲ್ಲಿ ದೃಢತೆ ಕಾಣುತ್ತಿಲ್ಲ. ನಿಷ್ಟಕಾರ್ಯಕರ್ತರೆ ಬೇರೆ, ಭ್ರಷ್ಟ ಕುಟುಂಬವೇ ಬೇರೆ ಎಂದು ಯತ್ನಾಳರು ದೆಹಲಿ ವರಿಷ್ಠರಿಗೆ ಸವಾಲು ಹಾಕಿದ್ದಾರಂತೆ. ಭಿನ್ನಮತ ನಿವಾರಿಸುವಲ್ಲಿ ವರಿಷ್ಠರ ರಾಜ್ಯ ಉಸ್ತುವಾರಿ ಬರಿಗೈಯಲ್ಲಿ ಹಿಂತಿರುಗಿದ್ದು, ಈಗ ಭಿನ್ನಮತ ದೆಹಲಿಯಲ್ಲಿರುವ ವರಿಷ್ಠರ ಅಂಗಳಕ್ಕೇ ಶಿಫ್ಟ್ ಆಗಿದೆ.
ದಿನಗಳು ಕಳೆದಂತೆ ಯತ್ನಾಳ್ ಗುಂಪು ತನ್ನ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಿದೆ. ಭಿನ್ನಮತೀಯ ಚಟವಟಿಕೆಯಲ್ಲಿ ಬಹುಕಾಲ ಒನ್‌ಮ್ಯಾನ್ ಆರ್ಮಿಯಂತೆ ಹೋರಾಡುತ್ತಿದ್ದ ಯತ್ನಾಳರಿಗೆ ದಿನಗಳು ಕಳೆದಂತೆ ಬೆಂಬಲಿಗರ ಸಂಖ್ಯೆ ವೃದ್ಧಿಸುತ್ತಿದೆ ಯತ್ನಾಳರ ಸಂಗಡ ಈಗ ಕುಮಾರ ಬಂಗಾರಪ್ಪ, ಸಿzಶ್ವರ, ರಮೇಶ್ ಜಾರಕಿಹೊಳಿ, ಪ್ರತಾಪಸಿಂಹ ಇದ್ದು ಸದ್ಯದಲ್ಲಿ ಶ್ರೀರಾಮುಲು, ಸುಧಾಕರ ಸೇರುವುದನ್ನು ಅಲ್ಲಗೆಳೆಯಲಾಗದು. ಅರವಿಂದ ಲಿಂಬಾವಳಿ ಸ್ವಲ್ಪ ಭಿನ್ನಮತೀಯ ಭಾಷೆಯಲ್ಲಿ ಮಾತನಾಡುತ್ತಿದ್ದು, ಅವರೂ ಯತ್ನಾಳರನ್ನು ಸೇರಿದರೆ ಆಶ್ಚರ್ಯವಿಲ್ಲ.
ಈಶ್ವರಪ್ಪನವರು ಯತ್ನಾಳ್ ಅವರನ್ನು ಸೇರದಿದ್ದರೂ ಅವರ ಹೋರಾಟ ಕುಟುಂಬ ರಾಜಕಾರಣದ ವಿರುದ್ಧ ಇರುವುದರಿಂದ ವಿಜಯೇಂದ್ರ ಅವರನ್ನು ವಿರೋಧಿಸುವ ಯತ್ನಾಳರೊಂದಿಗೆ ಅಂತಿಮವಾಗಿ ಕೈಜೋಡಿಸುವುದನ್ನು ಅಲ್ಲಗಳೆಯಲಾಗದು. ವೈರಿಯ ವೈರಿ ಸ್ನೇಹಿತನಾಗುತ್ತಾನೆ ಎನ್ನುವ ಸೂತ್ರ ಈಶ್ವರಪ್ಪ ಅವರನ್ನು ಯತ್ನಾಳ್ ಕಡೆ ಎಳೆಯಬಹುದು. ಬಹುಕಾಲ ನನ್ನದೇ ಕಪ್ ಎನ್ನುವಂತೆ ಭಾರೀ ಹುಮ್ಮಸ್ಸಿನಲ್ಲಿದ್ದ ವಿಜಯೇಂದ್ರರ ಧ್ವನಿಯಲ್ಲಿ ಸ್ವಲ್ಪ ಬದಲಾವಣೆ ಕಾಣುತ್ತಿರುವುದನ್ನು ವಿಶ್ಲೇಷಕರು ಗಮನಿಸಿದ್ದು, ವರಿಷ್ಠರ ಒಲುಮೆ ಯಾವ ಕಡೆ ಇದೆ ಎನ್ನುವುದನ್ನು ಕರಾರುವಾಕ್ಕಾಗಿ ಹೇಳಲು ಹಿಂದೇಟು ಹಾಕುತ್ತಿದ್ದಾರೆ.
ಭಾಜಪದ ಆಂತರಿಕ ತುಮುಲವು ಮಾಧ್ಯಮದ ಸುದ್ದಿ ಹಸಿವನ್ನು ನೀಗಿಸುತ್ತಿದ್ದು, ಅದು ರಂಗುರಂಗಿನ ಭಾಷೆಯಲ್ಲಿ, ಉಪಮೆ ಅಲಂಕಾರಗಳಲ್ಲಿ ದಿನದ ಬೆಳವಣಿಗೆಯನ್ನು ಚಿತ್ತಾಕರ್ಷವಾಗಿ ಹೆಡ್‌ಲೈನ್‌ನಲ್ಲಿ ಬಿಂಬಿಸುತ್ತಿದೆ. ಭಾರತೀಯ ಜಗಳ ಪಕ್ಷ ಮನೆಯೊಂದು ಮೂರು ಬಾಗಿಲು, ಪಕ್ಷ ಅವಸಾನದತ್ತ, ಶಿಸ್ತಿನ ಪಕ್ಷ ದಲ್ಲಿ ಅಶಿಸ್ತಿನ ಅತಿರೇಕ, ಭಾಜಪದ ದಕ್ಷಿಣ ಸೀಮೋಲ್ಲಂಘನದ ಕನಸು ಭಗ್ನ, ಅರಳುವ ಬದಲು ಕಮಲ ಮುದುಡುತ್ತಿದೆ ಮುಂತಾದ ವಿಶೇಷಣಗಳು ಮಾಧ್ಯಮದಲ್ಲಿ ಕಾಣುತ್ತಿವೆ. ಇವುಗಳನ್ನು ನೋಡಿದಾಗ ತಳಮಟ್ಟದ ಕಾರ್ಯಕರ್ತರು, ನಾಯಕರುಗಳು ಬೇಸರಿಸುತ್ತಾರೆ. ತಾವು ಭಿತ್ತಿಪತ್ರ ಹಚ್ಚಿದ್ದು, ಸಭೆ ಸಮಾರಂಭಗಳನ್ನು ವ್ಯವಸ್ಥೆಗೊಳಿಸಿದ್ದು, ಭಾಷಣಕ್ಕೆ ವೇದಿಕೆ ಸಿದ್ಧಪಡಿಸಿದ್ದು, ಗಂಟಲು ಹರಿಯುವಂತೆ ಜಿಂದಾಬಾದ್ ಘೋಷಣೆ ಕೂಗಿದ್ದು, ಪಾದಯಾತ್ರೆ ನಡೆಸಿದ್ದು, ನಾಯಕರುಗಳನ್ನು ನೋಡಿಕೊಂಡಿದ್ದು ಅವರು ಅಧಿಕಾರಕ್ಕಾಗಿ ಈ ರೀತಿ ಕಿತ್ತಾಟ ನಡೆಸಲೆಂದೇ ಎಂದು ವ್ಯಾಕುಲತೆ ವ್ಯಕ್ತಪಡಿಸುತ್ತಿದ್ದಾರೆ. ಪಕ್ಷ ಕ್ಕೆ ನಿಷ್ಟಾವಂತರಾದ ಬಹುತೇಕ ನಾಯಕರು ಮತ್ತು ಕಾರ್ಯಕರ್ತರು ಪ್ರತಿಕ್ರಿಯಿಸದೇ ಅಸಕ್ತಿ ಕಳೆದುಕೊಂಡು ಜಾಣಮೌನಕ್ಕೆ ಜಾರಿದ್ದಾರೆ. ನಾಲ್ಕಾರು ನಾಯಕರುಗಳಷ್ಟೇ ಹೇಳಿಕೆ ನೀಡುತ್ತಿದ್ದಾರೆ. ಬಹುತೇಕ ಕಾರ್ಯಕರ್ತರು, ಕೆಳಸ್ತರದ ನಾಯಕರು ಮತ್ತು ಹಲವು ಮೊದಲಿನ ಸಾಲಿನ ನಾಯಕರು ತಮಗೆ ಸಂಬಂಧ ಇಲ್ಲದಂತೆ ವರ್ತಿಸುತ್ತಿದ್ದಾರೆ. ಕೆಲವರು ಪಕ್ಕಕ್ಕೆ ಸರಿದು ನಿಂತು ಬೆಳವಣಿಗೆಯನ್ನು ಕುತೂಹಲದಿಂದ ಮತ್ತು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಅಂತಿಮವಾಗಿ ವರಿಷ್ಠರು ತೆಗೆದುಕೊಂಡ ನಿರ್ಣಯಕ್ಕೆ ಸೈ ಎನ್ನುವ ಸಾಧ್ಯತೆ ಹೆಚ್ಚು ಕಾಣುತ್ತದೆ.
ಏನೇ ಮಾಡಿದರೂ ಸದ್ಯಆಧಿಕಾರ ಹತ್ತಿರದಲ್ಲಿಲ್ಲ ಎನ್ನುವ ನಿರಾಸಕ್ತಿ ಮತ್ತು ಹತಾಶೆ ಈ ಬೆಳವಣಿಗೆಗೆ ಕಾರಣ ಇರಬೇಕು ಎಂದು ಜನರು ಅಡಿಕೊಳ್ಳುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಪಕ್ಷ ಕ್ಕೆ ಡ್ಯಾಮೇಜ್ ಆದರೆ, ಪಕ್ಷ ಕುಸಿತ ಕಂಡರೆ ಅದಕ್ಕೆ ನಾಯಕರುಗಳೇ ಕಾರಣ ಎನ್ನುತ್ತಾರೆ. ಪಕ್ಷ ದೃಢವಾಗಿದೆ, ಕೆಳಮಟ್ಟದಿಂದ ಕೆಲಸ ಮಾಡುವ ನಿಷ್ಠಾವಂತ ಕಾರ್ಯಕರ್ತರಿಗಿಂತ ತಳಮಟ್ಟದ ನಾಯಕರುಗಳ ದಂಡು ಗಟ್ಟಿಯಾಗಿದೆ. ಪ್ರತಿಷ್ಟೆ, ಅಧಿಕಾರದಾಹ ಬದಿಗಿಟ್ಟು ಪಕ್ಷ ವನ್ನು ಗಟ್ಟಿಗೊಳಿಸುವ ಮನಸ್ಸಿಗಿಂತ ಅಧಿಕಾರ ಅನುಭವಿಸುವ ಬಯಕೆ ಹೊಂದಿರುವುದೇ ಇಂದಿನ ಸಮಸ್ಯೆಗೆ ಮೂಲ ಕಾರಣ ಎಂದು ಹಳೆಯ ತಲೆಮಾರಿನ ನಾಯಕರು ಬೇಸರ ವ್ಯಕ್ತಪಡಸುತ್ತಾರೆ.
ಹಳಬರು, ನಿಷ್ಠಾವಂತರು ಮತ್ತು ಹೊಸಬರು ಎನ್ನುವ ಸಮೀಕರಣ ಅಲ್ಲಲ್ಲಿ ಕೇಳುತ್ತಿದ್ದು, ನಾವು ಪಕ್ಷಾಂತರ ಮಾಡಿರುವುದರಿಂದಲೇ ಕರ್ನಾಟಕದಲ್ಲಿ ನೀವು ಅಧಿಕಾರದ ರುಚಿ ಕಾಣುವಂತಾಯಿತು ಎಂದು ನೆನಪಿಸುತ್ತಾ ಹೊಸಬರು ಕೌಂಟರ್ ಕೊಡುತ್ತಿದ್ದಾರಂತೆ, ಇದು ಬಹಿರಂಗ ಸತ್ಯ. ಭಾಜಪ ಕರ್ನಾಟಕದಲ್ಲಿ ಎಂದೂ ತನ್ನ ಸ್ವಂತ ಬಲದಿಂದ ಅಧಿಕಾರದ ಗದ್ದುಗೆ ಹಿಡಿದ ದಾಖಲೆ ಇಲ್ಲ.
ವರ್ಷಗಳ ನಿರ್ಲಕ್ಷ್ಯ, ನಿರಾಸಕ್ತಿ, ಉದಾಸೀನ ಮತ್ತು ನಿರ್ಲಿಪ್ತತೆಯ ನಂತರ ಪಕ್ಷ ದ ವರಿಷ್ಠರು ಬಡಿದಾಡುವ ಬಣಗಳನ್ನು ಸಂಧಾನಕ್ಕಾಗಿ ದೆಹಲಿಗೆ ಕರೆದಿದ್ದಾರೆ. ಆದರೆ,ಈ ಬಣಗಳ ದೃಢವಾದ ನಿಲುವು ಮತ್ತು ಹೇಳಿಕೆಗಳಲ್ಲಿ ಅವರು ಬಳಸುವ ಭಾಷೆ ನೋಡಿದರೆ ಸಕಾರಾತ್ಮಕ ಬೆಳವಣಿಗೆ ಸಂದೇಹ ಎನಿಸುತ್ತದೆ. ದೆಹಲಿ ಚುನಾವಣೆ ಫಲಿತಾಂಶ ಬರುವವರೆಗೆ ವರಿಷ್ಠರು ಯಾವುದೇ ಪರಿಹಾರ ಸೂಚಿಸುವ ಸಾಧ್ಯತೆ ಕಾಣುತ್ತಿಲ್ಲ. ಎರಡೂ ಬಣಗಳನ್ನು ಒಟ್ಟಿಗೆ ಕೂರಿಸಿ ಮುಖಾಮುಖಿ ಮಾಡಿ ಮಾತುಕತೆ ನಡೆಸಬಹುದು. ಯತ್ನಾಳರು ಕುಟುಂಬ ರಾಜಕಾರಣದ ವಿರುದ್ಧ ಇರುವ ತಮ್ಮ ಕಠಿಣ ನಿಲುವನ್ನು ಬದಲಿಸುವ ಸಾಧ್ಯತೆ ಕಾಣುವುದಿಲ್ಲ.
ಹಾಗೆಯೇ, ವಿಜಯೇಂದ್ರ ಅಧ್ಯಕ್ಷ ಪದವಿಯನ್ನು ಸುಲಭವಾಗಿ ಬಿಟ್ಟುಬಿಡುತ್ತಾರೆ ಎನ್ನಲಾಗದು. ಹೋರಾಟದ ಛಲ ಇಬ್ಬರಲ್ಲೂ ಸಾಕಷ್ಟು ಇದೆ. ಇಬ್ಬರಿಗೂ ಹಿಂಬಾಲಕರು ಇದ್ದಾರೆ. ಚುನಾವಣೆ ಕೈಬಿಟ್ಟು ವಿಜಯೆಂದ್ರರಿಗೆ ಹುದ್ದೆ ನೀಡಿದರೆ ಯತ್ನಾಳರ ಮುಂದಿನ ಹೆಜ್ಜೆ ಏನು ಎಂಬುದು ಕುತೂಹಲಕಾರಿಯಾಗಿದೆ. ಇದು ವರಿಷ್ಠರಿಗೆ ಚೆನ್ನಾಗಿ ತಿಳಿದಿದ್ದು, ಅಂತೆಯೇ ಗಡಿಬಿಡಿಯಲ್ಲಿ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆ ಕಡಿಮೆ ಎನ್ನಬಹುದು. ಎಲ್ಲವನ್ನೂ ತೂಗಿ, ಅಳೆದು ಸಾಧ್ಯಾಸಾಧ್ಯತೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಬಣಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಾವು ಸಾಯಬಾರದು, ಕೋಲೂ ಮುರಿಯಬಾರದು ರೀತಿಯಲ್ಲಿ ಇಬ್ಬರಿಗೂ ಹಸ್ತಲಾಘವ ಮಾಡಿಸಬಹುದು. ಆದರೆ ಗ್ರೌಂಡ್ ರಿಯಾಲಿಟಿಯನ್ನು ಚೆನ್ನಾಗಿ ತಿಳಿದ ರಾಜಕೀಯ ಪಂಡಿತರ ಪ್ರಕಾರ ಇಂತಹ ಹಸ್ತಲಾಘವ ಅಲ್ಪಕಾಲೀನವಷ್ಟೇ. ಭಿನ್ನಮತ ವ್ಯಕ್ತಿಗತ ಮತ್ತು ಸೈದ್ಧಾಂತಿಕ ಈ ಎರಡೂ ರೂಪದಲ್ಲಿ ಇದ್ದು ಪರಿಹಾರ ತುಂಬಾ ಕ್ಲಿಷ್ಟಕರವಾಗಿದೆ.
ಯತ್ನಾಳ್ ತಮ್ಮ ಸೈದ್ಧಾಂತಿಕ ಹೋರಾಟದಲ್ಲಿ ಬಹು ಮುಂದೆ ಹೋಗಿದ್ದು, ಅವರು ಹಿಂದೆ ಹೆಜ್ಜೆ ಇಡುವ ಸಾಧ್ಯತೆ ಕಡಿಮೆ. ರಾಜಾಧ್ಯಕ್ಷರ ಪದವಿಯಲ್ಲಿ ಮುಂದಿನ ಮುಖ್ಯಮಂತ್ರಿಯಾಗುವ ಸಾಧ್ಯತೆಗಳು ಅಗೋಚರವಾಗಿದ್ದು, ಸ್ಪರ್ಧೆ ತುರುಸಿನದಾಗಿರುತ್ತದೆ. ಇನ್ನೊಂದು ವಾರ ಭಾಜಪದ ಕರ್ನಾಟಕ ಘಟಕಕ್ಕೆ ಸಂದಿಗ್ಧ ಕಾಲ. ಪಕ್ಷ ದ ವರಿಷ್ಠರ ಚಾಕಚಕ್ಯತೆಗೆ ಪರೀಕ್ಷಾ ಕಾಲ.
– ರಮಾನಂದ ಶರ್ಮಾ, ವಿಶ್ಲೇಷಕರು