ನ್ಯೂಜಿಲೆಂಡ್ ತಂಡ 60 ರನ್ ಗಳ ಭಾರೀ ಅಂತರದಿಂದ ಪಾಕಿಸ್ತಾನ ತಂಡವನ್ನು ಸೋಲಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಟೂರ್ನಿಯಲ್ಲಿ ಭರ್ಜರಿ ಆರಂಭ ಪಡೆದಿದೆ. ಆರಂಭಿಕ ವಿಲ್ ಯಂಗ್ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಟಾಮ್ ಲಾಥಮ್ ಸಿಡಿಸಿದ ಸಿಡಿಲಬ್ಬರದ ಶತಕಗಳ ನೆರವಿನಿಂದ ಕಿವೀಸ್‌ಗೆ ಈ ಗೆಲುವು ಸಾಧ್ಯವಾಯಿತು.
ಕರಾಚಿಯಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡ 50 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 320 ರನ್ ಸಂಪಾದಿಸಿತು. ಕಠಿಣ ಗುರಿ ಬೆಂಬತ್ತಿದ ಪಾಕಿಸ್ತಾನ ತಂಡ 47.2 ಓವರ್ ಗಳಲ್ಲಿ 260 ರನ್ ಗೆ ಆಲೌಟಾಯಿತು. ಈ ಸೋಲಿನೊಂದಿಗೆ ಪಾಕಿಸ್ತಾನ ಟೂರ್ನಿ ಯಿಂದ ಹೊರಬೀಳುವ ಅಪಾಯಕ್ಕೆ ಸಿಲುಕಿದೆ. ಭಾರತ ವಿರುದ್ಧ ಹೈವೋಲ್ಟೇಜ್ ಪಂದ್ಯಕ್ಕೆ ಬೇಕಾದ ಆತ್ಮವಿಶ್ವಾಸ ಗಳಿಸಲು ಕೂಡ ವಿಫಲವಾಯಿತು.
ಪಾಕಿಸ್ತಾನ ಪರ ಮಾಜಿ ನಾಯಕ 90 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 64 ರನ್ ಗಳಿಸಿದರು. ಬಾಬರ್ ನಿಧಾನಗತಿಯ ಬ್ಯಾಟಿಂಗ್ ಕೂಡ ತಂಡದ ಇತರೆ ಬ್ಯಾಟ್ಸ್ ಮನ್ ಗಳ ಮೇಲೆ ಒತ್ತಡ ಬೀಳುವಂತೆ ಮಾಡಿತು. ಸಲ್ಮಾನ್ ಆಘಾ (42), ಫಕ್ತಾರ್ ಜಮಾನ್ (24) ಸ್ವಲ್ಪ ಹೋರಾಟ ನಡೆಸಿದರೆ, ಕುಶ್ದಿಲ್ ಶಾಹ್ 49 ಎಸೆತಗಳಲ್ಲಿ 10 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 69 ರನ್ ಬಾರಿಸಿ ಮಿಂಚಿದರೂ ತಂಡವನ್ನು ಗೆಲುವಿನತ್ತ ಮುನ್ನಡೆಸಲು ವಿಫಲರಾದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡದ ಪರ ವಿಲ್ ಯಂಗ್ ಹಾಗೂ ಟಾಮ್ ಲಾಥಮ್ ಭರ್ಜರಿ ಶತಕ ಸಿಡಿಸಿ ಗಮನ ಸೆಳೆದರು.
ಕಿವೀಸ್ ತಂಡದ ಆರಂಭ ಕಳಪೆಯಾಗಿತ್ತು. ಡ್ವೇನ್ ಕಾನ್ವೇ ತಮ್ಮ ಮೇಲೆ ಇಟ್ಟ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ವಿಫಲರಾದರು. ಇನ್ನು ಮಧ್ಯಮ ಕ್ರಮಾಂಕದ ಸ್ಟಾರ್ ಆಟಗಾರ ಕೇನ್ ವಿಲಿಯಮ್ಸನ್ ನಿರಾಸೆ ಅನುಭವಿಸಿದರು.
ಕೇನ್ ಅವರಿಗೆ ನಾಸೀಮ್ ಶಾ ಖೆಡ್ಡ ತೋಡಿದರು. ಸ್ಟಂಪ್ ಮೇಲೆ ಇದ್ದ ಎಸೆತವನ್ನು ತಪ್ಪಾಗಿ ಗ್ರಹಿಸಿದ ಕೇನ್ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದರು.
ಅತ್ತ ಇನ್ನೋರ್ವ ಮಧ್ಯಮ ಕ್ರಮಾಂದ ಸ್ಫೋಟಕ ಆಟಗಾರ ಡೇರೆಲ್ ಮಿಚೆಲ್ ಅವರಿಗೆ ಹ್ಯಾರಿಸ್ ರೌಫ್ ಪೆವಿಲಿಯನ್ ಹಾದಿ ತೋರಿಸಿದರು. ಪರಿಣಾಮ ನ್ಯೂಜಿಲೆಂಡ್ 73 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.ಈ ಹಂತದಲ್ಲಿ ಸಂಕಷ್ಟದಲ್ಲಿದ್ದ ತಂಡಕ್ಕೆ ವಿಲ್ ಯಂಗ್ ಹಾಗೂ ಟಾಮ್ ಲಾಥಮ್ ಜೋಡಿ ಚೈತನ್ಯ ನೀಡಿದರು.
ಈ ಜೋಡಿ ಮಧ್ಯಾವಧಿಯ ಓವರ್‌ಗಳಲ್ಲಿ ವಿಕೆಟ್ ಬೀಳದಂತೆ ತಡೆಯಿತು. ಪಾಕ್ ಬೌಲರ್‌ಗಳ ರಣ ತಂತ್ರವನ್ನು ಮೆಟ್ಟಿನಿಂತು ಬ್ಯಾಟ್ ಮಾಡಿದ ಈ ಜೋಡಿ ಆರ್ಭಟಿಸಿತು. ಲಾಥಮ್-ಯಂಗ್ ಜೋಡಿ 126 ಓವರ್ಗಳಲ್ಲಿ 118 ರನ್ ಸೇರಿಸಿತು.
ಎರಡು ಶತಕದ ಜೊತೆಯಾಟ: ಆರಂಭಿಕ ಆಟಗಾರ ವಿಲ್ ಯಂಗ್ ಆಕರ್ಷಕ ಬ್ಯಾಟಿಂಗ್ ಪ್ರದರ್ಶನ ನೀಡಿ 113 ಎಸೆತಗಳಲ್ಲಿ 12 ಬೌಂಡರಿ, 1 ಸಿಕ್ಸರ್ ಸಹಾಯದಿಂದ 107 ರನ್ ಸಿಡಿಸಿ ಆರ್ಭಟಿಸಿದರು. ಯಂಗ್ ನಿರ್ಗಮನದ ಬಳಿಕ ಟಾಮ್ ಲಾಥಮ್ ಹಾಗೂ ಆಲ್ ರೌಂಡರ್ ಗ್ಲೇನ್ ಫಿಲಿಪ್ಸ್ ಜೋಡಿ ಪಾಕ್ ಬೌಲರ್‌ಗಳ ತಂತ್ರವನ್ನು ಮೆಟ್ಟಿ ನಿಂತು ಬ್ಯಾಟ್ ಮಾಡಿದರು.
ಟಾಮ್ ಲಾಥಮ್ 32 ಇನಿಂಗ್ಸ್ ಬಳಿಕ ಶತಕ ಬಾರಿಸಿದರು. ಈ ಮೂಲಕ ತಮ್ಮ ವೃತ್ತಿ ಜೀವನದ ಎಂಟನೇ ಏಕದಿನ ಶತಕವನ್ನು ಬಾರಿಸಿ ಟಾಮ್ ಮಿಂಚಿದರು.
ಐದನೇ ವಿಕೆಟ್ ಟಾಮ್ ಲಾಥಮ್ ಹಾಗೂ ಗ್ಲೇನ್ ಫಿಲಿಪ್ಸ್ ಜೋಡಿ 74 ಎಸೆತಗಳಲ್ಲಿ 125 ರನ್ ಸಿಡಿಸಿ ತಂಡಕ್ಕೆ ಶಕ್ತಿ ನೀಡಿತು. ಗ್ಲೇನ್ ಫಿಲಿಪ್ಸ್ 39 ಎಸೆತಗಳಲ್ಲಿ 156 ಸ್ಟ್ರೈಕ್ ರೇಟ್‌ನಲ್ಲಿ 61 ರನ್ ಬಾರಿಸಿ ಔಟ್ ಆದರು. ಟಾಮ್ ಲಾಥಮ್ 104 ಎಸೆತಗಳಲ್ಲಿ 10 ಬೌಂಡರಿ ಮತ್ತು 3 ಸಿಕ್ಸರ್ ಸಹಾಯದಿಂದ ಅಜೇಯ 118 ರನ್ ಗಳಿಸಿದರು.