ಬೆಳಗಾವಿಯ ರಾಯಬಾಗ ತಾಲೂಕಿನ ಹಾರೂಗೇರಿಯಲ್ಲಿ ಪೊಲೀಸ್ ಠಾಣೆಯ ಎದರು ತಂದೆಯ ಶವವಿಟ್ಟು ಇನ್ಸ್ಪೆಕ್ಟರ್ ಪ್ರತಿಭಟನೆ ನಡೆಸಿದ್ದಾರೆ. ದೇವದುರ್ಗ ಠಾಣೆಯ ಇನ್ಸ್ಪೆಕ್ಟರ್ ಅಶೋಕ ಸದಲಗಿಯವರು ಹಾರೂಗೇರಿ ಠಾಣೆ ಪಿಎಸ್‌ಐ ಮಾಳಪ್ಪ ಪೂಜಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಇನ್ಸ್ಪೆಕ್ಟರ್ ಅಶೋಕ ಸದಲಗಿ ತಂದೆ ಅಣ್ಣಪ್ಪ ಅವರ ಜಮೀನಿಗೆ ಬಾಬು ನಡೋಣಿ, ಪ್ರತಾಪ್ ಹರೋಲಿ, ವಸಂತ ಚೌಗಲಾ ಜನವರಿ10ರಂದು ಅಕ್ರಮ ಪ್ರವೇಶ ಮಾಡಿದ್ದರು. ಇದನ್ನು ಪ್ರಶ್ನಿಸಿದ್ದಕ್ಕೆ ಬಾಬು ನಡೋಣಿ, ಪ್ರತಾಪ ಹರೋಲಿ, ವಸಂತ ಚೌಗಲಾ ಮತ್ತು ಇವರ ಸಹಚರರು ಅಣ್ಣಪ್ಪ ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪವಿದೆ.
ಅಣ್ಣಪ್ಪ ಸದಲಗಿ ಪೊಲೀಸರನ್ನು ಕರೆಸಿದ್ದು, ಅಣ್ಣಪ್ಪ ಸದಲಗಿ ಹಾಗೂ ಬಾಬು ನಡೋಣಿ ಸೇರಿದಂತೆ ಎಲ್ಲರನ್ನೂ ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿದ್ದರು. ಪೊಲೀಸರು ಅಣ್ಣಪ್ಪ ಸದಲಗಿ ಅವರನ್ನು ದಿನವಿಡಿ ಠಾಣೆಯಲ್ಲಿರಿಸಿಕೊಂಡು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಸಂಜೆಯಾಗುತ್ತಿದ್ದಂತೆ ಶುಗರ್ ಕಡಿಮೆಯಾಗಿ ಬಿಪಿ ಹೆಚ್ಚಾಗಿ ಅಣ್ಣಪ್ಪ ಅಸ್ವಸ್ಥರಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆರೋಪಿಗಳ ವಿರುದ್ಧ ದೂರು ದಾಖಲಿಸಿಕೊಳ್ಳುವಂತೆ ಇನ್ಸ್ಪೆಕ್ಟರ್ ಅಶೋಕ್ ಅವರು ಹಾರೂಗೇರಿ ಪಿಎಸ್‌ಐ, ಸಿಪಿಐ ಮತ್ತು ಅಥಣಿ ಡಿವೈ ಎಸ್ಪಿಗೆ ಮನವಿ ಮಾಡಿದ್ದರು. ಆದರೆ ದೂರು ದಾಖಲಿಸಿಕೊಳ್ಳದೆ ಪೊಲೀಸರು ಬೇಜವಾಬ್ದಾರಿ ತನದಿಂದ ವರ್ತಿಸಿದ್ದಾರೆ ಎಂದು ಹೇಳಲಾಗಿದೆ.
ಅಕ್ರಮವಾಗಿ ಜಮೀನು ಪ್ರವೇಶ ಮಾಡಿದ್ದವರು ಹಾರುಗೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಇನ್ಸ್ಪೆಕ್ಟರ್ ಅಶೋಕ್ ಸದಲಗಿ ಸಹೋದರನ ಮೇಲೆ ಪಿಎಸ್‌ಐ ಮಾಳಪ್ಪ ಫೆಬ್ರವರಿ 2 ರಂದು ಅಟ್ರಾಸಿಟಿ ಕೇಸ್ ದಾಖಲಿಸಿದ್ದಾರೆ.
ಅಣ್ಣಪ್ಪ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮೃತಪಟ್ಟಿದ್ದಾರೆ. ನ್ಯಾಯಕ್ಕಾಗಿ ಆಗ್ರಹಿಸಿ ಇನ್ಸ್ಪೆಕ್ಟರ್ ಅಶೋಕ ಸದಲಗಿ ಹಾರುಗೇರಿ ಪೊಲೀಸ್ ಠಾಣೆ ಎದುರು ತಂದೆಯ ಶವವಿಟ್ಟು ಪ್ರತಿಭಟನೆ ನಡೆಸಿ ಪಿಎಸ್‌ಐ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ್ ಗುಳೇದ ಬರುವಂತೆ ಪಟ್ಟು ಹಿಡಿದಿದ್ದಾರೆ.
ಶನಿವಾರ ಬೆಳಗಿನ ಜಾವ ಎರಡು ಗಂಟೆಗೆ ಸ್ಥಳಕ್ಕೆ ಭೇಟಿ ನೀಡಿದ ಚಿಕ್ಕೋಡಿ ಡಿವೈಎಸ್‌ಪಿ ಇನ್ಸ್ಪೆಕ್ಟರ್ ಅಶೋಕ್ ಅವರ ಮನವೊಲಿಸಿದ ಬಳಿಕಅಶೋಕ್ ಪ್ರತಿಭಟನೆ ಕೈ ಬಿಟ್ಟಿದ್ದಾರೆ.