ದ್ವೇಷ ಭಾಷಣ ತಡೆ ಮಸೂದೆಯನ್ನು ಪ್ರಚೋದನಕಾರಿ ಭಾಷಣ ಮಾಡುವವರು ಮಾತ್ರ ವಿರೋಧಿಸುತ್ತಾರೆ. ಈ ಕಾಯ್ದೆ ಎಲ್ಲಾ ಪಕ್ಷದವರಿಗೂ ಅನ್ವಯವಾಗುತ್ತದೆ. ಪ್ರಚೋದನಾಕಾರಿ ಭಾಷಣ ಮಾಡದೆ ಹೋದರೆ ಸುಮ್ಮನೆ ಪ್ರಕರಣ ದಾಖಲಿಸುವುದಿಲ್ಲ . ಬಿಜೆಪಿಯವರು ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ಏಕೆ ನೋಡಿಕೊಳ್ಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, ದ್ವೇಷ ಭಾಷಣ ತಡೆ ಮಸೂದೆ ಕೆಲವರನ್ನು ಗುರಿಯಾಗಿಸಿಕೊಂಡು ರೂಪಿಸಲಾಗಿದೆ ಎಂದು ಬಿಜೆಪಿ ಆರೋಪಿಸಿರುವ ಬಗ್ಗೆ ಮಾತನಾಡಿ ಕಾಯ್ದೆ ಎಲ್ಲಾ ಪಕ್ಷದವರಿಗೂ ಅನ್ವಯವಾಗುತ್ತದೆ. ಬಿಜೆಪಿ ಮಾತ್ರ ಏಕೆ ವಿರೋಧಿಸುತ್ತಾರೆ? ದ್ವೇಷ ಭಾಷಣದಿಂದ ಸಮಾಜದಲ್ಲಿ ಶಾಂತಿ ನೆಲೆಸುತ್ತದೆಯೇ ? ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು. ಶಾಂತಿ ಹಾಗೂ ಭಾತೃತ್ವ ಕಾಪಾಡಲು ಈ ಮಸೂದೆ ಜಾರಿ ಮಾಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ದ್ವೇಷ ಭಾಷಣ ಹೆಚ್ಚಾಗುತ್ತಿದೆ. ಅದನ್ನು ನಿಯಂತ್ರಿಸಲೆಂದು ಮಸೂದೆ ರೂಪಿಸಿದೆ ಎಂದರು. ಬಿಜೆಪಿ ಮಸೂದೆಯನ್ನು ತೀವ್ರವಾಗಿ ವಿರೋಧಿಸುತ್ತಿರುವುದು ಅವರು ದ್ವೇಷ ಭಾಷಣ ಮಾಡುತ್ತಾರೆ ಎಂಬ ಕಾರಣಕ್ಕಾಗಿ ಎಂದು ಹೇಳಿದರು.
ರಾಜ್ಯದ ನಾಯಕತ್ವ ವಿಚಾರದಲ್ಲಿ ಖರ್ಗೆ ಅವರು ಹೇಳಿದ್ದು ಎಲ್ಲರೂ ಒಪ್ಪಬೇಕಿರುವ ವಿಚಾರ ಎಂದು ಸಿಎಂ, ರಾಜಣ್ಣ ಅವರನ್ನು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಮಾಡಿದ್ದೇ ನಾನು ಎಂದು ಹೇಳಿರುವುದಕ್ಕೆ ಪ್ರತಿಕ್ರಿಯಿಸಿ, ಅಧ್ಯಕ್ಷ ಮಾಡಿದ್ದು ಅಂದಿನ ಸಿಎಂ ಎಸ್ಎಂ ಕೃಷ್ಣ ಎಂದಿದ್ದಾರೆ.ಸಂಕ್ರಾಂತಿ ಕ್ರಾಂತಿ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ, ಅದೆಲ್ಲ ಮುಗಿದು ಹೋಗಿದೆ. ಏನೇ ಇದ್ದರೂ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಮತ್ತೆ ಹೇಳಿದ್ದಾರೆ.
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ರಾಜ್ಯ ನಾಯಕತ್ವದ ಬಗ್ಗೆ ಏನೇ ಕೇಳಿದರೂ ಹೈಕಮಾಂಡ್‌ನತ್ತ ಬೆರಳು ತೋರಿಸುತ್ತಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ವಿವಾದ ಸೃಷ್ಟಿಸಿದ್ದು ರಾಜ್ಯದ ಕಅಂಗ್ರೆಸ್ ನಾಯಕರು, ಅವರೇ ಪರಿಹಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ಈ ನಡುವೆ ರಾಜ್ಯ ನಾಯಕತ್ವ ವಿವಾದದ ಬಗ್ಗೆ ಮಾತನಾಡಿದ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ, ಯಾರು ಸಿಎಂ ಆಗುತ್ತಾರೋ ಬಿಡುತ್ತಾರೋ ನಮಗೆ ಆ ಬಗ್ಗೆ ಯಾವುದೇ ಆಸಕ್ತಿ ಇಲ್ಲ. ರಾಜ್ಯದಲ್ಲಿ ಕೃಷಿಕರ ಪರಿಸ್ಥಿತಿ ಹದಗೆಟ್ಟಿದೆ. ಅಭಿವೃದ್ಧಿಯ ಹೆಸರಿನಲ್ಲಿ ಜನರ ಹಣವನ್ನು ಲೂಟಿ ಮಾಡಲಾಗುತ್ತಿದೆ. ರಸ್ತೆಗಳ ಸ್ಥಿತಿಯನ್ನು ನೋಡಿದರೆ ರಾಜ್ಯದ ಅಭಿವೃದ್ಧಿ ತಿಳಿಯುತ್ತದೆ. ಮೈಸೂರಿನಿಂದ ಕೆ.ಆರ್.ಪೇಟೆಗೂ ಹೆಲಿಕಾಪ್ಟರ್ ಬಳಸುವ ಮುಖ್ಯಮಂತ್ರಿಗಳು ಓಡಾಟಕ್ಕಾಗಿ 47 ಕೋಟಿ ರೂ. ಖರ್ಚು ಮಾಡುತ್ತಿದ್ದಾರೆ. ದಾಖಲೆಯ ಬಜೆಟ್ ಮಂಡಿಸಿರುವುದಾಗಿ ಹೇಳಿಕೊಳ್ಳುವವರು ಜನರ ಮೇಲೆ ಎಷ್ಟು ತೆರಿಗೆ ಹಾಕಬೇಕು ಎಂಬುದರ ಬಗ್ಗೆಯೇ ಚಿಂತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


