ಶಾಸಕ ಭರತ್ ರೆಡ್ಡಿ ಅಪ್ತ ಸತೀಶ್ ರೆಡ್ಡಿ ನನ್ನ ಹತ್ಯೆಗೆ ಸಂಚು ರೂಪಿಸಿದ್ದು, ನನ್ನನ್ನು ಫಿನಿಶ್ ಮಾಡಲೆಂದೇ ಈ ದಾಳಿ ಗುಂಡಿನ ದಾಳಿ ನಡೆಸಿದ್ದಾರೆ. ಬ್ಯಾನರ್ ಗಲಾಟೆ ನೆಪದಲ್ಲಿ ನಮ್ಮ ಮನೆ ಬಳಿ ಗುಂಡಿನ ದಾಳಿ ನಡೆಸಲಾಗಿದೆ ಎಂದು ಶಾಸಕ ಜನಾರ್ಧನ ರೆಡ್ಡಿ ಆರೋಪಿಸಿದ್ದಾರೆ.
ವಾಲ್ಮೀಕಿ ಪುತ್ಥಳಿ ಅನಾವರಣದ ಹಿನ್ನೆಲೆಯಲ್ಲಿ ಬಳ್ಳಾರಿಯ ಅವಂಬಾವಿಯಲ್ಲಿ ಜನಾರ್ದನ ರೆಡ್ಡಿ ಮನೆ ಮುಂದೆ ಬ್ಯಾನರ್ ಹಾಕಿಸುವುದನ್ನು ಅವರ ಬೆಂಬಲಿಗರು ವಿರೋಧಿಸಿದ್ದಾರೆ. ಈ ವೇಳೆ ಜನಾರ್ದನ ರೆಡ್ಡಿ ಹಾಗೂ ಶಾಸಕ ಭರತ್ ರೆಡ್ಡಿ ಬೆಂಬಲಿಗರ ನಡುವೆ ಹೊಡೆದಾಟ ನಡೆದು ವಿಕೋಪಕ್ಕೆ ತಿರುಗಿತ್ತು. ವಿಷಯ ಗೊತ್ತಾದ ಕೂಡಲೇ ಸ್ಥಳಕ್ಕೆ ಬಿಜೆಪಿ ನಾಯಕ ಶ್ರೀರಾಮುಲು ಧಾವಿಸಿದ್ದಾರೆ. ಈ ವೇಳೆ ಗಲಾಟೆ ತೀವ್ರವಾಗುತ್ತಿದ್ದಂತೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದು, ಗನ್‌ಮ್ಯಾನ್‌ಗಳು ಫೈರಿಂಗ್ ಮಾಡಿದ್ದು ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಮೃತಪಟ್ಟಿದ್ದಾರೆ. ಎರಡೂ ಕಡೆಯ ಬೆಂಬಲಿಗರು ಪರಸ್ಪರ ಕಲ್ಲು ತೂರಾಟ ನಡೆಸಿದ್ದಾರೆ.
ಬಳ್ಳಾರಿ ನಗರದ ಶಾಸಕ ನಾರಾ ಭರತ್ ರೆಡ್ಡಿ ಹಾಗೂ ನಾರಾ ಭರತ್ ರೆಡ್ಡಿಯ ತಂದೆ ಸೂರ್ಯನಾರಾಯಣ ರೆಡ್ಡಿ ಈ ದಾಳಿ ಮಾಡಿಸಿದ್ದಾರೆ. ಕೊಲೆಗಡುಕರನ್ನುಇಟ್ಟುಕೊಂಡು ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಜನಾರ್ದನ ರೆಡ್ಡಿ ಕಿಡಿ ಕಾರಿದ್ದಾರೆ. ಗಂಗಾವತಿಯಿಂದ ಕಾರಿನಲ್ಲಿ ಬಂದು ಇಳಿಯುತ್ತಿದ್ದಂತೆ ಸತೀಶ್ ರೆಡ್ಡಿಯ ಗನ್‌ಮ್ಯಾನ್‌ಗಳು ನಾಲ್ಕು ಸುತ್ತು ಗುಂಡು ಹಾರಿಸಿದ್ದಾರೆ ಎಂದು ಫೈರ್ ಮಾಡಿದ ಬುಲೆಟ್‌ಗಳನ್ನು ಜನಾರ್ದನ ರೆಡ್ಡಿ ತೋರಿಸಿದ್ದಾರೆ.
ನನ್ನ ಮುಂದೆ ಇಂಥಾ ಚಿಲ್ಲರೆ ರಾಜಕೀಯ ನಡೆಯಲ್ಲ. ಜನಾರ್ದನರೆಡ್ಡಿ ಹತ್ಯೆಗೆ ಸಂಚು ಮಾಡುವ ಅಗತ್ಯ ನನಗಿಲ್ಲ. ಜನಾರ್ದನ ರೆಡ್ಡಿ ಏನು ದೊಡ್ಡ ಪಾಳೆಗಾರನಾ ಎಂದು ಶಾಸಕ ಭರತ್ ರೆಡ್ಡಿ ಪ್ರಶ್ನಿಸಿದ್ದಾರೆ. ಗೃಹಸಚಿವ ಡಾ. ಜಿ ಪರಮೇಶ್ವರ್ ಶಾಸಕ ಭರತ್ ರೆಡ್ಡಿಯಿಂದ ಮಾಹಿತಿ ಪಡೆದುಕೊಂಡಿದ್ದಾರೆ.
ಘಟನಾ ಸ್ಥಳದ 200 ಮೀ. ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಿ ತಹಶೀಲ್ದಾರ್ ಆದೇಶ ಹೊರಡಿಸಿದ್ದಾರೆ. ಜನಾರ್ದನ ರೆಡ್ಡಿಯ ಬಂಧಿಸುವಂತೆ ಅವರ ನಿವಾಸದೆದುರೇ ಶಾಸಕ ಭರತ್ ರೆಡ್ಡಿ ಆಗ್ರಹಿಸುತ್ತಿದ್ದು, ಶ್ರೀರಾಮುಲು ಜನಾರ್ದನ ರೆಡ್ಡಿ ನಿವಾಸ ದಲ್ಲೇ ಉಳಿದುಕೊಂಡಿದ್ದಾರೆ. ಶಾಸಕ ಜನಾರ್ದನರೆಡ್ಡಿ, ಮಾಜಿ ಸಚಿವ ಶ್ರೀರಾಮುಲು, ಮಾಜಿ ಶಾಸಕ ಸೋಮಶೇಖರ್ ರೆಡ್ಡಿ, ಅಲಿಖಾನ್, ದಮ್ಮೂರ ಶೇಖರ್ ಸೇರಿ 11 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.


