ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪೂರಕ ಪೌಷ್ಠಿಕಾಂಶದ ರೂಪದಲ್ಲಿ ಮೊಟ್ಟೆ ಅಥವಾ ಬಾಳೆಹಣ್ಣನ್ನು ಮಾತ್ರ ವಿತರಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಚಿಕ್ಕಿ ವಿತರಿಸುವಂತಿಲ್ಲ ಎಂದು ಹೇಳಿದೆ.
ಶಾಲಾ ಶಿಕ್ಷಣ ಇಲಾಖೆಯವರು ಮಧ್ಯಾಹ್ನ ಉಪಹಾರ ಯೋಜನೆಯಡಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪೂರಕ ಪೌಷ್ಠಿಕಾಂಶದ ರೂಪದಲ್ಲಿ ಮೊಟ್ಟೆ ಅಥವಾ ಬಾಳೆಹಣ್ಣನ್ನು ಮಾತ್ರ ವಿತರಿಸುವ ಕುರಿತು ಪ್ರತ್ಯೇಕವಾದ ಮಾರ್ಗಸೂಚಿಯನ್ನು ಹೊರಡಿಸಲು ಸೂಚಿಸಲಾಗಿದೆ.
2023-24ನೇ ಸಾಲಿನ ಜುಲೈ ಬಜೆಟ್ನಲ್ಲಿ ಘೋಷಣೆ ಮಾಡಿರುವಂತೆ ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 1ರಿಂದ 10ನೇ ತರಗತಿಗಳವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ (ಪ್ರತಿ ವಿದ್ಯಾರ್ಥಿಯ ಒಂದು ದಿನದ ಘಟಕ ವೆಚ್ಚ 6 ರೂ.ನಂತೆ) 80 ದಿನಗಳಿಗೆ ಪೂರಕ ಪೌಷ್ಠಿಕಾಂಶದ ರೂಪದಲ್ಲಿ ಮೊಟ್ಟೆ/ಶೇಂಗಾ ಚಿಕ್ಕಿ/ಬಾಳೆಹಣ್ಣನ್ನು ವಿತರಿಸಲು ಆದೇಶಿಸಲಾಗಿತ್ತು.
ಅಜೀಂ ಪ್ರೇಮ್ ಜಿ ಫೌಂಡೇಷನ್ ಸಹಭಾಗಿತ್ವದಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ (ಈಗಾಗಲೇ ವಾರದಲ್ಲಿ ಎರಡು ದಿನ ನೀಡಲಾಗುತ್ತಿರುವ ಪೂರಕ ಪೌಷ್ಠಿಕ ಆಹಾರದ ಹೊರತಾಗಿ) ವಾರದಲ್ಲಿ ನಾಲ್ಕು ದಿನ ಪೂರಕ ಪೌಷ್ಠಿಕ ಆಹಾರವನ್ನು ಉಚಿತವಾಗಿ ವಿತರಿಸುವ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಬ್ಯಾಂಕ್ ಖಾತೆಗಳನ್ನು ತೆರೆಯಲು ಆದೇಶಿಸಲಾಗಿತ್ತು.
ಕಲಬುರಗಿ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಬರೆದ ಪತ್ರದಲ್ಲಿ, ಪೂರಕ ಪೌಷ್ಠಿಕಾಂಶದ ರೂಪದಲ್ಲಿ ಮಕ್ಕಳಿಗೆ ವಿತರಿಸಲಾಗುತ್ತಿರುವ ಶೇಂಗಾ ಚಿಕ್ಕಿಯಲ್ಲಿ ಮಕ್ಕಳ ಆರೋಗ್ಯಕ್ಕೆ ಹಾನಿಕಾರಕ ಎನ್ನಬಹುದಾದಂತಹ ಅಪರ್ಯಾಪ್ತ ಕೊಬ್ಬಿನಾಂಶ ಹೆಚ್ಚಿಗೆ ಇದೆ. ಇದರಲ್ಲಿನ ಸಕ್ಕರೆ ಅಂಶ ಕೂಡ ಅಧಿಕವಾಗಿದೆ. ಚಿಕ್ಕಿಯನ್ನು ಸರಿಯಾಗಿ ಸಂಗ್ರಹಿಸದಿದ್ದಲ್ಲಿ ಕಲುಷಿತವಾಗಿ ಮಕ್ಕಳ ಆರೋಗ್ಯಕ್ಕೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳಿವೆ. ಈ ಚಿಕ್ಕಿ ವಿತರಣೆಯನ್ನು ಸ್ಥಗಿತಗೊಳಿಸಿ, ಮೊಟ್ಟೆ ಅಥವಾ ಬಾಳೆಹಣ್ಣು ಮಾತ್ರ ವಿತರಿಸುವ ಕುರಿತು ಕ್ರಮ ವಹಿಸಬೇಕು ಎಂದು ಕೋರಿದ್ದರು.