ಸಚಿವ ಜಮೀರ್ ಅಹ್ಮದ್ ಪುತ್ರ ಝೈದ್ ಖಾನ್ರ ಹೊಸ ಸಿನಿಮಾ ‘ಕಲ್ಟ್’ ಚಿತ್ರೀಕರಣವನ್ನು ಸರ್ಕಾರ ಬಂದ್ ಮಾಡಿಸಿದೆ. ಈ ಹಿಂದೆ ಚಿತ್ರೀಕರಣದ ವೇಳೆ ದುಬಾರಿ ಡ್ರೋನ್ ಮುರಿದು ಡ್ರೋನ್ ಮಾಲೀಕ ಆತ್ಮಹತ್ಯೆಗೆ ಮುಂದಾಗಿ ವಿವಾದವಾಗಿತ್ತು. ಝೈದ್ ಖಾನ್ ತಮ್ಮ ಕೈಯಿಂದ ಹಣ ಕೊಟ್ಟು ಯುವಕನಿಗೆ ಸಹಾಯ ಮಾಡಿದ್ದರು. ಇದೇ ಸಿನಿಮಾದ ಚಿತ್ರೀಕರಣಕ್ಕೆ ರಾಜ್ಯ ಸರ್ಕಾರ ತಡೆ ನೀಡಿದೆ.
ಸಿನಿಮಾಗಳ ಹೊರಾಂಗಣ ಚಿತ್ರೀಕರಣ ಮಾಡುವ ಮುನ್ನ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂಬ ನಿಯಮ ಇದೆ. ಇತ್ತೀಚೆಗೆ ಸಿನಿಮಾಗಳ ಚಿತ್ರೀಕರಣ ದ ವೇಳೆ ಅರಣ್ಯ ನಾಶದ ಆರೋಪವೂ ಕೇಳಿ ಬಂದಿರುವ ಕಾರಣ ಈ ನಿಯಮವನ್ನು ಇನ್ನಷ್ಟು ಕಠಿಣಗೊಳಿಸಿ ಜಾರಿಗೊಳಿಸಲಾಗುತ್ತಿದೆ. ಸಿನಿಮಾಗಳು ಅರಣ್ಯ ಪ್ರದೇಶ ಅಥವಾ ಯಾವುದೇ ಸಂರಕ್ಷಿತ ಪ್ರದೇಶದಲ್ಲಿ ಚಿತ್ರೀಕರಣಕ್ಕೆ ಮುಂದಾದಾಗ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂದು ಇತ್ತೀಚೆಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದರು.
ಝೈದ್ ಖಾನ್ ನಟಿಸುತ್ತಿರುವ ‘ಕಲ್ಟ್’ ಸಿನಿಮಾ ತಂಡವು ಕೊಪ್ಪಳ ಜಿಲ್ಲೆಯ ಗಂಗಾವತಿಯ ಸಾಣಾಪುರ, ರಂಗಾಪುರ ಬಳಿ ಚಿತ್ರೀಕರಣಕ್ಕೆ ಮುಂದಾಗಿತ್ತು. ಚಿತ್ರ ತಂಡ ಅನುಮತಿಯನ್ನು ಪಡೆದಿರಲಿಲ್ಲವಾದ್ದರಿಂದ ಸ್ಥಳೀಯ ಅರಣ್ಯ ಅಧಿಕಾರಿಗಳು ಚಿತ್ರೀಕರಣ ತಂಡಕ್ಕೆ ನೊಟೀಸ್ ನೀಡಿದ್ದಾರೆ. ಚಿತ್ರೀಕರಣವನ್ನು ಬಂದ್ ಮಾಡುವಂತೆ ಸೂಚಿಸಿದ್ದಾರೆ.
ಈ ಮೊದಲು ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ತಂಡವು ಬೆಂಗಳೂರಿನ ಹೊರವಲಯದ ಎಚ್ಎಂಟಿ ಗ್ರೌಂಡ್ ಬಳಿ ಚಿತ್ರೀಕರಣ ನಡೆಸುವಾಗ ಮರಗಳನ್ನು ನಾಶಪಡಿಸಿದ ಆರೋಪ ಕೇಳಿ ಬಂದಿತ್ತು. ಅರಣ್ಯ ಸಚಿವರೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ’ ಚಿತ್ರತಂಡ ಅರಣ್ಯದಲ್ಲಿ ಶೂಟಿಂಗ್ ಮಾಡುವ ವೇಳೆ ಬೆಂಕಿ ಬಳಸಿ ಅರಣ್ಯಕ್ಕೆ ಹಾನಿ ಮಾಡಿದೆ ಎಂಬ ಆರೋಪ ಎದುರಾಗಿದ್ದು, ಚಿತ್ರತಂಡಕ್ಕೆ ನೊಟೀಸ್ ನೀಡಲಾಗಿತ್ತು.