ಮಾಜಿ ಸಚಿವ ವರ್ತೂರು ಪ್ರಕಾಶ್ ಹೆಸರಲ್ಲಿ ಶ್ವೇತಾಗೌಡ ನವರತ್ನ ಜ್ಯುವೆಲರಿ ಮಾಲೀಕರಿಗೆ ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆ ಮುಂದುವರಿದಿದೆ, ಶ್ವೇತಾಗೌಡ ವಂಚಿಸಿ ಬಚ್ಚಿಟ್ಟಿದ್ದ 2 ಕೆ.ಜಿ 100 ಗ್ರಾಂ ಚಿನ್ನಾಭರಣ ಎಲ್ಲಿದೆ ಎಂಬ ಸುಳಿವು ಪೊಲೀಸರಿಗೆ ಸಿಕ್ಕಿದೆ.
ಮಾಜಿ ಸಚಿವ ವರ್ತೂರು ಪ್ರಕಾಶ್ ಹೆಸರಲ್ಲಿ ಕೆಜಿಗಟ್ಟಲೆ ಚಿನ್ನಾಭರಣ ವಂಚಿಸಿದ್ದಕ್ಕೆ ಶ್ವೇತಾ ಗೌಡಳನ್ನು ಪೊಲೀಸರು ಅರೆಸ್ಟ್ ಮಾಡಿದ್ದರೂ ಆ ಚಿನ್ನ ಎಲ್ಲಿದೆ ಎಂಬುದನ್ನು ಪತ್ತೆ ಹಚ್ಚುವುದು ಸವಾಲಾಗಿತ್ತು. ಪೊಲೀಸರು ಬಾಗಲಗುಂಟೆಯಿಂದ ರಾಜಸ್ಥಾನಕ್ಕೆ ಹೋಗಿ ಹುಡುಕಾಡಿದರೂ ಚಿನ್ನಾಭರಣದ ಸುಳಿವು ಸಿಕ್ಕಿರಲಿಲ್ಲ. ಪ್ರಕರಣ ಸಂಬಂಧ ಜೋಧಪುರದಲ್ಲಿ ಮೋಹನ್ ಲಾಲ್ ಎಂಬಾತನನ್ನು ಬಂಧಿಸಿದ ಕರೆತಂದಾಗ ಚಿನ್ನ ಎಲ್ಲಿದೆ ಎಂಬ ಮಾಹಿತಿ ಲಭಿಸಿದೆ.
ನವರತ್ನ ಜ್ಯುವೆಲರಿ ಮಾಲೀಕರಿಗೆ 2 ಕೆ.ಜಿ 945 ಗ್ರಾಂ ಚಿನ್ನಾಭರಣ ವಂಚಿಸಿದ್ದ ಶ್ವೇತಗೌಡ ಹಾಗೂ ವರ್ತೂರು ಪ್ರಕಾಶ್‌ರನ್ನು ತನಿಖಾಧಿಕಾರಿ ಎಸಿಪಿ ಗೀತಾ ವಿಚಾರಣೆ ನಡೆಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ವೇತಗೌಡ ಸೇರಿ ಚೆನ್ನರಾಮ್ ಹಾಗೂ ಮೋಹನ್ ಲಾಲ್ ಎಂಬವರನ್ನು ಬಂಧಿಸಿದ್ದರು. ನವರತ್ನ ಜ್ಯುವೆಲರಿ ಮಾಲೀಕ ಸಂಜಯ್ ಭಾಷಾ ಬಳಿ ಪಡೆದಿದ್ದ 2ಕೆ.ಜಿ 945 ಗ್ರಾಂ ಚಿನ್ನದಲ್ಲಿ 800 ಗ್ರಾಂ ವಶಕ್ಕೆ ಪಡೆಯಲಾಗಿತ್ತು. ಉಳಿದ 2 ಕೆ.ಜಿ 145 ಗ್ರಾಂ ಚಿನ್ನದ ಸುಳಿವೇ ಸಿಕ್ಕಿರಲಿಲ್ಲ. ಶ್ವೇತಾ ವಿಚಾರಣೆ ವೇಳೆ ರಾಮ್‌ದೇವ್ ಜ್ಯುವೆಲರಿ ಮಾಲೀಕ ಚೆನ್ನಾರಾಮ್‌ಗೆ ನೀಡಿದ್ದಾಗಿ ಮಾಹಿತಿ ನೀಡಿದ್ದಳು.
ರಾಮ್‌ದೇವ್ ಜ್ಯುವೆಲರಿ ಮಾಲೀಕ ಚೆನ್ನಾರಾಮ್ ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತನ್ನ ಸಂಬಂಧಿ ಮೋಹನ್ ಲಾಲ್ ಚಿನ್ನಾಭರಣ ಪಡೆದುಕೊಂಡಿರು ವುದಾಗಿ ಮಾಹಿತಿ ನೀಡಿದ್ದ. ಮೋಹನ್ ಲಾಲ್‌ನನ್ನು ಜೋಧಪುರದಿಂದ ಬಂಧಿಸಿ ಕರೆತಂದು ವಿಚಾರಣೆಗೆ ಒಳಪಡಿಸಿದಾಗ ಬಾಗಲಗುಂಟೆಯ ತೋಟದ ಗುಡ್ಡದಹಳ್ಳಿಯ ಬೇರಾರಾಮ್ ಬಳಿಯಿದೆ ಎಂದು ಮಾಹಿತಿ ನೀಡಿದ್ದಾನೆ. ಬೇರಾ ರಾಮ್‌ಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.