Wednesday, December 17, 2025
Menu

ಮುಂದಿನ ಬಜೆಟ್ ಒಳಗಾಗಿ ರಾಜ್ಯದ ಎಲ್ಲಾ ಕೆರೆಗಳ ಒತ್ತುವರಿ ತೆರವು ಗುರಿ: ಸಚಿವ ಎನ್.ಎಸ್. ಭೋಸರಾಜು

lake

ಬೆಳಗಾವಿ, ಡಿಸೆಂಬರ್ 16: ರಾಜ್ಯದಲ್ಲಿರುವ ಜಲಮೂಲಗಳ ಸಂರಕ್ಷಣೆಗೆ ಸರ್ಕಾರ ಬದ್ಧವಾಗಿದ್ದು, ಮುಂದಿನ ಆಯವ್ಯಯ (ಬಜೆಟ್) ಮಂಡನೆಯ ಒಳಗಾಗಿ ರಾಜ್ಯದ ಎಲ್ಲಾ ಕೆರೆಗಳ ಒತ್ತುವರಿಯನ್ನು ಸಂಪೂರ್ಣವಾಗಿ ತೆರವುಗೊಳಿಸುವ ಗುರಿ ಹೊಂದಲಾಗಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ  ಎನ್.ಎಸ್. ಭೋಸರಾಜು ತಿಳಿಸಿದರು.

ಇಂದು ಸನ್ಮಾನ್ಯ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್‌, ಗ್ರಾಮೀಣಾಭಿವೃದ್ದಿ ಹಾಗೂ ಐಟಿ&ಬಿಟಿ ಸಚಿವರಾದ ಪ್ರಿಯಾಂಕ ಖರ್ಗೆ ಅವರ ಜೊತೆಗೂಡಿ ಸುವರ್ಣ ವಿಧಾನಸೌಧದ ಸೆಂಟ್ರಲ್ ಹಾಲ್‌ನಲ್ಲಿ ಆಯೋಜಿಸಿದ್ದ ‘ಕೆರೆ ಬಳಕೆದಾರರ ಸಂಘಗಳ ಪದಾಧಿಕಾರಿಗಳಿಗೆ ಕೆರೆಗಳ ನಿರ್ವಹಣೆ ಕುರಿತ ಕಾರ್ಯಾಗಾರ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಒತ್ತುವರಿ ತೆರವಿಗೆ ಡೆಡ್‌ಲೈನ್:

“ನಮ್ಮ ಸರ್ಕಾರ ಕೆರೆಗಳ ಸಂರಕ್ಷಣೆಗೆ ಮಹತ್ವದ ಹೆಜ್ಜೆಯಿಟ್ಟಿದೆ. ರಾಜ್ಯಾದ್ಯಂತ ಸುಮಾರು 41,849 ಜಲಮೂಲಗಳಿವೆ. ಇವುಗಳ ಪೈಕಿ ಒತ್ತುವರಿ ತೆರವು ಕಾರ್ಯ ಭರದಿಂದ ಸಾಗಿದ್ದು, ಪ್ರಸ್ತುತ ಕೇವಲ 6,500 ಕೆರೆಗಳ ಒತ್ತುವರಿ ತೆರವು ಮಾತ್ರ ಬಾಕಿ ಉಳಿದಿದೆ. ಇದನ್ನು ಸಮರೋಪಾದಿಯಲ್ಲಿ ಕೈಗೊಂಡು, ಮುಂದಿನ ಬಜೆಟ್ ವೇಳೆಗೆ ಸಂಪೂರ್ಣ ಒತ್ತುವರಿ ಮುಕ್ತಗೊಳಿಸುವ ಗುರಿಯನ್ನು ಹೊಂದಿದ್ದೇವೆ,” ಎಂದು ಸಚಿವರು ಭರವಸೆ ನೀಡಿದರು.

ಸಂಪನ್ಮೂಲ ಕ್ರೋಢೀಕರಣಕ್ಕೆ ಹೊಸ ಚಿಂತನೆ:

ಕೆರೆಗಳ ನಿರ್ವಹಣೆಗೆ ಆರ್ಥಿಕ ಸ್ವಾವಲಂಬನೆ ಕಂಡುಕೊಳ್ಳುವ ನಿಟ್ಟಿನಲ್ಲಿಯೂ ಸರ್ಕಾರ ಚಿಂತನೆ ನಡೆಸಿದೆ ಎಂದ ಸಚಿವರು, “ವರ್ಷಪೂರ್ತಿ ಏತ ನೀರಾವರಿ ಯೋಜನೆಗಳ ಮೂಲಕ ಶೇಕಡಾ 50ಕ್ಕೂ ಹೆಚ್ಚು ನೀರು ಹೊಂದಿರುವ ಕೆರೆಗಳಲ್ಲಿ, ಮೀನುಗಾರಿಕೆ ಹಕ್ಕನ್ನು ಹರಾಜು ಹಾಕುವ ಮೂಲಕ ಕೆರೆಗಳ ನಿರ್ವಹಣೆಗೆ ಅಗತ್ಯ ಸಂಪನ್ಮೂಲ ಕ್ರೋಢೀಕರಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ” ಎಂದು ತಿಳಿಸಿದರು.

ಬಳಕೆದಾರರ ಸಂಘಗಳಿಗೆ ಮರುಜೀವ:

ಜಲಮೂಲಗಳ ಸಮರ್ಪಕ ನಿರ್ವಹಣೆಯಲ್ಲಿ ಸ್ಥಳೀಯ ಸಮುದಾಯದ ಪಾತ್ರ ನಿರ್ಣಾಯಕ ಎಂದ ಸಚಿವರು, “ಕೆರೆಗಳ ಉಸ್ತುವಾರಿಗಾಗಿ ರಚಿಸಲಾಗಿದ್ದ ಕೆರೆ ಬಳಕೆದಾರರ ಸಂಘಗಳು ಆಡಿಟ್ ಮತ್ತಿತರ ತಾಂತ್ರಿಕ ಸಮಸ್ಯೆಗಳಿಂದಾಗಿ ನಿಷ್ಕ್ರಿಯಗೊಂಡಿದ್ದವು. ಈ ಸಂಘಗಳು ಕೆರೆಗಳ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹೀಗಾಗಿ, ಆಡಿಟ್ ಸಮಸ್ಯೆಗಳನ್ನು ಬಗೆಹರಿಸಿ, ಈ ಸಮುದಾಯ ಆಧಾರಿತ ಸಂಘಗಳಿಗೆ ಮರುಜೀವ ತುಂಬಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ,” ಎಂದು ಹೇಳಿದರು.

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌  ಮಾತನಾಡಿ, ರಾಜ್ಯದಲ್ಲಿ ಅಂತರ್ಜಲ ಹೆಚ್ಚಳಕ್ಕೆ ಕೆರೆಗಳ ಸಂರಕ್ಷಣೆ ಬಹಳ ಮುಖ್ಯ. ಜಲಸಂಪನ್ಮೂಲ, ಗ್ರಾಮೀಣಾಭಿವೃದ್ದಿ ಹಾಗೂ ಸಣ್ಣ ನೀರಾವರಿ ಇಲಾಖೆಗಳ ವ್ಯಾಪ್ತಿಯಲ್ಲಿ ಹಂಚಿಹೋಗಿವೆ. ಯಾವುದೇ ಇಲಾಖೆಯ ವ್ಯಾಪ್ತಿಯಲ್ಲಿದ್ದರೂ ಕೂಡಾ ಅವುಗಳ ಸಮರ್ಪಕ ನಿರ್ವಹಣೆಗೆ ಸಮುದಾಯ ಆಧಾರಿತ ಕೆರೆ ಬಳಕೆದಾರರ ಸಂಘಗಳ ಬಹಳ ಅಗತ್ಯ. ಇವುಗಳನ್ನ ಆರ್ಥಿಕವಾಗಿ ಸಧೃಡಗೊಳಿಸುವ ನಿಟ್ಟಿನಲ್ಲಿ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ. ಏತ ನೀರಾವರಿ ಯೋಜನೆಗಳ ಮೂಲಕ ತುಂಬುವಂತಹ ಕೆರೆಗಳಿಂದ ಆದಾಯ ಕ್ರೋಢೀಕರಣಕ್ಕೂ ನಾವು ಒತ್ತು ನೀಡುತ್ತಿದ್ದೇವೆ ಎಂದು ಹೇಳಿದರು.

ಕಾರ್ಯಾಗಾರದಲ್ಲಿ ಕೆರೆ ಬಳಕೆದಾರರ ಸಂಘಗಳ ನಿರ್ವಹಣೆಯ ಕೈಪಿಡಿ ಹಾಗೂ ‘ನೀರಿದ್ದರೆ ನಾಳೆ’ ಕರಪತ್ರವನ್ನು ಅನಾವರಣಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ದಿ, ಐಟಿ&ಬಿಟಿ ಸಚಿವರಾದ ಪ್ರಿಯಾಂಕ ಖರ್ಗೆ, ಸಣ್ಣ ನೀರಾವರಿ ಅಂತರ್ಜಲ ಅಭಿವೃದ್ದಿ ಇಲಾಖೆಯ ಕಾರ್ಯದರ್ಶಿಗಳಾದ ಬಿ.ಕೆ ಪವಿತ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಕೆರೆ ಬಳಕೆದಾರರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related Posts

Leave a Reply

Your email address will not be published. Required fields are marked *