ಹುಟ್ಟಿಸಿದವನು ಹುಲ್ಲು ಮೇಯಿಸದೆ ಇರುವನೇ? ಚೆನ್ನಾಗಿ ಓದಿ ಧೈರ್ಯವಾಗಿ ಪರೀಕ್ಷೆ ಬರೆಯಿರಿ. ಫಲಾಫಲವನ್ನು ಆ ದೇವರಿಗೆ ಬಿಡಿ. ಪಾಸು-ಫೇಲುಗಳ ಚಿಂತೆ ಬೇಡ. ಏನೇ ಬಂದರೂ, ನಗುತ್ತಾ ಸ್ವೀಕರಿಸಿ. ಆಗುವುದೆಲ್ಲ ಒಳ್ಳೆಯದಕ್ಕೆ. ನೆನಪಿರಲಿ ನಿಮ್ಮ ಫೇಲು ಸಹ ಭವಿಷ್ಯವನ್ನು ಉಜ್ವಲ ದಿಕ್ಕಿಗೆ ಕರೆದುಕೊಂಡು ಹೋಗುವುದಿದೆ. ಜೀವನದಲ್ಲಿ ನೂರೆಂಟು ಪರೀಕ್ಷೆಗಳು ಎದುರಾಗುತ್ತವೆ. ಯಾವುದಾದರೊಂದು ಯಶಸ್ವಿ ಆದರೆ ಸಾಕು ಬದುಕು ಬಂಗಾರ…
ಮಾರ್ಚ್ – ಏಪ್ರಿಲ್ ತಿಂಗಳು ಮಕ್ಕಳಿಗೆ ಪರೀಕ್ಷಾ ಕಾಲ. ಪರೀಕ್ಷೆಗಳು ಮುಗಿಯುವವರೆಗೂ ಮಕ್ಕಳಿಗೆ ನಿತ್ಯವೂ ಒತ್ತಡ. ನಿದ್ರೆ ಇಲ್ಲ. ಸರಿಯಾದ ಸಮಯಕ್ಕೆ ಊಟ ಮಾಡಲಾಗದು. ಮಾಡಿದರೂ ತೃಪ್ತಿಯಾಗಿ ತಿನ್ನಲಾಗದು. ಕೆಲವರಿಗೆ ಆಕಾಶವೇ ಕಳಚಿ ಬಿದ್ದಂತಾಗಿರುತ್ತದೆ. ಆ ರೀತಿ ಆಗುವ ಹಾಗೆ ಪೋಷಕರು ಮಕ್ಕಳ ಮನಸ್ಸನ್ನು ಹಿಂಡಿ ಬಿಟ್ಟಿರುತ್ತಾರೆ. ಬುದ್ಧಿವಂತನಿಂದ ದಡ್ಡನವರೆಗೂ ಒತ್ತಡ ತಪ್ಪಿದ್ದಲ್ಲ. ಎರಡುಮೂರು ತಿಂಗಳು ಮಕ್ಕಳು ಹಾಗೂ ಪೋಷಕರಿಬ್ಬರಿಗೂ ಒತ್ತಡದ ಕಾಲವಾಗಿಬಿಟ್ಟಿರುತ್ತದೆ. ಓದು ಎಲ್ಲರಿಗೂ ಅವಶ್ಯಕ. ಇಂದು ಓದು ಬರಹ ಇಲ್ಲದೇ ಇರುವವನು ಬದುಕಲು ಕಷ್ಟ. ಕನಿಷ್ಟ ಹತ್ತನೇ ತರಗತಿಯನ್ನಾದರೂ ವಿದ್ಯಾಭ್ಯಾಸ ಮಾಡಿರಬೇಕು. ವಿದ್ಯಾವಂತರಷ್ಟೇ ಬದುಕಲು ಸಾಧ್ಯ. ಅವಿದ್ಯಾವಂತರು ಬದುಕು ಕಟ್ಟಿಕೊಳ್ಳಲು ಕಷ್ಟ ಎಂದು ಖಂಡತುಂಡವಾಗಿ ಹೇಳಲಾರೆ. ಶಾಲೆಯ ಮೆಟ್ಟಿಲನ್ನು ನೋಡದೇ ಇರುವವರು ಕೂಡಾ ಉನ್ನತ ವ್ಯಾಸಂಗ ಮಾಡಿದವರಿಗಿಂತ ಹೆಚ್ಚು ಸಾಧನೆ ಮಾಡಿದ್ದಾರೆ. ಸಾಧನೆಗೆ ಪ್ರತಿಯೊಬ್ಬರೂ ಅರ್ಹರೇ, ಇದಕ್ಕೆ ವಿದ್ಯೆಯ ಅವಶ್ಯಕತೆ ಇರಲೇಬೇಕಾಗಿಲ್ಲ. ಸಾಧಕರ ಚರಿತ್ರೆಯ ಕಡೆಗೆ ಇಣುಕಿದರೆ ತಿಳಿಯುವುದು. ಸಾಧನೆಗೆ ಅವಿದ್ಯಾವಂತ-ವಿದ್ಯಾವಂತ, ಹೆಣ್ಣು-ಗಂಡು, ದೊಡ್ಡವರು-ಚಿಕ್ಕವರು ಎಲ್ಲರೂ ಒಂದೇ.
ವಿದ್ಯೆ ವಿನಯವಂತಿಕೆ ಕಲಿಸಬೇಕು ಹಾಗೂ ನಮ್ಮ ಸಂಸ್ಕೃತಿ ಉಳಿಸಿ ಬೆಳೆಸಬೇಕು. ಇದ್ಯಾವುದು ಆಗದಿರುವುದನ್ನು ಸಮಾಜದಲ್ಲಿ ಕಾಣುತ್ತಿzವೆ. ಶಾಲಾ ಕಾಲೇಜುಗಳ ಪಠ್ಯದಲ್ಲಿ ಅಳವಡಿಸಿರುವ ವಿಷಯಗಳು ಮಕ್ಕಳನ್ನು ದಾರಿ ತಪ್ಪಿಸುತ್ತಿವೆಯೇ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿರುತ್ತದೆ. ಮೌಲ್ಯವಿಲ್ಲದ ಶಿಕ್ಷಣ ಕಲಿತವರನ್ನು ಉದ್ದರಿಸುವುದಕ್ಕಿಂತ ಶಿಕ್ಷಿಸುತ್ತಿದೆ. ಬಹುತೇಕರಿಗೆ ಕಲಿತೂ ನಿಷ್ಪ್ರಯೋಜಕವಾಗುತ್ತಿದೆ.
ಶಾಲೆಗೆ ಹೋಗಿ ಏನೂ ಕಲಿಯದವನು ಬೆಳೆದಂತೆ ಹದಿಹರೆಯದರಲ್ಲೇ ಸಂಕೋಚವಿಲ್ಲದೆ ಬದುಕಿಗೊಂದು ವೃತ್ತಿ ಆಯ್ಕೆ ಮಾಡಿಕೊಳ್ಳುತ್ತಾನೆ. ನಾಲ್ಕಕ್ಷರದ ಅರಿವು ಇದ್ದರೆ ದೊಡ್ಡಪ್ರಮಾಣದಲ್ಲಿ ವ್ಯಾಪಾರ, ವ್ಯವಸಾಯ, ಸಣ್ಣಪುಟ್ಟ ವ್ಯಾಪಾರ, ಆರ್ಥಿಕವಾಗಿ ಹಿಂದುಳಿದಿದ್ದರೆ ಕೂಲಿಯನ್ನಾದರೂ ಮಾಡಿ ಬದುಕುತ್ತಾನೆ. ತ್ರಿಶಂಕು ಸ್ಥಿತಿಯಲ್ಲಿ ಇರುವವರೆಂದರೆ ಪದವಿ ಪಡೆದ ವಿದ್ಯಾವಂತರು. ಅದರಲ್ಲೂ ಉನ್ನತ ವ್ಯಾಸಂಗ ಮಾಡಿದವರು. ಹೇಳಿಕೊಳ್ಳುವುದಕ್ಕೆ ಮತ್ತು ಹೆಸರಿನ ಪಕ್ಕ ಬರೆದುಕೊಳ್ಳಲು ಎರಡು ಮೂರು ಪದವಿಗಳನ್ನು, ಸ್ನಾತಕೋತ್ತರ ಪದವಿಗಳನ್ನು ಶಾಲಾ ಕಾಲೇಜುಗಳಿಗೆ ಹೋಗಿ ಗಳಿಸಿರುತ್ತಾನೆ. ಇವುಗಳಿಗಾಗಿ ಸರಿಸುಮಾರು ತನ್ನ ಜೀವಿತಕಾಲದ ಇಪ್ಪತ್ತೈದು ವರ್ಷಗಳನ್ನು ವ್ಯಯಿಸಿರುತ್ತಾನೆ. ಅಷ್ಟೂ ವಿದ್ಯೆ ತನ್ನ ಬದುಕಿಗೆ ಅನ್ನ ಕೊಡುವಲ್ಲಿ ವಿಫಲವಾಗುತ್ತವೆಯೆಂದರೆ ವಿದ್ಯೆಗೆ ಹಾಗೂ ಗಳಿಸಿದ ಪದವಿಗಳಿಗೆ ಏನನ್ನಬೇಕು?
ಜ್ಞಾನಾರ್ಜನೆಗೆ ಲೋಕದ ತಿಳಿವಳಿಕೆ ಮತ್ತು ವಿದ್ಯೆ ಇರಲೇಬೇಕು. ಆದರೆ, ತನ್ನ ಬದುಕನ್ನು ಕಟ್ಟಿಕೊಳ್ಳಲು, ನಂಬಿದ ಕುಟುಂಬವನ್ನು ಸಾಕುವುದಕ್ಕೆ, ಬೇಕು ಬೇಡಗಳನ್ನು ಪೂರೈಸಿಕೊಳ್ಳಲು ಸಂಪಾದನೆಗೆ ವೃತ್ತಿ ಬೇಕು. ಗಳಿಕೆಗೆ ಬೇಕಿರುವ ವೃತ್ತಿಯನ್ನು ಕಲಿಸಿಕೊಡುವ ವಿದ್ಯೆ ನಮಗೆ ಬೇಕು. ವ್ಯವಹರಿಸಲು ಮತ್ತು ಮುಂದಿನ ಬದುಕನ್ನು ನಿರ್ವಹಿಸಲು ಒಬ್ಬ ಮನುಷ್ಯನಿಗೆ ಹತ್ತನೇ ತರಗತಿವರೆಗೆ ಓದಿದ ವಿದ್ಯೆ ಸಾಕು. ಮುಂದಿನ ವಿದ್ಯೆ ಸರ್ಕಾರಿ ನೌಕರಿ ಪಡೆಯಲು ಇರಬೇಕಾದ ಅರ್ಹತೆ ಪರಿಗಣನೆಗೆ ಬೇಕಾಗಿರುವಂತಹದ್ದು.
ಅನುಭವಕ್ಕಿಂತ ಮಿಗಿಲಾದ ವಿದ್ಯೆ ಇಲ್ಲ, ಜಮೀನನ್ನು ಉತ್ತು ಹಸನು ಮಾಡಿ ಚೆಂದವಾಗಿ ಬಿತ್ತನೆ ಮಾಡಿ ಕಾಲಕಾಲಕ್ಕೆ ನೀರುಗೊಬ್ಬರ ಕೊಟ್ಟು ಫಸಲು ತೆಗೆದು ಲೋಕದ ಮನುಕುಲಕ್ಕೆ ಅನ್ನ ನೀಡುವ ರೈತ ಯಾವುದೇ ಶಾಲಾ ಕಾಲೇಜಿಗೆ ಹೋಗಿ ಕಲಿತು ಬೆಳೆ ಬೆಳೆದಿದ್ದಲ್ಲ. ಚಿಕ್ಕಂದಿನಿಂದ ತನ್ನ ಹಿರಿಯರ ಒಡಗೂಡಿ ಜಮೀನಿನಲ್ಲಿ ಪ್ರಾಯೋಗಿಕವಾಗಿ ದುಡಿದು ಕೃಷಿ ವೃತ್ತಿ ಕಲಿತಿರುವಂತಹದ್ದು. ಹಾಗೆಯೇ, ಒಬ್ಬ ಬಡಗಿ, ಕಟ್ಟಡ ಕೆಲಸಗಾರ, ಕಮ್ಮಾರ, ಕ್ಷತ್ರಿಯ, ಚರ್ಮಕೆಲಸ, ಕುಂಬಾರಿಕೆ, ಬಟ್ಟೆ ನೇಯ್ಗೆ, ಹೊಲಿಗೆ, ಕುಶಲಕರ್ಮಿ, ಹಾಡುಗಾರ, ಕಲಾವಿದ, ಮೆಕ್ಯಾನಿಕ್, ಕಂಪ್ಯೂಟರ್ ರಿಪೇರಿ ಮಾಡುವವರು, ಇವರೆಲ್ಲರೂ ಶಾಲಾ ಕಾಲೇಜಿಗೆ ಹೋಗಿ ಕಲಿತವರಲ್ಲ ಮತ್ತು ಇಂಗ್ಲೀಷ್ ಭಾಷೆ ತಿಳಿದವರಲ್ಲ. ಆದರೆ, ಮಾಡುವ ಕೆಲಸದಲ್ಲಿ ನ್ಯೂನ್ಯತೆ ಕಾಣದು. ನಿರಂತರ ಪ್ರಯತ್ನವೇ ಇವರ ಅಚ್ಚುಕಟ್ಟು ಹಾಗೂ ನಿಖರವಾದ ಕೆಲಸದ ತಳಪಾಯ.
ಇಂದಿನ ವಿಶ್ವವಿದ್ಯಾಲಯಗಳು ಮೇಲಿನ ವೃತ್ತಿಗಳನ್ನು ಆಧರಿಸಿ ಮೂರು ವರ್ಷದ ಡಿಪ್ಲೊಮಾ/ ಪದವಿಗಳನ್ನು ನೀಡಲು ಪ್ರಾರಂಭಿಸಿವೆ. ಓದಿ ವೃತ್ತಿ ಆರಂಭಿಸಿ ದವರು ಖಂಡಿತ ಬಾಲ್ಯದಿಂದ ಕಲಿತವರಷ್ಟು ನಿಪುಣರಾಗಿರುವುದಿಲ್ಲ. ಇಂಜಿನಿಯರ್ ಅಥವಾ ವೈದ್ಯ ಪದವಿಗಳನ್ನು ಗಳಿಸಿ ಕೆಲವಾರು ವರ್ಷಗಳು ಪ್ರಾಯೋಗಿಕ ಅನುಭವವಿಲ್ಲದೆ ತತ್ಕ್ಷಣ ಇಂಜಿನಿಯರ್ ಕಟ್ಟಡವನ್ನಾಗಲಿ, ಡಾಕ್ಟರ್ ಚಿಕಿತ್ಸೆಯನ್ನಾಗಲಿ ಸಮರ್ಪಕವಾಗಿ ನೀಡಲಾರ. ಅನುಭವಿ ಮೇಸ್ತ್ರಿ ಅಥವಾ ಆರೋಗ್ಯ ಸಹಾಯಕರು ಹೊಸದಾಗಿ ಪದವಿ ಪಡೆದವರಿಗಿಂತ ಆಯಾ ವೃತ್ತಿಯನ್ನು ಚೆನ್ನಾಗಿಯೇ ನಿರ್ವಹಿಸಬಲ್ಲರು.
ಕ್ಷೇತ್ರ ಯಾವುದೇ ಇರಲಿ, ಅಲ್ಲಿ ದೀರ್ಘಕಾಲ ನಿಷ್ಠೆಯಿಂದ ತೊಡಗಿಸಿಕೊಂಡವರು ಪರಿಣಿತಿಗಾಗಿ ವಿದ್ಯೆ ಪಡೆದವರಿಗಿಂತ ಚೆನ್ನಾಗಿ ಕೆಲಸ ನಿರ್ವಹಿಸಬಲ್ಲರು. ರ್ಯಾಂಕ್ ಫಸ್ಟ್ಕ್ಲಾಸ್ಗಳ ಸ್ಥಿತಿಯೂ ಅಷ್ಟೇ, ತಮ್ಮ ತಮ್ಮ ವೃತ್ತಿಯಲ್ಲಿ ಸಾಮಾನ್ಯ ದರ್ಜೆಯಲ್ಲಿ ಪಾಸಾದವರು ಜನರೊಟ್ಟಿಗೆ ಬೆರೆತು ಸೇವೆಯನ್ನು ಉತ್ತಮ ವಾಗಿಯೇ ನೀಡುವರು. ಬುದ್ಧಿವಂತ ಶಿಖಾಮಣಿಗಳು ಸಾರ್ವಜನಿಕವಾಗಿ ಬೆರೆಯುವುದೇ ಕಷ್ಟ. ಇಷ್ಟೆಲ್ಲ ವಿವರಣೆ ಏಕೆಂದರೆ ಸಧ್ಯದಲ್ಲೇ ಪಿಯುಸಿ ಹಾಗೂ ಎಸ್ಎಸ್ಎಲ್ಸಿ ಪರೀಕ್ಷೆಗಳು ನಡೆಯಲಿವೆ. ವಿದ್ಯಾರ್ಥಿಗಳು ಹಾಗೂ ಪೋಷಕರು ಒತ್ತಡದಲ್ಲಿದ್ದಾರೆ. ನಂತರ ಕೆಲವೇ ದಿನಗಳಲ್ಲಿ ಫಲಿತಾಂಶಗಳು ಬರುತ್ತವೆ. ಈ ಮಕ್ಕಳಿಗಾಗಿ ವಾಸ್ತವವಾದ ಕೆಲವು ಅಂಶಗಳು ಮುಖ್ಯವಾಗಿ ಪೋಷಕರಿಗೆ ತಲುಪಿಸಬೇಕಿದೆ.
ಪರೀಕ್ಷಾರ್ಥಿಗಳು ಅವಶ್ಯಕತೆ ಇರುವಷ್ಟು ನಿದ್ರಿಸದೆ ಉನ್ನತ ದರ್ಜೆಯಲ್ಲಿ ಪಾಸಾಗುವ ಉದ್ದೇಶದಿಂದ ಹೆಚ್ಚು ಓದಿ ಅಂಕಗಳನ್ನು ಗಳಿಸುತ್ತಾರೆ. ಆದರೂ, ಬಹಳಷ್ಟು ಸಂಖ್ಯೆಯಲ್ಲಿ ಸಾಮಾನ್ಯ ದರ್ಜೆಯಲ್ಲಿ ಪಾಸಾಗುವ ಮಕ್ಕಳೇ ಅಧಿಕ ಸಂಖ್ಯೆಯಲ್ಲಿ ಇರುತ್ತಾರೆ. ಪರೀಕ್ಷೆಗಳನ್ನು ಎದುರಿಸುವ ಒಟ್ಟು ವಿದ್ಯಾರ್ಥಿಗಳಲ್ಲಿ ಫಲಿತಾಂಶ ಬಂದ ನಂತರ ಸುಖಿಸುವರಿಗಿಂತ ದುಃಖಿಸುವವರೇ ಹೆಚ್ಚು. ಸುಖದುಃಖಗಳು ಇರಲಿ. ಆದರೆ, ಅನಾಹುತಗಳು ನಡೆಯದಿರಲಿ.
ಪರೀಕ್ಷೆಗಳು ನಡೆಯುವ ಕಾಲಾವಧಿಯಲ್ಲಿ ಎಲ್ಲಾ ಪತ್ರಿಕೆಗಳಲ್ಲೂ ಒಂದೇ ಸುದ್ದಿ ಪರೀಕ್ಷೆಗಳನ್ನು ಧೈರ್ಯದಿಂದ ಎದುರಿಸಿ, ಎದೆಗುಂದದಿರಿ ಎನ್ನುವ ಸಲಹೆಗಳ ಜೊತೆಗೆ ಪರೀಕ್ಷೆಗಳನ್ನು ಹೇಗೆ ಎದುರಿಸಬೇಕು ಎಂಬುದರ ಬಗ್ಗೆ ಟಿಪ್ಸ್‌ಗಳು. ಇಷ್ಟಾಗಿಯೂ ಪರೀಕ್ಷೆ ಬಗ್ಗೆ ತಲೆ ಕೆಡಿಸಿಕೊಳ್ಳುವವರಿಗೆ ಲೆಕ್ಕವಿಲ್ಲ. ಫಲಿತಾಂಶ ಬಂದ ನಂತರ ಅನಾಹುತಗಳಿಗೆ ತಲೆ ಕೊಡುವವರು ಕಡಿಮೆ ಆಗಿಲ್ಲ.
ಪರೀಕ್ಷಾರ್ಥಿಗಳಿಗೆ ಪತ್ರಿಕೆಗಳಲ್ಲಿ ಬರುವ ಕೆಲವು ಟಿಪ್ಸ್‌ಗಳು ಹೀಗಿವೆ… ಹೆಚ್ಚು ಆಹಾರ ತಿನ್ನಬೇಡಿ, ಭಯ ಆತಂಕ ಬೇಡ, ಪರೀಕ್ಷಾ ಸಮಯಕ್ಕೆ ಅರ್ಧಗಂಟೆ ಮೊದಲೇ ಪರೀಕ್ಷಾ ಕೇಂದ್ರದಲ್ಲಿರಿ, ಎರಡು ಒಳ್ಳೆಯ ಪೆನ್ನು- ಪೆನ್ಸಿಲ್ ಮತ್ತು ಜಾಮಿಟ್ರಿ ಬಾಕ್ಸ್ ಜೊತೆಗಿರಲಿ. ಶಾಂತವಾಗಿರಿ ಗಾಬರಿ ಬೇಡ, ಕ್ರಮವಾಗಿ ಉತ್ತರಿಸಿ, ಸಮಯದ ಪಾಲನೆಗಾಗಿ ಒಂದು ವಾಚ್ ಇಟ್ಟುಕೊಳ್ಳಿ, ಪ್ರಶ್ನೆ ಸಂಖ್ಯೆ ಸರಿಯಾಗಿ ಬರೆಯಿರಿ, ಉತ್ತರಿಸಿದ ನಂತರ ಮತ್ತೊಮ್ಮೆ ಎಲ್ಲವನ್ನು ಸರಿಯಾಗಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಟಿಪ್ಸ್‌ಗಳಿಗೆ ಕೊನೆ ಇಲ್ಲ. ಪತ್ರಿಕೆಗಳಲ್ಲಿ ಬರುವ ಎಲ್ಲಾ ಟಿಪ್ಸ್‌ಗಳನ್ನು ಕ್ರೋಢೀಕರಿಸಿದರೆ ಒಂದು ದೊಡ್ಡ ಗ್ರಂಥವಾಗುವುದು.
ಪರೀಕ್ಷಾ ಭಯ ಇದ್ದವ ಗೊತ್ತಿರುವ ಉತ್ತರವನ್ನು ಸಹ ಬರೆಯಲಾರ. ಆದ್ದರಿಂದ ಇಂಥ ಟಿಪ್ಸ್‌ಗಳು ಕೆಲವರಿಗೆ ಉತ್ತೇಜಿಸುವ ಬದಲಾಗಿ ಭಯಭೀತರನ್ನಾಗಿಸುತ್ತವೆ. ಹಿಂದೆ ಇಂಥ ಟಿಪ್ಸ್‌ಗಳನ್ನು ಕೊಡುವ ಉಚಿತ ಸಲಹೆಗಾರರು ಇರಲೇ ಇಲ್ಲ, ಪರೀಕ್ಷೆ ನಾಳೆ ಇದ್ದಾಗ್ಯೂ ಸಿನಿಮಾ ನೋಡಿ ಆತಂಕವಿಲ್ಲದೆ ಬರೆದವರಿದ್ದರು ಅವರೆಲ್ಲ ಇಂದು ಉದ್ಧಾರವಾಗಿಲ್ಲವೇ?
ಬಹುಶಃ ಮಕ್ಕಳಿಗೆ ಪರೀಕ್ಷೆಯ ಬಗ್ಗೆ ಪದೆಪದೇ ಹೇಳಿಹೇಳಿ ಅವರ ಆತ್ಮಸ್ಥೈರ್ಯ ಕಡಿಮೆ ಮಾಡುತ್ತಿರಬಹುದು. ಪರಿಣಾಮವಾಗಿ ಪ್ರತೀ ಫಲಿತಾಂಶದ ವೇಳೆಯಲ್ಲಿ ಪ್ರಾಣ ಕಳೆದುಕೊಳ್ಳುವ ವಿದ್ಯಾರ್ಥಿಗಳು ಪತ್ರಿಕೆಯಲ್ಲಿ ಸುದ್ದಿ ಆಗುವುದನ್ನು ಓದುತ್ತೇವೆ. ಬಹಳ ಹಿಂದೆ ಅಂತು ಅಲ್ಲ. ನಮ್ಮ ಕಾಲದಲ್ಲೇ ಮೂರುನಾಲ್ಕು ದಶಕಗಳ ಹಿಂದೆ ಪರೀಕ್ಷೆಗಳಿಗೆ ಇಷ್ಟೊಂದು ಮಹತ್ವ ಕೊಡುತ್ತಿರಲಿಲ್ಲ. ಪಾಸಾದವರಿಗೆ ಒಂದಷ್ಟು ಹೊಗಳಿಕೆಯ ಮಾತುಗಳು ಇರುತ್ತಿದ್ದವು. ಫೇಲಾದವರನ್ನು ಅಷ್ಟಾಗಿ ಕಡೆಗಣಿಸುತ್ತಿರಲಿಲ್ಲ. ಸದ್ಯ ವ್ಯವಸಾಯಕ್ಕೆ ಒಬ್ಬ ಮಗ ಸಿಕ್ಕಾಂತಾಯಿತು ಎನ್ನುವುದು ಅವರ ಖುಷಿಯ ವಿಚಾರವಾಗಿತ್ತು. ನೌಕರರ ಮಕ್ಕಳಿದ್ದರೂ ಪೋಷಕರು ಮತ್ತೊಮ್ಮೆ ಪರೀಕ್ಷೆ ಬರೆದರಾಯಿತು ಎಂದು ಮಕ್ಕಳಿಗೆ ಧೈರ್ಯ ಹೇಳುತ್ತಿದ್ದರು. ಮಕ್ಕಳಿಗೆ ವಿದ್ಯೆ ಬಲವಂತದ ಹೇರಿಕೆ ಆಗಿರಲಿಲ್ಲ, ಆ ಕಾರಣದಿಂದ ಅನಾಹುತಗಳಿಗೆ ಆಸ್ಪದ ಇರಲಿಲ್ಲ. ಅಂದಿನ ದಿನಗಳಲ್ಲಿ ಪ್ರಚೋದಿಸುವ ಮಾಧ್ಯಮಗಳು ಇಲ್ಲದಿದ್ದದ್ದು ಸಹ ಪ್ಲಸ್ ಪಾಯಿಂಟ್ ಆಗಿತ್ತು.
ಹುಟ್ಟಿಸಿದವನು ಹುಲ್ಲು ಮೇಯಿಸದೆ ಇರುವನೇ? ಚೆನ್ನಾಗಿ ಓದಿ ಧೈರ್ಯವಾಗಿ ಪರೀಕ್ಷೆ ಬರೆಯಿರಿ. ಪಾಸುಫೇಲುಗಳ ಚಿಂತೆ ಬೇಡ . ಏನೇ ಬಂದರೂ ನಗುತ್ತಾ ಸ್ವೀಕರಿಸಿ, ಆಗುವುದೆಲ್ಲ ಒಳ್ಳೆಯದಕ್ಕೆ. ನೆನಪಿರಲಿ ನಿಮ್ಮ ಫೇಲು ಸಹ ಭವಿಷ್ಯವನ್ನು ಉಜ್ವಲ ದಿಕ್ಕಿಗೆ ಕರೆದುಕೊಂಡು ಹೋಗುವುದಿದೆ. ನಿಮಗೆ ಒಂದು ನನ್ನದೇ ಜೀವನದ ಉದಾಹರಣೆ ಕೊಡುತ್ತೇನೆ. ನಾನು ರ್ಯಾಂಕ್ ಪಡೆದು ಸರ್ಕಾರಿ ನೌಕರಿಗೆ ಸೇರಿ ಸಾಮಾನ್ಯ ಬದುಕು ನಡೆಸಿ ನಿವೃತ್ತಿಯಾದೆ. ನನ್ನ ಗೆಳೆಯ ಜಸ್ಟ್ ಪಾಸ್ ಸರ್ಕಾರಿ ಕೆಲಸ ಸಿಗಲಿಲ್ಲ, ಸುಮ್ಮನಿರಲಿಲ್ಲ. ಸ್ವಪ್ರಯತ್ನದಿಂದ ಸರ್ಕಾರವನ್ನೇ ನಡೆಸುವ ರಾಜ್ಯದ ಪ್ರತಿಷ್ಠಿತ ಮಂತ್ರಿಯಾಗಿ ನಾಲ್ಕಾರು ಖಾತೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಅವರನ್ನು ಭೇಟಿಯಾಗಲು ಐಎಎಸ್ ಹಾಗೂ ಹೆಚ್ಚು ಕಲಿತವರು ಬಾಗಿಲಲ್ಲಿ ಕಾಯುತ್ತಿರುತ್ತಾರೆ. ಇಂದಿನ ಸರ್ಕಾರದಲ್ಲೂ ಅವರು ಕ್ಯಾಬಿನೇಟ್ ದರ್ಜೆಯ ಮಂತ್ರಿಯಾಗಿದ್ದಾರೆ. ಸಹಪಾಠಿಗಳು ಭೇಟಿಯಾದರೆ ಅದೇ ಆತ್ಮೀಯತೆಯಿಂದ ಹಮ್ಮುಬಿಮ್ಮುಗಳಿಲ್ಲದೆ ಪ್ರೀತಿಯಿಂದ ಕಾಣುತ್ತಾರೆ.
ಮಕ್ಕಳೇ ಎಲ್ಲರ ಭವಿಷ್ಯದ ಬದುಕನ್ನು ಭಗವಂತ ಬರೆದು ಮುಗಿಸಿದ್ದಾನೆ. ನಡೆಯುವುದೆಲ್ಲ ಅದರಂತೆಯೇ ನಡೆಯುವುದು. ಹಾಗಂತ ಓದುವುದನ್ನು ನಿಲ್ಲಿಸಿ ಪುಸ್ತಕ ಮುಚ್ಚಿ ಕಾಲಹರಣ ಮಾಡುವುದಲ್ಲ. ಪರೀಕ್ಷೆಗೆ ಭಯಗೊಳ್ಳದೆ ಮಾನಸಿಕ ಒತ್ತಡದಿಂದ ಹೊರಬಂದು ಶ್ರಮ ಶ್ರದ್ಧೆ ಹಾಕಿ ಚೆನ್ನಾಗಿ ಬರೆಯಿರಿ. ಫಲಿತಾಂಶ ಏನೇ ಬರಲಿ. ಅದು ಭಗವಂತ ಈಗಾಗಲೇ ಬರೆದಿರುವ ಭವಿಷ್ಯಕ್ಕೆ ಪೂರಕ ಎನ್ನುವುದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಿ. ಬಹುತೇಕ ಅದು ಒಳ್ಳೆಯದಕ್ಕೇ ಆಗಿರುತ್ತದೆ. ಜೀವನದಲ್ಲಿ ನೂರೆಂಟು ಪರೀಕ್ಷೆಗಳು ಎದುರಾಗುತ್ತವೆ. ಯಾವುದಾದರೊಂದು ಯಶಸ್ವಿ ಆದರೆ ಸಾಕು ಬದುಕು ಬಂಗಾರವಾಗುವುದು.
– ಮಿರ್ಲೆ ಚಂದ್ರಶೇಖರ
ಸಾಹಿತಿ, ಅಂಕಣಕಾರ
ಮೊ: 9916129654 .