ಬೆಂಗಳೂರು: ಶಿವನ ಮುಡಿ ಸೇರಿದ ಹೂವು ಶಿವನ ಪಾದಕ್ಕೆ ಬೀಳಲೇಬೇಕು ಎಂದು ಕೋಡಿ ಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಈ ಮೂಲಕ ಸಂಕ್ರಾಂತಿ ನಂತರ ರಾಜ್ಯದಲ್ಲಿ ಸಿಎಂ ಸ್ಥಾನದ ಬದಲಾವಣೆ ಖಚಿತ ಎಂದು ಸುಳಿವು ನೀಡಿದ್ದಾರೆ.
ಮಂಡ್ಯದ ಕೆಆರ್ ಪೇಟೆಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನವರಿ 2026ರ ಸಂಕ್ರಾಂತಿಯ ನಂತರ ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆಯಾಗಲಿದೆ ಎಂದಿದ್ದಾರೆ. ಈ ಮೂಲಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಈ ಬಾರಿ ಪಟ್ಟ ಖಚಿತ ಎಂಬ ಮಾತನ್ನು ನುಡಿದಿದ್ದಾರೆ.
“ಶಿವನ ಮುಡಿ ಸೇರಿದ ಹೂವು ಶಿವನ ಪಾದಕ್ಕೆ ಬೀಳಲೇಬೇಕು” ಎಂಬ ಭವಿಷ್ಯ ನುಡಿದಿರುವ ಶ್ರೀಗಳು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಈ ಬಾರಿ ಪಟ್ಟ ಖಚಿತ ಎಂಬಂತಹ ಮಾತನ್ನು ಹೇಳಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಗೃಹ ಸಚಿವ ಜಿ. ಪರಮೇಶ್ವರ್ ಕೋಡಿಮಠಕ್ಕೆ ತೆರಳಿ ಶ್ರೀಗಳೊಡನೆ ಚರ್ಚೆ ನಡೆಸಿದ್ದು ಇಲ್ಲಿ ಗಮನಾರ್ಹ. ಅದಾದ ನಂತರ ಅವರು ನೀಡಿರುವ ಈ ಭವಿಷ್ಯ ರಾಜ್ಯ ರಾಜಕಾರಣದ ಪಾಳಯದಲ್ಲಿ ಸಂಚಲನ ಉಂಟುಮಾಡಿದೆ.
ಅಂದ ಹಾಗೆ ಇದೇನು ಮೊದಲ ಬಾರಿ ಪಟ್ಟ ಬದಲಾವಣೆಯ ಕುರಿತು ಶ್ರೀಗಳು ನುಡಿದಿಲ್ಲ. ಬದಲಾಗಿ ಕಳೆದ ಜೂನ್ನಲ್ಲಿ ಸಂಕ್ರಾಂತಿಗೆ ರಾಜ್ಯ ರಾಜಕಾರಣದಲ್ಲಿ ಬದಲಾವಣೆ ಆಗುತ್ತೆ ಎಂದೂ, ಅಕ್ಟೋಬರ್ 1ನೇ ತಾರೀಕು 2026ರ ಸಂಕ್ರಾಂತಿಯವರೆಗೆ ಸಿದ್ದರಾಮಯ್ಯನವರ ಪಟ್ಟಕ್ಕೆ ಯಾವುದೇ ತೊಂದರೆ ಇಲ್ಲ, ಅದಾದ ಮೇಲೆ ರಾಜಕೀಯ ವಿಪ್ಲವ ಉಂಟಾಗಿ ಪಟ್ಟ ಬದಲಾಗುವುದು ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ರಾಷ್ಟ್ರ ರಾಜಕಾರಣದ ಬಗ್ಗೆಯೂ ಶ್ರೀಗಳು ಗಂಭೀರ ವಿಷಯಗಳನ್ನು ಮಾತನಾಡಿದ್ದಾರೆ. ಈ ಯುಗಾದಿಯ ನಂತರ ಕೇಂದ್ರದಲ್ಲಿ ಸಮಸ್ಯೆಗಳು ಉಲ್ಬಣವಾಗಲಿವೆ. ದೆಹಲಿಯಲ್ಲಿ ನಡೆದಂತಹ ಬಾಂಬ್ ಸ್ಫೋಟಗಳು ಇನ್ನೂ ಅನೇಕ ಅಹಿತಕರ ಘಟನೆಗಳು ಮುಂದಿನ ಸಂವತ್ಸರದಲ್ಲಿ (ಹಿಂದೂ ವರ್ಷ) ಉಂಟಾಗಲಿವೆ ಎಂದು ಹೇಳಿದ್ದಾರೆ.


