ಮಹಾಕುಂಭ ಮೇಳ ಅಲ್ಲ ಇದು ಮೃತ್ಯು ಕುಂಭ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪ ಮಾಡಿದ ಬೆನ್ನಲ್ಲೇ ಇದೀಗ ಉತ್ತರಾಖಂಡ್ ನ ಜ್ಯೋತಿ ಪೀಠದ ಜಗದ್ಗುರು ಎಂದೇ ಖ್ಯಾತರಾದ 46ನೇ ಶಂಕರಾಚಾರ್ಯ ಸ್ವಾಮೀಜಿ ಕುಂಭ ಮೇಳದ ವ್ಯವಸ್ಥೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಿಯಮ ಪಾಲಿಸಿಲ್ಲ ಎಂದು ಅಯೋಧ್ಯೆಯಲ್ಲಿ ರಾಮಮಂದಿರ ಪ್ರತಿಷ್ಠಾಪನೆ ಕಾರ್ಯಕ್ರಮದಿಂದ ಹೊರಗುಳಿದಿದ್ದ ಸ್ವಾಮಿ ಅವಿಮುಕ್ತೇಶ್ವರನಾಂದ್ ಸರಸ್ವತಿ, ಮಹಾಕುಂಭ ಮೇಳದ ವ್ಯವಸ್ಥೆಯಲ್ಲಿ ಸಾಕಷ್ಟು ಲೋಪಗಳು ಆಗಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಮಹಾಕುಂಭ ಮೇಳದಲ್ಲಿ 300 ಕಿ.ಮೀ. ನಷ್ಟು ಉದ್ದದ ಟ್ರಾಫಿಕ್ ಜಾಮ್ ಆಗಿದೆ. ಇದು ಅವ್ಯವಸ್ಥೆ ಅಲ್ಲದೇ ಮತ್ತೆನು? ಮಹಾಕುಂಭ ಮೇಳದ ಬಗ್ಗೆ ನನಗೆ ಗೌರವವಿದೆ. ಗಂಗಮ್ಮ ತಾಯಿಯ ಬಗ್ಗೆ ಗೌರವವಿದೆ. ಆದರೆ ಈ ಗಂಗೆಯೇ ಈಗ ಸ್ನಾನ ಮಾಡಲು ಆಗದಷ್ಟು ಮಲೀನವಾಗಿದೆ ಅಂದರೆ ಇದನ್ನು ಸುವ್ಯವಸ್ಥೆ ಎನ್ನಬೇಕಾ ಎಂದು ಪ್ರಶ್ನಿಸಿದರು.
ಕುಂಭ ಮೇಳ ನಡೆಯುತ್ತದೆ ಎಂಬುದು 12 ವರ್ಷಗಳ ಹಿಂದೆಯೇ ಎಲ್ಲರಿಗೂ ಗೊತ್ತಿತ್ತು. ಇಷ್ಟು ದೊಡ್ಡ ಪ್ರಮಾಣದಲ್ಲಿ ಜನರು ಸೇರುತ್ತಾರೆ ಎಂಬುದು ತಿಳಿದಿತ್ತು. ಆದರೂ ಅದಕ್ಕೆ ತಕ್ಕಂತೆ ಸಿದ್ಧತೆ ಮಾಡಿಲ್ಲ. ಜನರು ಲಗೇಜ್ ಹೊತ್ತು 20ರಿಂದ 25 ಕಿ.ಮೀ. ನಡೆಯಬೇಕಾದ ಪರಿಸ್ಥಿತಿ ಇದೆ ಅಂದರೆ ಇದು ಅವ್ಯವಸ್ಥೆ ಅಲ್ಲದೇ ಇನ್ನೇನು ಹೇಳಲು ಆಗುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಗಂಗೆಯೇ ಮಲೀನವಾಗಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಲಕ್ಷಾಂತರ ಜನರು ಪ್ರತಿದಿನ ಪುಣ್ಯಸ್ನಾನ ಮಾಡುತ್ತಿದ್ದಾರೆ. ಈ ನೀರಿಗೆ ಕೊಳಚೆ ನೀರು ಸೇರುತ್ತಿದೆ. ಈ ಕೊಳಚೆ ನೀರನ್ನು ತಡೆಯಬಹುದಿತ್ತು. ಕನಿಷ್ಠ ಬೇರೆ ಕಡೆ ಹೋಗುವಂತೆ ಮಾಡಬಹುದಿತ್ತು. ಅದನ್ನೂ ಮಾಡಿಲ್ಲ. ಜನರ ಭಾವನೆಗಳಿಗೆ ಧಕ್ಕೆ ಮಾಡುವ ಬದಲು ನಿಲ್ಲಿಸಿಬಿಡಿ ಎಂದು ಅವರು ಅವಿಮುಕ್ತೇಶ್ವರನಾಂದ್ ಸರಸ್ವತಿ ಕಿಡಿ ಕಾರಿದ್ದಾರೆ.
ಅತ್ಯಂತ ಕಡಿಮೆ ಜಾಗದಲ್ಲಿ ಅತೀ ಹೆಚ್ಚು ಜನರು ಸೇರುತ್ತಾರೆ ಎಂದು ತಿಳಿದಿದ್ದಾಗ ಸೂಕ್ತ ಯೋಜನೆ ರೂಪಿಸಬೇಕು. ಇಲ್ಲಿ ನೋಡಿದರೆ ಯಾವ ವ್ಯವಸ್ಥೆಯೂ ಕಾಣುವುದಿಲ್ಲ. 144 ವರ್ಷಗಳ ನಂತರ ನಡೆಯುತ್ತಿರುವ ಮಹಾಕುಂಭ ಮೇಳ ಅಂತ ಬೇರೆ ಸುಳ್ಳು ಪ್ರಚಾರ ಮಾಡಿ ಬಿಂಬಿಸಿಕೊಂಡಿದ್ದೀರಿ. ಜನರು ಸತ್ತಿದ್ದರೂ ಆ ಸಂಖ್ಯೆಯನ್ನು ಮರೆ ಮಾಚಿರುವುದು ದೊಡ್ಡ ಅಪರಾಧ ಎಂದು ಜಗದ್ಗುರು ಆರೋಪಿಸಿದರು.